ಇದನ್ನು ಏನನ್ನೋಣ? ಆಯುಸ್ಸು ಗಟ್ಟಿಯಾಗಿದೆ ಎನ್ನೋಣವೇ? ಬದುಕಿ ಸಾಧಿಸುವ ಅವಕಾಶ ದೊರಕಿದ ಯೋಗ ಎನ್ನೋಣವೇ? ಅಥವಾ ನಿಷ್ಕಾಮ ಕರ್ಮಕ್ಕೆ ಸಿಕ್ಕಿದ ಪ್ರತಿಫಲ ಎನ್ನೊಣವೇ? ಏನೆಂದರೂ ಇದೊಂದು ಅದ್ಭುತ ವಿದ್ಯಮಾನ. ವಿಜ್ಞಾನದ ಅನೇಕ ವಿಸ್ಮಯಗಳಂತೆ ಇದೂ ಒಂದು ಹೊಸ ಆನಂದದಾಯಕ ವಿಸ್ಮಯ..!………ಮುಂದೆ ಓದಿ……..
ಇದೇ ಮಾರ್ಚ್ 19 ರಂದು ಮುಂಜಾನೆ ಮೂರೂವರೆಗೆ ಎದ್ದು ಖಗೋಲ ವಿದ್ಯಮಾನದಲ್ಲಿ ಮಾನವನ ಕೈಚಳಕದ ಉತ್ತುಂಗವನ್ನು ನೋಡಲು ಟಿ.ವಿ. ಚಾಲೂ ಮಾಡಿದೆ. ಕ್ರಿಕೆಟ್ ಪಂದ್ಯವನ್ನು ಅಥವಾ ಗ್ರಹಣವನ್ನು ವೀಕ್ಷಿಸುವುದಕ್ಕಾಗಿ ಸಮಯವನ್ನಿಟ್ಟುಕೊಂಡು ಸಿದ್ಧರಾಗುವಂತೆ ನಾನು ಸಿದ್ಧನಾಗಿದ್ದೆ. ಇಲ್ಲಿ ಸುನೀತಾ ವಿಲಿಯಂ ಮತ್ತು ಸಹ ವ್ಯೋಮಯಾನಿ ವಿಲ್ಮೋರ್‍ರವರ ಮರಳಿಕೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆಂಬುದನ್ನು ನಾನು ನೋಡಬೇಕಿತ್ತು. ನನಗೆ ಅದರಲ್ಲಿ ಆಸಕ್ತಿ ಇತ್ತು. ಏಕೆಂದರೆ ಇದು ಮಾನವನ ಮಸ್ತಿಷ್ಕದ ಅವತರಣಿಕೆಯಾಗಿದ್ದು ಅತ್ಯುನ್ನತ ಎತ್ತರದ ಸಾಧನೆಗೆ ಸಾಕ್ಷಿ ನೀಡುವ ಪ್ರಯೋಗವಾಗಿತ್ತು. ಫಲಕಾರಿಯಾದರೆ ಅದ್ಭುತ ಯಶಸ್ಸು ಗ್ಯಾರಂಟಿ. ಇಡೀ ಮಾನವ ಕುಲದ ಪ್ರಶಂಸೆಯೂ ಗ್ಯಾರಂಟಿ. ನನ್ನ ನಿರೀಕ್ಷೆಗೆ ಸರಿಯಾಗಿ ನಾಸಾದ ಮುಂದಾಳ್ತನದಲ್ಲಿ ವ್ಯೋಮಯಾನಿಗಳನ್ನು ಕರೆತರುವ ಪ್ರಕ್ರಿಯೆಯ ಚಿತ್ರಣ ಲಭ್ಯವಾಗಿತ್ತು.
ಅಮೇರಿಕಾ ದೇಶದ ಫ್ಲೋರಿಡಾದ ಆಳ ಸಮುದ್ರದಲ್ಲಿ ಮೇಲೆ ಅನಂತ ನೀಲಾಕಾಶ, ಕೆಳಗೆ ವಿಶಾಲವಾದ ನೀಲ ಸಾಗರ, ನಡುವೆ ಗಗನದಿಂದ ಇಳಿಯುತ್ತಿರುವ ನಾಸಾದ ಡ್ರಾಗನ್ ನೌಕೆ ಕಾಣತೊಡಗಿತು. ಅದರ ಬೆನ್ನಿಗೆಯೇ ನಾಲ್ಕು ಪ್ಯಾರಾಚೂಟ್‍ಗಳು ತೆರೆದುಕೊಂಡು ಸುಂದರ ಕೊಡೆಗಳಾಗಿ ವ್ಯೋಮ ನೌಕೆಯನ್ನು ಆಧರಿಸಿ ನಿಧಾನಕ್ಕೆ ನೀರಿಗೆ ಬೀಳುವಂತೆ ಇಳಿಯ ತೊಡಗಿದುವು. ಶಿವಲಿಂಗದ ಆಕಾರದ ನೌಕೆಯು ನೀರಿಗೆ ತಾಗುತ್ತಲೇ ತೇಲತೊಡಗಿತು. ತಮ್ಮ ಹೊಣೆ ಮುಗಿಯಿತೆಂಬಂತೆ ಪ್ಯಾರಾಚೂಟ್‍ಗಳು ಕೊಡೆಯ ಆಕಾರದಿಂದ ಅಗಲವಾಗಿ ಹೂವಿನಂತೆ ವಿಸ್ತರಿಸಿ ಜಲರಾಶಿಯ ಮೇಲೆ ತಮ್ಮಷ್ಟಕ್ಕೆ ತೇಲಿದುವು. ಸಮುದ್ರದಲ್ಲಿ ತೇಲುತ್ತಿದ್ದ ಗಗನ ನೌಕೆಯ ಬಳಿಗೆ ರಕ್ಷಣಾತ್ಮಕ ಹೊಣೆ ಹೊಂದಿದ್ದ ಸಣ್ಣ ದೋಣಿಗಳು ವೇಗವಾಗಿ ಬಂದುವು. ಅವುಗಳು ನಿರ್ದಿಷ್ಟ ದೂರದಲ್ಲಿ ನೆಲೆಗೊಂಡ ಬಳಿಕ ಒಂದು ದೋಣಿ ಮಾತ್ರ ವ್ಯೋಮ ನೌಕೆಯ ಬಳಿಗೆ ಬಂದು ಎದುರುಗಡೆಯಲ್ಲಿ ಸಮಿಪಕ್ಕೆ ಸರಿಯಿತು. ಅದರಿಂದ ಒಬ್ಬನು ಇಳಿದು ವ್ಯೋಮ ನೌಕೆಯ ಮೇಲೆ ಹತ್ತಿ ಅಲ್ಲಿನ ಕೊಂಡಿಯೊಂದನ್ನು ಗುರುತಿಸಿದ. ನಂತರ ಇನ್ನೊಬ್ಬನು ಸಣ್ಣ ದೋಣಿಯಿಂದ ಎಸೆದ ಬಳ್ಳಿಯಿಂದ ವ್ಯೋಮ ನೌಕೆಯನ್ನು ಬಿಗಿದು ಅದನ್ನು ನಿಧಾನವಾಗಿ ಅಲ್ಲೇ ಸಮೀಪ ಕಾಯುತ್ತಿದ್ದ ದೊಡ್ಡ ನೌಕೆಯ ಬಳಿಗೆ ನಿಧಾನವಾಗಿ ಎಳೆದು ತಂದರು. ಅಲ್ಲಿ ದೊಡ್ಡದಾದ ಕ್ರೇನ್ ಮೂಲಕ ವ್ಯೋಮ ನೌಕೆಯನ್ನು ಸಮುದ್ರ ನೌಕೆಯ ಮೇಲೆ ಎತ್ತಿಕೊಳ್ಳಲಾಯಿತು. ಅಲ್ಲಿ ವ್ಯೋಮ ನೌಕೆಯ ಬಾಗಿಲು ತೆರೆಯುವ ಪ್ರಕ್ರಿಯೆಗಳು ನಡೆದು ಕೊನೆಗೆ ಗಗನಯಾನಿಗಳನ್ನು ಎತ್ತಿ ಸ್ಟೆಚರ್ ಮೇಲೆ ಕೂರಿಸಿ ಕರೆದೊಯ್ಯಲಾಯಿತು. ಈ ಎಲ್ಲಾ ಕಾರ್ಯಗಳೂ ಪೂರ್ವ ನಿರ್ಧರಿತ ಸೂಚನೆಗಳಿಗೆ ಬದ್ಧವಾಗಿಯೇ ನಡೆದುವು.
ವ್ಯೋಮ ನಡಿಗೆಯಲ್ಲಿ ದಾಖಲೆ ಮಾಡಿದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಎಂಟು ದಿನಗಳ ಪ್ರವಾಸದ ಯೋಜನೆಯಲ್ಲಿ 2024 ಜೂನ್ ತಿಂಗಳಲ್ಲಿ ಸಹ ಯಾತ್ರಿ ಬುಚ್ ಅಲ್ಮೋರ್ ಸಹಿತ ಗಗನಕ್ಕೆ ಹಾರಿದವರು ಮತ್ತೆ ಹಿಂದಿರುಗಲು ಸಾಧ್ಯವಾಗದೆ ವ್ಯೋಮ ಕಕ್ಷೆಯಲ್ಲಿ ತನ್ನ ನೌಕೆಯಲ್ಲೇ ಉಳಿದರು. ಮತ್ತೆ ಶೀಘ್ರದಲ್ಲೇ ಎಲ್ಲವೂ ಸರಿಯಾಗಿ ಹಿಂದಿರುಗುವರೆಂಬ ಆಸೆ ದಿನಗಳೂ ತಿಂಗಳುಗಳೂ ಕಳೆದಂತೆ ಕಮರಿ ಹೋಯಿತು. ಅಲ್ಲಿ ಮಾಡುದಕ್ಕೇನೂ ಕೆಲಸವಿಲ್ಲ, ಕೈಕಾಲು ಆಡಿಸಲು ಜಾಗವಿಲ್ಲ, ಹಗಲು ಇರುಳು ಕಳೆದದ್ದೇ ತಿಳಿಯುವುದಿಲ್ಲ, ತಿನ್ನುವುದಕ್ಕೇನಿದೆಯೋ ಗೊತ್ತಿಲ್ಲ, ಕುಡಿಯುವುದಕ್ಕಾದರೂ ಏನಾದರೂ ಸಿಗಬಹುದೇ ಎಂಬುದಕ್ಕೆ ಉತ್ತರವಿಲ್ಲ, ಒಂದೇ ಕಡೆ ಹೀಗೆ ಸಿಲುಕಿದವರಲ್ಲಿ ಇಬ್ಬರು ಇದ್ದರೆಂಬುದು ಸಣ್ಣ ಸಮಾಧಾನವಾದರೂ ಅವರಿಬ್ಬರೇ ಏನು ಮಾಡುವುದು? ಒಬ್ಬರೇ ಆಗಿದ್ದರೆ ನಮ್ಮ ಕಾತರ ಇನ್ನೂ ಹೆಚ್ಚಾಗುತ್ತಿತ್ತು. ಅಂತೂ ಈ ಮಾರ್ಚ್‍ಗಾಗುವಾಗ ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳು ತುಂಬಿತು ಎಂಬಂತಾಗಿತ್ತು. ಇನ್ನಾದರೂ ಬಿಡುಗಡೆಯ ಬಾಗಿಲು ತೆರೆಯುತ್ತದೋ ಎಂಬ ನಿರೀಕ್ಷೆ ಇತ್ತು. ಅಮೇರಿಕಾದ ನಾಸಾ ಸಂಸ್ಥೆ ಏಕೆ ಸುಮ್ಮನೆ ಉಳಿದಿದೆ? ಏಕೆ ಏನೂ ಪ್ರಯತ್ನ ಮಾಡುತ್ತಿಲ್ಲ ಎಂಬ ಪ್ರಶ್ನೆಯೂ ನಮ್ಮಲ್ಲಿ ಹುಟ್ಟಿತ್ತು. ಸುನೀತಾ ಮತ್ತು ವಿಲ್‍ಮೋರ್ ಸೆರೆಯಾಳುಗಳಂತೆ ಉಳಿದಿದ್ದ ಗಗನ ನೌಕೆ ಖಾಸಗಿಯವರ ಪ್ರಯೋಗವೆಂಬ ತಾತ್ಸಾರವೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.
ಇಂತಹ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ನಾಸಾ ಸಂಸ್ಥೆಯೇ ಮುಂದಾಳುತ್ವ ವಹಿಸಿ ಗಗನ ನೌಕೆಯಲ್ಲಿ ಇಬ್ಬರನ್ನು ಕಳುಹಿಸಿ ವ್ಯೋಮ ನಿಲ್ದಾಣದಿಂದ ಕರೆತರುವ ವ್ಯವಸ್ಥೆ ಮಾಡಿದೆ. ಅದೂ ಒಂದು ವಿಜ್ಞಾನ ವಿಸ್ಮಯವೇ ಆಗಿದೆ. ನಾನು ಇಲ್ಲಿ ಬರೆದಿರುವಷ್ಟು ವೇಗದಲ್ಲಿ ಈ ಪ್ರಕ್ರಿಯೆ ಜರಗಲಿಲ್ಲ. ಪ್ರತಿಯೊಂದು ಚಟುವಟಿಕೆಯೂ ಹೇಗೆ ಕರಾರುವಾಕ್ಕಾಗಿ ನಡೆದಿದೆಯೆಂದರೆ ಅದರ ಹಿಂದೆ ಸಾಕಷ್ಟು ಪ್ಲಾನಿಂಗ್ ನಡೆದಿರುವುದು ಸ್ಪಷ್ಟ. ನಾಲ್ಕು ಪ್ಯಾರಾಚೂಟ್‍ಗಳು ಕೊಡೆಗಳಾದದ್ದು, ನೀರಿಗೆ ನಿಧಾನವಾಗಿ ವ್ಯೋಮನೌಕೆಯನ್ನು ಪೂರ್ವ ನಿಗದಿತ ಸ್ಥಳದಲ್ಲಿ ಇಳಿಸಿದ್ದು, ನಂತರ ಪ್ಯಾರಾಚೂಟ್‍ಗಳು ಪ್ರತ್ಯೇಕಗೊಂಡದ್ದು, ಸಣ್ಣ ದೋಣಿಗಳು ಹತ್ತಿರ ಬಂದದ್ದು, ಒಂದು ದೋಣ ಮಾತ್ರ ಹತ್ತಿರ ಬಂದು ತರಬೇತಾದ ಒಬ್ಬ ಮಾತ್ರ ಮೇಲಕ್ಕೇರಿದ್ದು, ಮುಂದೆ ಹತ್ತಿರದಲ್ಲಿ ನಿಲ್ಲಿಸಲಾಗಿದ್ದ ದೊಡ್ಡ ಜಲನೌಕೆಯ ಬಳಿಗೆ ವ್ಯೋಮನೌಕೆಯನ್ನು ಒಯ್ದು ನಿಲ್ಲಿಸಿದ್ದು, ಒಂದು ಕ್ರೇನ್ ಸಹಾಯದಿಂದ ವ್ಯೋಮನೌಕೆಯನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದು, ಆಗ ಸಣ್ಣ ದೋಣಿಗಳೆಲ್ಲವೂ ಮರಳಿಹೋದದ್ದು, ನಂತರ ಪೂರ್ವನಿರ್ಧರಿತ ನಿರ್ದೇಶನದಂತೆ ವ್ಯೋಮನೌಕೆಯ ಬಾಗಿಲನ್ನು ತೆರೆದು ನಾಲ್ಕು ಮಂದಿ ಯಾನಿಗಳನ್ನು ಇಳಿಸಿಕೊಂಡದ್ದು ಇತ್ಯಾದಿಗಳನ್ನು ಕಾಣುವಾಗ ನಾಸಾದಲ್ಲಿ ಎಷ್ಟೆಲ್ಲ ಕೌಶಲದಿಂದ ವಿಜ್ಞಾನಿಗಳು ಕಾರ್ಯಯೋಜನೆಯನ್ನು ರೂಪಿಸುತ್ತಿದ್ದಾರೆಂಬುದರ ಅರಿವಾಗುತ್ತದೆ. ಮಾನವರೂ ಯಂತ್ರಗಳೂ ಸೇರಿ ನಿರ್ವಹಿಸುವ ಈ ಪ್ರಕ್ರಿಯೆಯ ವಿವರಗಳನ್ನು ನಾವು ನೋಡದ ಹೊರತು ತಿಳಿಯಲು ಸಾಧ್ಯವಿಲ್ಲ. ಮುಂಜಾವಿನ 3.28ಕ್ಕೆ ಹೇಳಿದ ಮುಹೂರ್ತಕ್ಕೆ ಸರಿಯಾಗಿ ಸಾಗರಕ್ಕಿಳಿದ ನೌಕೆಯಿಂದ ಖಗೋಲ ಯಾನಿಗಳು ಹೊರಬರಲು ತಗುಲಿದ ಸುಮಾರು ಒಂದು ಗಂಟೆಯ ಕಾಲ ಕಂಡ ಕ್ಷಣಕ್ಷಣವೂ ಸಾರ್ಥಕವೆನ್ನಿಸಿತು. ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಕ್ಷಣವೂ ಕೊನೆಗೆ ಒದಗಿ ಬಂತು. ಸುನೀತಾರವರು ಹೊರಗೆ ಬಂದಾಗ ಕೈ ಬೀಸಿ ಮುಗುಳ್ನಗೆ ಬೀರಿದ್ದು “ಬಚಾವ್” ಎಂಬ ಭಾವನೆ ನೀಡಿತು.
ದೂರದಿಂದಲೇ ಸುನೀತಾರವರ ಸಾಧನೆಯನ್ನು ಸಂಭ್ರಮಿಸುವ ನಮಗಿಂತ ಹೆಚ್ಚಾಗಿ ಗುಜರಾತ್‍ನ ಮೆಹಸಾನಾ ಹಳ್ಳಿಯ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತಮ್ಮೂರಿನ ಹೆಣ್ಣು ಮಗಳು ಒಂಭತ್ತು ತಿಂಗಳ ಅಜ್ಞಾತ ವಾಸದಿಂದ ಹೊರಬರುವ ಕ್ಷಣಕ್ಕಾಗಿ ಅವರೆಲ್ಲ ರಾತ್ರಿ ಇಡೀ ಎಚ್ಚರವಾಗಿದ್ದು ಕಾದಿದ್ದರು. ವೃದ್ಧರು, ಮಹಿಳೆಯರು, ಮಕ್ಕಳೂ ಸೇರಿದಂತೆ ಪ್ರತಿಯೊಬ್ಬರೂ ಸ್ಥಳೀಯ ದೇವಾಲಯದ ಬಳಿ ಸೇರಿ ದೊಡ್ಡ ಟಿ.ವಿ.ಯ ಎದುರು ಜಮಾಯಿಸಿದ್ದರು. ನಾಸಾ ಕಳಿಸಿದ ಡ್ರಾಗನ್ ನೌಕೆಯು ಅಂತರಾಷ್ಟ್ರೀಯ ವ್ಯೋಮ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ತನ್ನ ನೌಕೆಗೆ ಹತ್ತಿಸಿಕೊಂಡದ್ದನ್ನು ಹಿಂದಿನ ದಿನ ಸಂಜೆ ಕಂಡಿದ್ದರು. ನಂತರ ಭೂಮಿಯನ್ನು ತಲುಪಲು ಬೇಕಾದ 17 ಗಂಟೆಗಳ ಅವಧಿಯಲ್ಲಿಯೂ ತಮ್ಮೂರ ದೇವಾಲಯದಲ್ಲಿ ಭಜನೆ, ಆರತಿ, ಹೋಮಗಳನ್ನು ನಡೆಸಿದ್ದರು. ಏಕೆಂದರೆ ಸುನೀತಾ ಪಾಂಡ್ಯಾ ಊರಿಗೆ ಬಂದಾಗ ಈ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ಅಲ್ಲಿನ ಮಕ್ಕಳಿಗೆ ಚಿರಪರಿಚಿತರಾಗಿದ್ದರು. 2024ರ ಜೂನ್ ಮೊದಲ ವಾರದಲ್ಲಿ ವ್ಯೋಮ ನಿಲ್ದಾಣದಲ್ಲಿ ಸುನೀತಾ ಸಿಕ್ಕಿ ಬಿದ್ದಲ್ಲಿಂದ ತೊಡಗಿ ನಿತ್ಯವೂ ಆಕೆಯು ಸುರಕ್ಷಿತವಾಗಿ ಮರಳಿ ಬರುವಂತೆ ಇವರೆಲ್ಲರೂ ಪ್ರಾರ್ಥಿಸುತ್ತಿದ್ದರು. ಸುನೀತಾ ತನ್ನ ಜೊತೆಯಲ್ಲಿ ಭಗವದ್ಗೀತೆಯನ್ನು ಕೊಂಡೊಯ್ದದ್ದು ಸಾರ್ಥಕವಾಯಿತೆಂಬ ಅನಿಸಿಕೆ ಅವರಿಗೆ ಉಂಟಾಯಿತು.
ಅಮೇರಿಕಾದಲ್ಲಿ ಬೈಡೆನ್ ಆಡಳಿತದಲ್ಲಿಈ ಪ್ರಕ್ರಿಯೆಯನ್ನು ಕೈ ಬಿಡಲಾಗಿದ್ದುದರಿಂದ ಅವರ ಕಳವಳ ಹೆಚ್ಚಾಗಿತ್ತು. ಆದರೆ ಪ್ರಸ್ತುತ ಅಧ್ಯಕ್ಷ ರೊನಾಲ್ಡ್ ಟ್ರಂಪ್ ರವರು ಗಗನಯಾನಿಗಳ ಬಿಡುಗಡೆಗೆ ಕ್ರಮ ಕೈಗೊಂಡ ಬಳಿಕ ಸುನೀತಾರನ್ನು ಮತ್ತೆ ಕಾಣುತ್ತೇವೆಂಬ ಆಸೆ ಚಿಗುರಿತು. ಅದು ಇಂದು ಬೆಳಿಗ್ಗೆ ವ್ಯೋಮ ನೌಕೆಯಿಂದ ಹೊರಬರುವಾಗ ಸುನೀತಾ ಕೈ ಬೀಸಿ ನಗು ಬೀರಿದಾಗ ಮೆಹಸಾನದ ಹಳ್ಳಿಗರು ಅಲ್ಲಿಯೇ ಸ್ವರ್ಗವನ್ನೇ ಕಂಡಂತೆ ನಲಿದಾಡಿದರು. ಸಿಹಿಯನ್ನು ಹಂಚಿದರು. ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 140 ಕೋಟಿ ಭಾರತೀಯರ ಹೆಮ್ಮೆಯನ್ನು ಸುನೀತಾರಿಗೆ ತಿಳಿದರು. ಹಿಂದಿರುಗಿದವರಲ್ಲಿ ಅಮೇರಿಕಾದ ಬುಚ್ ವಿಲ್ಮೋರ್‍ರವರೂ ಇದ್ದಾರೆ. ಕರೆತರಲು ಹೋದ ನಾಸಾದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬ್‍ನೋವ್ ರವರು ಅಲ್ಲಿ ಸಿಲುಕದೆ ಹಿಂದಿರುಗಿರುವುದು ಇಡಿಯ ಮಾನವ ಕುಲಕ್ಕೇ ಸಮಾಧಾನ ತಂದಿದೆ. ಈ ಮಾರ್ಚ್ 19 ವಿಜ್ಞಾನದ ಮತ್ತೊಂದು ಯಶೋಗಾಥೆಯ ದಿನವಾಗಿದೆ.