ಹೇತಾರಿ ಎಂಬ ಹಿತಕಾರಿ ವೃಕ್ಷದ ಕತೆ | ಈ ದುರ್ಗಂಧಕ್ಕೆ ಮೋದಿ ಕಾರಣರೇ..?

February 21, 2024
2:38 PM
ಮಲೆನಾಡಿನಲ್ಲಿ ʻಹೇತಾರಿ ಮರʼ ಅಥವಾ ʻಹೀನಾರಿ ಮರʼದ ಬಗ್ಗೆ ಪತ್ರಕರ್ತ ನಾಗೇಶ್‌ ಹೆಗಡೆ ಅವರು ಬರೆದಿದ್ದಾರೆ. ಅದರ ಯಥಾವತ್ತಾದ ಬರಹ ಇಲ್ಲಿದೆ...

ಶ್ರೀಗಂಧಕ್ಕೆ(Sandalwood) ತದ್ವಿರುದ್ಧವಾಗಿ, ದುರ್ಗಂಧ(stench) ಸೂಸುವ ಒಂದು ಮರ(Tree) ಇದೆ. ಅದಕ್ಕೆ ಮಲೆನಾಡಿನಲ್ಲಿ ʻಹೇತಾರಿ ಮರʼ ಅಥವಾ ʻಹೀನಾರಿ ಮರʼ ಎನ್ನುತ್ತಾರೆ. ಐದಾಳೆತ್ತರಕ್ಕೆ ಬೆಳೆಯುತ್ತದೆ. ಅದರ ವೈಜ್ಞಾನಿಕ ಹೆಸರು ಮ್ಯಾಪ್ಪಿಯಾ ಫೆಟಿಡಾ (ಫೆಟಿಡ್‌ ಎಂದರೆ ದುರ್ವಾಸನೆ). ನರಕಸದೃಶ ನಾರುವಾಸನೆಯನ್ನು ಹಬ್ಬಿಸುವ ಇದಕ್ಕೆ ʼನಾರ್ಕ್ಯಾʼ(Narkyaʼ) ಎಂತಲೂ ಹೇಳುತ್ತಾರೆ.

Advertisement
Advertisement
Advertisement

ಈ ಮರದ ಕಟ್ಟಿಗೆಯನ್ನು ಸುಟ್ಟರೆ ಅದರ ದುರ್ವಾಸನೆಗೆ ಊರವರೆಲ್ಲ ಮೂಗು ಮುಚ್ಚಿಕೊಳ್ಳಬೇಕು. ನಮ್ಮೂರಲ್ಲಿ ಹಸಿ ಅಡಿಕೆಯನ್ನು ಬೇಯಿಸುವಾಗ ಹಂಡೆಯ ಒಲೆಗೆ ಎಲ್ಲೋ ಅಪ್ಪಿತಪ್ಪಿ ಈ ಕಟ್ಟಿಗೆಯೂ ಸೇರಿತ್ತೆಂದರೆ ಮುಗಿಯಿತು. ಭಯಂಕರ ದುರ್ವಾಸನೆ. ಯಾರೋ ಚಡ್ಡಿಯಲ್ಲೇ ಕಕ್ಕ ಮಾಡಿಕೊಂಡ ಹಾಗೆ. ಆಳು-ಕಾಳು, ಹುಡ್ರು-ದಡ್ರು, ಯಾರ್ಯಾರಿಗೋ ಬಯ್ಗುಳ. ಊರಿನ ನಾಲ್ಕು ಮನೆಗಳ ಎಂಟು ಒಲೆಗಳಲ್ಲಿ ಯಾವ ಒಲೆಗೆ ಈ ಕಟ್ಟಿಗೆ ಸೇರಿದೆ ಎಂದು ಎದ್ದುಬಿದ್ದು ಅವರಿವರ ಬಚ್ಚಲು ಮನೆಗೋ ಅಡಿಕೆ ಒಲೆಗೋ ಓಡುತ್ತ, ಉರಿಯುವ ಕೊಳ್ಳಿಯನ್ನು ಹೊರಕ್ಕೆಳೆದು ನೀರು ಚಿಮುಕಿಸುವ ಧಾವಂತ ನಮಗೆ. ಅದು ಬಾಲ್ಯದ ನೆನಪು.

Advertisement

ಮುಂದಕ್ಕೆ ನಾನು ಓದಲೆಂದು ದೂರದ ಊರಿಗೆ ಹೋಗಿದ್ದವ, ವರ್ಷಕ್ಕೊ ಎರಡು ವರ್ಷಕ್ಕೊ ಊರಿಗೆ ಬಂದಾಗ ಇಲ್ಲಿನ ಒಳ್ಳೇ ಕತೆ, ಬೇಜಾರದ ಕತೆಗಳ ನಡುವೆ ಮಿಶ್ರಕತೆಯಾಗಿ ಹೇತಾರಿ ಮರವೂ ಬರುತ್ತಿತ್ತು. “ನಮ್ಮೂರ ಕಡೆ, ಬೀಟೆ ಮರ ಖಾಲಿ ಆದವು; ಬನಾಟೆ ಮರ ಖಾಲಿ ಆದವು; ಹೊಳೆಯಂಚಿನ ಪರಿಮಳದ ಅಪ್ಪೆಮಿಡಿ ಮರ, ದಾಲಚಿನ್ನಿ ಮರ ಎಲ್ಲವೂ ಖಾಲಿ ಆದವು. ಊದಬತ್ತಿ ಕಂಪನಿಗೆ ಅಂತ ಗುಳಮಾವಿನ ಮರಗಳೂ ಖಾಲಿ ಆದವು” ಎಂದು ಕತೆ ಹೇಳುವವರು ಕೊನೆಗೆ ಒಂಥರಾ ರಿಲೀಫ್‌ ಎಂಬಂತೆ “ಹೇತಾರಿ ಮರಕ್ಕೂ ಅದೆಂತಾ ಡಿಮಾಂಡು ಮಾರಾಯ!ʼʼ ಎಂದು ಉದ್ಗರಿಸುತ್ತಿದ್ದರು.

ʻʻಕ್ಯಾನ್ಸರಿಗೆ ಅದು ಒಳ್ಳೇ ಔಷಧವಂತೆ” ಎಂದು ಒಬ್ಬ ಹೇಳಿದರೆ, “ಹೋಗ್ಲಿ ಬಿಡು, ಆಳುಗಳ ತಪ್ಪಿನಿಂದ ದುರ್ವಾಸನೆ ಹಬ್ಬೋದು ಕಮ್ಮಿ ಆಯ್ತು” ಎಂದು ಇನ್ನೊಬ್ಬ ಹೇಳುತ್ತಿದ್ದ. ಈಗ ಮುಂಬೈಗೆ ಹೋಗೋಣ. ಅಲ್ಲಿನ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಸಿದ್ಧ ಜರ್ಮನ್‌ ಕಂಪನಿಯ ವಿರುದ್ಧ ಈ ಹೇತಾರಿ ಮರಕ್ಕೆ ಸಂಬಂಧಿಸಿದ ದಾವೆಯೊಂದು ಕಳೆದ ತಿಂಗಳು ಖುಲಾಸೆ ಆಯಿತು. 18 ವರ್ಷಗಳಿಂದ ಈ ಪ್ರಕರಣ ಆ ಕೋರ್ಟು ಈ ಕೋರ್ಟು ಸುತ್ತುತ್ತಿದ್ದುದು ಕೊನೆಗೂ ಮೋಕಳೀಕ್‌ ಆಯಿತು. ನನ್ನ ಲೇಖನದ ಮುಂದಿನ ಭಾಗವನ್ನು ನಾನು ಕಳೆದ ಜನವರಿ 16-31ರ ʼಡೌನ್‌ ಟು ಅರ್ಥ್‌ʼ ಪಾಕ್ಷಿಕ ಪತ್ರಿಕೆಯಿಂದ ಸಂಗ್ರಹಿಸಿದ್ದೇನೆ.

Advertisement

ಪ್ರಕರಣದ ಹಿನ್ನೆಲೆ ಕತೆ ಹೀಗಿದೆ: ಕೊಲ್ಹಾಪುರದ ʻಚಂದೋಲಿ ರಾಷ್ಟ್ರೀಯ ಉದ್ಯಾನʼದಲ್ಲಿ ಈ ಮರಗಳನ್ನು ಕದ್ದು ಸಾಗಿಸುವ ದಂಧೆ ನಡೆಯುತ್ತಿತ್ತು. 2005ರಲ್ಲಿ ಅರಣ್ಯ ಇಲಾಖೆಯವರು ಒಂದಿಷ್ಟು ಮರದ ತುಂಡು, ಚಕ್ಕೆಗಳನ್ನು ಹಿಡಿದರು. (ಇದರ ಈಗಿನ ಬೆಲೆ ಪ್ರತಿ ಕೇಜಿ ಚಕ್ಕೆಗೆ ₹200 ಇದೆ.) ಒಟ್ಟು 223 ಜನರ ಮೇಲೆ ದಾವೆ ಹೂಡಿ ತಪ್ಪಿತಸ್ಥರ ವಿರುದ್ಧ ಕೇಸ್‌ ಬಿಲ್ಡಪ್‌ ಮಾಡಲು ಹೊರಟರು. ಹೈದರಾಬಾದ್‌ ಮತ್ತು ಅಹ್ಮದಾಬಾದ್‌ ನಗರಗಳಿಗೂ ಹೋಗಿ ಅಲ್ಲೆಲ್ಲ ಈ ಕಟ್ಟಿಗೆಯನ್ನು ಕುದಿಸಿದ 1,110 ಕೇಜಿ ದ್ರಾವಣವನ್ನು ಜಪ್ತಿ ಮಾಡಿದರು. ಪಶ್ಚಿಮ ಬಂಗಾಳದ ಕಲ್ಯಾಣಿ ನಗರದಲ್ಲಿರುವ ಜರ್ಮನ್‌ ಔಷಧ ಕಂಪನಿ “ಫ್ರೆಸೆನಿಯಸ್‌ ಕಾಬಿ”ಯ ಅಂಗಳಕ್ಕೂ ಹೋದರು. (ಕಂಪನಿಯ ಆಗಿನ ಹೆಸರು ʻಡಾಬರ್‌ ಫಾರ್ಮಾ)

ಅಲ್ಲಿ ಹೇತಾರಿ ಮರದ ದ್ರಾವಣದಿಂದ ತಯಾರಾದ ಸಿಪಿಟಿ ಪುಡಿಯ ಡಬ್ಬಗಳು ಸಿಕ್ಕವು. ʻಸಿಪಿಟಿʼ ಎಂದರೆ ಕ್ಯಾನ್ಸರ್‌ ಕಿಮೊಥೆರಪಿಯಲ್ಲಿ ಬಳಸುವ ಔಷಧದ ತಯಾರಿಕೆ ಬೇಕಾದ ದ್ರವ್ಯ- ಅದರ ಪೂರ್ಣ ಹೆಸರು ʼಕಾಂಪ್ಟೊಥೆಸಿನ್‌ʼ. ಅಲ್ಲಿ ₹44 ಲಕ್ಷ ಮೌಲ್ಯದ 22 ಕೇಜಿ ಪುಡಿಯನ್ನು ಜಪ್ತಿ ಮಾಡಲಾಯಿತು. ಡಾಬರ್‌ ಕಂಪನಿಯ ಮೇಲೆ ಕೇಸ್‌ ಬಿತ್ತು. 18 ವರ್ಷಗಳ ಜಟಾಪಟಿಯ ನಂತರ ಈ ಕೇಸ್‌ ಬಿದ್ದೂ ಹೋಯಿತು. ಏಕೆಂದರೆ, ತಾನು ಖರೀದಿಸಿದ ಸಿಪಿಟಿ ಮೂಲತಃ ಕದ್ದ ಮಾಲಿನಿಂದ ತಯಾರಾಗಿದ್ದೆಂದು ತಮಗೆ ಗೊತ್ತೇ ಇರಲಿಲ್ಲ ಎಂದು ಡಾಬರ್‌ ಕಂಪನಿಯ (ಈಗಿನ ಜರ್ಮನ್‌ ವಾರಸುದಾರರು) ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣ ಅಲ್ಲಿಗೆ ವಜಾ ಆಯಿತು.

Advertisement

ಹೇತಾರಿ ಮರದಿಂದ ತಯಾರಾದ ಕಿಮೊಥೆರಪಿಯ ಒಂದು ಡೋಸ್‌ಗೆ ₹1.5-2 ಲಕ್ಷ ಬೆಲೆ ಇದೆ. ಔಷಧ ಮೂಲಿಕೆಗಳ ಕಳ್ಳ ಸಾಗಣೆ ದಂಧೆಯಿಂದಾಗಿ ಪಶ್ಚಿಮಘಟ್ಟಗಳ ಇಡೀ ಅರಣ್ಯಕ್ಕೆ ಕ್ಯಾನ್ಸರ್‌ ಬಂದಂತಾಗಿದೆ. ಪುಣೆ ವಿಶ್ವವಿದ್ಯಾಲಯದ ಒಂದು ಸಂಶೋಧನಾ ವರದಿಯ ಪ್ರಕಾರ ನಾರ್ಕ್ಯಾ ವೃಕ್ಷದಲ್ಲಿರುವ ಈ ಔಷಧೀಯ ಗುಣದಿಂದಾಗಿ ಅದು ದೇಶ-ವಿದೇಶಗಳಿಗೆ ಕಳ್ಳಸಾಗಣೆ ಆಗುತ್ತಿದೆ.

ಹಿಂದೆಲ್ಲ ಔಷಧ ತಯಾರಿಕೆಗೆಂದು ನಮ್ಮ ಅರಣ್ಯಗಳಲ್ಲಿ ನಾಟಿ ವೈದ್ಯರು ಸುತ್ತಾಡುತ್ತಿದ್ದರು. ಅವರ ಬೆನ್ನುಹತ್ತಿ ಹೋದ ದೊಡ್ಡ ಕಂಪನಿಗಳು ಅದೇ ಗಿಡಮೂಲಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ದೋಚಲು ತೊಡಗಿದ್ದವು. ಇಂಥ ಕಳ್ಳಸಾಗಣೆಗೆ ತಡೆ ಹಾಕಲೆಂದು 2002ರಲ್ಲಿ “ಜೀವಿವೈವಿಧ್ಯ ಕಾನೂನು” ಜಾರಿಗೆ ಬಂತು. ಪ್ರತಿ ರಾಜ್ಯದಲ್ಲೂ ʻಜೀವಿವೈವಿಧ್ಯ ಮಂಡಳಿʼ (ಬಯೊಡೈವರ್ಸಿಟಿ ಬೋರ್ಡ್‌) ಅಸ್ತಿತ್ವಕ್ಕೆ ಬಂತು. ಅದರ ಅನುಮತಿ ಪಡೆಯದೆ ಯಾವ ಕಂಪನಿಯೂ ಯಾವ ಜೈವಿಕ ಸಾಮಗ್ರಿಯನ್ನೂ ಉದ್ಯಮಕ್ಕೆ ಬಳಸಕೂಡದೆಂಬ ನಿಯಮ ಬಂತು.

Advertisement

ಅದರ ಒಂದು ಪ್ರಮುಖ ಕಲಮು ಏನಿತ್ತೆಂದರೆ, ಪ್ರತಿ ಪಂಚಾಯತ್‌ ಮಟ್ಟದಲ್ಲೂ ಒಂದು ಜೀವಿವೈವಿಧ್ಯ ಸಮಿತಿ ಇರಬೇಕು. ಅದು ತನ್ನ ಪರಿಧಿಯಲ್ಲಿ ಬರುವ ಎಲ್ಲ ಬಗೆಯ ಗಿಡಮೂಲಿಕೆಗಳ ದಾಖಲಾತಿ ಮಾಡಿರಬೇಕು. ಔಷಧ ಕಂಪನಿ ತನಗೆ ಬೇಕಿದ್ದ ಮೂಲಿಕೆಗಳಿಗೆ ಸೂಕ್ತ ಶುಲ್ಕವನ್ನು ಪಂಚಾಯತಕ್ಕೆ ತೆತ್ತು ಸಾಗಿಸಬೇಕು ಎಂದು ಕಾನೂನನ್ನು ಮಾಡಲಾಗಿತ್ತು. ಪಂಚಾಯತಕ್ಕೆ ಹೇರಳ ಆದಾಯವನ್ನು ತರಬಹುದಾಗಿದ್ದ ಬಹು ಮಹತ್ವದ ನಿಯಮ ಅದಾಗಿತ್ತು.

ಪರಿಸರ ರಕ್ಷಣೆಯ ಅನೇಕ ಚಳವಳಿಗಳಲ್ಲಿ ನಮ್ಮೊಂದಿಗೆ ಹೆಗಲು ಕೊಟ್ಟು ಓಡಾಡಿದ ಮಿತ್ರ ವೈ.ಬಿ. ರಾಮಕೃಷ್ಣರನ್ನು ನಮ್ಮ ರಾಜ್ಯದ ಮಂಡಳಿಯ ಮೊದಲ ಅಧ್ಯಕ್ಷರೆಂದು ಅಂದಿನ ಮುಖ್ಯಮಂತ್ರಿ ಯಡ್ಯೂರಪ್ಪ ನೇಮಕ ಮಾಡಿದರು. (ಇದೇ ಅವಧಿಯಲ್ಲಿ ʼಪಶ್ಚಿಮಘಟ್ಟ ಕಾರ್ಯಪಡೆʼ ಆರಂಭವಾಯಿತು, ಮಿತ್ರ ಅನಂತ ಅಶೀಸರ ಅದರ ಅಧ್ಯಕ್ಷರಾದರು. ʻಸಾವಯವ ಮಂಡಳಿʼ ಅಸ್ತಿತ್ವಕ್ಕೆ ಬಂತು; ಅದಕ್ಕೆ ಆನಂದ ಅಧ್ಯಕ್ಷರಾದರು. ಒಳ್ಳೆಯ ಕೆಲಸ ಮಾಡಿದಿರೆಂದು ನಾವೆಲ್ಲ ಯಡ್ಯೂರಪ್ಪನವರಿಗೆ ಶಾಭಾಸ್‌ ಹೇಳಿದ್ದೂ ಇದೆ. ಈ ಮೂವರೂ ತುಂಬ ಉತ್ಸಾಹದಿಂದ ಕೆಲಸ ಮಾಡಿದರು).

Advertisement

ವೈ.ಬಿ. ರಾಮಕೃಷ್ಣ ಜೀವಿ ವೈವಿಧ್ಯದ ಮಹತ್ವವನ್ನು ಸಾರಲೆಂದು ಕರಪತ್ರ, ಕಿರುಪುಸ್ತಕಗಳನ್ನು ಹೊರತಂದರು. ಜೈವಿಕ ಇಂಧನವನಗಳ ಸ್ಥಾಪನೆಗೆಂದು ಊರೂರು ಸುತ್ತಿದರು. ನಮ್ಮನ್ನೂ ಸುತ್ತಿಸಿದರು. ಮೂಲಿಕಾ ವನಗಳನ್ನು ರೂಪಿಸಿದರು. ಜೀವಿ ವೈವಿಧ್ಯ ದಾಖಲಾತಿ ಮಾಡುವ ಚಳವಳಿಯೇ ಆರಂಭವಾಯಿತು. ಅನಂತ ಅಶೀಸರ ಕೂಡ ಅದಕ್ಕೆ ಕೈಜೋಡಿಸಿದರು.  (ಇಂಧನವನದ ವಿಷಯದ ಮೇಲೆ ಒಂದು ಫೀಚರ್‌ ಫಿಲ್ಮ್‌ ಕೂಡ ಬಂತು. ಅದಕ್ಕೆ ನಾನೇ ಹಾಡನ್ನೂ ಬರೆದು ತುಸು ಆಕ್ಟಿಂಗ್‌ ಕೂಡ ಮಾಡಿದ್ದೆ. ಚಿತ್ರಕ್ಕೆ ಬಿಡುಗಡೆ ಭಾಗ್ಯ ಬರಲೇ ಇಲ್ಲ).

ಕುಲಾಂತರಿ ಬದನೆಯನ್ನು ರೂಪಿಸಿ, ಹೊಲಕ್ಕಿಳಿಸಲು ಮಾನ್ಸಾಂಟೊ ಕಂಪನಿ ಹುನ್ನಾರ ನಡೆಸಿತ್ತಲ್ಲ? ಅದನ್ನು ಮಣಿಸಿದ್ದು ನಮ್ಮ ಕರ್ನಾಟಕದ ಜೀವಿ ವೈವಿಧ್ಯ ಮಂಡಳಿ. ಅದರ ಅನುಮತಿ ಪಡೆಯದೇ ಉಡುಪಿಯ ಮಟ್ಟುಗುಳ್ಳ ಬದನೆಯಲ್ಲಿ ಏಕಾಣುಜೀವಿಯನ್ನು ತೂರಿಸಿ ಕುಲಾಂತರಿ ಮಾಡಿದ್ದೇ ಕಾನೂನು ಬಾಹಿರ ಎಂದು ನಮ್ಮ ಮಂಡಳಿ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದಿದ್ದು ಕಾನೂನಿನ ಬಿಗಿ ಹಿಡಿತಕ್ಕೆ ಅಪೂರ್ವ ನಿದರ್ಶನ.

Advertisement

ಈಗ ಮೋದಿಯವರ ಸರಕಾರ ಈ ಕಾನೂನನ್ನೇ ಸಡಿಲ ಮಾಡಿದೆ. ಏಕೆಂದರೆ ದೊಡ್ಡ ಕಂಪನಿಗಳು ಮೊದಲಿನಂತೆ ಎಲ್ಲೆಂದರಲ್ಲಿ ನುಗ್ಗಿ ಮೂಲಿಕೆಗಳನ್ನು ದೋಚಲು 2002ರ ಕಾನೂನಿನ ಪ್ರಕಾರ ಸಾಧ್ಯವಾಗುತ್ತಿರಲಿಲ್ಲ. ಕಳೆದ ವರ್ಷ ಸಂಸತ್ತಿನಲ್ಲಿ (ನಮ್ಮೆಲ್ಲರ ವಿರೋಧದ ನಡುವೆಯೂ) ಹೊಸದೊಂದು ತಿದ್ದುಪಡಿ ಮಾಡಲಾಯಿತು.

ಗಿಡಮೂಲಿಕೆಗಳ ಬಳಕೆಯನ್ನು ಆಯುಷ್‌ ಉದ್ಯಮಿಗಳು (ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೊಪಥಿ) ಔಷಧಕ್ಕೆಂದು ಎಲ್ಲಿಂದ ಬೇಕಾದರೂ ಮೂಲಿಕೆಗಳನ್ನು ಎತ್ತಬಹುದು, ಪಂಚಾಯತಕ್ಕೆ ಹಣ ಕೊಡಬೇಕಿಲ್ಲ, ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ ಎಂಬ ತಿದ್ದುಪಡಿ ಜಾರಿಗೆ ಬಂತು. ಸಾಕಲ್ಲ? ತನ್ನದು ʻಆಯುಷ್‌ʼ ಎಂದು ಹೇಳಿಕೊಂಡು ಯಾವ ಕಂಪನಿ ಬೇಕಿದ್ದರೂ ಅರಣ್ಯದಿಂದ ಏನನ್ನಾದರೂ ದೋಚಬಹುದು. ವಾಜಪೇಯಿ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಬಿಗಿ ಕಾನೂನು, ಈಗ ಮೋದಿಯವರ ಸರಕಾರದ ಅವಧಿಯಲ್ಲಿ ಸಡಿಲಗೊಂಡಿತು. ದೊಡ್ಡ ತಿಮಿಂಗಿಲಗಳು ಸಲೀಸಾಗಿ ಬಲೆಯ ದೊಡ್ಡ ಕಿಂಡಿಯಲ್ಲೇ ಪಾರಾಗಿ ಹೋಗುವಂತಾಯಿತು.

Advertisement

ಪರಿಸರ ರಕ್ಷಣೆಗೆ ಸಂಬಂಧಿಸಿದ ಅನೇಕ ಬಿಗಿ ಕಾನೂನುಗಳು ಹೀಗೆ ʼಬಿಸಿನೆಸ್‌ ಮಾಡುವವರಿಗೆ ಅನುಕೂಲʼ ಮಾಡಲೆಂದು ಈಗೀಗ ಸಡಿಲವಾಗಿವೆ. ಎಲ್ಲೋ ಕದ್ದುಮುಚ್ಚಿ ದುರ್ಗಂಧ ಸೂಸುತ್ತಿದ್ದ ಸಿಪಿಟಿ ಫ್ಯಾಕ್ಟರಿಗಳು ಈಗ ಬಹಿರಂಗವಾಗಿ ಕಾರ್ಯಾಚರಣೆ ಮಾಡಬಹುದಾಗಿದೆ. ಈಗ ಹೇಳಿ: ಈ ದುರ್ಗಂಧಕ್ಕೆ ಮೋದಿ ಕಾರಣರೆ?

ಅಂದಹಾಗೆ, ಹೇತಾರಿ ಚಕ್ಕೆಗಳ ಬೆಲೆ ಪ್ರತಿ ಕೇಜಿಗೆ ₹200ಕ್ಕೆ ಏರಿದೆ ಎಂದೆನಲ್ಲ? ನಿಮ್ಮ ತಲೆಯಲ್ಲಿ ಈಗ ಮೂರು ಬಗೆಯ ಆಲೋಚನೆಗಳು ಸುಳಿಯುವ ಸಾಧ್ಯತೆ ಇದೆ: 1. ಹೊಸ ಇಲೆಕ್ಟ್ರಿಕ್‌ ಗರಗಸ ಖರೀದಿ ಮಾಡಿ ಕಾಡಿಗೆ ಹೊರಡೋಣ. 2. ಹಾಗೆ ಹೊರಟವರ ಮೇಲೆ ಕಣ್ಣಿಡಲೆಂದು ಹೊಸ ದುರ್ಬೀನ್‌ ಖರೀದಿಸಿ, ವಿಡಿಯೊ ಮಾಡಿ, ವಕೀಲರನ್ನು ಸಂಪರ್ಕಿಸೋಣ. 3. ಈ ವೃಕ್ಷದ ಬೀಜಗಳನ್ನು ಆಯ್ದು ತಂದು ನರ್ಸರಿ ಮಾಡಿ, ಹೆಚ್ಚು ಹೆಚ್ಚು ಬೆಳೆಸೋಣವೆಂದು ಕರೆ ಕೊಡೋಣ. ಯಾವುದು ಹಿತಕಾರಿ ನಿಮಗೆ ಈ ಮೂರರೊಳಗೆ?

Advertisement

ಬರಹ – ನಾಗೇಶ ಹೆಗಡೆ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror