1. ಗಾಂಧಾರಿ, 2. ಕುಂತಿ , 3. ದ್ರೌಪತಿ.
ಗಾಂಧಾರಿ : ಮಹಾಭಾರತ ಯುದ್ಧ ಮುಗಿದಿತ್ತು. ಶ್ರೀ ಕೃಷ್ಣ ಪರಮಾತ್ಮ ಗಾಂಧಾರಿಗೆ ಸಾಂತ್ವನ ಹೇಳಬೇಕೆಂದು ಹೋಗಿರುತ್ತಾರೆ. ಗಾಂಧಾರಿ ವಿಪರೀತಿ ಕೋಪದಲ್ಲಿ ಇರುತ್ತಾಳೆ. ಕೃಷ್ಣ, ಗಾಂಧಾರಿಗೆ ನಮಸ್ಕರಿಸುತ್ತಾರೆ, ಆಗ ಗಾಂಧಾರಿ ಕೋಪದಿಂದ ಕೃಷ್ಣನನ್ನು ಉದ್ದೇಶಿಸಿ ಕೃಷ್ಣ ನೀನು ನನ್ನ ನೂರು ಮಕ್ಕಳು ಸಾಯಲು ಕಾರಣವಾದಿ. ನನ್ನ ಮನೆಯಲ್ಲಿ ನೂರು ಮಂದಿ ವಿಧವೆಯರು ಉಳಿದಿದ್ದಾರೆ. ಮುಂದೆ ನಮ್ಮ ಶ್ರಾದ್ಧ ಕರ್ಮಗಳು ಮಾಡಲಿಕ್ಕೂ ಯಾರೂ ನಮ್ಮ ಸಂತಾನ ಉಳಿಯಲಿಲ್ಲ. ಇದೆಲ್ಲದಕ್ಕೆ ನೀನೇ ಕಾರಣ, ನೀನು ಮನಸ್ಸು ಮಾಡಿದ್ದರೆ, ನೀನು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಮಹಾಭಾರತ ಯುದ್ಧವೇ ಆಗುತ್ತಿರಲಿಲ್ಲ. ನೀನು ಯಾವಾಗಲೂ ಪಕ್ಷಪಾತಿಯಾಗಿದ್ದಿ. ಪಾಂಡವರಿಗೆ ಯಾವಾಗಲೂ ಮಾರ್ಗದರ್ಶನ ಮಾಡಿದಿ. 14 ವರ್ಷ ವನವಾಸಕ್ಕೆ ಹೋದಾಗ ಕೂಡ ಅವರಿಗೆ ಸಹಕರಿಸಿದಿ. ಅವರಿಗೆ ಮಾರ್ಗದರ್ಶನ ಮಾಡಿದಿ. ನೀನು ಎಂದು ನನ್ನ ಮಕ್ಕಳಿಗೆ ಬುದ್ಧಿ ಹೇಳಲಿಲ್ಲ ಮಾರ್ಗದರ್ಶನ ಮಾಡಲಿಲ್ಲ. ಅದಕ್ಕಾಗಿ ನಮ್ಮ ವಂಶ ಹಾಳಾಯಿತು. ಅದೇ ರೀತಿ ನಿಮ್ಮ ಯಾದವ ವಂಶ ಸರ್ವನಾಶವಾಗಲಿ ಎಂದು ಶಾಪ ಕೊಡುತ್ತಾಳೆ.
ಶ್ರೀ ಕೃಷ್ಣಪರಮಾತ್ಮ ಮುಗುಳು ನಗುತ್ತಾ, ತಾಯಿ ಸಂತೋಷ ನಿನ್ನ ಶಾಪ ನನಗೆ ಲಾಭವೇ ಆಯಿತು, ನನ್ನ ಜೀವನ ಹೇಗೆ ಅಂತ್ಯವಾಗಬೇಕು ಎಂಬುದನ್ನು ನೀನೆ ನಿರ್ಣಯಿಸಿ ಬಿಟ್ಟದ್ದು ಬಹಳ ಸಂತೋಷ ಎಂದು ಮುಗುಳ್ನಗುತ್ತಾ ಹೇಳುತ್ತಾರೆ. ನಂತರ ಗಾಂಧಾರಿಯನ್ನು ಉದ್ದೇಶಿಸಿ ಕೆಲ ಹಿತ ವಚನಗಳನ್ನು ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾರೆ. ಅವು ನಮಗೂ ಅನ್ವಯಿಸುತ್ತವೆ.
ಅಮ್ಮ ತಾಯಿ, ನಿನ್ನ ಮಕ್ಕಳಲ್ಲಿ ಕುಂತಿ ಮಕ್ಕಳಲ್ಲಿ ನನಗೆ ಭೇದವಿಲ್ಲ ನನಗೆ ಇಬ್ಬರೂ ಸಮಾನರೆ. ಕುಂತಿ ಪಾಂಡು ರಾಜ ತೀರಿದ ನಂತರವೂ 24 ಗಂಟೆ ತನ್ನ ಮಕ್ಕಳ ಜೊತೆ ಇದ್ದು ಅವರಿಗೆ ಬುದ್ಧಿ ಮಾತು ಹೇಳುತ್ತಾ, ಚಿಕ್ಕಂದಿನಲ್ಲಿ ಅವರಿಗೆ ಸಂಸ್ಕಾರ ಕೊಟ್ಟು ತನ್ನ ದುಃಖವನ್ನು ತಾನು ನುಂಗಿ ಮಕ್ಕಳನ್ನು ಸಂಸ್ಕಾರಯುಕ್ತವಾಗಿ ಬೆಳೆಸಿದಳು. 14 ವರ್ಷ ವನವಾಸದಲ್ಲೂ ಕುಂತಿ ಆರಾಮಾಗಿ ಹಸ್ತಿನಾಪುರದಲ್ಲಿ ಇರಬಹುದಾಗಿತ್ತು. ಆಕೆ ಹಾಗೆ ಮಾಡದೆ ಕಷ್ಟದ ವನವಾಸ ಸಮಯದಲ್ಲೂ ಅವರ ಜೊತೆಗಿದ್ದು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾ ಅಡವಿಯಲ್ಲಿ ಮಕ್ಕಳ ಜೊತೆ ತಿರುಗಿದಳು. ಇದರಿಂದ ಪಾಂಡವರಿಗೆ ಒಳ್ಳೆಯ ಸಂಸ್ಕಾರ ಸಿಕ್ಕಿತು. ಅವರು ಮನುಷ್ಯರಾಗಿ ವರ್ತಿಸಿದರು.
ಆದರೆ ತಾಯಿ, ನೀನು ನಿನ್ನ ಗಂಡ ದೃತರಾಷ್ಟ್ರ ನಿಗೆ ಕಣ್ಣುಗಳು ಕಾಣುವುದಿಲ್ಲ ಎಂದು ಪತಿವ್ರತ ಧರ್ಮವೆಂದು ನೀನು ಕಣ್ಣುಗಳನ್ನು ಕಟ್ಟಿಕೊಂಡು ಗಂಡನ ಪಕ್ಕದಲ್ಲಿ ಹಾಯಾಗಿ ಕುಳಿತುಬಿಟ್ಟಿ. ನಿನ್ನ ಮಕ್ಕಳು ಏನು ಮಾಡುತ್ತಿದ್ದಾರೆ, ಯಾರ ಜೊತೆಗಿದ್ದಾರೆ, ಅವರು ಎಂತಹ ಕರ್ಮಗಳನ್ನು ಮಾಡುತ್ತಿದ್ದಾರೆ, ಇದಾವುದನ್ನು ನೀನು ಗಮನಿಸಲೇ ಇಲ್ಲ, ನಿನ್ನ ಪತಿಯ ಕಣ್ಣುಗಳು ಹುಟ್ಟುತ್ತಲೇ ಹೋಗಿತ್ತು, ಅದಕ್ಕೆ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುವುದು ಏನು ಅವಸರವಿತ್ತು. ಅದರ ಬದಲಾಗಿ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದೆ ನಿನ್ನ ಮಕ್ಕಳನ್ನು ಒಳ್ಳೆಯ ರೀತಿ ಬೆಳೆಸಿ ಅವರಿಗೆ ಒಳ್ಳೆಯ ಸಂಸ್ಕಾರ ಕೊಡಲು ಪ್ರಯತ್ನಿಸಬಹುದಾಗಿತ್ತು. ಚಿಕ್ಕಂದಿನಲ್ಲಿ ನಿನ್ನ ಮಕ್ಕಳು ತಪ್ಪು ಮಾಡಿದಾಗ ನೀನು ಆಗಲೇ ನಾಲ್ಕು ಏಟು ಹೊಡೆದು ದಂಡಿಸಬೇಕಾಗಿತ್ತು. ನೀನು ಅದು ಮಾಡಲಿಲ್ಲ. ದ್ರೌಪತಿ ವಸ್ತ್ರಾಪಹರಣ ಅಂತಹ ಘೋರ ಕೃತ್ಯಗಳು ನಡೆದರು ನೀನು ಅದರ ವಿರುದ್ಧ ಮಾತಾಡಲೇ ಇಲ್ಲ. ಇಷ್ಟೆಲ್ಲ ತಪ್ಪುಗಳು ನೀನು ಮಾಡಿ ಈಗ ಪಶ್ಚಾತಾಪ ಪಟ್ಟರೇ ಏನು ಲಾಭ ಎಂದು ಶ್ರೀ ಕೃಷ್ಣ ಹೇಳಿದರಂತೆ.
ಇದು ನಮಗೂ ಅನ್ವಯಿಸುತ್ತದೆ, ನಾವು ಕೂಡ ನಮ್ಮ ಮಕ್ಕಳ ಕಡೆ ಸದಾ ಗಮನವಿಡಬೇಕು. ನಾವು ನಮ್ಮ ಕರ್ಮ ಮತ್ತು ನಮ್ಮ ಕರ್ತವ್ಯ ಯಾವುದೆಂದು ಸಮಯಕ್ಕೆ ಸರಿಯಾಗಿ ನಿರ್ಣಯಿಸಿಕೊಳ್ಳಬೇಕು. ನಮ್ಮ ಮಕ್ಕಳನ್ನು ಚಿಕ್ಕಂದಿನಲ್ಲಿ ತಪ್ಪು ಮಾಡಿದಾಗ ದಂಡಿಸಬೇಕು.
ಕುಂತಿ ಮಾತೆ : ಕುಂತಿಯ ಬಗ್ಗೆ ಶ್ರೀ ಕೃಷ್ಣ ಆಡಿದ ಮಾತು ಮೇಲೆ ಬಂದಿದೆ. ಒಮ್ಮೆ ಭೀಮಸೇನ ದುರ್ಯೋಧನನ ಬಗ್ಗೆ ಅವಾಚ್ಯವಾಗಿ ಕೋಪದಿಂದ ಮಾತನಾಡುತ್ತಾನೆ. ತಕ್ಷಣ ಕುಂತಿ ಭೀಮನನ್ನು ನಿಂದಿಸುತ್ತಾ ಕೋಪದಿಂದ ಭೀಮನಿಗೆ ಬುದ್ಧಿ ಮಾತು ಹೇಳುತ್ತಾಳೆ. ಏನಿದು ನಿನ್ನ ಅಣ್ಣ ದುರ್ಯೋಧನನ ಬಗ್ಗೆ ಈ ರೀತಿ ಮಾತಾಡುವುದು ಸರಿಯೇ? ಎಷ್ಟಾದರೂ ಆತ ನಿನ್ನ ಅಣ್ಣನಲ್ಲವೇ ವಯಸ್ಸಿನಲ್ಲಿ ನಿನಗಿಂತ ಹಿರಿಯರ ಜೊತೆ ಹೇಗೆ ಮಾತಾಡಬೇಕು ಎಂಬ ಸಂಸ್ಕಾರ ಮರೆತುಬಿಟ್ಟೆಯಾ ? ಎಂದು ಕುಂತಿ ಭೀಮನಿಗೆ ಹೇಳುತ್ತಾಳೆ.
ಆಗ ಭೀಮ ಅಮ್ಮ ಆ ದುಷ್ಟ ದುರ್ಯೋಧನನ ಬಗ್ಗೆ ನೀನು ನನಗೆ ಹೇಳುತ್ತಿದ್ದಿ. ಆ ದುರ್ಯೋಧನ ಎಷ್ಟು ಕೆಟ್ಟ ವ್ಯಕ್ತಿ ನಮಗೆ ಏನೇನು ತೊಂದರೆಗಳನ್ನು ಮಾಡಿದ್ದಾನೆ ಅದೆಲ್ಲ ಮರೆತುಬಿಟ್ಟೆಯಾ ಎಂದು ಭೀಮ ಕುಂತಿಮಾತೆಗೆ ಕೇಳುತ್ತಾನೆ. ಆಗ ಕುಂತಿ ಭೀಮನಿಗೆ ಹೇಳುತ್ತಾಳೆ ಭೀಮ ನನಗೆ ಎಲ್ಲ ಜ್ಞಾಪಕವಿದೆ ನನ್ನ ಮನಸ್ಸಿನಲ್ಲಿ ಅವೆಲ್ಲ ಅಚ್ಚು ಅಳಿಯದೆ ಹಾಗೆ ಉಳಿದಿವೆ. ದುರ್ಯೋಧನ ತನ್ನ ಸಂಸ್ಕಾರದಂತೆ ಕೆಲಸ ಮಾಡುತ್ತಾನೆ. ಆದರೆ ನನ್ನ ಮಗ ಭೀಮ ತನ್ನ ಸಂಸ್ಕಾರ ಮರೆಯಬಾರದು ನೀನು ಹಾಗೆ ವರ್ತಿಸಿದರೆ, ದುರ್ಯೋಧನನಿಗೆ ನಿನಗೆ ಏನು ವ್ಯತ್ಯಾಸ ನನ್ನ ಮಗ ದುರ್ಯೋಧನ ತರ ಆಗಬಾರದು ಎಂಬುದೇ ನನ್ನ ಆಸೆ ಎಂದು ಕುಂತಿ ಭೀಮನಿಗೆ ಹೇಳುತ್ತಾಳಂತೆ.
ನಾವು ಕೂಡ ನಮ್ಮ ಮಕ್ಕಳಿಗೆ ಇದೇ ರೀತಿ ಸಂಸ್ಕಾರ ಕಲಿಸಬೇಕು. ಇಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಹಿರಿಯರು ಬಂದಾಗ ಮಕ್ಕಳಿಗೆ ತಕ್ಷಣ ನಮಸ್ಕರಿಸಲು ಹೇಳಬೇಕು. ನಮ್ಮನ್ನು ನೋಡಿ ಮಕ್ಕಳು ಮಾತಾಡುತ್ತಿರುತ್ತಾರೆ, ಕಲಿಯುತ್ತಿರುತ್ತಾರೆ, ನಾವು ಕೂಡ ನಮಗಿಂತ ಹಿರಿಯರ ಬಗ್ಗೆ ಮಾತಾಡುವಾಗ ವಿಮರ್ಷೆ ಮಾಡುವಾಗ ನಮ್ಮ ಸಂಸ್ಕಾರ ತಪ್ಪಿ ಮಾತಾಡಬಾರದು. ಅವರು ಎಷ್ಟೇ ದುಷ್ಟ ವ್ಯಕ್ತಿಗಳಿದ್ದರೂ ನಾವು ನಮ್ಮ ಸಂಸ್ಕಾರ ಕಳೆದುಕೊಳ್ಳಬಾರದು. ನಮ್ಮ ಮಕ್ಕಳಿಗೂ ಇದನ್ನು ಕಲಿಸಬೇಕು.
ದ್ರೌಪತಿ : ಮಹಾಭಾರತ ಯುದ್ಧ ಮುಗಿದಿರುತ್ತದೆ. ಮುಂದೆ ಧರ್ಮಸ್ಥಾಪನೆ ಆಗಬೇಕು ಹಸ್ತಿನಾಪುರದಲ್ಲಿ ರಾಜ್ಯ ಪಟ್ಟಾಭಿಷೇಕವಾಗಬೇಕು. ಅಂತಹ ಸಂತೋಷದ ಸಮಯದಲ್ಲಿ, ನಿದ್ರೆಯಲ್ಲಿದ್ದ 5 ಚಿಕ್ಕ ಮಕ್ಕಳು ಉಪ ಪಾಂಡವರನ್ನು ಅಶ್ವತ್ಥಾವ ಸಂಹರಿಸಿ ಬಿಡುತ್ತಾನೆ. ರಾತ್ರಿ ವೇಳೆ ನಿದ್ರಿಸುತ್ತಿರುವ ಮಕ್ಕಳು. ಮಹಾಭಾರತ ಯುದ್ಧದಲ್ಲಿ ಈ ಮಕ್ಕಳದು ಏನೂ ಸಂಬಂಧವಿಲ್ಲ, ಮುಂದೆ ಈ ಮಕ್ಕಳೇ ಹಸ್ತಿನಾಪುರದ ರಾಜರಾಗಬೇಕು, ಅಂತಹ ಸಮಯದಲ್ಲಿ ಅಶ್ವತ್ಥಾಮ ಮಾಡಿದ ಘೋರ ಪಾಪ ಪಾಂಡವರಿಗೆ ತಡೆದುಕೊಳ್ಳಲಾಗುವುದಿಲ್ಲ, ನಂತರ ಅಶ್ವತ್ಥಾಮ ಬ್ರಹ್ಮಾಸ್ತ್ರ ಬಿಡುತ್ತಾನೆ. ಅದನ್ನು ತಡೆದುಕೊಳ್ಳಲು ಶ್ರೀ ಕೃಷ್ಣ ಬಹಳ ಉಪಾಯ ಮಾಡಬೇಕಾಗುತ್ತದೆ. ನಾರಾಯಣ ಅಸ್ತ್ರ ಇದೆಲ್ಲ ಮುಗಿದ ನಂತರ ಅರ್ಜುನ ಅಶ್ವತ್ಥಮನನ್ನು ಹಿಡಿದು ತರುತ್ತಾನೆ. ಅಶ್ವತ್ಥಾಮನ ಕೂದಲ ಹಿಡಿದು ನೆಲಕ್ಕೆ ಬಗ್ಗಿಸಿ ಶಸ್ತ್ರದಿಂದ ಒಂದೇ ಏಟಿಗೆ ರುಂಡ ಕಡಿಯಲು ಸಿದ್ದನಾಗುತ್ತಾನೆ. ಕೈ ಮೇಲೆ ಎತ್ತಿದಾಗ ಇನ್ನೇನು ಒಂದು ಕ್ಷಣದಲ್ಲಿ ಅಶ್ವತ್ಥಮನ ರುಂಡ ಕಡಿದು ಬೀಳುತ್ತದೆ ಎಂಬ ಸಮಯದಲ್ಲಿ ಅಲ್ಲೇ ಇದ್ದ ದ್ರೌಪದಿ ಅರ್ಜುನನನ್ನು ತಡೆಯುತ್ತಾಳೆ. ತನ್ನ 5 ಮಕ್ಕಳು ಕೊoದ ವ್ಯಕ್ತಿ ಅವನಿಗೆ ನ್ಯಾಯವಾಗಿ ಆಗಬೇಕಾದ ಶಿಕ್ಷೆ ಅಂತಹ ಪ್ರಸಂಗದಲ್ಲಿ ದ್ರೌಪತಿ ಸಂಯಮ ಕಳೆದು ಕೊಳ್ಳದೆ ಅರ್ಜುನನಿಗೆ ಹೇಳುತ್ತಾಳೆ, ಈತನನ್ನು ಬಿಟ್ಟುಬಿಡಿ, ನಮ್ಮ ಹೋದ ಮಕ್ಕಳು ತಿರುಗಿ ಬರುವುದಿಲ್ಲ, ಇವನನ್ನು ಕೊಲ್ಲುವುದರಿಂದ ನಮಗೆ ಪಾಪವೇ ಬರುತ್ತದೆ ಏನು ಲಾಭವಿಲ್ಲ.
ನಂತರ ಅಶ್ವತ್ಥಾಮನನ್ನು ಉದ್ದೇಶಿಸಿ ಮಾತಾಡುತ್ತಾಳೆ. ರಾತ್ರಿ ಮಲಗಿದ ನಿಶಸ್ತ್ರ ವಾದ ನನ್ನ ಮಕ್ಕಳು ಏನು ಅಪರಾಧ ಮಾಡಿದ್ದರು, ಮಹಾಭಾರತ ಯುದ್ಧದಲ್ಲಿ ಇವರದು ಏನು ಪಾತ್ರ ಇರಲಿಲ್ಲ. ಈ ಕಂದಗಳನ್ನು ಸಂಹರಿಸುವ ಮನಸ್ಸಾದರೂ ನಿನಗೆ ಹೇಗೆ ಬಂತು. ನಿಮ್ಮ ತಂದೆ ದ್ರೋಣಾಚಾರ್ಯರ ಹತ್ತಿರ ನನ್ನ ಪತಿಯಂದಿರು ಪಾಠ ಕಲಿತಿದ್ದಾರೆ. ನೀನು ಅವರ ಗುರು ಪುತ್ರ ಅವರಿಗೆ ನೀನು ತಮ್ಮನ ಸಮಾನ ಇಷ್ಟೆಲ್ಲ ತಿಳಿದು ಇಂತಹ ಹೇಯ ಕೃತ್ಯ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು. ನಂತರ ಅರ್ಜುನನಿಗೆ ಹೇಳುತ್ತಾಳೆ ಈತನನ್ನು ಬಿಟ್ಟು ಬಿಡು ನಾವು ಆ ಕೆಟ್ಟ ಕೆಲಸ ಮಾಡುವುದು ಬೇಡ ಎಂದು.
ದ್ರೌಪದಿಯ ಸಂಯಮ, ಕ್ಷಮಾ ಗುಣ, ಕೆಲ ಸಮಯ ಜೀವನದಲ್ಲಿ ನಾವು ಕ್ಷಮಾ ಗುಣ ಇಟ್ಟುಕೊಳ್ಳಬೇಕು,
ಈ ಮೂವರು ಮಾತೆಯರಿಂದ ನಾವು ಕಲಿಯಬೇಕಾದದ್ದು. ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ನಾವು ಕ್ಷಮಾ ಗುಣ ಬೆಳೆಸಿಕೊಳ್ಳಬೇಕು. ಎಂತಹ ಕಷ್ಟ ವಿಪತ್ತಿನ ಸಮಯ ಬಂದರು ಸಂಯಮ ಕಳೆದುಕೊಳ್ಳದೆ ವರ್ತಿಸಬೇಕು. ಮಹಾಭಾರತದಲ್ಲಿ ಬರುವ ಅನೇಕ ಪಾತ್ರಗಳಿಂದ ನಾವು ಬಹಳಷ್ಟು ಜೀವನದಲ್ಲಿ ಕಲಿಯಬಹುದು, ನಮ್ಮ ಮಕ್ಕಳಿಗೂ ಇಂತಹ ಕಥೆಗಳನ್ನು ಹೇಳೋಣ.
(ಸಂಗ್ರಹ)