ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸರಾಸರಿ ಹೃದಯಾಘಾತದ ಪ್ರಕರಣಗಳು ಕಳೆದ ವರ್ಷದಷ್ಟೇ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಸರ್ಕಾರ ಈ ವಿಷಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಕೋವಿಡ್ ಲಸಿಕೆಗೂ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ ಎಂದು ಪುನರುಚ್ಚರಿಸಿದ್ದಾರೆ. ಹೃದಯಾಘಾತದ ರೋಗ ಲಕ್ಷಣಗಳು ಇದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಕ್ಕಳಲ್ಲಿ ಸ್ಕ್ರೀನಿಂಗ್ ಮಾಡುವ ಆಗತ್ಯವಿಲ್ಲ. ರಸ್ತೆ ಬದಿ ಆಹಾರ ಮತ್ತು ಆಹಾರ ತಯಾರಿಸುವ ವಿಧಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.