ಅಯೋಧ್ಯೆಯ ಹೋರಾಟದ ಕಥೆಗಳನ್ನು ಆಲಿಸುವಾಗ ಮನದಲ್ಲಿ ಸಂತಸ ಮೂಡುತ್ತದೆ. ಆದರೆ ರಾಷ್ಟ್ರಗಳ ನಡುವೆ ನಡೆಯುವ ಹೋರಾಟಗಳು ಬೇಸರವೆನಿಸುತ್ತದೆ. ಸನಾತನ ಧರ್ಮವನ್ನು ಗಟ್ಟಿ ಮಾಡುವಂತಹ ಯುದ್ಧದ ವಾರ್ತೆಗಳು ಆತ್ಮಾನಂದದ ಕಡೆಗೆ ಕೊಂಡೊಯ್ಯುತ್ತದೆ. ಪ್ರಭು ಶ್ರೀರಾಮನ ಜನ್ಮಸ್ಥಳದ ಚ್ಯುತಿಗೆ ಇದ್ದ ಸವಾಲುಗಳು ಇಂದು ನಮ್ಮ ಜೀವನಕ್ಕೆ ಸ್ಫೂರ್ತಿ ಹಾಗೂ ವಿಶ್ವಕ್ಕೆ ರಾಮನ ಮೌಲ್ಯಗಳನ್ನು ಸಾರಿ ಹೇಳುತ್ತವೆ. ಹೀಗೆ ಅಯೋಧ್ಯೆಯ ಹೋರಾಟದ ತುಣುಕುಗಳು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಕರ್ನಾಟಕ ಪ್ರಾಂತದ ಸಹಸೇವಾ ಪ್ರಮುಖ್ ನ. ಸೀತಾರಾಮ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಐಟಿ ಕ್ಲಬ್, ವ್ಯವಹಾರ ಆಡಳಿತ ಸಂಘ, ನೇಚರ್ ಕ್ಲಬ್, ರೋವರ್ಸ್ ರೇಂಜರ್ಸ್ ಮತ್ತು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರಾಮ ಸ್ಮರಣೆಯ ಜೊತೆಗೆ “ಅಯೋಧ್ಯೆಯ ಹೋರಾಟ” ಎಂಬ ವಿಚಾರವನ್ನು ಪ್ರಸ್ತುತ ಪಡಿಸಿದರು.
ಭಾರತೀಯರಾದ ನಾವು ನೀರಲ್ಲಿಯೂ ದೈವೀ ಸ್ವರೂಪ ಕಾಣುತ್ತೇವೆಯೇ ಹೊರತು ವೈಜ್ಞಾನಿಕತೆಯನ್ನಲ್ಲ. ರಾಮ ಎಲ್ಲರಲ್ಲಿಯೂ ಇದ್ದಾನೆ. ಪ್ರತೀ ಊರಿನಲ್ಲಿ ಶ್ರೀರಾಮನ ಭಜನಾ ಮಂದಿರ, ದೇವಾಲಯಗಳು ಇದೆ. ಆದರೆ ಈ ಹಿಂದೆ ಶ್ರೀರಾಮನ ಜನ್ಮ ಭೂಮಿಯ ಬಗ್ಗೆ ಪ್ರಶ್ನಿಸಿದರೆ ಯಾರೊಬ್ಬರಿಗೂ ತಿಳಿದಿರಲಿಲ್ಲ. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾವಪೂರ್ಣವಾಗಿ ತೊಡಗಿಸಿಕೊಳ್ಳಲು ನಾವು ಪೂರ್ವಜನ್ಮದ ಪುಣ್ಯ ಮಾಡಿದ್ದೇವೆ. ಭವ್ಯ ಭಾರತದ ಸನಾತನ ಹಿಂದೂ ಧರ್ಮವನ್ನು ಸಾರಿ ಹೇಳುವಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದು. ಅಯೋಧ್ಯೆಗೆ ಕರಸೇವಕರಾಗಿ ತೆರಳಿದ ಮೊಟ್ಟ ಮೊದಲ ತಂಡ ಅದು ನಮ್ಮ ಮಂಗಳೂರು ವಿಭಾಗ ಎಂಬುದು ಹೆಮ್ಮೆಯ ಸಂಗತಿ ಎಂದು ತಮ್ಮ ಕರಸೇವೆಯ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್ ಜಿ ಶ್ರೀಧರ್ ವಹಿಸಿದ್ದರು. ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ ಎನ್, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸ್ನೇಹಾ ಸ್ವಾಗತಿಸಿ, ಪ್ರಸಾದಿನಿ ವಂದಿಸಿದರು. ತೃತೀಯ ಬಿಎ ವಿದ್ಯಾರ್ಥಿನಿ ಅನನ್ಯ ಕಾಟೂರು ಕಾರ್ಯಕ್ರಮವನ್ನು ನಿರೂಪಿಸಿದರು.