ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಂಡಂತಾಯಿತಾ…?. ಈ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಸಿಬಂದಿಗಳು ಪರದಾಡುವಂತಾಯಿತಾ ? ಉಚಿತಗಳನ್ನು ನೀಡುವ ಭರದಲ್ಲಿ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದೆ ಇರುವ ಹಾಗೆ ಆಯ್ತಾ ? ಹೀಗೊಂದು ಚರ್ಚೆ ಈಗ ಆರಂಭ ಆಗುವುದಕ್ಕೆ ಕಾರಣ ಇದೆ….!. ನೌಕರರಿಗೆ ಸಂಬಳ ವಿಳಂಬ ಆಯ್ತಂತೆ.. ಇಷ್ಟಕ್ಕೇ ಈ ಚರ್ಚೆ ಆರಂಭ ಆಗಿರುವುದು.
ಉಚಿತ ಯೋಜನೆಗಳಿಂದ ಆರ್ಥಿಕ ಹೊಡೆತ ಬಿದ್ದಿದೆ. ಬಸ್ ಓಡಿಸೋ, ನಿರ್ವಹಿಸೋ ಸಿಬ್ಬಂದಿಗೆ ಸಂಬಳ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ದಿನಾ ಅಕೌಂಟ್ ನೋಡಿ ನಿರಾಸೆಯಾಗೋದೆ ಆಗಿದೆ. ಇತ್ತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡೋ ಇಲಾಖೆ ಸಿಬ್ಬಂದಿ ಸಂಬಳ ಕೊಡಿ ಅಂತ ಗೋಗರೆದಿದ್ದಾರೆ. ಶಕ್ತಿ ಯೋಜನೆ ಹೆಸರಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇ ಇದಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ನಾರಿಯರು ಇಡೀ ರಾಜ್ಯವನ್ನೇ ಎರಡೆರಡು ಸುತ್ತು ಹಾಕಿ ದೇವಸ್ಥಾನ, ಮಠ, ಮಂದಿರಗಳ ಹುಂಡಿ ತುಂಬಿಸಿ ದೇವರನ್ನು ಶ್ರೀಮಂತರನ್ನಾಗಿಸಿದ್ದಾರೆ. ಆದರೆ ಸರ್ಕಾರ, ದೇವರನ್ನು ನಂಬಿದ ಸಾರಿಗೆ ನೌಕರರು ಪರದಾಡುವಂತಾಗಿದೆ.
ಸಾರಿಗೆ ಇಲಾಖೆಯನ್ನೂ ಶ್ರೀಮಂತ ಮಾಡ್ತಿದ್ದಾರೆ. ಆದರೆ ನಾರಿಶಕ್ತಿ ಹೆಸರಲ್ಲಿ ಸರ್ಕಾರ ಸಾರಿಗೆ ಸಿಬ್ಬಂದಿಯನ್ನ ಬಡತನಕ್ಕೆ ತಳ್ತಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಪ್ರತಿ ತಿಂಗಳು 1ನೇ ತಾರೀಖು ಸಂಬಳ ಆಗುತ್ತಿದೆ. ಆದರೆ ಈ ತಿಂಗಳು ಆಗಿಲ್ಲ, ಇವತ್ತು ತಾರೀಖು 9 ಕಳೆದರೂ ವೇತನ ಜಮೆ ಆಗಿಲ್ಲ. ಸಾರಿಗೆ ಇಲಾಖೆಗೆ ಸರ್ಕಾರದಿಂದ ಹಣ ಬಂದಿಲ್ಲ. ನಿಗಮಗಳಿಗೆ ಪೂರ್ಣ ಹಣ ಸಿಗದೇ ವೇತನ ಸಿಕ್ಕಿಲ್ಲ. ಶಕ್ತಿ ಯೋಜನೆಯ 126 ಕೋಟಿ ಸರ್ಕಾರ ಕೊಟ್ಟಿಲ್ಲ. ಸರ್ಕಾರ 37 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಈ ಹಣ ಬಸ್ಗಳ ದುರಸ್ಥಿ, ಡೀಸೆಲ್ಗೆ ಸರಿ ಹೋಗುತ್ತಿದೆ ಅಷ್ಟೇ.
ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಯ ಪ್ರತಿ ತಿಂಗಳ ವೇತನವೇ 77 ಕೋಟಿ ರೂಪಾಯಿಗೂ ಹೆಚ್ಚು. 22 ಸಾವಿರ ಸಿಬ್ಬಂದಿಗೆ ವೇತನ ಸಿಗದೇ ಪರದಾಡುತ್ತಿದ್ದು ಮನೆ ಖರ್ಚು, ಮಕ್ಕಳ ಫೀಸು, ಬ್ಯಾಂಕ್ ಸಾಲ ಕಟ್ಟಬೇಕು ವೇತನ ಬೇಗ ಕೊಡಿ ಅಂತ KKRTC ಸಿಬ್ಬಂದಿ ಗೋಳಾಡ್ತಿದ್ದಾರೆ. ಇದೇ ವೇಳೆ ಕೊಪ್ಪಳದ ಪ್ರವಾಸಿಮಂದಿರದಲ್ಲಿ ಕೆಲಸ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಗುತ್ತಿಗೆ ನೌಕರರು ಸಂಬಳ ಸಿಗದೆ ಸತ್ಯಾಗ್ರಹ ಮಾಡುತ್ತಿದ್ದಾರೆ. PWD ಇಲಾಖೆ ಅಧಿಕಾರಿಗಳನ್ನ ಸಂಬಳ ಕೊಡಿ ಅಂತ ಗೋಗರೆದು ಬೇಸತ್ತು ಕೊನೆಗೆ ಐಬಿಗೆ ಬೀಗ ಹಾಕಿದ್ದಾರೆ.