ಕೋವಿ ಮತ್ತು ಲೇಖನಿ ಹಿಂದೆ ಗೊರಿಲ್ಲಗಳ ಕಥೆ | ಲೇಖನಿ ಹಿಡಿದವನಿಗೆ ಇದ್ದ ತಾಳ್ಮೆ, ಸಂಯಮ ಕೋವಿ ಹಿಡಿದವನಿಗೆ ಇರಲಿಲ್ಲ…!

January 26, 2024
7:28 PM
ತಾಳ್ಮೆ, ಸಂಯಮದ ಬಗ್ಗೆ ಹರೀಶ್‌ ಗಂಗಾಧರ್‌ ಅವರು ಬರೆದಿರುವ ಬರಹ..

ಅದು ಪಶ್ಚಿಮ ಆಫ್ರಿಕಾದ(Western Africa) ದಟ್ಟ ಅಡವಿ. ಬಿಳಿಯ ಅನ್ವೇಷಕರು(British explorers)   ಅಲ್ಲಿಗೆ ಮೊದಲ ಬಾರಿ ಕಾಲಿಟ್ಟಾಗ ಆಶ್ಚರ್ಯ ಕಾದಿತ್ತು. ಅವರೆಂದೂ ನೋಡಿರದ ದೈತ್ಯ ಮತ್ತು ಬಲಶಾಲಿ ಮಂಗ(Monkey) ಒಂದು ಅವರ ಕಣ್ಣಿಗೆ ಬಿದ್ದಿತ್ತು. ಬೃಹತ್ ತೋಳುಗಳು, ಭಾರಿ ಗಾತ್ರದ ದೇಹ, ಚೂಪಾದ ಕೋರೆ ಹಲ್ಲುಗಳು, ಬಲಿಷ್ಠ ದವಡೆ, ಆವೇಶ ಭರಿತವೆಂಬಂತಿರುವ ಅಭಿವ್ಯಕ್ತಿ. ಆ ದಿನಗಳಲ್ಲಿ ಹೀಗಿರುವ ದೈತ್ಯ ಜೀವಿಯನ್ನು(giant creature)ಕಂಡ ಬಿಳಿಯರಿಗೆ ಅದನ್ನು ಬಹುಬೇಗ ಕೊಲ್ಲುವ ಆಲೋಚನೆ ಬಿಟ್ಟು ಬೇರೇನೂ ಹೊಳೆದಿರಲಿಲ್ಲ. ಹೀಗೆ ಗಂಭೀರ ಗೊರಿಲ್ಲಾಗಳ ಸಾಮೂಹಿಕ ಕಗ್ಗೊಲೆಗಳೇ ನೆಡೆದು ಹೋಯಿತು.

Advertisement
Advertisement
Advertisement

ಅಸಲಿಗೆ ದಟ್ಟಡವಿಯಲ್ಲಿ ಬಿಳಿಯರು ಗೊರಿಲ್ಲಾಗಳ ಮೇಲೆ ಗುಂಡು ಹಾರಿಸುವಾಗ, ಇಡೀ ಕುಟುಂಬ ತನ್ನ ಕಣ್ಣೆದುರೇ ಬಲಿಯಾಗುವುದನ್ನು ಕಂಡು, ಗುಂಡೇಟಿನಿಂದ ನೆತ್ತರು ಸುರಿಸುತ್ತಿದ್ದ ಪುಟಾಣಿ ಮರಿಗಳನ್ನು ನೋಡಿ ದೈತ್ಯ ಬೆಳ್ಳಿ ಬೆನ್ನಿನ ಗಂಡು ಗೊರಿಲ್ಲಾ ಕೋಪದಿ ಅರಚುತ್ತಾ ಗುಂಡು ಹಾರಿಸುವವರ ಕಡೆಗೆ ನುಗ್ಗುತಿತ್ತು. ಬಂದೂಕಿನ ನಳಿಗೆಯನ್ನು ಕಚ್ಚಿ ಪುಡಿ ಪುಡಿಮಾಡಿ ಕೈಗೆ ಸಿಕ್ಕ ಮನುಷ್ಯನನ್ನು ಸಿಗಿದು ಹಾಕುತಿತ್ತು. ಬದುಕುಳಿದು ಉಗ್ರ ರೂಪ ಕಂಡ ಬಿಳಿಯ ಯಾತ್ರಿಕರು ಗೊರಿಲ್ಲಾಗಳ ಕ್ರೌರ್ಯ, ರಕ್ತ ದಾಹ ಮತ್ತು ಹಿಂಸಾ ಪ್ರವೃತ್ತಿಯ ಕುರಿತು ಭಯಾನಕ ಕತೆಗಳನ್ನ ಹೆಣೆದರು. ಎಂದೂ ಗೊರಿಲ್ಲಾಗಳನ್ನು ಅಡವಿಯಲ್ಲಿ ನೋಡಿರದ ಜನರಿಗೆ, ಗೊರಿಲ್ಲಾ ಕ್ರೂರ, ನಿಷ್ಕರುಣೆಯ ಭಯಾನಕ ಮೃಗವಾಯಿತು.

Advertisement

ಕ್ರೂರ ಮೃಗದ ಘೋರ ಚಿತ್ರ ನೂರಾರು ವರ್ಷಗಳ ಕಾಲ ಹಾಗೆ ಉಳಿಯಿತು. ಜನರು ಅಡವಿಯಲ್ಲಿ ಗೊರಿಲ್ಲಾ ಎದುರಾದಾಗ ಥಟ್ಟನೆ ಗುಂಡು ಹಾರಿಸುತ್ತಿದ್ದರು. ಕಳೆದ ಅರವತ್ತು ವರುಷಗಳಿಂದ ಈಚೆಗೆ ಪ್ರಾಣಿಶಾಸ್ತ್ರಜ್ಞರು ಆಫ್ರಿಕಾದ ಕಾಡಿಗೆ ಕಾಲಿಟ್ಟು ಜಾಗರೂಕತೆಯಿಂದ ಗೊರಿಲ್ಲಾಗಳ ಬದುಕನ್ನು ಅಧ್ಯಯನ ಮಾಡಿದ ಮೇಲೆ ಹಲವು ನಿಜಾಂಶಗಳು ಹೊರಬಿದ್ದವು. ಪ್ರಾಣಿಶಾಸ್ತ್ರಜ್ಞರು ಕೋವಿ ಹಿಡಿದಿರಲಿಲ್ಲ ಬದಲಿಗೆ ಅವರ ಬಳಿ ಕ್ಯಾಮೆರಾ ಮತ್ತು ಟಿಪ್ಪಣಿ ಮಾಡಿಕೊಳ್ಳಲು ಲೇಖನಿ- ಪುಸ್ತಕಗಳಿದ್ದವಷ್ಟೇ. ಯಾವುದೇ ಪೂರ್ವಗ್ರಹೀ ಆಲೋಚನೆಗಳಿಲ್ಲದೆ, ಮನಸಿನಲ್ಲಿ ಕೇಡಿಲ್ಲದೆ ಅವರು ಗೊರಿಲ್ಲಾಗಳನ್ನು ಅಡವಿಯಲ್ಲಿ ನೋಡತೊಡಗಿದರು. ಅವರು ದೂರದಲ್ಲಿ ಸುಮ್ಮನೆ ಕುಳಿತು ದಿನಗಟ್ಟಲೆ ಗೊರಿಲ್ಲಾಗಳನ್ನು ವೀಕ್ಷಿಸಿದರು. ಅವು ಅಡವಿಯಲ್ಲಿ ಮುಂದೆ ಮುಂದೆ ಸಾಗಿದಂತೆ ಹಿಂಬಾಲಸಿದರು. ಗೊರಿಲ್ಲಾಗಳ ದೈನಂದಿನ ಬದುಕು ಟಿಪ್ಪಣಿ ಮಾಡಿಕೊಳ್ಳತ್ತಾ ಹೋದಂತೆ ಒಂದು ಅಗಾಧ ಗಾತ್ರದ ಗೊರಿಲ್ಲಾ ಡೈರಿ ಸಿದ್ದವಾಯಿತು.

ಈ ಡೈರಿಗಳಲ್ಲಿ ಗೊರಿಲ್ಲಾಗಳ ವಾಸ್ತವ ಚಿತ್ರಣವಿತ್ತು. ಗೊರಿಲ್ಲಾಗಳು ಆಕ್ರಮಣಕಾರಿಯಾದ ಪ್ರಾಣಿಗಳಲ್ಲ ಅವು ನಾಚಿಕೆ ಸ್ವಭಾವದವು ಎಂಬ ಸತ್ಯ ಬಯಲಾಗಿತ್ತು. ನಾವು ಶಾಂತಿ ಸಂಯಮದಿಂದ ವರ್ತಿಸಿದರೆ ಅವು ಕೂಡ ಶಾಂತಿಯಿಂದಲೇ ಇರುತ್ತವೆ ಎಂಬ ಹೊಸ ಸತ್ಯ, ಗೊರಿಲ್ಲಾಗಳು ವಿನಾಕಾರಣ ಮನುಷ್ಯರ ಮೇಲೆರಗಿ ಸಿಗಿದು ಹಾಕುತ್ತವೆ ಎಂಬ ಪ್ರಚಲಿತ ವಿಷಯವನ್ನು ಹಸಿ ಹಸಿ ಸುಳ್ಳೆಂದು ಸಾಬೀತು ಪಡಿಸಿತ್ತು. ಕುಟುಂಬ ಅಪಾಯದಲ್ಲಿದ್ದಾಗ ಮಾತ್ರ ಬೆಳ್ಳಿ ಬೆನ್ನಿನ ಗಂಡು ಗೊರಿಲ್ಲಾ ಆಕ್ರಮಣ ಮಾಡುತ್ತದೆ, ರಕ್ಷಣೆಗೆಂದು ಮಾತ್ರ ಗೊರಿಲ್ಲಾಗಳು ಆಕ್ರಮಣ ಮಾಡುತ್ತವೆಯೆಂಬ ಪುರಾವೆಗಳನ್ನು ವಿಜ್ಞಾನಿಗಳು ಲೋಕದ ಮುಂದಿಟ್ಟರು. ಕ್ರೂರಿಗಳು ಮನುಷ್ಯರೇ ಹೊರತು ಗೊರಿಲ್ಲಾಗಳಲ್ಲವೆಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದರು.

Advertisement

ನೋಡಲು ಕ್ರೂರಿಯಂತಿದ್ದ ಗೊರಿಲ್ಲಾಗಳು ತಿನ್ನುತ್ತಿದ್ದುದು ಬರಿ ಎಲೆಗಳನ್ನು. ಲಕ್ಷಾಂತರ ವರುಷಗಳಿಂದ ಎಲೆ, ಕಾಂಡಗಳನ್ನು ತಿನ್ನುತ್ತಾ ಅಡವಿಯಲ್ಲಿ ಬದುಕಿದ ಗೊರಿಲ್ಲಾ ಕ್ರಮೇಣ ದೈತ್ಯವಾಯಿತು. ಎಲೆ ಮತ್ತು ಕಾಂಡಗಳು ತೀರಾ ಸಾಧಾರಣ ಆಹಾರಗಳು. ಗೊರಿಲ್ಲಾಗಳು ಬದುಕಲು ಬೆಳಕಿನ ಕಿರಣವಿರುವ ದಿನದ ಹನ್ನೆರಡು ಗಂಟೆಗಳಲ್ಲಿ ಆರರಿಂದ ಏಳು ಗಂಟೆಗಳು ಎಲೆ ತಿನ್ನುವುದರಲ್ಲೇ ಕಳೆಯಬೇಕಾಯಿತು. ನಿರಂತರ ಎಲೆಗಳಿಗಾಗಿ ಮಾಡುವ ತೀವ್ರ ಹುಡುಕಾಟ ಅದರ ಜೀವನಶೈಲಿ ಮತ್ತು ದೇಹವನ್ನು ರಚಿಸಿತು.

ಕಾಂಡಗಳನ್ನು ಸಿಗಿದು ಅಗೆಯಲು ದವಡೆಗಳು ಬಲಿಷ್ಠವಾದವು. ಬಲಿಷ್ಠ ದವಡೆಗಳಿಗಾಗಿ ಸ್ನಾಯುಗಳು ವಿಕಸನಗೊಂಡವು, ಭಾರಿ ಸ್ನಾಯುಗಳಿಗೆ ಅಂಟಿಕೊಳ್ಳಲು ಭಾರಿ ಮೂಳೆಗಳು ಬೆಳೆದವು, ಹಲ್ಲುಗಳು ದೊಡ್ಡದಾಗಿ ಚೂಪಾದವು, ತಲೆಯ ಗಾತ್ರ ವೃದ್ಧಿಯಾಗಿ ಹೆಲ್ಮೆಟ್ ಧರಿಸಿದಂತೆ ಭಾಸವಾಯಿತು. ಈ ಹೆಲ್ಮೆಟ್ ಗಾತ್ರದ ತಲೆ ಬುರುಡೆ, ಚೂಪಾದ ಹಲ್ಲು, ದವಡೆ, ಮೂಳೆ, ಸ್ನಾಯುಗಳೆಲ್ಲವೂ ಆಹಾರದಿಂದ, ಆಹಾರಕ್ಕಾಗಿ ವಿಕಸನಗೊಂಡಿದ್ದೆ ಹೊರತು ಮನುಷ್ಯರನ್ನು ಹಿಡಿದು ಕೊಲ್ಲಲು ಅಲ್ಲ.

Advertisement

ಈ ದೈತ್ಯ ಗಾತ್ರದ ಗೊರಿಲ್ಲಾಗಳು ಚಿಂಪಾಂಜಿಗಳಂತೆ ಮರವನ್ನು ಹತ್ತಲಾರವು. ಚಿಂಪಾಂಜಿಗಳು ಮರಗಳನ್ನು ಸರಾಗವಾಗಿ ಏರಿ ಹಣ್ಣು ಹಂಪಲುಗಳನ್ನೂ ಕಿತ್ತು ತಿಂದರೆ, ಗೊರಿಲ್ಲಾಗಳು ಬರಿಯ ಎಲೆ, ಕಾಂಡಗಳನ್ನು ತಿಂದೆ ತೃಪ್ತಿಪಡುತ್ತವೆ. ಎಲೆಗಳಿಂದಲೇ ಹಾಸಿಗೆ ಮಾಡಿಕೊಂಡು ಗೊರಿಲ್ಲಾಗಳು ಮಲಗುತ್ತವೆ. ದಿನಕ್ಕೊಂದು ಹೊಸ ಹಾಸಿಗೆ ಮಾಡಿಕೊಳ್ಳುವುದರಿಂದ ಕ್ರಿಮಿ ಕೀಟಗಳ ಭಾದೆ ಇವಕ್ಕಿಲ್ಲ. ಗಂಡು ಗೊರಿಲ್ಲಾ ತನ್ನ ಕುಟುಂಬದ ಮೇಲೆ ಸದಾ ನಿಗಾ ಇಡುತ್ತದೆ. ಕಾಡಿನ ಚಿರತೆಗಳಾಗಿರಬಹುದು, ಅಥವಾ ಹೆಬ್ಬಾವಾಗಿರಬಹುದು, ಗಂಡು ಗೊರಿಲ್ಲಾವನ್ನು ಕೆಣಕುವ ಧೈರ್ಯ ಮಾಡುವುದಿಲ್ಲ.

ಹೆಣ್ಣು ಗೊರಿಲ್ಲಾ ತನ್ನ ಮರಿಗಳು ದೊಡ್ಡವಾಗುವವರೆಗೂ ಅಂದರೆ ಸುಮಾರು ನಾಲ್ಕು ವರುಷ ಎದೆಯಾಲು ಉಣಿಸುತ್ತದೆ. ಈ ಸಮಯದಲ್ಲಿ ಹೆಣ್ಣು ಗೊರಿಲ್ಲಾ ಗರ್ಭ ಧರಿಸುವುದಿಲ್ಲ ಕೂಡ. ಮರಿಗಳು, ಕುಟುಂಬ ಏಕೆ ಮುಖ್ಯವಾಗುತ್ತದೆ, ಗಂಡು ಗೊರಿಲ್ಲಾ ಕುಟುಂಬದ ಮೇಲೆ ಎಷ್ಟು ಕಾಳಜಿವಹಿಸುತ್ತದೆ, ಕುಟುಂಬ ಪ್ರಾಣಾಪಾಯದಲ್ಲಿದ್ದಾಗ ಮಾತ್ರ ಏಕಷ್ಟು ಕೆರಳುತ್ತದೆ ಎಂಬ ವಿಷಯ ಕೋವಿ ಹಿಡಿದವರಿಗೆ ಅರ್ಥವೇ ಆಗಿರಲಿಲ್ಲ.

Advertisement

ಮರಿಗಳು ಬೆಳೆದ ಮೇಲೂ ಅವುಗಳನ್ನು ಕುಟುಂಬದಿಂದ ಹೊರ ದಬ್ಬುವ ಕೆಲಸ ಗಂಡು ಅಥವಾ ಹೆಣ್ಣು ಗೊರಿಲ್ಲಾ ಮಾಡುವುದಿಲ್ಲ. ಸ್ವಯಿಚ್ಛೆಯಿಂದ ಹೊರ ನಡೆದ ಮರಿಗಳು ಪ್ರತ್ಯೇಕ ಕುಟುಂಬ ಕಟ್ಟಿಕೊಳ್ಳುತ್ತವೆ. ಗಂಡು ಗೊರಿಲ್ಲಾಕ್ಕೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಹೆಣ್ಣು ಗೊರಿಲ್ಲಾಗಳೊಡನೆ ಸಂಬಂಧವಿದ್ದು, ಅವೆಲ್ಲಾ ಒಟ್ಟಿಗೆ ಜೀವಿಸುತ್ತವೆ. ಹೆಣ್ಣು ಗೊರಿಲ್ಲಾಗಳ ಆದ್ಯತೆ ಗಂಡು ಗೊರಿಲ್ಲಾ ಮತ್ತು ತನ್ನ ಮರಿಗಳು ಮಾತ್ರ. ಈ ಕುಟುಂಬಗಳಲ್ಲಿ ಜೂನಿಯರ್ ಅಥವಾ ಸೀನಿಯರ್ ಸಂಗಾತಿಗಳೆಂಬ ಶ್ರೇಣಿಗಳಿಲ್ಲಾ ಸರ್ವರಿಗೂ ಸಮಬಾಳು ಸಮಪಾಲು.

ಪರಮ ಶಾಂತ ಸ್ವರೂಪಿಯಾದ ಗಂಡು ಗೊರಿಲ್ಲಾ ಕೆರಳುವುದು ಮತ್ತೊಂದು ಗಂಡು ಗೊರಿಲ್ಲಾ ಎದುರಾದಾಗ ಮಾತ್ರ. ಆಗಲು ನೇರ ಸಂಘರ್ಷಕ್ಕೆ ಇಳಿಯದೆ ಎದೆ ಬಡಿದುಕೊಂಡು ಆಕ್ರೋಶ ವ್ಯಕ್ತ ಪಡಿಸುತ್ತವೆ, ಕಾಲು ಕೆರದುಕೊಂಡು ಅಬ್ಬರಿಸುತ್ತವೆ, ಗಿಡ ಮರಗಳನ್ನು ಬೇರುಸಮೇತ ಕೀಳುತ್ತವೆ, ಸಸ್ಯ ಸಂತತಿಯನ್ನು ಹಾಳುಗೆಡಹುತ್ತವೆ, ಘರ್ಜಿಸುತ್ತವೆ, ಕೂಗಾಡುತ್ತವೆ, ಬೊಗಳುತ್ತವೆ… ಇಂತಹ ಸಂದರ್ಭಗಳಲ್ಲಿ ಇಡೀ ಅಡವಿ ನಡುಗಿದರು ಕಲಹದಿಂದ ನೆತ್ತರು ಹರಿವುದು ಅಪರೂಪ.

Advertisement

ಒಂದೂವರೆ ಮೀಟರ್ ಉದ್ದ ಮತ್ತು 180 ಕೆಜಿ ತೂಕವಿರುವ ಗೊರಿಲ್ಲಾಗಳು ಕಲಹ ಗದ್ದಲಗಳಿಲ್ಲದೆ, ಶಾಂತ ಸ್ವಭಾವದಿಂದ ಜೀವನ ಸಾಗಿಸಿದರು ಅವು ಅವನತಿಯ ಅಂಚಿನಲ್ಲಿವೆ. ಕಾಡು ನಾಶವಾಗಿ ಬೇಸಯದ ಭೂಮಿಯಾದ್ದರಿಂದ, ಕಟ್ಟುಕತೆಗಳು ಗಟ್ಟಿಯಾಗಿ ಜನರ ಮನಸಲ್ಲಿ ಉಳಿದಿದ್ದರಿಂದ ಗೊರಿಲ್ಲಾಗಳ ಸಂತತಿ ಬಹುಬೇಗ ಕಣ್ಮರೆಯಾಗಲಿದೆ. ಕೋವಿ ಹಿಡಿದು ಅಡವಿಗೆ ನುಗ್ಗಿದ ಬಿಳಿಯರ ಬಾಯಲ್ಲಿ ಹರಿದಾಡಿದ ಕತೆಗಳು ಮುಂದೆ ಕಿಂಗ್ ಕಾಂಗ್ ನಂತಹ ಯಶಸ್ವಿ ಹಾಲಿವುಡ್ ಚಿತ್ರಗಳಾದವು. ಗುಂಡಿನ ಸುರಿಮಳೆಗೈದರು ಸಾಯದ ಗೊರಿಲ್ಲಾ ಆ ಚಿತ್ರದಲ್ಲಿದುದು ಒಂದು ಸೋಜಿಗವೇ ಸರಿ.

ಕೋವಿ ಹಿಡಿದವ ನೋಡಿದ ಗೊರಿಲ್ಲಾ ಮತ್ತು ತದೇಕಚಿತ್ತದಿಂದ ಗಮನಿಸುತ್ತಾ ಲೇಖನಿಯಿಂದ ಟಿಪ್ಪಣಿ ಮಾಡಿಕೊಂಡವ ನೋಡಿದ ಗೊರಿಲ್ಲಾಗಳಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಲೇಖನಿ ಹಿಡಿದವನಿಗೆ ಇದ್ದ ತಾಳ್ಮೆ, ಸಂಯಮ ಕೋವಿ ಹಿಡಿದವನಿಗೆ ಇರಲಿಲ್ಲ. ಕೋವಿ ಹಿಡಿದವನ ಗುರಿ ಆಕ್ರಮಿಸುವುದಾಗಿತ್ತು, ಕೊಲ್ಲುವುದಾಗಿತ್ತು, ಎಲ್ಲಾ ಜೀವಿಗಳಿಗಿಂತ ಮನುಷ್ಯ ಶ್ರೇಷ್ಠನೆಂದು ಸಾರುವುದಾಗಿತ್ತು. ಕೋವಿ ಹಿಡಿದವನ, ಶ್ರೇಷ್ಠತೆ ನಂಬಿದವನ ಬಹುದೊಡ್ಡ ವ್ಯಸನ ಸುಳ್ಳು, ಭಯ, ಹಿಂಸೆ ಮತ್ತು ಆಕ್ರಮಣ. ಲೇಖನಿ ಹಿಡಿದವನ ಗುರಿ ಅರ್ಥ ಮಾಡಿಕೊಳ್ಳುವುದಾಗಿತ್ತು, ಸತ್ಯದ ಹುಡುಕಾಟವಾಗಿತ್ತು, ಅರಿವಿನ ದಾರಿಯಾಗಿತ್ತು. ನಾವು ಕೋವಿ ಹಿಡಿಯಬೇಕೇ ಅಥವಾ ಲೇಖನಿ ಹಿಡಿಯಬೇಕೆ?

Advertisement
ಬರಹ :
Harish Gangadhar

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror