ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅಂದು ರಾಜ್ಯದ ಮುಖ್ಯಮಂತ್ರಿ ಗಳಿಂದ ಮಲೆನಾಡಿನ ಅತ್ಯಂತ ದೊಡ್ಡ ಸಮಸ್ಯೆ ಯಾದ “ಮಂಗನ ಕಾಟ” ಕ್ಕೆ ಅತ್ಯದ್ಭುತ ಪರಿಹಾರ ಕಂಡುಹಿಡಿದ ಯುವ ಅನ್ವೇಷಕ ಮನ್ವಿತ್ ರಿಗೆ “ಮಲೆನಾಡಿನ ಮುತ್ತು”. ಎಂಬ ಪ್ರಶಸ್ತಿ ಪ್ರಧಾನ ಮಾಡುವ ಸಂಧರ್ಭ.
ಸಭೆಯಲ್ಲಿ ಕಿಕ್ಕಿರಿದು ಜನ ಸಂದಣಿ ತುಂಬಿದೆ… ವೇದಿಕೆಯ ಮೇಲೆ ಸನ್ಮಾನ್ಯ ಮುಖ್ಯಮಂತ್ರಿ ಗಳು ಸೇರಿದಂತೆ ಇತರೆ ಗಣ್ಯರು ಆಸೀನರಾಗಿದ್ದಾರೆ. ವೇದಿಕೆಯ ಎದುರು ಸಾಲಿನಲ್ಲಿ ಮನ್ವಿತ್ ನ ತಂದೆ ಮಂಞಾಥಣ್ಣ ತಾಯಿ ಜಲಜಕ್ಕ ಗಂಡ ಹೆಂಡತಿ ಮಗನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕಣ್ಣು ತುಂಬಿ ಸಿಕೊಳ್ಳಲು ಹೃದಯ ತುಂಬಿ ಕುಳಿತಿದ್ದಾರೆ. ಬನಿರೂಪಕಿ ಅನುಶ್ರೀಯವರು ಸನ್ಮಾನ ಮಾಡಿಸಿಕೊಳ್ಳಲಿರುವ ಮನ್ವಿತ್ ರವರ ಬಗ್ಗೆ ವಿವರಣೆಯನ್ನು ನೀಡಲು ಶುರು ಮಾಡಿದರು.
ಮನ್ವಿತ್ ವೇದಿಕೆಯ ಮೇಲ್ಬಾಗದಿಂದ ಸಭಿಕರ ಸಾಲಿನಲ್ಲಿ ಮುಂದಗಡೆ ಕೂತಿದ್ದ ಅಪ್ಪಯ್ಯ ಅವ್ವ ರನ್ನ ನೋಡಿದ..
ಅಪ್ಪಯ್ಯ ನ ಕಣ್ಣಿನಿಂದ ಆನಂದ ಭಾಷ್ಪ ಕೆನ್ನೆಯ ಮೇಲೆ ಉರುಳುತ್ತಿರುವುದನ್ನ ದೂರದಿಂದಲೇ ಗುರುತಿಸಿದ…
ಮನ್ವಿತ್ ನ ಮನಸು ಹಿಂದೆ ಓಡ ತೊಡಗಿತು.
ಮನ್ವಿತ್ ಇಪ್ಪತ್ತು ವರ್ಷ ವಯಸ್ಸಿನ ಬಿ ಎಸ್ ಸಿ ಅಂತಿಮ ವರ್ಷ ವಿಧ್ಯಾಭ್ಯಾಸ ವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಬಂದ ಎಳೇ ಯುವಕ…
ಮನ್ವಿತ್ ತರಗತಿಯಲ್ಲಿ ಅದೊಂದು ದಿನ ಇಂಟರ್ನಲ್ ಪರೀಕ್ಷೆ ಯ ಅಂಕವನ್ನು ಅತಿ ಕಡಿಮೆ ತೆಗದದ್ದಕ್ಕಾಗಿ ಉಪನ್ಯಾಸಕರು ಮನ್ವಿತ್ ನನ್ನು ತೀವ್ರ ತರಾಟೆಗೆ ತೆಗೆದುಕೊಂಡು ನೀನು ವಿಜ್ಞಾನದ ವಿದ್ಯಾರ್ಥಿ.. ಅಂತಿಮ ವರ್ಷದಲ್ಲಿದ್ದಿ.. ಹೀಗೆ ಪರೀಕ್ಷೆಯಲ್ಲಿ ಒಂದು ಅಂಕೆಯ ಅಂಕ ತೆಗೆದುಕೊಂಡು ಏನು ಮಾಡುತ್ತಿ.?
ನಿನಗೆ ಓದಿನಲ್ಲಿ ಆಸಕ್ತಿ ಇಲ್ಲ… ನೀನು ಮನೆಗೆ ಹೋಗಿ ಮಂಗನ ಕಾವಲು ಮಾಡು…. ಎಂದರು.
ಮನ್ವಿತ್ ಗೂ “ಸಿಟ್ ಹತ್ತಿ “ಆತು ಹಂಗಾರೆ ನಾನು ಮನೀಗೆ ಹೋತಿನಿ.. “ಮಂಗ್ ನ್” ಕಾಯ್ತೀನಿ.. ಅದೇನು “ಚಿಲ್ಲರೆ ಕೆಲಸ” ಅಲ್ಲ…!! ಒಂದಿನ ಗದ್ದೆ ತ್ವಾಟದ ಕಡೆ ಬಂದು ನೀವು ಮಂಗನ್ “ಬೆರ್ಸಿ” ನೋಡಿ..
ಈ ಹುಡುಗರಿಗೆ ಇಲ್ಲಿ “ಮಾಡಿನ ನೆಳಲಲ್ಲಿ” ತಣ್ಣಗೆ ಪಾಠ ಮಾಡದಂಗ್ ಅಂತ ಮಾಡೀರ…? ನಾ ಹೋತೀನಿ.. ಇನ್ಯಾವತ್ತೂ ಈ ಕಾಲೇಜು ಕಡೆ ತಲೆ ಹಾಕಲ್ಲ…”
ಅಂತ ಉಮೇದಿನಲ್ಲಿ ಮೇಷ್ಟ್ರಿಗೆ ಆವಾಜು ಹಾಕಿ ನೋಟ್ ಪುಸ್ತಕ ಮೇಷ್ಟ್ರು ಮೇಲೆ ಎಸೆದು ಕ್ಲಾಸ್ ನಿಂದ ಹೊರ ನೆಡೆದು ಕಾಲೇಜು ಹೊರಗಿದ್ದ ಬೈಕ್ ಸ್ಟ್ಯಾಂಡ್ ನಲ್ಲಿ ದ್ದ ತನ್ನ “ಎಫ್ ಜೆಡ್” ಬೈಕ್ ಹತ್ತಿ ಇಗ್ನಿಷಿಯನ್ ಕೀ ಒತ್ತಿ ರೋಂಯ್ ಗುಡಿತ ಮನಿಗೆ ಬಂದ…
ಅಪ್ಪಯ್ಯ ಅಮ್ಮ ನಿಗೆ ಮಗ ಇಷ್ಟು ಬೇಗ ಬಂದನಲ್ಲ ಯಾಕೆ ..? ಎಂಬ ಪ್ರಶ್ನೆ ಅಚ್ಚರಿ ಮೂಡಿತು.
ಕಡಿಮಾಡಿನಲ್ಲಿ ಬೈಕ್ ನಿಲ್ಲಿಸದವನೇ ಒಳಗೆ ಬಂದ್ ಜೀನ್ಸು ಪ್ಯಾಂಟ್ ಬಿಚ್ಚಿ ಬಿಸಾಡಿ ಲೆಗ್ಗಿನ್ ಹಾಕಿದವನೇ.. “ಅವ್ವ
ಒಂದು ಲೋಟಿ ಕಾಪಿ ಕೊಡೇ…” ಎಂದ.
ಅಮ್ಮ ನಿಗೆ ಕುತೂಹಲ ತಡಿಲಾರದೇ “ಯಂಥ ಮನು ಇವತ್ತು ಕಾಲೇಜಿಗೆ ರಜೆ ಯ…? ಇಲ್ಲ ಯಾರಾದರೂ “ರಾಜಕೀಯ ದವರು ಸತ್ತು” ಹೋದರ…? ಬೈನ್ ಹೊತ್ತಿಗೆ ಬರೋನು ಇಷ್ಟು ಬೇಗ ಬಂದಿಯಲ್ಲ….? ಅಂತ ಅಚ್ಚರಿಯಿಂದ ಕೇಳಿದರು.
ಅದಕ್ಕೆ ಮನ್ವಿತ್ ” ಇಲ್ಲ ಅವ್ವ … ನಾನು ಇನ್ ಮೇಲೆ ಕಾಲೇಜಿಗೆ ಹೋಗೋಲ್ಲ ಮನೀಲಿದ್ದು “ಮಂಗನ ಕಾಯ್ತೀನಿ” ಎಂದ.
ಅಲ್ಲೇ ಮುಂಚೆಕಡೆ ಕಡಿಮಾಡಲ್ಲಿ ಆಗಷ್ಟೇ ಜಾನುವಾರುಗಳಿಗೆ ತೋಟದಿಂದ ಹಸಿರು ಹುಲ್ಲಿನ ಹೊರೆ ತಂದು ಹಾಕಿ ಎಲೆ ಅಡಿಕೆ ಹೋಯ್ ಸೊಪ್ಪು ನುರಿದು ಬಾಯಿಗೆ ಹಾಕ್ಯಂಡಿದ್ದ ” ಅಪ್ಪಯ್ಯ” ಮಂಞಾಥಣ್ಣ ನಿಗೆ ಈ ಮಾತು ಕೇಳಿ “ಏಕ್ ದಂ” ಪಿತ್ಥ ನೆತ್ತಿಗೇರಿ ಬಿಪಿ ರೈಜು ಆಗಿ ಅವ್ಯಾಚ್ಯ ಶಬ್ದ ಎಲ್ಲ “ಎಲೆ ಅಡಿಕೆ ರಸದ ಸಹಿತ” ಹೊರ ಬಂತು….
ಅಪ್ಪಯ್ಯ ಮಂಞಾಥ ಊರ “ಸೌಕಾರ್ರು” ಮನೇಲಿ ಕೆಲಸ ಮಾಡತ ಈಗಿರುವ ಫಾರೆಸ್ಟ್ ಜಾಗವನ್ನು ಬಗರ್ ಹುಕುಂ ಒತ್ತುವರಿ ಮಾಡಿ ಸರಕಲಲ್ಲಿ ಇದ್ದ ಬಿದುರು ಮಟ್ಟಿಗೆ ಬೆಂಕಿ ಹೆಟ್ಟಿ ಕಡಿದು ಕೊಚ್ಚಿ ಒಂದೂವರೆ ಎಕರೆ ಅಡಿಕೆ ತೋಟ ಮಾಡಿ ಇತ್ತೀಚೆಗೆ ಒಂದು ಸಮಾಧಾನ ತರೋ ಅಷ್ಟು ಅಡಿಕೆ ಬೆಳೆಯೋ ಹಂಗಾಗಿ ಮಗಳಿಗೆ ಒಳ್ಳೆಯ ಕಡೆ (ಒಳ್ಳೆಯ ಕಡೆ ಅಂದರೆ ಬೆಂಗಳೂರಿನಲ್ಲಿ ನೌಕರಿ ಮಾಡುವ ಹುಡುಗ ಅಂತ ಅರ್ಥ ಮಾಡಿಕಿಬುಕು) ಮದುವೆ ಮಾಡಿ ಕೊಟ್ಟು , ಮನೆಯಂಗಳದಲ್ಲಿ “ಮಂದರ್ತಿ ಮ್ಯಾಳದ” ಆಟ ಆಡಿಸಿ ಪೆಂಡಾಲ್ ಖುರ್ಚಿ ಹಾಕಿ ಇಡೀ ಊರವರನೆಲ್ಲ ಕರೆದು “ಭಟ್ಟರ ಕೈಲಿ” ಪಾಯಸೆ ಜುಲಾಬಿ ಭಕ್ಷದ ಸೀಂ ಊಟದ ಅಡಿಗೆ ಮಾಡಿಸಿ ಆಟ ಮುಗಿಯೋ ತನಕವೂ ಆಟ ನೋಡೋರಿಗೆ “ಗಳ್” ಗಳೀಕು ಚಾ ಚರ್ಪು ಕೊಟ್ಟು ಸತ್ಕಾರ ಮಾಡಿ ಇಡೀ ಊರಿನ ಜನಕ್ಕೆ ಮಂಞಾಥಣ್ಣ “ಒಂದು ಜನ” ಆದ ಅಂತ ತೋರಿಸಿಕೊಟ್ಟಿದ್ದ.
ಮಂಞಾಥಣ್ಣ ನಿಗೆ ಈಗ ಇರುವ ದೊಡ್ಡ ಸವಾಲು ಎಂದರೆ ಒಬ್ಬನೇ ಮಗ ಓದಿ ಒಳ್ಳೆಯ ಕೆಲಸ ಹಿಡೀಲಿ ಅಂತ. ಮಗನಿಗೆ ಓದೋಕೆ ಪ್ರೋತ್ಸಾಹ ಮಾಡಲು ಮಗ ಕೇಳಿದ್ದೆಲ್ಲ ಕೊಡಸಿ , ಎರಡು ಲಕ್ಷದ ಬೈಕೂ ಕೊಡಿಸಿದ್ದರು. ಮಗ ಓದಿ ಬೆಂಗಳೂರು ಸೇರಿ ಒಳ್ಳೆಯ ಕೆಲಸ ಹಿಡದು ನಮಗೆ ಗೌರವ ತರುತ್ತಾನೆ ಎಂಬ ಆಸೆಲಿ ಮಗನಿಗೆ ಬಾಳ ಸಪೋರ್ಟ್ ಮಾಡ್ತಿದ್ದರು.
ಮಂಞಾಥಣ್ಣ “ಸೌಕರ್ರ ಮನೇಲಿ” ಜೀತ ಮಾಡ್ತಾ ಮಾಡ್ತಾ ಈ “ಕಾನು ಸರ್ಕಲಲ್ಲಿ” ಒತ್ತುವರಿ ಮಾಡುಕಾರೆ ಒಂದೊಂದು ಬಗೆಯ ಸವಾಲು ಎದುರಿಸಿರಲಿಲ್ಲ…!!
ಪದೇ ಪದೇ ಫಾರಸ್ಟ್ ನವರು ಬಂದು ಈ ಕಾನಿಂದ ಮಂಞಾಥಣ್ಣ ನ “ಸೌಕಾರ್ರ ಕುಮ್ಮಕ್ಕಿನಿಂದ” ಒಕ್ಕಲೆಬ್ಬಿಸೋಕೆ ಬಾಳ ಪ್ರಯತ್ನ ಮಾಡಿದ್ದರು. ತನ್ನ ಜೀವದ ಹಂಗು ತೊರೆದು “ಹುಲಿ ಕಾಡುಕೋಣಗಳ” ಭಯ ದಲ್ಲಿ ಇಲ್ಲಿ ಜಮೀನು ಮಾಡಿ ಮನೆ ಸಂಸಾರ ಮಾಡಿ “ಜೈಸಿದ್ದ ” ಮಂಞಾಥಣ್ಣ.
ಆದರೆ ಇಷ್ಟೆಲ್ಲ ಕಷ್ಟ ಬಿಟ್ಟು ಮಾಡಿದ ಅಡಿಕೆ ತ್ವಾಟಕ್ಕೆ ಕಳೆದ ಎರಡು ವರ್ಷದಿಂದ ಎಲೆಚುಕ್ಕಿ ರೋಗ ಬೇರೆ ಆವರಿಸಿ ಇಪ್ಪತ್ತು ವರ್ಷ ಬೆಳಸಿ ಸಲಹಿ ಕಾಪಾಡಿದ ಅಡಿಕೆ ತೋಟ ಈಗ ತಾನು ಮುಂದೆ ಬಾಳಲ್ಲ ಎಂಬಂತೆ ವರ್ತನೆ ಮಾಡುತ್ತಿತ್ತು. ಊರವರು ಕಂಡವರು ಹೇಳಿದ ಔಷಧವನ್ನು ಅಡಿಕೆ ಮರಕ್ಕೆ ಸಿಂಪಡಣೆ ಮಾಡಿದರೂ ಅಡಿಕೆ ಸೋಗೆ ಹಳದಿ ಆಗು ವುದು ನಿಂತಿರಲಿಲ್ಲ…!!
ಇದಕ್ಕೆ ಸರಿಯಾಗಿ ಕಳೆದ ಕೆಲವು ವರ್ಷಗಳಿಂದ ತ್ವಾಟಕ್ಕೆ ವಿಪರೀತ ಮಂಗನ ಕಾಟ ಬೇರೆ….
ಇತ್ತೀಚೆಗೆ ಸಂಪೂರ್ಣ ವ್ಯತ್ಯಾಸ ವಾದ ಮಳೆಗಾಲ ಚಳಿಗಾಲ ಬ್ಯಾಸಿಗೆ ಕಾಲಗಳು. ಮಳೆಗಾಲ ಇಡೀ ಸರಿಯಾಗಿ ಬರದ ಮಳೆ ಅಡಿಕೆ ಕೊನೆ ತೆಗೆದ ತಕ್ಷಣ ಎಡಬಿಡದೇ ಸುರಿದು ಬಿಡುತ್ತದೆ. ಅಂಗಳ ತುಂಬೆಲ್ಲಾ ಅಡಿಕೆ ಕೊನೆ. ಸಾಮಾನ್ಯ ಸಣ್ಣ ಬೆಳೆಗಾರರು ಲಕ್ಷ ಬಂಡವಾಳ ಹೂಡಿ ಅಡಿಕೆ ಒಣಗಿಸೋ “ಡ್ರೇಯರ್” ಮಾಡಿಸಲು ಸಾದ್ಯವೇ…? ಅಡಿಕೆ ಕುತ್ತರೆ (ಅಡಿಕೆ ಕೊನೆಗಳ ರಾಶಿ) ಮೇಲೆ ಈ ಮಳೆ ದೆಸೆಯಿಂದ ಸುಲಿಯಲಾಗದ ಅಡಿಕೆ ತನ್ನಂತಾನೇ ಬೆಳೆದು ಗೋಟಾದರೆ ಕುತ್ತರೆ ಕೆಳಗೆ ಅಡಿಕೆ ಕಾಯಿ ಬೇಗ ಸುಲಿಯದೇ ಕೊಳೆಯಲು ಆರಂಭವಾಗುತ್ತದೆ. ಸುಲಿದಿಟ್ಟ ಅಡಿಕೆ ಬೂಸ್ಟು ಬರತೊಡಗುತ್ತದೆ, ಬೇಯಿಸಿದ ಅಡಿಕೆಗೆ ಸಮಸಸೂತ್ರ ಬಿಸಿಲು ಬಾರದೇ ಹೂವಿನ ಫಂಗಸ್ ಬರುತ್ತದೆ…
ಇದನ್ನೆಲ್ಲಾ ನೋಡುತ್ತಾ ನೋಡುತ್ತಾ ಮಲೆನಾಡಿನ ಅಡಿಕೆ ಬೆಳೆಗಾರನಿಗೆ ” ಈ ಅಡಿಕೆ/ ಜಮೀನು ಮನೆ” ಸವಾಸವೇ ಬೇಡ ಎನಿಸುತ್ತದೆ. ಈ ಎಲ್ಲಾ ಈ ಕಾಲದ ಕೃಷಿ ತಾಕಲಾಟಗಳು ಮಂಞಾಥಣ್ಣ ನಂತಹ ಶಣ್ಣಪುಟ್ಟ ಅಡಿಕೆ ಬೆಳೆಗಾರರಿಗೆ ಮುಂದೆ ಕೃಷಿ ಮಾಡಕ್ಕೆ ಆಗೋಲ್ಲ ಎನ್ನುವ ಭಾವ ಮೂಡಿಸಿದೆ.
ಮಲೆನಾಡಿನ ಅಡಿಕೆ ಯನ್ನೇ ಆಧಾರವಾಗಿ ಭವಿಷ್ಯವೆಂದು ನಂಬಿಕೊಂಡ ಸಣ್ಣ ಅಡಿಕೆ ಬೆಳೆಗಾರರು ಒಂದು ಥರ ಮಹಾಭಾರತದ ಚಕ್ರವ್ಯೂಹ ದಲ್ಲಿರುವ “ಅಭಿಮನ್ಯು” ತರ.. .”ಕೃಷಿಕ” ಚಕ್ರವ್ಯೂಹದಲ್ಲಿ ಹೋಗಲೇ ಬೇಕು ಆದರೆ ವಾಪಸು ಸುರಕ್ಷಿತವಾಗಿ ಮರಳಲಾರ….!!
ಹವಾಮಾನ ವೈಪರೀತ್ಯ, ಅಡಿಕೆ ಕೊಳೆ ರೋಗ, ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ , ಒತ್ತುವರಿ ಸಮಸ್ಯೆ , ಕಸ್ತೂರಿ ರಂಗನ್ ವರದಿ ಜಾರಿ, ಇದೆಲ್ಲದರ ಜೊತೆಗೆ ಅಡಿಕೆ ಬೆಲೆಯನ್ನು ಆಟ ಆಡಿದಂತೆ ಏರಿಸಿ ಇಳಿಸುವ ದಲ್ಲಾಳಿ ವ್ಯಾಪಾರಿಗಳು, ಗುಟ್ಕಾ ಬ್ಯಾನ್ ಕಾಲ ಹೋಗಿ ಅಡಿಕೆ ಬ್ಯಾನ್ ಆಗುವ ಕಾಲದ ಸಮೀಪದಲ್ಲಿ ಅಡಿಕೆ ಬೆಳೆಗಾರ ಇದ್ದಾನೆ.
ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಇಷ್ಟೆಲ್ಲ ಸಮಸ್ಯೆ ಯಲ್ಲಿದ್ದಾಗ ಯಾವೊಬ್ಬ ಅಡಿಕೆ ಬೆಳೆಗಾರನೂ ತನ್ನ ಮಕ್ಕಳ ಮೊಮ್ಮಕ್ಕಳನ್ನ “ಅಡಿಕೆ ಬೇಸಾಯ ಮಾಡಿಕೊಂಡು ಜೀವನ ರೂಪಿಸಿಕೋ” …ಎನ್ನುವ ಮಾತನಾಡಲಾರ…
ಹಾಗೆಯೇ ಮಂಞಾಥಣ್ಣ ನೂ ಕೂಡ…
ಒಂದು ಕಾಲದಲ್ಲಿ ತಾನು ಕೆಲಸ ಮಾಡುತ್ತಿದ್ದ ಜಮೀನ್ದಾರ ಒಡೆಯರಿಗೆ ವರ್ಷಕ್ಕೆ ಅಡಿಕೆ ಕಾಳುಮೆಣಸು ಎಲ್ಲಾ ಸೇರಿ ಐವತ್ತು “ಅರವತ್ತು ಲಕ್ಷ ” ರೂಪಾಯಿ ಉತ್ಪತ್ತಿ ಇದ್ದರೂ ತಮ್ಮ ಏಕೈಕ ಮಗನನ್ನ ವಿದೇಶಕ್ಕೆ ದುಡುಮೆಗೆ ಕಳಿಸಿ ದ್ದಾರೆ. ಆದರೆ ತಮ್ಮಂಥ ಸಣ್ಣ ಹಿಡುವಳಿ ದಾರರ ಅಡಿಕೆ ಬೆಳೆಗಾರರ ಮಕ್ಕಳು ಈ ಸಣ್ಣ ಉತ್ಪತ್ತಿ ಯ “ಪುಟಗೋಸಿ ಜಮೀನಿಗೆ” ಭವಿಷ್ಯ ಕಂಡುಕೊಳ್ಳಲು ಬರ್ತೀವಿ ಅಂತಾವೆ. ಖಂಡಿತವಾಗಿಯೂ ಹುಡುಗರು ಹಳ್ಳಿಯಲ್ಲಿ ಭವಿಷ್ಯ ಕಂಡುಕೊಳ್ಳಲು ಸಾದ್ಯ. ಆದರೆ ಹಳ್ಳಿ ಹುಡುಗರಿಗೆ ಎಷ್ಟೇ ಉತ್ಪತ್ತಿ ಇದ್ದರೂ ‘ಮದುವೆ” ಗೆ ಹೆಣ್ಣು ಕೊಡೋರು ಇಲ್ಲ…!! ಇದು ವೈಯುಕ್ತಿಕ ಒಬ್ಬರ ಸಮಸ್ಯೆ ಅಲ್ಲ ಸಾಮಾಜಿಕ ಸಮಸ್ಯೆ. ಹಳ್ಳಿಯಲ್ಲಿ ಮೈ ಮುರಿದು ಚೆನ್ನಾಗಿ ದುಡಿವ ಹುಡುಗರನ್ನ ಒಪ್ಪಿ ಮದುವೆ ಆಗೋಕೆ ಈಗಿನ ಪ್ಯಾಶನ್ ಮಾಡಿಕೊಂಡು ಪ್ಯಾಟೆಗೆ ಬಟ್ಟೆ ಅಂಗಡಿ ಅಲ್ಲಿ ಇಲ್ಲಿ ಚಿಕ್ಕ ಸಂಬಳದ ಕೆಲಸಕ್ಕೆ ಹೋಗೋ ಬರೋ ” ಹೆಣ್ಣು ಹುಡುಗಿಯರು” ಒಪ್ಪೋಲ್ಲ. ಮುಂಚೆ ಈ ಮದುವೆ ಸಮಸ್ಯೆ ಕೇವಲ “ಭಟ್ಟರ ಜಾತಿಲಿ” ಮಾತ್ರ ಇತ್ತು. ಈಗ ಎಲ್ಲಾ ಜಾತಿ ಜನಾಂಗಕ್ಕೂ ಹಳ್ಳಿ ಮನೆ ಹುಡುಗರ ಮದುವೆ ಸಮಸ್ಯೆ ಶುರುವಾಗಿದೆ….
ಮಂಞಾಥಣ್ಣ ನಿಗೆ ಇದೆಲ್ಲಾ ಯೋಚನೆ ಮರುಕಳಿಸಿ ಮರುಕಳಿಸಿ ಮಗನಿಗೆ ತಪ್ಪ ತಾರ ಬೈದು ಕೂಗಿ ಮತ್ತೆ ಮತ್ತೆ ಬಿಪಿ ಯತ್ಯಾಸ ಆಗಿ ರೈಸಾಗಿ ಬಾಯಿ ಚಪ್ಪೆ ಚಪ್ಪೆ ಆತು.
ಮನ್ವಿತ್ ಅಪ್ಪಯ್ಯ ನ ಬೈಗುಳಗಳಿಗೆ ಹೆಚ್ಚು ಮಂಡೆ ಕೆಡಿಸಿಕಣದಿತೆ ಮಂಗನ ಓಡಸೋದು ಹೆಂಗೆ ಅನ್ನೋ ಗುರಿಯ ಬಗ್ಗೆಯೇ ಹೆಚ್ಚು ಏಕಾಗ್ರತೆಯಿಂದ ಚಿಂತನೆ ಮಾಡಲು ಶುರು ಮಾಡಿದ.
ಮಾರನೇ ದಿನ ಕಪ್ಪಲೇ ಮನ್ವಿತ್ ತ್ವಾಟಕ್ಕೆ ಹೋಗಿ ಕೆರೆ ಮಡಿಲ ತೋಟದಲ್ಲಿ ಅಡಿಕೆ ಕಾಯಿ ತರಿಯೋಕೆ ಸುರು ಮಾಡಿದ್ದ ಮಂಗಗಳಿಗೆ ಹೆದರಿಸಲು ಹು ಹಾ ಹೋ ಅಂತ ಕೂಗಿದ..
ಮಂಗಗಳು ಮನ್ವಿತ್ ನನ್ನು ವಿಚಿತ್ರ ವಾಗಿ ನೋಡಿ “ನಿಂಗ್ ಮಂಡೆ ಸರಿ ಇಲ್ವ…?” ಅನ್ನುವ ಭಾವ ವ್ಯಕ್ತ ಪಡಿಸಿದವು. ಮಂಗ ಗಳು ಮನ್ವಿತ್ ನ ಮರುಳಾಟದ ಕೂಗು
ಸಂಞೆಗೆ ಬಗ್ಗಲಿಲ್ಲ. ಕಲ್ಲು ಬೀಸಿದ ಅವಕ್ಕೆ ತಾಗಲಿಲ್ಲ…!! ಮನೆಗೆ ಹೋಗಿ ಕವಣೆ ಕಲ್ಲು ತಂದ ಅದಕ್ಕೂ ಬಗ್ಗಲಿಲ್ಲ.
ಯಾರೋ ನಾಯಿಗೆ ಹುಲಿ ಬಣ್ಣ ಹಚ್ಚಿ ದರೆ ನಾಯಿ ನೋಡಿ ಮಂಗಗಳು ಬೆದರು ತ್ತವೆ ಎಂದರು. ಮನ್ವಿತ್ ಮನೆಯ ನಾಯಿ ಟಾಮಿಗೆ ಬಣ್ಣ ತಂದು ಹುಲಿವೇಶ ಮಾಡಿಸಿದ …. ಮಂಗಗಳು ಅದಕ್ಕೂ ಬಗ್ಗಲಿಲ್ಲ…!! ಯಾರೋ ಹುಲಿ ಗೊಂಬೆ ತಂದು ತೋಟದಲ್ಲಿಡಿ ಎಂದರು ಅದರಿಂದ ಲೂ ಪ್ರಯೋಜನ ಆಗಲಿಲ್ಲ. ನಂತರ ಕಲ್ಲು ಹಾಕಿ ಹೊಡೆವ ಗರ್ನಾಲ್ ಕೋವಿ ಬಳಸಿ ಎಂದರು … ಅದಕ್ಕೂ ಮಂಗ ಬೆದರಲಿಲ್ಲ.
ಕೊನೆಗೆ ರಾಕೇಟ್ ಪ್ರಯೋಗ ಮಾಡಿದ ಅದಕ್ಕೂ ಮಂಗ ಬಗ್ಗಲಿಲ್ಲ…!! ಶಿಕಾರಿ ವೀರ ರಮೇಸಣ್ಣ ನ ಬಳಿ ಕಾಡಿ ಬೇಡಿ ನಾಡ ಕೋವಿ ತಂದು ಅದಕ್ಕೆ ಚರೆ ಹಾಕಿ ಮಂಗಗಳ ಮೇಲೆ ಪ್ರಯೋಗ ಮಾಡಿದ.ಮಂಗಗಳು ಈ ಕೋವಿಗೇನೋ ಹೆದರಿದವು. ಆದರೆ ಮಂಗಗಳ ಹಾವಳಿ ನಿಲ್ಲಲಿಲ್ಲ…!!!
ಮಂಗನ ಕಾಟದ ಸಮಸ್ಯೆ ಗೆ ಚರೆ ಗುಂಡು ಹುಡೆವ ನಾಡ ಬಂದೂಕು ಒಂದು ಉತ್ತಮ ಪರಿಹಾರವಾಗಬಲ್ಲದು. ಆದರೆ ಈಗೀಗ ಮಂಗಗಳು ಅದಕ್ಕೂ ಅಷ್ಟು ಭಯ ಬೀಳುತ್ತಿಲ್ಲ. ಮೊದಲೆಲ್ಲಾ ಮಂಗನ ಗುಂಪಿನಲ್ಲಿ ಒಂದು ಎರಡು ಮಂಗಗಳನ್ನ ಮಂಗನ ಕಾವಲಿನವರು ಕೊಂದು ತೋಟದಲ್ಲಿ ಶವ ವನ್ನು ನೇತು ಹಾಕಿದರೆ ಮತ್ತೆ ಹಲವಾರು ದಿನಗಳ ಕಾಲ ಆ ಭಾಗದ ಹತ್ತಿರವೂ ಮಂಗಗಳು ಸುಳಿ ಯುತ್ತಲಿರಲಿಲ್ಲ…!! ಆದರೆ ಈಗಿನ ಮಂಗಗಳು ಅದಕ್ಕೂ ಬಗ್ಗದ ಹಮಾಸ್ ಉಗ್ರರಂತೆ….!! ಸತ್ತವರು ಸತ್ತರು ಇರುವ ವವರು ಬದುಕಬೇಕು ಎಂಬ ಸಿದ್ದಾಂತ ದವು.
ಮಂಗಗಳು ತೋಟಕ್ಕೆ ಬಂದಾಗ ಕೋವಿ ತೋರಿಸಿದರೆ ಓಡಿ ಹೋಗುತ್ತವೆ… ಆದರೆ ಮಂಗಗಳು ತೋಟಕ್ಕೆ ಬಂದಾಗ “ಕೋವಿ ರೆಡಿ” ಇರಬೇಕು…. ಯಾರು ಯಾವತ್ತೂ ಮಂಗಗಳ ಬರುವಿಕೆಯನ್ನ ಕಾಯುತ್ತಿರಲು ಸಾದ್ಯ…? ಇವತ್ತು ಇರುವ ನೂರಕ್ಕೆ ನೂರರಷ್ಟು ಮಂಗನ ಕಾಟದ ಪರಿಹಾರ ಎಲ್ಲವೂ ಮಂಗಗಳು ತೋಟಕ್ಕೆ ಬಂದಾಗ ಬಳಸಿ ಓಡಿಸುವಂತವು. ಒಂದೇ ಒಂದು ಪರಿಹಾರ ಮಂಗ ತೋಟದ ಕಡೆ ತಲೆ ಹಾಕಿ ಬರದಂತೆ “ಅಡ್ವಾನ್ಸ್ಡ್” ಪರಿಹಾರ ಇಲ್ಲ …!!
ಮನ್ವಿತ್ ಗೆ ಇವತ್ತು ರೈತರ ಪ್ರಪಂಚದಲ್ಲಿ ಈ ಪ್ರಯೋಗ ಮಾಡಿ ಮಂಗನ ನಿಯಂತ್ರಣ ಮಾಡಬಹುದು ಎಂದು ಚಾಲ್ತಿಯಲ್ಲಿ ಇರುವ ಎಲ್ಲಾ ಪ್ರಯೋಗ ಮಾಡಿಯೂ ಯಾವೊಂದರಲ್ಲೂ ಮಂಗನ ಸಂಪೂರ್ಣ ನಿಯಂತ್ರಣ ಮಾಡಲಿಲ್ಲ. ಅದಕ್ಕೆ ಇದೇ ಕಾರಣ…
ಮಂಗಗಳ ಸಮಸ್ಯೆಗೆ “ಶಾಶ್ವತವಾದ ಪರಿಹಾರ” ಏನೆಂದರೆ ಮಂಗಗಳನ್ನ ಕೊಂದು ಹಾಕಬೇಕು ಇಲ್ಲವೇ ಮಂಗಗಳನ್ನ ಹಿಡಿಸಿ ಬೇರೆಡೆಗೆ ಸಾಗಿಸವೇಕು. ಆದರೆ ನಾವು ನಮ್ಮೂರಿನ ಮಂಗವನ್ನ ಬೇರೆ ಊರಿಗೆ ಸಾಗಿಸಿ ಖುಷಿ ಪಟ್ಟು ನಾಲ್ಕು ದಿನಗಳಲ್ಲಿ ಯಾರೋ ಇನ್ನೊಂದು ಊರಿನ ಮಂಗಗಳನ್ನ ನಮ್ಮೂರಿಗೆ ತಂದು ಬಿಟ್ಟಾಗಿರುತ್ತದೆ. ಅದು ಪೇಟೆಯಲ್ಲಿ ಒಂದು ಮನೆ ಕಸವನ್ನು ಇನ್ನೊಂದು ಮನೆ ಕಂಪೌಂಡ್ ಒಳಗೆ ಸುರಿದಂತೆ ಅಷ್ಟೇ.
ಇನ್ನೊಂದು ಪರಿಹಾರ ಮಂಗಗಳನ್ನು ಒಂದೆಡೆ ಸೇರಿಸಿ ಪ್ರತಿ ದಿನವೂ ಊಟ ಹಾಕಬೇಕು….ಹಂಗೆ ಮಂಗಗಳಿಗೆ ದಿನವೂ ಹೊಟ್ಟೆ ತುಂಬ ಊಟ ಹಾಕಿದರೆ ಮಂಗಗಳು ಮನುಷ್ಯರ ಮನೆ ಕೃಷಿ ಹಾಳು ಮಾಡೋಲ್ಲ.. ಅದೊಂದು ಪ್ರಯತ್ನ ಮಾಡಿ ನೋಡು….”
ಅಂತ ಅಂಗಡಿ ಕಟ್ಟೆಯಲ್ಲಿ ಕೂತು ಜಾಗತಿಕ ಚೆರ್ಚೆ ಮಾಡುವ ಬುದ್ದಜೀವಿ ರಮೇಸಣ್ಣ ಮನ್ವಿತ್ ಗೆ ಒಂದು ಐಡಿಯಾ ಕೊಟ್ಟರು.
ಮಂಗ ಹನುಮಂತನ ಅವತಾರ. ಮಂಗನ ಕೊಂದರೆ ಮಂಗ ಸಾಯೋಸುರಿಗೆ ಕೈ ಮುಕ್ಕೋ ಸತ್ತೋತಾವೆ. ಮನ್ವಿತ್ ಪ್ರಾಣಿಗಳ ಬಗ್ಗೆ ಅತೀವ ಪ್ರೀತಿ ಇರುವ ಪ್ರಾಣಿದಯಾ ಸಂಘದ ಸದಸ್ಯ. ಮಂಗನನ್ನು ಕೊಲ್ಲದೆ ಮಂಗನಿಗೆ ಆಹಾರ ಕೊಟ್ಟು ಮಂಗ ಊರು ಮನೆ ಜಮೀನಿನ ಮೇಲೆ ದಾಳಿ ಮಾಡದಂತೆ ತಡೆಯುವ ಸಾದ್ಯತೆ ಬಗ್ಗೆ ಪ್ರಯೋಗ ಪ್ರಯತ್ನ ಮಾಡುವ ಆಲೋಚನೆ ಮಾಡಿದ.
ಪ್ರತಿ ಸತಿಯೂ ಸೊಸೈಟಿಯಲ್ಲಿ ಕೊಡುವ ಬಿಪಿಎಲ್ ಉಚಿತ “ಅನ್ನಭಾಗ್ಯ” ಯೋಜನೆಯ ಪಡಿತರವನ್ನ ಮಂಞಾಥಣ್ಣ ಸೊಸೇಟಿಲಿ ಏಕಲವ್ಯನ ಥರ “ಥಮ್ಮು ಕೊಟ್ಟು” ಅಕ್ಕಿ ತಗೊಂಡು ಮನಿಗೆ ತಂದು ಹಾಕ್ತಿತ್ತದ್ದರು. ಯಾವತ್ತೂ ಆ ಅನ್ನಭಾಗ್ಯದ ಅಕ್ಕಿ ನ ಮಂಞಾಥಣ್ಣನ ಮನೆಯವರು ಉಣ್ಣತ್ತಿರಲಿಲ್ಲ…!!
“ಇಸೀಸೀ…ಈ ಪಾಲಿಸ್ ಅಕ್ಕಿ ಉಂಡರ್ ಮುಗೀತು”… ಅಂತೇಳಿ ಅಕ್ಕಿ ನ ಅಂಗಡಿಗೆ ಮಾರುತ್ತಿದ್ದ. ಮಗ ಕಾಲೇಜಿಗೆ ಹೋಕ್ಕು ಸುರು ಮಾಡಿದಮೇಲೆ ಮನ್ವಿತ್ ನಿಗೆ ಈ ಅಕ್ಕಿ ನ ಪಾಕಿಟ್ ಮನಿ ತರ ಕೊಡ್ತಿದ್ದ. ಮನ್ವಿತ್ ಈ ಸೊಸೈಟಿಯ ಅಕ್ಕಿ ನ ಕೊಂಡೊಯ್ದು ಪ್ಯಾಟೆಲಿ ದೋಸೆ ಕ್ಯಾಂಪ್ ನವರಿಗೆ ಉತ್ತಮ ಬೆಲೆಗೆ ಮಾರುತ್ತಿದ್ದ.
ಈ ಅಕ್ಕಿ ಕಳೆದ ಎರಡು ತಿಂಗಳಿಂದ ಸ್ಟಾಕ್ ಇತ್ತು. ಮನೆಯ ಅಟ್ಟದ ಮೇಲಿದ್ದ ದೊಡ್ಡ ತಂಬಾಳೆ ಪಾತ್ರೆ ಯನ್ನು ಇಳಿಸಿ ಆ ಪಾತ್ರೆಯಲ್ಲಿ ತ್ವಾಟದ ತುದಿಲಿ ಒಲೆ ಹೂಡಿ ಅನ್ನ ಬೇಯಿಸಿದ. ಮಂಗ ತ್ವಾಟದ ತಲೆಲಿ ಕೂಲೋ (ಕೂರುವ) ಮರ ನ ಅಂಡಿಗೆ (ಕೆಳಗೆ) ಅನ್ನದ ತಂಬಾಳೆ ಇಟ್ಟುಕೊಂಡು ಮಂಗನಿಗೆ ಪಿತ್ರ ಪಕ್ಷದಲ್ಲಿ ಪಿಂಡ ಕಟ್ಟುವ ನಮೂನೆಯಲ್ಲಿ ಪಿಂಡ ಕಟ್ಟಿ ಮಂಗನಿಗೆ ಹಂಚುವ ಪ್ರಯತ್ನ ಮಾಡಿದ.
ಮಂಗಗಳು ಮನುಷ್ಯ ರ ರಾಜಕೀಯ ರ್ಯಾಲಿ ಸಮಾವೇಶದಲ್ಲಿ ಮನುಸ್ರು ಹಾಳೆ ತಟ್ಟೆ ಹಿಡಕೊಂಡು ಬಫೆ ಲಿ ಒಬ್ಬರ ಮೇಲೆ ಒಬ್ಬರು ಬಿದ್ದು ಹೆಂಗೆ ಮುನ್ನುಗ್ಗುತ್ತಾರೋ ಹಂಗೆ ಮಂಗಗಳು ನುಗ್ಗಿದವು. ಅದರಲ್ಲೂ “ಗಡವ ಮಂಗ” ಗಲಾಟೆ ಮಾಡಿ ಮುನ್ನುಗ್ಗುವ ಗಡಿಬಿಡಿಯಲ್ಲಿ ಅನ್ನ ಹಂಚಲು ನಿಂತಿದ್ದ ಮನ್ವಿತ್ ನಿಗೂ ಸ್ವಲ್ಪ ಮಟ್ಟಿಗೆ ತರಚು ಗಾಯವಾಗಿ ಮನ್ವಿತ್ ಭಯಪಟ್ಟು ಕೂಗುತ್ತಾ ತ್ವಾಟದಿಂದ ಮನೇಗೆ ಓಡಿ ಬಂದ. ಅದೇಕೋ ‘ಮಂಗನಿಗೆ’ ಮನ್ವಿತ್ ಮೊದಲ ಬಾರಿಗೆ “ಭಯ” ಪಟ್ಟಿದ್ದ.
ಊರು ಮನೆಯವರನ್ನ ಮಂಞಾಥಣ್ಣ ತ್ವಾಟದ ತಲೆಗೆ ಕರೆದುಕೊಂಡು ಬಂದಾಗ “ಅನ್ನದ ತಂಬಾಳೆ” (ಪಾತ್ರೆ) ಹಲಸಿನ ಮರದ ತಲೆಲಿತ್ತು…!!!
ಮಂಗಗಳು ಮನ್ವಿತನ ಪಿಂಡ ಪ್ರದಾನ ದ ಅನ್ನ ತಿಂದು ತ್ವಾಟದಲ್ಲಿ ಅಡಿಕೆ ಕಾಯಿ ತರಿದು ಹಾಕುವ ಕೆಲಸ ಮುಂದು ವರಿಸಿದ್ದವು….!!!
ಊರು ಮನೆ ಜನಗಳು ಮಂಞಾಥಣ್ಣ ಮಗನ ಹುಚ್ಚಾಟವನ್ನ ನೋಡಿ ಮಂಞಾಥಣ್ಣನಿಗೆ “ನಿನ್ನ ಮಗನ ಕಥೆ ಯಂಥ ಮಾರಾಯ..? ” ಯಾರಾದರೂ ಮಂಗನ ಕಂಟ್ರೋಲ್ ಮಾಡೋಕೆ ಅನ್ನ ಮಾಡಿ ಹಾಕ್ತಾರ..? ಹೋಗಿಲಿ ಇದನ್ನು ಜೀವನ ಪರ್ಯಂತ ಮಾಡೋಕೆ ಆಗುತ್ತ…? ಈ ಅನ್ನದ ರುಚಿಗೆ ನಾಳೆ ಮಂಗಗಳು ನಮ್ಮಗಳ ಮನೆಯ ಅಡಿಗೆ ಮನೆಗೇ ನುಗ್ಗಿ ನಮ್ಮ ಹೆಂಗಸರ ಮಕ್ಕಳ ಹೆದರಿಸಿ ಮನೆಯಲ್ಲಿ ಮಾಡಿದ ಅನ್ನ ಉಂಡುಕು ಹೋತಾವೆ…!! ಮೊದಲು ನಿನ್ನ ಮಗನಿಗೆ ಈ ಥರ ಹುಚ್ಚಾಟ ಮಾಡದಂತೆ ಬುದ್ದಿ ಹೇಳು ಮಂಞಾಥಣ್ಣ… ” ಅಂತ ಜನ ಬೈದರು.
ಊರು ಮನೆ ಯಜಮಾನರು ಯಾರೋ ಒಬ್ಬರು ಮಂಞಾಥನನ್ನ ಕರೆದು ಮಗ ಮನ್ವಿತ್ ನನ್ನು ಈ ಮಂಗನ ಹುಚ್ಚು ಬಿಡಸಾಕೆ ಪ್ಯಾಟೆಯ ಮಾನಸಿಕ ಡಾಕ್ಟರು ಶೇಷಾಚಲ ರ ಹತ್ತಿರ ಕರೆದುಕೊಂಡು ಹೋಗು ಎಂದರು.
ಮಂಞಾಥಣ್ಣ ನಿಗೆ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋಗದೇ ಸೈಯ್ಯು ಎನಿಸಿತು. ಮಂಞಾಥಣ್ಣ ಸಂಜೆ ತಮ್ಮ ಮಗಳ ಗಂಡನಿಗೆ ಫೋನ್ ಮಾಡಿ ನಮ್ಮ ಮನ್ವಿತ್ ಹಿಂಗಿಂಗ್ ಮಾಡ್ತಿದಾನೆ. ಅವನನ್ನು ಹೆಂಗಾರು ಒಪ್ಪಿಸಿ “ಮಾನಸಿಕ” ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಯಾದರೂ ಅವನ ಈ ಮಂಗನ ಹುಚ್ಚು ಬಿಡಿಸಿದಿದ್ದರೆ ಆಗಾದೇ ಅಲ್ಲ. ಅವನ ಪ್ಯಾಟೆಯ ಮಾನಸಿಕ ಡಾಕ್ಟರ್ ಹತ್ತಿರ ಕರಕುಹೋಕ್ಕೆ ನೀವು ಸಾಯ ಮಾಡಬೇಕು ” ಅಂತ ಅಳಿಯನಿಗೆ ರಿಕ್ವೆಸ್ಟು ಮಾಡಿದರು.
ಹೆಣ್ಣು ಕೊಟ್ಟ ಮಾವನ ಮಾತಿಗೆ ಇಲ್ಲ ಅನ್ನೋಕೆ ಆಗುತ್ತಾ…? ಅಳಿಯ ಮಗಳು ಒಂದಿನ ಬೆಂಗಳೂರಿಂದ ಇಲ್ಲಿಗೆ ಬಂದು ಮನ್ವಿತ್ ನ ಕನ್ ವಿನ್ಸ್ ಮಾಡಿ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಕೂಲಿಸಿದರು.
ಶೇಷಾಚಲ ಡಾಕ್ಟರ್ ಹತ್ತಿರ ಮನ್ವಿತ್ ” ನಂಗೇನು ಆಗಲ ಡಾಕ್ಟರೆ ನಾನು ಸಮ ಇದೀನಿ….” ಅಂದ. ಡಾಕ್ಟರು ಮನ್ವಿತ್ ನೋಡಿ ಒಂದು ಸಣ್ಣ ನಗು ಸೂಸಿ “ಎಲ್ಲಾ ಮಾನಸಿಕ ಅಸ್ವಸ್ಥರೂ “ನಾವು ಮಾನಸಿಕ ವಾಗಿ ಸಮ” ಇದೀವಿ ಅಂತಾನೇ ಹೇಳದು
ಅಂತಂದುಕೊಂಡರು.
ಮನ್ವಿತ್ ನಿಗೆ ಡಾಕ್ಟರು ಒಂದು ತಿಂಗಳಿಗೆ ಆಗುವಷ್ಟು ಔಷಧ ಮಾತ್ರೆ ಬರೆದುಕೊಟ್ಟರು.
ಮನ್ವಿತ್ ನ ಮನಿಗೆ ಕರಕು ಬಂದರು. ಹೊರಗಿನ ಜನ ಮನ್ವಿತ್ ನನ್ನು ದೊಡ್ಡ ಹುಚ್ಚನಂತೆ ನೋಡತೊಡಗಿದರು. ಇಡೀ ಊರೆಲ್ಲ ಮನ್ವಿತ್ ನಿಗೆ ಮಂಗನ ಖಾಯಿಲೆ ಯಂತೆ ಅಂತ ಹೇಳಿಕೊಂಡು ನೆಗ್ಯಾಡತೊಡಗಿದರು.
ಮನ್ವಿತ್ ನಿಗೆ ದಿನ ಬೆಳಿಗ್ಗೆ ರಾತ್ರಿ ಎರಡು ಹೊತ್ತು ಅಮ್ಮ ಜಲಜಕ್ಕ ತಪ್ಪದೇ ಮಾತ್ರೆ ತಿನಸಕೆ ಶುರು ಮಾಡಿದರು.
ಮನ್ವಿತ್ ನಿಧಾನವಾಗಿ “ಮಾತ್ರೆ ಪಾಲ್ಟಿ” ಆಗೋಕೆ ಸುರುವಾದ.
ಮಾತ್ರೆ ತಗೊಣಕೆ ಶುರುವಾಗಿ ನಾಕು ದಿನದ ನಂತರ ಮನ್ವಿತ ಹಗಲು ರಾತ್ರಿ ಘೋರ ನಿದ್ರೆ ಮಾಡೋಕೆ ಶುರು ಮಾಡಿದ.
ಈ ಸಂಗತಿ ಮನ್ವಿತ್ ನನ್ನೇ ಗಾಭರಿ ಗೊಳಿಸಿತು. ಆರೋಗ್ಯವಂತ ಮನ್ವಿತ್ ನನ್ನು ಒಂದು ತಪ್ಪು ತಿಳುವಳಿಕೆಯಿಂದ “ದೊಡ್ಡ ಮನೋರೋಗಿಯಂತೆ ” ಕುಟುಂಬ ಸದಸ್ಯರು ಚಿಕಿತ್ಸೆ ಕೊಡಿಸಲು ಹೋಗಿ “ಆರೋಗ್ಯವಂತನನ್ನು ಮನೋರೋಗಿ” ಯನ್ನಾಗಿ ಮಾಡುವಂತಾತು.
ಮನ್ವಿತ್ ಜಾಗೃತ ನಾದ…. ಮಾರನೇ ದಿನ ಮಾತ್ರೆ ಬ್ಯಾಗಡೆ ಕೊಟ್ಟೆ ತಗುಬಂದ ಅವ್ವ ಜಲಜಕ್ಕ ನನ್ನು ಮಗ ಮನ್ವಿತ್ “ಅವ್ವ…. ಆ ಮಾತ್ರೆ ತಗುಣಕೆ ನಂಗೊತ್ತು ಆ ಮಾತ್ರೆ ಇಲ್ಲಿಟ್ಟು ತೆಪ್ಪುಗೆ ತೌಡು.. (ಹೋಗು) ” ಎಂದು ಜಬರ್ದಸ್ತ್ ಆಗಿ ಹೇಳದ. ಬೆಳದ ಮಗನ ಕೋಪಕ್ಕೆ ಅವ್ವ ಜಲಜಕ್ಕ ಹೆದುರಿ ಮಾತ್ರೆ ಬ್ಯಾಗಡೆ ಕೊಟ್ಟೆ ಅಲ್ಲೇ ಇಟ್ಟು.. “ಮನ್ವಿ ಈ ಮಾತ್ರೆ ನೀ ತಗುಬೇಕು ” ಅಂತ ‘ರಮಸಿ” ಕ್ವಾಣೆಯಿಂದ ಹೆರ್ಗೆ ಹೋದಳು.
ಮನ್ವಿತ್ ಆ ಮಾತ್ರೆನ ತಗುಣದಿತೆ ಕೊಟ್ಟೆ ನ ತ್ವಾಟದ ಹೆಗ್ಗಪ್ಪ್ ನ ಹಳ್ಳಕ್ಕೆ ಎಸೆದು ಮನಿಗೆ ವಾಪಸು ಬಂದ.
ಮನ್ವಿತ್ ನಿಗೆ ಆ ದಿವಸ ಮಾತ್ರೆ ತಗುಣ ದಿದ್ದರೂ ಅದರ hangover ಇತ್ತು….ಇದಾಗಿ ನಾಕು ದಿನ ಮಾತ್ರೆ ತಗೊಂಡಂಗೆ ನಾಟಕ ಮಾಡಿದ ಮನ್ವಿತ್. ಒಂದು ದಿನ ಬೆಳ್ ಬೆಳಿಗ್ಗೆ ಮನ್ವಿತ್ ನಿಗೆ ಮಂಗನ ನಿಯಂತ್ರಣಕ್ಕೆ ಹೊಸದೊಂದು ಐಡಿಯಾ ಬಂತು. ಆ ಐಡಿಯಾ ಸಾಕಾರ ಮಾಡಲು ಮಾನಸಿಕ ಡಾಕ್ಟರು ತನಗೆ ಕೊಟ್ಟಿಧ್ದ ಮಾತ್ರೆ ಬೇಕಿತ್ತು.
ಕೂಡಲೇ ಆವತ್ತು ಮಾತ್ರೆ ಕೊಟ್ಟೆ ಎಸೆದು ಬಂದಿದ್ದ ಹೆಗ್ಗಪ್ ನ ಹಳ್ಳದ ಹರಿವಿನಲ್ಲಿ ನೆಡೆಕೊಂಡು ಹೋದ. ಹೆಚ್ಚು ಮಳೆ ಇರದೆ ಇದ್ದದ್ದರಿಂದ ಮಾತ್ರೆ ಬ್ಯಾಗಡೆ ಕೊಟ್ಟೆ ಮಕ್ಕಳ ಕಾಗದದ ದೋಣೆಯಂತೆ ತೇಲಿ ಹೋಗಿ ಸ್ವಲ್ಪ ದೂರದ ಹಳ್ಳದ ತಿರಕಾಸ್ ನ ಮುಂಡುಕನ ಹಿಂಡಲಲ್ಲಿ ಸೇಫಾಗಿ ಸಿಕ್ಕಿ ಹಾಕಿಕೊಂಡಿತ್ತು.
ಮನ್ವಿತ್ ನಿಗೆ ಆ ಬ್ಯಾಗಡೆ ಕೊಟ್ಟೆ ಸಿಕ್ಕ ತಕ್ಷಣ ಅತ್ಯಂತ ಖುಷಿಯಾತು. ನಾಳೆ ಮಂಗನ ಮೇಲೆ ಮತ್ತೊಂದು ಕೊನೆಯ ಸುತ್ತಿನ ಪ್ರಯೋಗ ಮಾಡ ಬೇಕು . ಏನು ಹೇಗೆ ಎಂಬುದನ್ನು ಮನಸಿ ನಲ್ಲಿ ಸಿದ್ದವಾದ.
ಮನೆಗೆ ಹೋದ ಮನ್ವಿತ್ ಅಡಿಗೆ ಮನೆಯಲ್ಲಿ ಅಮ್ಮ ಇಲ್ಲದ ಸಮಯ ನೋಡಿ ಮಾತ್ರೆ ಯನ್ನು ಕವರ್ ನಿಂದ ತೆಗೆದು ಅದನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ ಪುಡಿ ಮಾಡಿ ಒಂದು ಕವರ್ ಗೆ ಹಾಕಿದ.
ಮಾರನೇ ದಿನ ಸಮಯ ನೋಡಿ ಮತ್ತೆ ಅಟ್ಟದಿಂದ ತಂಬಾಳೆ ತೆಗೆದು ಅದನ್ನು ಮತ್ತೆ ತ್ವಾಟದ ತಲೆಗೆ ಕೊಂಡೊಯ್ದು ಮತ್ತೆ ಅನ್ನ ಮಾಡಿ ಅದರಲ್ಲಿ ನಿನ್ನೆ ಮಿಕ್ಸಿಯಲ್ಲಿ ಪುಡಿ ಮಾಡಲಾಗಿದ್ದ ಶೇಷಾಚಲ ಡಾಕ್ಟರ ಮಾತ್ರೆಯ ಒಂದಷ್ಟು ಭಾಗವನ್ನು ಅನ್ನದೊಂದಿಗೆ ಚೆನ್ನಾಗಿ ಕಲೆಸಿ ಈ ಬಾರಿ ಸ್ವಲ್ಪ ದೂರ ದೂರದಲ್ಲಿ ಅನ್ನದ ಪಿಂಡದ ಎಡೆ ಇಟ್ಟ.
ಮಂಗಗಳು ಮರದಿಂದ ಇಳಿದು ಪಿಂಡವನ್ನ ಮುಕ್ಕ ತೊಡಗಿದವು. ಈ ವಿಚಾರದಲ್ಲಿ ಮಂಗಗಳು ಪರಸ್ಪರ ಸಂಘರ್ಷ ಮಾಡಿದವಾದರೂ ಮೊನ್ನಿನ ಮೊದಲ ಪ್ರಯತ್ನ ಕ್ಕಿಂತ ಈ ಪ್ರಯತ್ನದಲ್ಲಿ ಮನ್ವಿತ್ ಸ್ವಲ್ಪ ಸುಧಾರಿಸಿಕೊಂಡು ಜಾಗೃತ ನಾಗಿದ್ದ.
ಅಂತೂ ಮಂಗ ಭೋಜನ ಮುಗೀತು… ಮಂಗಗಳು ಪಿಂಡ ತಿಂದ ಸ್ವಲ್ಪ ಹೊತ್ತಿಗೆ ಮರದ ಮೇಲೆ ಮಲಗಿ ನಿದ್ದೆ ಮಾಡ ತೊಡಗಿದವು.
ಮನುಷ್ಯ ರು ಆ ಮಾತ್ರೆ ತಿಂದರೆ ದಿನಿವಿಡೀ ನಿದ್ರೆ ಮಾಡಬಹುದಾದ ಮಾತ್ರೆಯ ಪ್ರಮಾಣ ವನ್ನು ಮನುಷ್ಯನಿಗಿಂತ ಚಿಕ್ಕ ಪ್ರಮಾಣದ ವು ಆದುದರಿಂದ ಮಾತ್ರೆ ಯ ಪ್ರಭಾವ ಸಾಕಷ್ಟೇ ಆಯಿತು. . ಮಂಗಗಳು ರಾತ್ರಿ ಏಳು ಗಂಟೆಯಾದರೂ ಏಳಲಿಲ್ಲ….!!
ಮನ್ವಿತ್ ನ ಹಲವಾರು ಮಂಗ ನಿಯಂತ್ರಣ ದ ಪ್ರಯತ್ನ ಪ್ರಯೋಗ ದಲ್ಲಿ ಈ ಪ್ರಯೋಗ ಸಾಕಷ್ಟು ಯಶಸ್ವಿಯಾಗಿತ್ತು.
ಮತ್ತೆ ಉಳಿದ ಮಾತ್ರೆಯ ಪುಡಿಯನ್ನು ಮಾರನೇ ದಿನವೂ ಅನ್ನದೊಂದಿಗೆ ಹಾಕಿ ಪ್ರಯೋಗ ಮಾಡಿ ನಿನ್ನೆ ಗಿಂತ ಇವತ್ತು ಇನ್ನೂ ಯಶಸ್ವಿಯಾದ.
ಮಾತ್ರೆ ಪುಡಿ ಕಾಲಿಯಾತು. ಮನ್ವಿತ್ ತನ್ನ ಕಾಲೇಜು ಗೆಳೆಯರ ಸಹಾಯ ಪಡೆದು ಮೆಡಿಕಲ್ ಷಾಪ್ ಮಾಲಿಕರೊಬ್ಬರಿಗೆ ದುಪ್ಪಟ್ಟು ಹಣ ಕೊಟ್ಟು ಇನ್ನಷ್ಟು “ಆ ಸಂಬಂಧಿಸಿದ” ಮಾತ್ರೆ ಕೊಂಡು ತರುವಲ್ಲಿ ಯಶಸ್ವಿಯಾದ.
ಮನ್ವಿತ್ ತನ್ನ ಊರಿನ ಪಕ್ಕದ ಮನೆಯ ಗೆಳೆಯ ಅಶ್ವಥ್ ಎಂಬುವವನ ಸಹಾಯ ಪಡೆದು ಅವನ ಮನೆಯಲ್ಲೇ ಹಿಂದಿನ ದಿನ ಗುಟ್ಟಾಗಿ ಅನ್ನ. ಮಾಡಿ ಮಾತ್ರೆ ಪುಡಿಯ ಪಿಂಡ ಕಟ್ಟಿ ಮಾರನೆ ಬೆಳಿಗ್ಗೆ ನಾಜೂಕಾಗಿ ಹಂತ ಹಂತವಾಗಿ ಎಲ್ಲಾ ಮಂಗಗಳಿಗೂ ಪಿಂಡ ತಿನ್ನಿಸಿ ಮಂಗಗಳನ್ನ “ಹಗಲು ಹೊತ್ತಿನಲ್ಲಿ “ಮಲಗಿಸುವಲ್ಲಿ ಯಶಸ್ವಿಯಾದ.
ಮನ್ವಿತ್ ವಿಜ್ಞಾನದ ವಿದ್ಯಾರ್ಥಿ. ತನ್ನ ಪಿಯುಸಿ ಗೆಳಯರಲ್ಲಿ ಪಶುವೈದ್ಯಕೀಯ ಓದುವರ ಮೂಲಕ ಮಂಗಗಳ ದೇಹ ಅವುಗಳ ಬಗ್ಗೆ ಇನ್ನೂ ಹೆಚ್ಚು ತಿಳುದುಕೊಂಡ.
ಮನ್ವಿತ್ “ಹೊರ ಜಗತ್ತಿಗೆ” ಮಂಗಗಳ ಬುದ್ದಿ ಮಂದವಾಗಲು “ಆಯುರ್ವೇದ ಗಿಡ ಮೂಲಿಕೆ ಔಷಧಿ” ಬಳಸುತ್ತೇನೆ ಎಂದು ನಂಬಿಸಿದ.
ಮನ್ವಿತ್ ಮಂಗಗಳಿಗೆ ಆಹಾರದಲ್ಲಿ ಆಯುರ್ವೇದ ಔಷಧ ಬೆರಸಿ ನೀಡಿ ಅವುಗಳು ಹಗಲು ಹೊತ್ತಿನಲ್ಲಿ ಮನೆ ಮಾರು ಕೃಷಿ ಬೆಳೆ ಹಾಳು ಮಾಡಿ ದಾಂದಲೆ ಮಾಡದಂತೆ ನಿಯಂತ್ರಣ ಮಾಡುತ್ತಾನೆಂಬ ಸುದ್ದಿ ಎಲ್ಲೆಡೆ ಹರಡಿತು.
ಮಂಗನಿಂದ ಸಂತ್ರಸ್ತರಾವರೆಲ್ಲರೂ ಮಂಗನ ನಿಯಂತ್ರಣ ಮಾಡುವ ” ಕಿಂದರ ಜೋಗಿ ” ಯೊಬ್ಬ ಅವತರಿಸಿ ಬಂದ ಎಂದು ಅತ್ಯಂತ ಸಂತಸ ಪಟ್ಟರು.
ಕೆಲವರು ಈ ಗಿಡ ಮೂಲಿಕೆ ಯಾವುದೆಂದು ಮನ್ವಿತ್ ನ ಬಳಿ ತಿಳಿದು ಕೊಂಡು ಮಂಗನಿಗೆ ಅನ್ನದ “ಪಿಂಡದ ಪಿತೃಪಕ್ಷ” ಮಾಡಿ ಪ್ರಯತ್ನ ಮಾಡಿ ಸೋತರು.
“ಸೀಕ್ರೇಟ್ ರೆಸೆಪಿ ” ಮನ್ವಿತ್ ಬಳಿ ಇರುವಾಗ ಮತ್ತು ಆ ತಂತ್ರಜ್ಞಾನ ಯಾರಿಗೂ “ಹೇಳುವ ಹಾಗಿಲ್ಲದೇ” ಇರುವು ದರಿಂದ ಮಂಗನ ಸಂತ್ರಸ್ತರೆಲ್ಲರೂ ಮನ್ವಿತ್ ಬಳಿಯೇ “ನೀನೇ ನಮ್ಮೂರ ಮಂಗಗಳನ್ನ ನಿಯಂತ್ರಣ ಮಾಡಿಕೊಡು” ಎಂದು ಬೆನ್ನು ಬಿದ್ದರು.
ಮನ್ವಿತ್ ಇದಕ್ಕೆ ಇಷ್ಟು ಎಂದು ಹಣ ನಿಗದಿ ಮಾಡಿದ… ಮಂಗ ಸಂತ್ರಸ್ತರೆಲ್ಲರಿಗೂ ಆ ಹಣ ಕೊಡಬಹುದು ಎನಿಸಿ ಒಪ್ಪಿದರು.
ಮನ್ವಿತ್ ಊರು ಮನೆ ಸುತ್ತಲಿನ ಹಳ್ಳಿಗಳ ರೈತರ ಜಮೀನಿನ ಮೇಲೆ ದಾಳಿ ಮಾಡುತ್ತಿದ್ದ ಮಂಗಗಳ ಗುಂಪನ್ನ ಅದ್ಯಯನ ಮಾಡಿ ಆ ಮಂಗಗಳ ಗುಂಪು ಎಲ್ಲಿ ವಾಸ ಮಾಡಬೇಕೋ ಆ ಮರವನ್ನು ಗುರುತಿಸಿ ಅವುಗಳಿಗೆ ಅಲ್ಲೇ ಆಹಾರ ಕೊಡುವ ವ್ಯವಸ್ಥೆ ಮಾಡಿದ. ಇದಕ್ಕೆ ಸಂಬಳಕ್ಕೆ ಯುವಕರನ್ನು ನೌಕರಿಗೆ ತೆಗದು ಕೊಂಡು ಅವರಿಗೆ ಸಂಬಳ ನೀಡಿದ. ಈ ಯುವಕರಿಗೆ ಬೆಳಿಗ್ಗೆ ಮುಂಚೆ ಒಂದು ಗಂಟೆ ಶ್ರಮ ಪಡುವ ಕೈ ತುಂಬಾ ಸಂಬಳ ಪಡೆವ “ಪಾರ್ಟ್ ಟೈಮ್ ” ಕೆಲಸ ಸಿಕ್ಕಿ ಖುಷಿಯಾತು.
ಮನ್ವಿತ್ ತನ್ನ ಮನೆಯಲ್ಲೇ ಈಗ “ಸ್ಟೀಮ್ ಬಾಯ್ಲರ್ ಸಿಸ್ಟಮ್” ನ ಆಧುನಿಕ ಅಡಿಗೆ ಮನೆ ನಿರ್ಮಾಣ ಮಾಡಿ ಆಧುನಿಕ ತಂತ್ರಜ್ಞಾನದ ಮೂಲಕ ಯಂತ್ರ ಗಳ ಮೂಲಕ ಪಿಂಡ ಕಟ್ಟಿಸಿ ಬೆಳಿಗ್ಗೆ ಊರೂರಿನ ಮಂಗಗಳ ಗುಂಪಿಗೆ ಆಹಾರ ಒದಗಿಸುವ ಕೆಲಸ ಮಾಡಿದ.
ಮನ್ವಿತ್ ಈ ಪಿಂಡ ಕಟ್ಟುವ ಸಮಯದಲ್ಲಿ ಕಲಸುವ ಯಂತ್ರ ದಲ್ಲಿ ನಿದ್ದೆ ಬರುವ ಸ್ಟಿರಾಯ್ಡ್ ಮಾತ್ರೆ ಗಳ ಪುಡಿಯನ್ನು ಬೆರಸುತ್ತಿದ್ದ. ಮನ್ವಿತ್ ಏನು ಬೆರೆಸುತ್ತಾನೆ ಎಂಬುದು ಹೊರ ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ…!!
ಜನಕ್ಕೆ ತಮ್ಮಗಳ ಮನೆ ಮಾಡು ಹತ್ತಿ ಹಂಚು ಕೀಳು ವುದು , ದೊಂಬೆ ಕೀಳುವುದು, ಮನೆಯೊಳಗೆ ನುಗ್ಗಿ ರಂಪ ಮಾಡುವುದು,
ಹಿತ್ತಲಲ್ಲಿ ಬೆಳೆದ ತರಕಾರಿ ತಿನ್ನುವುದು, ಅಡಿಕೆ ತೋಟದ ಎಳೆಕಾಯಿ ಕಿತ್ತು ನಾಶ ಮಾಡುವುದು, ಏಲಕ್ಕಿ , ಬಾಳೆ , ಶುಂಠಿ ಬೆಳೆಯದಂತೆ ಮಾಡುವುದು, ಬತ್ತದ ಗದ್ದೆ ನಾಶ ಮಾಡುವುದು ಸೇರಿದಂತೆ ಎಲ್ಲಾ ಬಗೆಯ ಮಂಗನ ಲೂಟಿಯೂ ನಿಂತು ಸಮಾಧಾನ ತಂದಿತು. ಊರು ನಿಧಾನವಾಗಿ ಸಮೃದ್ಧ ವಾಗ ತೊಡಗಿತು.
ಮನ್ವಿತ್ ಮಂಗನ ನಿಯಂತ್ರಣ ದಲ್ಲಿ ಅತ್ಯಂತ ಯಶಸ್ವಿಯಾಗಿದ್ದ. ಪ್ರಾಣಿ ಪ್ರಿಯರು ಮನ್ವಿತ್ ಮಂಗನ ಚಟುವಟಿಕೆ ನಿಯಂತ್ರಣ ಮಾಡುವುದನ್ನು ಆಕ್ಷೇಪಿಸಿ ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಗೆ ಕಂಪ್ಲೈಂಟ್ ಕೊಟ್ಟರು.ಆದರೆ ಜನರು ಮನ್ವಿತ್ ಪರ ಗಟ್ಟಿ ಯಾಗಿ ನಿಂತರು.
ಮನ್ವಿತ್ ನ ಮಂಗನ ನಿಯಂತ್ರಣ ವ್ಯವಸ್ಥೆ ಹೋಬಳಿ ಯಿಂದ ತಾಲ್ಲೂಕಿಗೂ ನಂತರ ಜಿಲ್ಲೆ ಅಂತರ ಜಿಲ್ಲೆಗೂ ವ್ಯಾಪ್ತಿಸಿತು.
ಮನ್ವಿತ್ ಮಂಕಿ ಮ್ಯಾನೇಜ್ಮೆಂಟ್ ಸಿಸ್ಟಂ…MMMS ಎಂಬ ಸಂಸ್ಥೆ ಕಟ್ಟಿದ. ಈಗ ಮನ್ವಿತ್ ಕೋಟ್ಯಾಧೀಶ ನಾದ.
ಮನ್ವಿತ್ ದೊಡ್ಡ ಪ್ರಮಾಣದಲ್ಲಿ ಅನ್ನದ ಪಿಂಡ ತಯಾರಿಸಿ ಹತ್ತಾರು ವ್ಯಾನ್ ಗಳ ಮೂಲಕ ಊರೂರಿನ ಮಂಗಗಳ “ತಾವು” ಗಳಿಗೆ ಪಿಂಡಗಳನ್ನ ಕಳಿಸಿದ.ತನ್ನ ಬಳಿ ಕೆಲಸಕ್ಕೆ ಸೇರುವ ಯುವಕರಿಗೆ ಮಂಗನಿಗೆ ಹೇಗೆ ಪಿಂಡ ಪ್ರಧಾನ ಮಾಡ ಬೇಕು ಎಂಬ ತರಬೇತಿ ನೀಡುವ ತರಬೇತಿ ಸಂಸ್ಥೆಯನ್ನೂ ಮಾಡಿದ…..
ಮನ್ವಿತ್ ಲಕ್ಷಾಂತರ ಮಂಗಗಳನ್ನ ಹಗಲಿನಲ್ಲಿ ಮಲಗಿಸಿ ದಾಂದಲೆ ಮಾಡದಂತೆ ಮಾಡಿ ರೈತ ಮತ್ತು ಜನ ಸಾಮಾನ್ಯರಿಗೆ ನೆಮ್ಮದಿ ಆರ್ಥಿಕ ಆದಾಯ ಹೆಚ್ಚು ಮಾಡಿದ್ದ. ಸಾವಿರಾರು ಯುವಕರಿಗೆ ಆರ್ಥಿಕ ಸಹಾಯವೂ ಆಗಿತ್ತು.
ಈ ಕಾರಣದಿಂದ ಎಲ್ಲ ಜನರು ರಾಜ್ಯ ಸರ್ಕಾರ ಕ್ಕೆ ಮನ್ವಿತ್ ನಿಗೆ ಸನ್ಮಾನ ಮಾಡಲು ಒತ್ತಾಯ ಮಾಡೋಣವಾಗಿ ಮನ್ವಿತ್ ನಿಗೆ ಇಂದು ಮುಖ್ಯಮಂತ್ರಿ ಗಳಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿ ಸಿದ್ದರು.
ಮನ್ವಿತ್ ಗೆ ಈ ನಡುವೆ ದೊಡ್ಡ ಧ್ವನಿ ಯಲ್ಲಿ ಯಾರೋ ಬಯ್ಯುವ ಸದ್ದು ಕೇಳ ತೊಡಗಿತು… ಹೋ ಈ ಧ್ವನಿ ಪರಿಚಿತ ವಾಗಿದೆಯಲ್ಲ… ಎಂದು ಯೋಚಿಸು ವುದರಲ್ಲಿ ಇದು ತನ್ನ ತಂದೆಯಾದ ಶ್ರೀ ಮಾನ್ ಶ್ರೀ ಮಂಞಾಥಣ್ಣ ನದ್ದು ಅಂತ ಗೊತ್ತಾಯಿತು ಮತ್ತೂ ತಾನು ಇದುವರೆಗೂ ಕಂಡಿದ್ದು ಕನಸು ಎಂಬ ವಾಸ್ತವ ಕ್ಕೆ ಬಂದ.
ಕಾಲೇಜಿನಿಂದ ಅಪ್ಪಯ್ಯ ಮಂಞಾಥಣ್ಣ ನಿಗೆ ಕರೆ ಬಂದಿತ್ತು. ಮಂಞಾಥಣ್ಣ ಮನ್ವಿತ್ ನನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಕ್ಷಮಾಪಣೆ ಕೇಳಿ ಬರಲು ಹೊರಟಿದ್ದರು.
ಮನ್ವಿತ್ ಅಪ್ಪಯ್ಯ ನ ಬೈಗುಳದ ನಡುವೆ ಸಾನ ಮಾಡಿ ತಿಂಡಿ ತಿಂದು ಪ್ಯಾಂಟ್ ಷೆರ್ಟು ಹಾಕಿ ಬೈಕ್ ತಿರುಗಿಸಿದ….
ಅಪ್ಪಯ್ಯ ಎಫ್ ಜೆಡ್ ಬೈಕಿನಲ್ಲಿ ಕೂರು ವಾಗಲೂ “ಇದ್ಯಂತ ಬೆಂಕಿ ಬಿದ್ದ ಬೈಕು .. ಎರಡು ಲಕ್ಷ ಕೊಟ್ಟರೂ ಅಂಡೂರಿ ಕೂರೋ ಕ್ಕಾಗೋಲ್ಲ….! ಅಡಿಕೆ ಮರ ಹತ್ತೋ ” ಗುದಿ” ಮೇಲೆ ಕೂತಂಗೆ ಆತದೆ..ಅಂತ ಬೈತಾನೇ ಕೂತರು.
ಮನ್ವಿತ್ ಬೈಕ್ ಆಕ್ಸಿಲೆಟರ್ ತಿರುಗಿಸಿದ.ಆ ಸುದ್ದಿಗೆ ಮಂಞಾಥಣ್ಣ ಮುಂದೆ ಬೈದ ಸದ್ದು ತಾಯಿ ಜಲಜಕ್ಕ ನಿಗೂ ಕೇಳಲಿಲ್ಲ ಮನ್ವಿತ್ ಗೂ ಕೇಳಲಿಲ್ಲ..ಹೀಗೊಂದು ಮಂಗನ ನಿಯಂತ್ರಣ ಮಾಡುವ ಐಡಿಯಾ ಕನಸಾಗೇ ಉಳಿ ಯಿತು…
ಮನ್ವಿತ್ ಈ ಐಡಿಯಾ ವನ್ನು ಯಾವತ್ತೋ ಒಂದು ದಿನ ವಾಸ್ತವ ಕ್ಕೆ ತಂದರೂತರಬಹುದು…ಅಲ್ಲಿ ತಂಕ ಮಂಗಗಳು ಸ್ವಾತಂತ್ರ….
(ಕಥೆಗೆ ಚಿತ್ರ ರಚಿಸಿ ಕೊಟ್ಟ ಮಲೆನಾಡಿನ ಹಿರಿಯ ವ್ಯಂಗ್ಯಚಿತ್ರಕಾರ ನಟರಾಜ್ ಅರಳಸುರಳಿ)