ಓರೆಕೋರೆ ಕಳೆದು ನೇರವಾಗ್ತಿವೆ ಮಾರ್ಗಗಳು…| ಊರಿಗೂ-ದಾರಿಗೂ ಸಂಬಂಧಗಳೇ ಇಲ್ಲ!

March 12, 2024
11:24 AM
ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರು ತಮ್ಮ ಪೇಸ್‌ ಬುಕ್‌ ವಾಲಲ್ಲಿ ಬರೆದಿರುವ ಬರಹ ಇದು. ವಾಸ್ತವನ್ನು ತೆರೆದಿಟ್ಟಿದ್ದಾರೆ. ಗ್ರಾಮೀಣ ಭಾಗಗಳ ಅಭಿವೃದ್ಧಿಯ ವೇಗ ಹಾಗೂ ಕಳಚಿಕೊಳ್ಳುವ ಕೊಂಡಿಗಳ ಬಗ್ಗೆ ಬರೆದಿದ್ದಾರೆ..

ದಾರಿಯಾಚೆಗಿನ(Road) ತಿರುವುಗಳು(curves) ಕಾಣಿಸುವುದಿಲ್ಲ ಎಂಬ ರೂಢಿಯ ಮಾತು ಇದೆ. ಆದರೆ, ಸಿಕ್ಕಾಪಟ್ಟೆ ಅಭಿವೃದ್ಧಿ ಕಾಮಗಾರಿಗಳು(Development works) ನಡೆಯುತ್ತಿರುವ ಭರಾಟೆಯಲ್ಲಿ ಬಹಳಷ್ಟು ಸಲ ದಾರಿಗಳು ಅಂದಿನ ದಾರಿಗಳಾಗಿ ಉಳಿದಿಲ್ಲ, ಹೆದ್ದಾರಿಗಳೆಂಬ(High way) ಭಯಂಕರ ಮಾರ್ಗಗಳಾಗಿ ಬಿಟ್ಟಿವೆ. ಈ ಹೆದ್ದಾರಿ ಆಗುವುದಕ್ಕಿಂತ ಮೊದಲು ಆ ಊರಿನ(Village) ಅಸ್ಮಿತೆಗಳಾಗಿದ್ದ ಸಾಲು ಮಾವಿನ ಮರಗಳು, ಅಶ್ವತ್ಥ ಕಟ್ಟೆ, ಪುಟ್ಟದೊಂದು ಹೆಂಚಿನ ಮಾಡಿನ ಕಿರಾಣಿ ಅಂಗಡಿ, ಟೀ ಸ್ಟಾಲು(Tea stall), ಮತ್ತೊಂದು ಬೋರುವೆಲ್ಲು, ಶತಮಾನ ದಾಟಿದ ಮೋರಿ, ಮತ್ತದರ ಹಿಂದಿನ ಪುಟ್ಟ ಬಿದಿರಿನ ಮೆಳೆ, ತಿರುವಿನ ಮೇಲಿನಿಂದ ಹಣ್ಣಾದಾಗ ರಸ್ತೆಗೇ ಉರುಳುವ ನೇರಳೆ… ಇವೆಲ್ಲ ಕಾಣೆಯಾಗಿವೆ.

Advertisement
Advertisement

ಅದಕ್ಕೇ ಅಲ್ವ ಈಗ ಬ್ರಹ್ಮಾವರ, ಸಾಲಿಗ್ರಾಮ, ತೆಕ್ಕಟ್ಟೆ, ತೊಕ್ಕೊಟ್ಟು, ಫರಂಗಿಪೇಟೆ, ಮಾಣಿ, ಸೂರಿಕುಮೇರು ಅಂತ ಬೋರ್ಡು ಹಾಕುವುದು. ಬೋರ್ಡು ಹಾಕದೇ ಇದ್ದರೆ ನಾವೆಲ್ಲಿಗೆ ತಲುಪಿದ್ದೇವೆ ಅಂತ ಗೊತ್ತೇ ಆಗ್ಲಿಕಿಲ್ಲ. ಪುಣ್ಯಕ್ಕೆ ಗೂಗಲ್ ಮ್ಯಾಪುಂಟು. ಹಾಗಾಗಿ ಸ್ಪರ್ಶ ಮಾತ್ರದಿಂದ ನಾವು ಎಲ್ಲಿದ್ದೇವೆ ಅಂತ ಕರೆಂಟು ಲೊಕೇಶನ್ ಕೊಟ್ಟು ಕಂಡುಕೊಳ್ಳಬಹುದು!!!! ಅಯ್ಯೋ ನಮ್ಮ ಪ್ರಾರಬ್ಧವೇ… ರಸ್ತೆ ಅಗಲ ಆಗಬೇಕ… ಹಳತಾದರೂ ಗಟ್ಟಿಯಾಗಿದ್ದ ಅಸ್ಮಿತೆಗಳನ್ನು ಕಟ್ಟಿಟ್ಟುಕೊಂಡು ಮುಂದಿನವರಿಗೆ ದಾಟಿಸಬೇಕಾ ಎಂಬ ಕನ್ಫ್ಯೂಶನ್ನುಗಳನ್ನು ಬಗೆಹರಿಸುವಲ್ಲಿ ಆಯ್ಕೆಗಳೇ ಇಲ್ಲ… ದಾರಿಗಳು ಜೇಸಿಬಿ ದಾಳಿಗೆ ಸಿಕ್ಕಿ ತಿರುವುಗಳನ್ನು ಕಳೆದುಕೊಂಡು ನೇರವಾದಾಗಲೇ ಊರಿಗೂ, ದಾರಿಗೂ ಇದ್ದ ಸಂಬಂಧ ಕಡಿದು ಹೋಗಿದೆ.

Advertisement

2-3 ದಶಕಗಳ ಪರಿಸ್ಥಿತಿ ಈಗಿಲ್ಲ. ಈಗಿನ ಬೇಡಿಕೆಗಳು, ಅನಿವಾರ್ಯತೆಗಳು, ದೂರದೃಷ್ಟಿ ಸ್ವರೂಪ ಬದಲಾಗಿದೆ. ಹಾಗಾಗಿ ಕಾಲು ದಾರಿ ರಸ್ತೆಯಾಗಿಯೂ, ರಸ್ತೆಗಳು ಹೆದ್ದಾರಿಗಳಾಗಿಯೂ, ಹೆದ್ದಾರಿಗಳೂ ಚತುಷ್ಪಗಳಾಗಿಯೂ, ಚತುಷ್ಪಥಗಳು EXPRESS ಹೈವೇಗಳಾಗಿಯೂ ಭರದಿಂದ ಬದಲಾಗ್ತಾ ಇವೆ. ಊರುಗಳನ್ನು ವಿಭಜಿಸಿ, ಗುಡ್ಡಗಳನ್ನು ನೆಲಸಮಗೊಳಿಸಿ, ಕೆರೆ, ತೋಟಗಳನ್ನು ಮುಚ್ಚಿಸಿ, ತಿರ್ಗಾಸುಗಳನ್ನು ನೇರಗೊಳಿಸಿ, ಕಾಂಕ್ರಿಟ್ ಹಾಕಿದ ಮೇಲೆ ನಡುವೆ ಒಂದು ಬೇಲಿ ಕಟ್ಟಿ, ಊರನ್ನೇ ಎರಡು ಹೋಳುಗಳನ್ನಾಡಿ ಮಾಡುವ ಹೆದ್ದಾರಿಗಳು….

ಹೆದ್ದಾರಿಗಳು ಮೈಕೊಡವಿ ಮೇಲೆಳುವ ಮೊದಲು ಉರುಳುವುದು ಸಾಲು ಮರಗಳು (ಕಲ್ಲಡ್ಕ-ಸೂರಿಕುಮೇರು ನಡುವೆ ಫಲ ಕೊಡುವ ಎಷ್ಟೊಂದು ಮಾವಿನ ಮರಗಳಿದ್ದವು, ಈಗ ಆ ಜಾಗ ವಿಮಾನ ನಿಲ್ದಾಣದ ಟೇಕಾಫ್ ಆಗುವ ಜಾಗದ ಹಾಗೆ ಕಾಣ್ತಾ ಇದೆ, ಮರುಭೂಮಿ ಥರ), ನಂತರ ಹಳೆ ಬಸ್ ಶೆಲ್ಟರುಗಳು, ಸಣ್ಣ ಸಣ್ಣ ವ್ಯಾಪಾರಿಗಳ ಅಂಗಡಿಗಳು, ರಸ್ತೆಗೇ ತಾಗಿರುವ ಮನೆಗಳು, ಬೇಲಿಯಾಚೆಗಿನ ತೋಟಗಳು, ಕೆರೆಗಳು, ಸರ್ಕಾರಿ ಶಾಲೆಗಳು… ಎಲ್ಲ ಎಲ್ಲ ಒಂದೊಂದಾಗಿ ಸರ್ವೆಯ ಹಗ್ಗದ ವ್ಯಾಪ್ತಿಗೆ ಸಿಲುಕಿ ಕಾಣೆಯಾಗ್ತಾ ಬರ್ತವೆ.

Advertisement

ನಂತರ ಜೇಸಿಬಿ ಕಾರುಬಾರು, ಮತ್ತೆ ಧೂಳು, ಮತ್ತೆ ಕೆಸರು, ಮತ್ತೆ ಜಲ್ಲಿ, ಮತ್ತೆ ಭೀಮಗಾತ್ರದ ಯಂತ್ರಗಳಿಂದ ಡಾಂಬರುಸೇವೆ ಮತ್ತೆ ಅದರ ನಡುವೆ ಬೇಲಿ ಕಟ್ಟಿ ಟೋಲು ಗೇಟು ಹಾಕಿದಲ್ಲಿಗೆ ಹೆದ್ದಾರಿ ಸಿದ್ಧವಾಗ್ತದೆ. ಐಶಾರಾಮಿ ಕಾರುಗಳಲ್ಲಿ ವೇಗವಾಗಿ ಹೋಗುವವರು ಅಕ್ಕಪಕ್ಕ ಕಾಣದ ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಗಳ ಹಾಗೆ ಭಯಂಕರ ಸ್ಪೀಡಿನಲ್ಲಿ ಊರುಗಳನ್ನೇ ನೋಡದೆ FASTAG ಧೈರ್ಯದಲ್ಲಿ ಗಮ್ಯದತ್ತ ಸಾಗ್ತಾ ಇರ್ತಾರೆ. ಭಯಂಕರ ಬೇಗ ಊರು ತಲುಪಿದೆವು ಅಂತ ಖುಷಿ ಪಡ್ತಾರೆ. ವೇಗದ ಹಿಂದಿನ ರಸ್ತೆಯಡಿ ನಲುಗಿದ ನೆನಪುಗಳು, ಆಯಾ ಊರುಗಳ ಹೆಗ್ಗುರುತುಗಳು ಆ ಹೊತ್ತಿಗೆ ಸಮಾಧಿ ಸೇರಿರ್ತವೆ.

ಹಿಂದೆ ಪ್ರತಿ ಊರಿಗೂ ಒಂದೊಂದು ಹೆಗ್ಗುರುತು ಇರ್ತಾ ಇತ್ತು. ಬಸ್ಸಿನ ಲಾಸ್ಟ್ ಸ್ಟಾಪು ಇರುವಲ್ಲಿ ಒಂದು ವಿಶಾಲ ಮರದ, ಅದರ ನೆರಳಲಿನಲ್ಲಿ ಒಂದು ಕಟ್ಟೆ, ಪಕ್ಕದಲ್ಲೇ ಪುಟ್ಟದೊಂದು ಪೆಟ್ಟಿಗೆ ಅಂಗಡಿ. ಅಲ್ಲೊಂದು ಸವೆದ ಬೆಂಚು ಅಥವಾ ಸಿಮೆಂಟಿನ ಸೋಫಾ… ಅದರಲ್ಲಿ ದಿನಪೂರ್ತಿ ಚರ್ಚೆ ನಡೆಸುತ್ತಲೇ ಇರುವ ಸಮಾನಾಸಕ್ತರು. ಅಂಗಡಿ ಎದುರೇ ನೇತಾಡ್ತಾ ಇರುವ ಬಾಳೆಕೊನೆ, ಹಿಂದೊಂದು ಪುಟ್ಟ ತೊರೆ, ಅಂಗಡಿಯ ಮಾಸಿದ ಗೋಡೆ ಮೇಲೆ ಕಳೆದ ಚುನಾವಣೆ ವೇಳೆ ಸುಣ್ಣದಲ್ಲಿ ಬರೆದು ಈಗ ಮಾಸಿದ VOTE FOR… ಎಂಬ ಒಕ್ಕಣೆ, ಬಸ್ಸಿನಿಂದ ಇಳಿದವರನ್ನು ಕರೆದೊಯ್ಯಲು ಕಾಯುತ್ತಿರುವ ಒಂಟಿ ರಿಕ್ಷಾ… ಒಂದು ದೇವಸ್ಥಾನದ ಮಹಾದ್ವಾರ… ಪಿಸುಗುಟ್ಟಿದರೂ ಕೇಳುವಷ್ಟು ಪ್ರಶಾಂತ ಪರಿಸರ. ಸದ್ದಿಲ್ಲ, ಗದ್ದಲವಿಲ್ಲ, ಗಡಿಬಿಡಿ ಇಲ್ಲ. ಟೋಲೂ ಇಲ್ಲ, ಮಣ್ಣು ಮಸಿಯೂ ಇಲ್ಲ. ಅಲ್ಲಿ ನೆಟ್ವರ್ಕೂ ಇರುವುದಿಲ್ಲ, ಅಸಲಿಗೆ ಆಗ ಮೊಬೈಲೇ ಇರಲಿಲ್ಲ….

Advertisement

ತೋಡಿನ ಹಾಗೆ ವಕ್ರವಕ್ರವಾಗಿ ಸಾಗುವ ಮಣ್ಣಿನ ಮಾರ್ಗ, ಫಸ್ಟ್ ಗೇರಿನಲ್ಲೂ ಜಾರುವ ಭಯಂಕರ ಪಾತಾಳಕ್ಕಿಳಿದಂತೆ ತೋರುವ ಚರಳು ಚರಳು ಕಲ್ಲುಗಳ ಒಂದು ಮಾರ್ಗ, ಫೋರ್ ವ್ಹೀಲರ್ ಇದ್ರೆ ಮಾತ್ರ ಹತ್ತುವಂಥ ಭಯಂಕರ ಗುಂಡಿಗಳಿರುವ ಏರು ಹಾದಿ, ಸಂಕವೇ ಇಲ್ಲದ ತೋಡಿಗೆ ಇಳಿದು ಅರ್ಧಸ್ನಾನ ಮಾಡಿ ಮುಂದೆ ಹೋಗುವ ಜೀಪು, ಅದು ರಟ್ಟಿಸುವ ನೀರು, ಓ ಅಲ್ಲಿ ಊರಿನ ತುದಿ ಮುಟ್ಟಿದ ಮೇಲೆ ಒಂದು ದಿಬ್ಬದ ಹತ್ರ ರಸ್ತೆ ಮುಕ್ತಾಯ, ಮತ್ತೆ ತಡಮ್ಮೆ ದಾಟಿ ನಡ್ಕೊಂಡೇ ಹೋಗಬೇಕು, ಗದ್ದೆಯ ಬದುಗಳಲ್ಲಿ, ತೋಟದ ಬೇಲಿಯ ಪಕ್ಕದಲ್ಲಿ ಕಾಲುಸಂಕದ ತೋಡನ್ನು ಹಾದು, ಗುಡ್ಡದ ಅಗರಿನ ಪಕ್ಕದ ಜಾರುವ ದಾರಿಯಲ್ಲಿ ನಡೆದ ಮೇಲೆ ಅಜ್ಜನ ಮನೆಯೋ, ಅಜ್ಜಿ ಮನೆಯೋ ಸಿಕ್ತಾ ಇತ್ತು…

ಅಲ್ಲೊಂದು ನಡೆಯುವ ಬೇಸರವಾಗಲಿ, ಆಯಾಸವಾಗಲೀ, ಔದಾಸೀನ್ಯವಾಗಲಿ ಇರಲಿಲ್ಲ. ಕಾರಣ ನಡೆಯುವುದು ಬಿಟ್ಟು ಬೇರೆ ಆಯ್ಕೆಗಳೇ ಆಗ ಇರಲಿಲ್ಲ. ಅಷ್ಟೂ ಉದ್ದರ ದಾರಿ ಪಕ್ಕದ ಗಿಡ ಮರ, ಪಕ್ಷಿಯ ಕೂಗು, ನಡೆಯುವಾಗ ಸಿಕ್ಕಿ ಮಾತನಾಡಿಸುವ ಊರಿನವರು, ಎತ್ತರವಾದ ಮರಗಳ ಬಗ್ಗೆ ಅಚ್ಚರಿ, ತೋಡಿನ ಕಟ್ಟದಲ್ಲಿ ತುಂಬಿನ ನೀರನ್ನು ಕಂಡು ಹಿಗ್ಗು, ಕಟ್ಟದಿಂದ ನೀರು ತೆಗಯು ಇಟ್ಟ ವಿಲ್ಯರ್ಸ್ ಪಂಪಿನಿಂದ ಹೊರಸೂಸುವ ಚಿಮಿಣಿ ಎಣ್ಣೆಯ ವಾಸನೆ… ಎಷ್ಟೊಂದು ಸಂಗತಿಗಳಿದ್ದವು ದಾರಿಯಲ್ಲಿ ನಡೆದುಕೊಂಡು ಹೋಗುವಾಗ…

Advertisement

ಎಷ್ಟೊಂದು ಪರಿಸರ, ಎಷ್ಟೊಂದು ಜನ, ಎಷ್ಟೊಂದು ಸಾವಕಾಶ, ಎಷ್ಟೊಂದು ಅಚ್ಚರಿ, ಕುತೂಹಲಗಳಿಗೆಲ್ಲ ಅಂದಿನ ಕಚ್ಛಾ ರಸ್ತೆಯ ಪಯಣ ದಾರಿ ಮಾಡಿಕೊಟ್ಟದ್ದು ಸುಳ್ಳಲ್ಲ… ಎಲ್ಲೋ ತಿರುಗಿ, ಇನ್ನೆಲ್ಲೋ ಕೈಕಂಬಗಳಲ್ಲಿ ಪಥ ಬದಲಿಸಿ, ಮತ್ತೆಲ್ಲೊ ಓಡ (ದೋಣಿ)ದಲ್ಲಿ ನದಿ ದಾಟಿ, ಮತ್ತೊಂದು ಕಡೆ ಕೈಸಂಕ ಹಿಡಿದು ಕಾಲುಸಂಕದಲ್ಲಿ ವಾಲಿಕೊಂಡು ಹೋಗಿ, ಪಕ್ಕದ ಮನೆಯ ನಾಯಿ ಅಟ್ಟಿಸಿಕೊಂಡು ಬಂದರೆ ಅಂತ ಮುಂಜಾಗ್ರತೆಗೆ ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಹೋದರೂ ಸಂಜೆ ಹೊತ್ತಿಗೆ ಅಜ್ಜನಮನೆ ತಲುಪಿ ಕೈಕಾಲು ತೊಳೆಯುವಾಗ ಸಿಕ್ಕುವ ಖುಷಿಗೆ ಬೆಲೆ ಕಟ್ಟಲಾಗದು. ಮೊಬೈಲ್ ಬಿಡಿ, ಫೋನೂ ಇಲ್ಲದ ಕಾಲದಲ್ಲಿ ಹೇಳದೇ ಕೇಳದೇ ತಿರುವಿನ ದಾರಿಯಾಚೆ ತಡಮ್ಮೆ ತೆಗೆದು ಬರುವ ಅತಿಥಿಗಳನ್ನು ಕಂಡಾಗ ಮನೆಯವರೂ ತುಂಬ ಖುಷಿ ಪಡ್ತಾ ಇದ್ರು…

ಎತ್ತಿನ ಗಾಡಿಯ ದಾರಿ, ಜೀಪು ಮಾತ್ರ ಸಾಗುವ ಮಾರ್ಗ, ದನಗಳನ್ನು ಗುಡ್ಡೆಕ್ಕೆ ಅಟ್ಟುವ ಕಾಲು ದಾರಿ, ರಪಕ್ಕನೇ ಬಸ್ಸಿನ ಮಾರ್ಗಕ್ಕೆ ತಲಪುವ ತೋಟದೊಳಗಿನ ಶಾರ್ಟ್ ಕರ್ಟ್ ಬೈಪಾಸು ದಾರಿ… ಹೀಗೆ ಊರೊಳಗೆ ತುಂಬ ತುಂಬ ನೆರಳಿನ ದಾರಿಗಳು ಗೂಗಲ್ ಮ್ಯಾಪ್ ಬರುವ ಮೊದಲೇ ಇದ್ದವು. ಇವತ್ತು ಆಸ್ತಿಗಳು ಪಾಲಾಗಿವೆ, ಊರಿನೊಳಗೆ ರಸ್ತೆಗಳು ಬಂದಿವೆ. ಹಳೇ ಬೈಪಾಸು ದಾರಿಗಳಿಗೆ ಬೇಲಿ ಹಾಕಲ್ಪಟ್ಟಿವೆ, ಸೈಟುಗಳು, ಲೇಔಟುಗಳು ಆದ ಮೇಲೆ ಶಾರ್ಟ್ ಕಟ್ ದಾರಿಗಳಿಗೆ ಅವಕಾಶ ಇಲ್ಲ. ಸುತ್ತಾದರೂ ರಾಜದಾರಿಯಲ್ಲೇ ಆಟೋದಲ್ಲಿ ಹೋಗಬೇಕು. “ದುಂಬು ಅವ್ಲೊಂಜಿ ಸಾದಿ ಇತ್ತಂಡ್… ಇತ್ತೆ ಬೇಲಿ ಪಾಡ್ದೆರ್…” ಅನ್ನುವ ಮಾತು ಸಾಮಾನ್ಯ.

Advertisement

ಎದುರಿನಿಂದ ವಾಹನ ಬಂದಾಗ ಸೈಡು ಕೊಡಲು ಕಷ್ಟವಾಗುವಂಥ ಇಕ್ಕಟ್ಟು, ತಿರುವಿನಲ್ಲಿ ಎರಡೂ ಕೈ ಬಳಸಿ ಹಳೇ ಟಾಟಾ ಬಸ್ ಗಳ ಗೇರ್ ಚೇಂಜ್ ಮಾಡುವ ಸ್ಟೈಲು, ಜಾರುವ ಚಡಾವು ಎಂಥದ್ದೇ ಇದ್ದರೂ ಆಗ ರಸ್ತೆ ಪಕ್ಕ ಸಾಕಷ್ಟು ನೆರಳು ನೀಡುವ ಮರಗಳಿದ್ದವು, ಕೈಗೆಟಕುವ ದರದಲ್ಲಿ ಚಾ ಕುಡಿಯಬಹುದಾದ ಹೋಟೇಲುಗಳಿದ್ದವು, ಕಂಡ ಕಂಡಲ್ಲಿ ಪ್ಲಾಸ್ಟಿಕ್ ತೊಟ್ಟೆಗಳಿಂದ ತುಂಬಿದ ಕಾಂಕ್ರಿಟ್ ಚರಂಡಿಗಳು ಇರಲಿಲ್ಲ, ರಸ್ತೆಯಿಂದ ರಸ್ತೆಗೆ ಪುಟ್ಟ ಪುಟ್ಟ ಸಂಪರ್ಕ ಮಾರ್ಗಗಳು, ಮೋರಿಗಳು, ಚಂದ ಚಂದದ ಮರಗಳು, ಬೋರ್ಡೇ ಇಲ್ಲದಿದ್ದರೂ ಇಂಥದ್ದೇ ಊರು ತಲುಪಿತು ಅಂತ ಹೇಳಬಹುದಾದ ಹಳೇ ಕಟ್ಟಡಗಳೂ ಇದ್ದವು.

ಇಂದು ಎಂಥದ್ದೂ ಇಲ್ಲ. ನೆರಳಿಲ್ಲ, ಮೌನವಿಲ್ಲ, ಪ್ರಶಾಂತ ಅನುಭೂತಿ ಇಲ್ಲ, ಕಾಯುವ ಸಹನೆಯಿಲ್ಲ, ತಿರುವಿನಾಚೆ ಎಂತ ಉಂಟು ಅಂತ ಹುಡುಕುವ ಕುತೂಹಲ ಇಲ್ಲ, ಡಿವೈಡರ್ ಬೇಲಿ ಆಚೆಗಿನ ಜನ ಹೇಗಿದ್ದಾರೆ ಅಂತ ತಿಳಿಯುವ ಆಸಕ್ತಿ ಇಲ್ಲ, ಒಂದು ಬಸ್ ಹೋದರೆ ಮತ್ತೊಂದು ಬಸ್ಸಿಗೆ ಇನ್ನರ್ಧ ಗಂಟೆ ಕಾಯುವ ತಾಳ್ಮೆ ಇಲ್ಲ, ಆಚೆ ಊರಿಗೆ ಗುಡ್ಡ ದಾಟಿ ಶಾರ್ಟ್ ಕಟ್ಟಿನಲ್ಲಿ ನಡೆಯುವ ಉತ್ಸಾಹ, ತ್ರಾಣ ಎರಡೂ ಇಲ್ಲ… ಮತ್ತೆಂತ ಉಂಟು? ಗಡಿಬಿಡಿ ಉಂಟು, ಬೇಗ ತಲುಪಲು ಅರ್ಜೆಂಟು ಉಂಟು, ಟೋಲ್ ಕಟ್ಟಿದ್ರೆ ರಣವೇಗದಲ್ಲಿ ತಲುಪಿಸುವ ಹೈವೇ ಉಂಟು, ಬುಕ್ ಮಾಡಿದ್ರೆ ಕರೆದಲ್ಲಿಗೆ ಕರ್ಕೊಂಡು ಹೋಗುವ ಕ್ಯಾಬು ಉಂಟು, ದಾರಿಯಲ್ಲಿ ಯಾರತ್ರವೂ ಒಂದಕ್ಷರವೂ ಮಾತನಾಡದೆ ಮೊಬೈಲಿನಲ್ಲಿ ಜಿಪಿಎಸ್ ಮ್ಯಾಪ್ ಹಾಕಿದರೆ ಬೇಕಾದಲ್ಲಿಗೆ ತಲುಪುವ ವ್ಯವಸ್ಥೆ ಉಂಟು… ಮತ್ತೆ ಇವೆಲ್ಲದರ ಜೊತೆಗೆ ಬಿಪಿ ಮತ್ ಶುಗರ್ ಕೂಡಾ ಉಂಟು…!!! ಮರ ಯಾಕೆ ಬೇಕು ನಮ್ಗೆ….? ಹೈವೇಗೆ ಕೈಮುಗಿದ್ರೆ ಬೇಗ ತಲುಪ್ತದೆ, ಅಷ್ಟೇ ಸಾಕು… ಏನಂತೀರ?!

Advertisement
Service title
ಕೃಷ್ಣಮೋಹನ ತಲೆಂಗಳ 

(ಕೃಷ್ಣ ಮೋಹನ ಅವರು ತಮ್ಮ ಪೇಸ್‌ಬುಕ್‌ ವಾಲಿನಲ್ಲಿ ಹಂಚಿಕೊಂಡಿರುವ ಬರಹ )

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |
May 18, 2024
1:02 PM
by: ಸಾಯಿಶೇಖರ್ ಕರಿಕಳ
ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್
May 18, 2024
1:01 PM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು
May 18, 2024
12:45 PM
by: The Rural Mirror ಸುದ್ದಿಜಾಲ
ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?
May 18, 2024
12:28 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror