ಪಪ್ಪಾಯಿ ಬೆಳೆ ಬೆಳೆಯಲು ನಮ್ಮ ಕರಾವಳಿ ಕೂಡ ಸೂಕ್ತ ಪ್ರದೇಶ. ಆದರೆ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆದವರು ವಿರಳ. ಕೇವಲ ಬೆರಳೆಣಿಕೆಯ ಮಂದಿ ಬೆಳೆದದ್ದಿದೆ. ನಮ್ಮ ಅಡಿಕೆ ತೋಟ, ಹಿತ್ತಲಲ್ಲಿ ಕೇವಲ ಅದಾಗಿಯೇ ಬಿದ್ದು ಬೆಳೆಯುವುದು ಬಿಟ್ಟರೆ ವಿಶೇಷ ಕಾಳಜಿ ಕೊಟ್ಟು ಬೆಳೆಯುವುದು ಕಡಿಮೆ. ದಕ್ಷಿಣ ಕನ್ನಡ, ಉತ್ತರ ಕನ್ನಡದ ಭೌಗೋಳಿಕ ಹಾಗೂ ಹವಾಮಾನ ಎಲ್ಲಾ ಒಂದೇ. ಇಲ್ಲೊಬ್ಬರು ಪ್ರಗತಿ ಪರ ರೈತ ವಿದೇಶಿ ತಳಿ ಪಪ್ಪಾಯ ಬೆಳೆದು ಚಿನ್ನದ ಬೆಳೆ ತೆಗೆಯುತ್ತಿದ್ದಾರೆ.
ಹಳ್ಳಿಯಲ್ಲಿ ಬೆಳೆಯೋ ಈ ಹಣ್ಣುಗಳು ಸಮುದ್ರದಾಚೆಗೂ ಮಾರ್ಕೆಟ್ #Market ಹೊಂದಿದೆ. ಅರೇಬಿಯಾ ದೇಶದಿಂದ ಹಿಡಿದು ಅಮೆರಿಕಾದವರೆಗೂ ಈ ಹಣ್ಣಿನ ಡಿಮಾಂಡ್ ಇದೆ. ಇದನ್ನು ಬೆಳೆದವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದ ಬಸವರಾಜ್ ನಡುವಿನಮನಿ. ಕೆಲವು ವರ್ಷದ ಹಿಂದೆ ಇವರು ತಮ್ಮ ತೋಟದಲ್ಲಿ ತೈವಾನ್ ತಳಿಯ ಪಪ್ಪಾಯಿ ಬೆಳೆದು, ಈಗ ಈ ಸಣ್ಣ ಹಳ್ಳಿಯಿಂದ ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಅಮೇರಿಕಾದವರೆಗೆ ತನ್ನ ಮಾರ್ಕೆಟ್ ವಿಸ್ತರಿಸಿಕೊಂಡಿದ್ಧಾರೆ. ಆ ಮೂಲಕ ವಿದೇಶಗಳಲ್ಲೂ, ಬಸವರಾಜ್ ನಡುವಿನಮನಿ ಅವರು ಬೆಳೆದ ಪಪ್ಪಾಯಿಗೆ ಭರ್ಜರಿ ಬೇಡಿಕೆ ಇದೆ.
ತೋಟಗಾರಿಕಾ ಬೆಳೆ : ಎಂಟು ವರ್ಷದ ಹಿಂದೆ ಸರ್ಕಾರಿ ಹುದ್ದೆಗಾಗಿ ಓದಿಕೊಂಡಿದ್ದ ಬಸವರಾಜ್, ಸಾಂಪ್ರದಾಯಿಕ ಕೃಷಿಯ ಕಡೆ ಮುಖ ಮಾಡಿ ಊರಿನ ಪ್ರಗತಿಪರ ಕೃಷಿಕ ಎನ್ನಿಸಿಕೊಂಡರು. ಹುಲಿಹೊಂಡದ ಇವರ ಜಮೀನಿನಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳು, ಬಾಳೆ, ಪಪ್ಪಾಯಿ, ಪೇರಲು, ಗೇರು ಹಲವು ಗಿಡ ಮರಗಳಿವೆ. ಅದರಲ್ಲೂ ಅರಣ್ಯ ಕೃಷಿಗೆ ಆದ್ಯತೆ ನೀಡಿ ಶ್ರೀಗಂಧ, ಬೀಟೆ, ಹತ್ತಿ ಬೆಳೆಯುತ್ತಿದ್ದಾರೆ. ಸುಮಾರು 3500ರಷ್ಟು ರಕ್ತಚಂದನ ಗಿಡ ಬೆಳೆಸುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಇವರ ಪಪ್ಪಾಯಿ ಕೃಷಿ ವಿಶೇಷವಾಗಿದೆ.
ವಿದೇಶದಲ್ಲೂ ಬೇಡಿಕೆ : 2500 ಪಪ್ಪಾಯಿ ಗಿಡ ಹೊಂದಿರುವ ಇವರು ಟನ್ ಗಟ್ಟಲೇ ಪಪ್ಪಾಯಿ ವ್ಯಾಪಾರ ಮಾಡುತ್ತಾರೆ. ಟ್ರೋಪಿಕಾಲ್ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಇವರು ಪಪ್ಪಾಯಿಯು ಸೌದಿ ಅರೇಬಿಯಾ, ಇರಾಕ್, ಇರಾನ್ ಸೇರಿದಂತೆ ಅರಬ್ ದೇಶಗಳಲ್ಲಿ, ಆಸ್ಟ್ರೇಲಿಯಾ, ಅಮೇರಿಕಾಗಳಲ್ಲಿ ಮಾರಾಟವಾಗುತ್ತದೆ.
ತೈವಾನ್ ರೆಡ್ ಲೇಡಿ ಹೆಸರಿನ ಈ ಹಣ್ಣನ್ನು ಕಳೆದ ಮೂರು ವರ್ಷದಿಂದ ಬೆಳೆಯುತ್ತಾ ಬಂದಿದ್ದಾರೆ. ಒಂದು ಗಿಡ 120 ಕೆಜಿ ತೂಕದ ಹಣ್ಣನ್ನು ತಂದುಕೊಡುತ್ತದೆ. ಮೂರು ತಿಂಗಳಿನ ಈ ಬೆಳೆಯಲ್ಲಿ 2500 ಗಿಡಗಳಿಂದ ಸುಮಾರು 300 ಟನ್ ನಷ್ಟು ಪಪ್ಪಾಯಿಯನ್ನು ಇವರು ಬೆಳೆಯುತ್ತಿದ್ದಾರೆ. ಇನ್ನು ನವೆಂಬರ್, ಡಿಸೆಂಬರ್ ನಲ್ಲಂತೂ ಕಟಾವಿನ ಸಮಯವಾಗಿದ್ದು, ಇವರ ತೋಟಕ್ಕೆ ಬಂದರೆ ಪಪ್ಪಾಯಿ ಜಗತ್ತಿಗೆ ಬಂದ ಅನುಭವ ಕೊಡುತ್ತೆ. ಒಟ್ಟಿನಲ್ಲಿ ಬಸವರಾಜ್ ನಡುವಿನಮನಿ ಅವರ ಕೃಷಿ ಸಾಧನೆ ನಿಜಕ್ಕೂ ಶ್ಲಾಘನೀಯ.
(ಕೃಪೆ : ಅಂತರ್ಜಾಲ )