ಬಹಳ ಕುತೂಹಲ ಮೂಡಿಸಿದ ವಿಷಯ ಕುಕ್ಕೆ ಸುಬ್ರಹ್ಮಣ್ಯದ್ದು. ಈಚೆಗೆ ಮೂರು ಘಟನೆ ನಡೆಯಿತು. ಅದು ಹೀಗಿದೆ.. ಅಧಿಕಾರಿಯ ಹೆಸರು, ಕೊಠಡಿಯ ಕೊರತೆಯಿಂದ ರಾತ್ರಿ ರಥಬೀದಿಯಲ್ಲಿ ಭಕ್ತಾದಿಗಳು ಮಲಗಿಕೊಂಡರು, ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಿಬಂದಿಗಳು ಕುಮಾರಧಾರಾ ನದಿ ಹಾಗೂ ಆಸುಪಾಸಿನ ಪ್ರದೇಶ ಸ್ವಚ್ಛ ಮಾಡಿದರು. ಇದರಲ್ಲಿ ಅತೀ ಹೆಚ್ಚು ಗಮನಸೆಳೆದದ್ದು ಸಹಾಯಕ ಕಾರ್ಯನಿರ್ವಹಣಾಧಿಕಾರಿಯ ಹೆಸರು.
ಅದೇ ಪ್ರಚಾರ, ಅದೇ ಚರ್ಚೆ ಉಳಿದ ಎರಡೂ ಸಂಗತಿಗಳ ಮೇಲೆ ನಡೆಯುತ್ತಿದ್ದರೂ ಪರಿಸರ ಸ್ವಚ್ಛವಾಗುತ್ತಿತ್ತು, ಭಕ್ತಾದಿಗಳಿಗೆ ಮೂಲಭೂತ ವ್ಯವಸ್ಥೆಯಾದರೂ ಸುಧಾರಣೆಯಾಗುತ್ತಿತ್ತು…!. ಸದ್ಯ ಕಸ ಎಸೆದರೂ ದಂಡ, ರಥಬೀದಿಯಲ್ಲಿ ಮಲಗಿದರೂ ದಂಡ, ಹೆಸರು ಮಾತ್ರಾ ಮುಖ್ಯವಾಗಿದೆ…! ಯಾಕೆ ಹೀಗೆ…?
ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ವಿವಿಧ ಕಡೆಯಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಎನ್ನುವ ಕಾರಣಕ್ಕೆ ಅಷ್ಟೂ ಭಕ್ತಾದಿಗಳು ಆಗಮಿಸುತ್ತಾರೆ. ಅಂದರೆ ಪಾವಿತ್ರ್ಯತೆ ಉಳಿಯಬೇಕು, ಉಳಿಸಬೇಕು ಎನ್ನುವುದೂ ಅಷ್ಟೇ ಸತ್ಯ. ದೇವರ ನಂಬುವವರು ಪಾಪ-ಪುಣ್ಯವನ್ನೂ ನಂಬುತ್ತಾರೆ. ಹಾಗಾಗಿ ಸುಲಿಗೆ ನಡೆದರೆ ಅದೆಲ್ಲದರ ಪಾಪವೂ ಅವರೇ ಹೊರಬೇಕು ಎನ್ನುವುದೂ ಅಷ್ಟೇ ಸತ್ಯ. ಇದೆಲ್ಲಾ ಆಧ್ಯಾತ್ಮ ಲೋಕದ ಚರ್ಚೆ. ಅದರಾಚೆಗೆ ಚರ್ಚೆ ಮಾಡಬೇಕಾದ್ದು ಪಾವಿತ್ರ್ಯತೆ ಉಳಿಸುವ ಬಗ್ಗೆ. ಅದು ಹೇಗೆ..?.
ದೇವಸ್ಥಾನ ಹಾಗೂ ಅದರ ಸುತ್ತಮುತ್ತ ಸ್ವಚ್ಛತೆ ಇರಬೇಕು. ಸ್ವಚ್ಛತೆ ಇರುವಲ್ಲಿ ಭಗವಂತ ಇರುವನು ಎಂದು ಅಲ್ಲಲ್ಲಿ ಫಲಕವೂ ಇರುತ್ತದೆ. ಅಂತಹ ಸ್ವಚ್ಛತೆ ಕುಕ್ಕೆ ಸುಬ್ರಹ್ಮಣ್ಯದ 2 ಕಿಮೀ ವ್ಯಾಪ್ತಿಯಲ್ಲಿ ಎಲ್ಲಿದೆ..?. ಎಲ್ಲೆಂದರಲ್ಲಿ ಪ್ಲಾಸ್ಟಿಕ್… ತ್ಯಾಜ್ಯಗಳು. ಕುಮಾರಧಾರಾ ನದಿ ಅಷ್ಟೊಂದು ಪವಿತ್ರ ಎನ್ನುವುದು ಇತಿಹಾಸ ಹೇಳುತ್ತದೆ, ಧಾರ್ಮಿಕ ಗ್ರಂಥಗಳಲ್ಲೂ ಉಲ್ಲೇಖವಿದೆ. ಇದಕ್ಕಾಗಿಯೇ ಚಂಪಾ ಷಷ್ಠಿಯ ಅಷ್ಟೂ ದಿನಗಳ ಕಾಲ ಬೀದಿ ಮಡೆಸ್ನಾನ ನಡೆಯುತ್ತದೆ. ಅಂದರೆ ಕುಮಾರಧಾರಾ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಮಣ್ಣಿನಲ್ಲಿ ಉರುಳಿಕೊಂಡು ದೇವಸ್ಥಾನಕ್ಕೆ ಹೋದರೆ ಪಾಪಗಳು ದೂರವಾಗುತ್ತವೆ, ರೋಗಗಳು ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ. ಆ ನಂಬಿಕೆಗೆ ಕಾರಣವಿದೆ, ಕುಮಾರಧಾರಾ ನದಿ ಕುಮಾರ ಪರ್ವತದಿಂದ ಬರುತ್ತದೆ, ವಿಜ್ಞಾನದ ದೃಷ್ಟಿಯಿಂದ ನೋಡಿದರೆ, ಹಲವು ಗಿಡ ಮರಗಳ ಎಡೆಯಿಂದ ಹರಿದು ಬರುವ ನೀರು ಪವಿತ್ರ ಇರಲೇಬೇಕು. ಧಾರ್ಮಿಕವಾಗಿಯೂ ನೋಡಿದರೆ ಪವಿತ್ರವಾದ ಪರ್ವತದಿಂದ ಹರಿದು ಬರುವ ನೀರು ಅದು, ಅದಕ್ಕೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಆ ನದಿಯಲ್ಲಿ ಸ್ನಾನ ಮಾಡಿದರೆ ನಿಶ್ಚಿತವಾಗಿಯೂ ರೋಗ ನಿವಾರಣೆಯಾಗಲೇಬೇಕು. ಆದರೆ ಈಗ…? ನದಿಯಲ್ಲಿ ಸ್ನಾನ ಮಾಡಿದವರು, ಅದೇ ನದಿಗೆ ಕಸ ಎಸೆದು ಹೋಗುತ್ತಾರೆ, ಇಡೀ ನದಿ ತ್ಯಾಜ್ಯ..!. ಇಡೀ ಸುಬ್ರಹ್ಮಣ್ಯದ ಅಲ್ಲಲ್ಲಿ ಪ್ಲಾಸ್ಟಿಕ್…!.
ಇದನ್ನು ಸ್ವಚ್ಛ ಮಾಡಲು “ಯುವ ಬ್ರಿಗೇಡ್” ಕೆಲಸ ಮಾಡಿತ್ತು, ಕುಕ್ಕೆ ಸುಬ್ರಹ್ಮಣ್ಯದ “ನಮ್ಮ ಸುಬ್ರಹ್ಮಣ್ಯ” ಯುವಕರ ತಂಡ ಸತತವಾಗಿ ಕೆಲಸ ಮಾಡಿತ್ತು. ಪ್ರತೀ ವಾರ ಕಸ ಹೆಕ್ಕಿತು, ಜಾಗೃತಿ ಮೂಡಿಸಿತು. ಆದರೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅರ್ಥವಾಗಲಿಲ್ಲ, ಈ ಕಾರ್ಯ ಅಷ್ಟೊಂದು ಪ್ರಚಾರವೂ ಆಗಿಲ್ಲ.ಕೊನೆ ಕೊನೆಗೆ ಕಸ ಹೆಕ್ಕುವುದೇ ಈ ಯುವಕರ ಕೆಲಸ ಎನ್ನುವ ಹಾಗೆ ಆಗಿ ಬಿಟ್ಟಿತು. ಜಾಗೃತಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಈಗ ಕಸ ಹೆಕ್ಕಬೇಕಾದ್ದಲ್ಲ, ಕಸ ಹಾಕದ ಹಾಗೆ ಆಗಬೇಕು. ಕಸ ಹೆಕ್ಕುವ ಮೂಲಕ ಜಾಗೃತಿ ಮಾಡುವುದಕ್ಕಿಂತಲೂ ಕಸ ಹಾಕದ ಹಾಗಿರುವ ಜಾಗೃತಿ ಆಗಬೇಕಿದೆ. ಇದಕ್ಕಾಗಿ ಅನಿವಾರ್ಯವಾದರೆ ದಂಡ ಪ್ರಯೋಗವೂ ಅಗತ್ಯ. ಆದರೇನಾಯಿತು…? ಈ ಅಗತ್ಯ ಕಾರ್ಯ ಪ್ರಚಾರವೂ ಆಗಲಿಲ್ಲ, ಆಡಳಿತವೂ ಬಹಳ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗಲೂ ಎಲ್ಲೆಂದರಲ್ಲಿ ಕಸ…!.ಈಚೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಿಂದ ದೇವಸ್ಥಾನದ ಸಿಬಂದಿಗಳೂ ತ್ಯಾಜ್ಯ ಹೆಕ್ಕಿದರು…!. ಅದೂ ಅಷ್ಟೊಂದು ಸದ್ದು ಮಾಡಲಿಲ್ಲ. ದೇವಸ್ಥಾನದ ಸಿಬಂದಿಗಳಿಗೂ ಪ್ರತೀ ವಾರವೂ ಇದೇ ಕೆಲಸವೂ ಅಲ್ಲ..!.
ಕಳೆದ ಎರಡು ವಾರದ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಪರೀತ ರಶ್. ಸಾಮಾನ್ಯ ಜನರಿಗೆ ಕೊಠಡಿ ಪಡೆಯಲು ಅಸಾಧ್ಯ. ಹೀಗಾಗಿ ರಥಬೀದಿಯಲ್ಲಿ ಅನಿವಾರ್ಯವಾಗಿ ಮಲಗಲೇಬೇಕಾಯಿತು. ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಳವಾಗುತ್ತಿರುವ ದೇವಸ್ಥಾನದಲ್ಲಿ ಭಕ್ತಾದಿಗಳು ರಥಬೀದಿಯಲ್ಲಿ ಮಲಗಬೇಕಾದ ಅನಿವಾರ್ಯತೆ. ಸಾಕಷ್ಟು ವ್ಯವಸ್ಥೆ ಇದ್ದರೂ ವ್ಯವಸ್ಥೆ ಇಲ್ಲದ ಪರಿಸ್ಥಿತಿ. ಅಂದ ಹಾಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ಹಾಗಲ್ಲ ಎನ್ನುವ ವಾದವೂ ಇದೆ. ಹಲವು ಕಡೆ ರಥಬೀದಿಯಲ್ಲಿ ಕೆಲವು ಭಕ್ತರು ಮಲಗುತ್ತಾರೆ, ನಿಜ. ಆದರೆ ವ್ಯವಸ್ಥೆಯ ಲೋಪ ಇಲ್ಲಿದೆ ಎನ್ನುವುದೂ ಅಷ್ಟೇ ಸತ್ಯ. ಇದೂ ಅಷ್ಟೊಂದು ಸದ್ದು ಮಾಡುವುದಿಲ್ಲ, ಸದ್ದಾಗುವುದಿಲ್ಲ. ಹಾಗೆಂದು ಈ ವಿಷಯ ಸದ್ದಾಗಬೇಕು ಅಂತಲ್ಲ, ಬಹಳ ಗುಣಾತ್ಮಕವಾದ ಚರ್ಚೆ ಆಗಬೇಕಾದ ವಿಷಯ.
ಈಚೆಗೆ ಕುಕ್ಕೆ ಸುಬ್ರಹ್ಮಣ್ಯದ ಅಧಿಕಾರಿಯ ಹೆಸರು ತೀರಾ ಚರ್ಚೆಯಾಗಿ ಸರ್ಕಾರದ ಸಚಿವರೇ ಸ್ಪಷ್ಟನೆ ನೀಡಬೇಕಾಯಿತು. ಈ ಒಂದು ಸಂಗತಿ ರಾಜ್ಯದ ಎಲ್ಲೆಡೆಯೂ ಸದ್ದು ಮಾಡಿತು. ಸೋಶಿಯಲ್ ಮೀಡಿಯಾದಲ್ಲಿ ಡಿಬೆಟ್ ನಡೆಯಿತು. ಮಾಧ್ಯಮದಲ್ಲೂ ಚರ್ಚೆ ನಡೆಯಿತು. ಕೊನೆಗೂ ಆ ಅಧಿಕಾರಿ ಹಿಂದೂ ಎನ್ನುವ ಸ್ಪಷ್ಟನೆ ಬಂದ ಬಳಿಕ ತಣ್ಣಗಾಯಿತು.
ಈಚೆಗೆ ಗಮನಿಸಿ, ಕುಕ್ಕೆಯ ಆನೆಗೂ ಅನಾರೋಗ್ಯ ಎಂಬ ವಿಷಯ ಚರ್ಚೆಯೂ ಆಯ್ತು, ಸ್ಪಷ್ಟನೆಯೂ ಬಂತು. ಉತ್ತಮವಾದ ಸಂದೇಶ ಇಲ್ಲಾಯಿತು. ಯಾರೋ ಒಂದಷ್ಟು ಪರಿಸರ , ಪ್ರಾಣಿ ಆಸಕ್ತರು ಆನೆಯನ್ನು, ಆನೆಯ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಅಂತಾಯ್ತು. ಆದರೆ, ಅದೇ ಕುಕ್ಕೆಯ ಪರಿಸರ, ಸ್ವಚ್ಛತೆ, ಪಾವಿತ್ರ್ಯತೆಯ ಬಗ್ಗೆ…?
ಈಗ ಇರುವ ಪ್ರಾಮುಖ್ಯವಾಗಿ ಆಗಬೇಕಾದ ವಿಷಯ, ಸಚಿವರು ಕೂಡಾ ಗಮನಿಸಬೇಕಾದ ವಿಷಯ, ಕುಕ್ಕೆ ಸುಬ್ರಹ್ಮಣ್ಯ ತ್ಯಾಜ್ಯಗಳಿಂದ ಅಪವಿತ್ರವಾಗುತ್ತಿದೆ, ಭಕ್ತಾದಿಗಳಿಗೆ ಮೂಲವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಹಿಂದೆಯೂ ಈ ಬಗ್ಗೆ ಯಾರೂ ಮಾತನಾಡಿಲ್ಲ, ಇನ್ನೂ ಈ ಬಗ್ಗೆ ಯಾರೂ ಮಾತನಾಡಲಾರರು. ಹೀಗಾಗಿ ಈಗ ಚುನಾವಣೆಯ ಎಲ್ಲಾ ಕಾವು ಮುಗಿದಿದೆ, ಈಗ ಅಧಿಕಾರಿಯ ಬಗ್ಗೆ ಹೇಳಿಕೆ ನೀಡಿದಂತೆಯೇ, “ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ದಂಡ ವಿಧಿಸುತ್ತೇವೆ” ಎನ್ನುವ ಹೇಳಿಕೆಯೊಂದನ್ನು ನೀಡಿ, “ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾದಿಗಳಿಗೆ ಮೂಲಭೂತ ವ್ಯವಸ್ಥೆ ಕೊರತೆಯಾದರೆ ನಮಗೊಂದು ಹೇಳಿ” ಎನ್ನುವ ಹೇಳಿಕೆಯನ್ನು ನೀಡಿ.
ಇದೊಂದು ಚರ್ಚೆಯಾಗಲಿ. ರಾಜ್ಯದಲ್ಲಿ ಈ ಬಗ್ಗೆ ಎಲ್ಲಾ ಭಕ್ತಾದಿಗಳಿಗೂ ಸುದ್ದಿ ತಲುಪಲಿ. ತಲಪುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯವಸ್ಥೆ ಮಾಡುವ ಹಾಗೆ ಆಗಲಿ. ಏಕೆಂದರೆ ಅಧಿಕಾರಿಯ ಸುದ್ದಿ ಹೇಗೆ ವೈರಲ್ ಆಗಿತ್ತೋ.. ಅದೇ ಮಾದರಿ ಕಸ ಎಸೆಯಬಾರದು ಎಂದೂ ವೈರಲ್ ಆಗಲಿ.. ಆಗ ಕುಕ್ಕೆ ಸುಬ್ರಹ್ಮಣ್ಯದ ಪಾವಿತ್ರ್ಯತೆ ಇನ್ನಷ್ಟು ಹೆಚ್ಚುವುದು. ಇದು ಒಬ್ಬನ ಕೆಲಸವಲ್ಲ, ಒಂದು ಸರ್ಕಾರದ ಮಾತ್ರವೇ, ಒಂದು ಆಡಳಿತದ ಮಾತ್ರವೇ ಕೆಲಸವಲ್ಲ… ಎಲ್ಲರ ಜವಾಬ್ದಾರಿ.