Advertisement
ಅನುಕ್ರಮ

ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ

Share
ಶಿಕ್ಷಣದಲ್ಲಿ ಪ್ರದೇಶದ ಭಾಷೆಯನ್ನು ಬಿಡುವುದು ಸರಿಯಲ್ಲ. ಏಕೆಂದರೆ ಆಯ್ದ ಪ್ರದೇಶದ ಪರಿಸರದ ಮಹತ್ವ ಮತ್ತು ಸಾಮರ್ಥ್ಯವನ್ನು ತಿಳಿಸುವುದೇ ಅಲ್ಲಿನ ಭಾಷೆ. ಒಂದು ನಿರ್ದಿಷ್ಟ ಪರಿಸರದ ಆವರಣದಲ್ಲಿ ಬದುಕುವ ನಮಗೆ ಅಲ್ಲಿ ವಿಕಸನಗೊಂಡ ಭಾಷೆಯೂ ಒಂದು ಸಂಪನ್ಮೂಲವೇ ಆಗಿದೆ. ಈ ಸಂಪನ್ಮೂಲವನ್ನು ಅವಗಣಿಸುವುದೆಂದರೆ ಆಯಾ ಪ್ರದೇಶದ ನೈಸರ್ಗಿಕ ಸಂಪತ್ತನ್ನು ತಿರಸ್ಕರಿಸಿದಂತೆಯೇ ಆಗುತ್ತದೆ. ಉದಾಹರಣೆಗೆ ಮಲೆನಾಡಿನ ಸಂಪದ್ಭರಿತ ಕಾಡುಗಳನ್ನು ಕಡಿದು ರಬ್ಬರ್ ಕಾಡುಗಳನ್ನು ಬೆಳೆಸಿದ ರೈತರು ದುಷ್ಟರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಈ ದುಷ್ಟರಿಣಾಮಗಳು ಅವರಿಗಷ್ಟೇ ಸೀಮಿತವಾಗುವುದಿಲ್ಲ. ಅವು ಇಡೀ ನಿಸರ್ಗದ ಶಕ್ತಿಯನ್ನು ಹ್ರಾಸಗೊಳಿಸುತ್ತದೆ. ಹಾಗೆಯೇ ಸ್ಥಳೀಯ ಭಾಷೆಯನ್ನು ಬಿಟ್ಟು ಪರದೇಶೀಯ ಭಾಷೆಯನ್ನು ಅನುಕರಿಸುವುದೆಂದರೆ ನಮ್ಮ ಸಾಂಸ್ಕೃತಿಕ ಬದುಕಿನ ಸೂತ್ರಗಳಿಂದ ಕಳಚಿಕೊಂಡಂತಾಗುತ್ತದೆ.  ಒಮ್ಮೆ ಕಳಚಿಕೊಂಡರೆ ಮತ್ತೆ ಬೆಸೆಯುವುದು ಕಷ್ಟ. ಹಾಗಾಗಿ ಕರ್ನಾಟಕದಲ್ಲಿ ಹಾಗೂ ಇತರ ರಾಜ್ಯಗಳಲ್ಲಿಯೂ ಪ್ರಾದೇಶಿಕ ಭಾಷೆಯನ್ನು ಕಸದ ಬುಟ್ಟಿಗೆ ಎಸೆದರೆ ಮತ್ತೆ ಅವುಗಳನ್ನು ಪುನರುಜ್ಜೀವನಗೊಳಿಸುವುದು ಕಷ್ಟ. ವ್ಯಕ್ತಿಗಳ, ಕುಟುಂಬಗಳ ಹಾಗೂ ಗ್ರಾಮಗಳ ಸಂಬಂಧ ಮತ್ತು ಸಹಬಾಳ್ವೆಯನ್ನು ಸ್ಥಳೀಯ ಭಾಷೆಯ ಉಳಿಸಿಕೊಳ್ಳುವಿಕೆಯ ಮೂಲಕವೇ ಸಾಧಿಸಬೇಕು. ವಿದೇಶೀ ತಾಂತ್ರಿಕತೆಯನ್ನು ನಮ್ಮ ಭಾಷೆಯ ಪರಿಕಲ್ಪನೆಗಳ ಸೃಷ್ಟಿಯೊಂದಿಗೆ ನಮ್ಮದಾಗಿಸಬೇಕು. ಅನೇಕ ಯುರೋಪಿಯನ್ ದೇಶಗಳು, ಜಪಾನ್ ಹಾಗೂ ಚೀನಾಗಳಲ್ಲಿ ಇದನ್ನು ಸಾಧಿಸಲಾಗಿದೆ. ಅವರೂ ಇಂಗ್ಲಿಷನ್ನು ಕಲಿಯುತ್ತಾರೆ, ಆದರೆ ತಮ್ಮ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಬಿಡುವುದರ ಮೂಲಕ ಅಲ್ಲ.
ಕನ್ನಡ ಅನ್ನದ ಭಾಷೆ ಅಲ್ಲ ಎನ್ನುವುದೊಂದು  ಆತ್ಮವಂಚನೆ. ಏಕೆಂದರೆ ಕನ್ನಡವು ಸವಿರುಚಿಯ ಭಾಷೆ. ವಿದೇಶೀ ತಾಂತ್ರಿಕತೆಯ ಪರಿಕಲ್ಪನೆಗಳನ್ನು ಭಾಷಾಂತರಿಸಿ ಕನ್ನಡವನ್ನು ಬೆಳೆಸಿದ  ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಉದಾಹರಣೆಗೆ ಕ್ಲಬ್‍ಹೌಸ್ ಎಂಬುದು ಒಂದು ಆಧುನಿಕ ತಾಂತ್ರಿಕತೆ. ಅದರಲ್ಲಿ ನಿರಂತರವಾಗಿ ಕನ್ನಡದಲ್ಲೇ ಸಭೆಗಳನ್ನು ನಡೆಸುವ ಅನೇಕ ಗುಂಪುಗಳಿವೆ. ಬಿಸಿನೆಸ್ ಸಕ್ಸಸ್ ಮಂತ್ರ BSM ಎಂಬ ಒಂದು ಗುಂಪು ಇದೆ. ಅದರ ಹೆಸರಿನಲ್ಲಿ ಇಂಗ್ಲಿಷ್ ಪದಗಳೇ ಇದ್ದರೂ ಅದರಲ್ಲಿ ವಿಚಾರ ಮಂಡನೆ ಮತ್ತು ಚರ್ಚೆಗಳೆಲ್ಲವೂ ಕನ್ನಡದಲ್ಲೇ ಆಗುತ್ತವೆ. ಅದು ಕನ್ನಡಿಗ ವಾಣಿಜ್ಯೋದ್ಯಮಿಗಳದೇ ಒಂದು ಗುಂಪು. ಇಂಜಿನಿಯರ್‍ಗಳು, ವಿಜ್ಞಾನಿಗಳು, ಪ್ರಯೋಗಶೀಲ ರೈತರು, ಕೃಷಿಪದವೀಧರು, ವೈದ್ಯರು ಹೀಗೆ ವಿವಿಧ ಉದ್ಯೋಗದವರಿದ್ದಾರೆ. ಅನಿವಾರ್ಯವಾಗಿ ಇಂಗ್ಲಿಷ್ ಬಳಸಿದ ಸಂದರ್ಭಗಳಿದ್ದರೂ ಅವುಗಳನ್ನು ಕನ್ನಡದಲ್ಲಿ ವಿವರಿಸಿ ಅರ್ಥಮಾಡಿಕೊಳ್ಳುವ ಸೌಲಭ್ಯವಿದೆ. ಸಾವಿರಕ್ಕಿಂತಲೂ  ಹೆಚ್ಚು ಸದಸ್ಯರು ಕರ್ನಾಟಕದ ಉದ್ದಗಲದಿಂದಲೂ ದಿನಾಲೂ ಏಳರಿಂದ ಎಂಟು ಗಂಟೆಯ ತನಕ ಭಾಗವಹಿಸುತ್ತಾರೆ. ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇದು ನಿರಂತರವಾಗಿ ನಡೆಯುತ್ತಿದೆ. ಈ ಸಭೆಯಲ್ಲಿ ತೆಲುಗು, ತಮಿಳು, ಮರಾಠಿ ಭಾಷೆಗಳ ಉದ್ಯಮಿಗಳೂ ಕನ್ನಡ ಕಲಿತು ಮಾತಾಡುತ್ತಿರುವುದಕ್ಕೆ ಅವರಿಗೆ ಕನ್ನಡ ಅನ್ನದ ಭಾಷೆ ಆಗಿರುವುದೇ ಕಾರಣವಾಗಿದೆ. ಕರ್ನಾಟಕದಲ್ಲಿ ಉದ್ಯಮ ನಡೆಸಿ ಬದುಕನ್ನು ಕಟ್ಟಿಕೊಂಡಿರುವಾಗ ಸಹಜವಾಗಿ ಕನ್ನಡವು ಅನ್ನದ ಭಾಷೆಯಾಗಿದೆ. ಇಲ್ಲಿಯ ಕನ್ನಡವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ನೈತಿಕ ಪ್ರಜ್ಞೆ ಅವರೆಲ್ಲರಲ್ಲಿ ಇದೆ. ಮರಾಠಿ ಮನೆ ಮಾತಿನ ನಾನೂ ಇದರ ಸದಸ್ಯನಾಗಿ ನಿತ್ಯಕಾಣುವ ಸತ್ಯ ಇದು.
ಕ್ಲಬ್‍ಹೌಸ್‍ನಲ್ಲಿ ಯಾವುಯಾವುದೋ ಊರುಗಳಲ್ಲಿ ಕುಳಿತು ಸಂಭಾಷಿಸುತ್ತ ತಮ್ಮ ಚಿಂತನೆಗಳನ್ನು ಕನ್ನಡದಲ್ಲಿ ಹಂಚಿಕೊಳ್ಳುವವರ ಅದೆಷ್ಟೋ ಗುಂಪುಗಳಿವೆ. ಅವುಗಳಲ್ಲಿ ದೀರ್ಘ ಕಾಲಿಕ ಹಾಗೂ ತಾತ್ಕಾಲಿಕ ಗುಂಪುಗಳೂ ಇವೆ. ಅವು ಬೇರೆ ಬೇರೆ ಸಮಯದಲ್ಲಿ ಕ್ರಿಯಾಶೀಲವಾಗುತ್ತವೆ. ಕಥಾಪರಂಪರೆ ಎಂಬ ಗುಂಪಿನಲ್ಲಿ ಭಾಗವಹಿಸುವರೆಲ್ಲರೂ ಕನ್ನಡದಲ್ಲೇ ಅನ್ನ ತಿಂದು ಸುಖಿಗಳಾಗಿರುವವರು. ವಿಶ್ವವಾಣಿ ಕ್ಲಬ್‍ಹೌಸ್ ಕೂಡಾ ಅದೇ ರೀತಿ ಸಾವಿರಕ್ಕೂ ಮಿಕ್ಕಿದ ದಿನಗಳಲ್ಲಿ ದಿನಾಲೂ ಸಂಜೆ 6.55 ರಿಂದ 8.05 ರ ವರೆಗೆ ವಿವಿಧ ವಿಷಯಗಳ ಮೇಲೆ ಶುದ್ಧ ಕನ್ನಡದಲ್ಲೇ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ. ಯಾವುದೋ ನಗರ, ಪಟ್ಟಣ, ಹಳ್ಳಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯ ಪಡೆದವರು ಈ ಕ್ಲಬ್ ಹೌಸ್‍ನಲ್ಲಿ ಕನ್ನಡದಲ್ಲೇ ಮಾತಾಡಿ ತಮ್ಮ ಪರಿಚಯದ ವಲಯವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಇಂಗ್ಲಿಷ್‍ನಲ್ಲಿ ಇರುವ ಜ್ಞಾನವನ್ನು ಕನ್ನಡದಲ್ಲಿ ಕೊಡುವ ಮೂಲಕ ಇವರು ಜ್ಞಾನಪ್ರಸರಣ ಹಾಗೂ ಕನ್ನಡ ಭಾಷೆಯ ಬೆಳವಣಿಗೆಯನ್ನು ಮಾಡುತ್ತಾರೆ. ಕನ್ನಡ ಪುಸ್ತಕಗಳನ್ನು ಓದುವವರು ಕಡಿಮೆಯಾಗಿದ್ದಾರೆ ಎಂಬ ಪರಿಸ್ಥಿತಿಗೆ ಉತ್ತರವಾಗಿ ಕನ್ನಡದಲ್ಲಿ ಮಾತಾಡಿ ಕಲಿಯುವ ಹಾಗೂ ಕೇಳಿ ಕಲಿಯುವ ಜಾಲತಾಣವು ಕನ್ನಡದಲ್ಲೇ ಅನ್ನ ಕೊಡುತ್ತಿದೆ.
ಕನ್ನಡವು ಅನ್ನದ ಭಾಷೆಯಾಗಿ ಉಪಯುಕ್ತವೆಂಬುದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಈಗ ಕರ್ನಾಟಕದಲ್ಲಿ ವಾಸಿಸುವ ಆರು ಕೋಟಿ ಕನ್ನಡಿಗರು ವ್ಯವಹರಿಸುವುದು ಕನ್ನಡದಲ್ಲೇ ತಾನೆ? ಅದೆಷ್ಟೋ ಮಾರುಕಟ್ಟೆಗಳಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಕನ್ನಡದಲ್ಲೇ ಆಗುತ್ತದೆ. ಯಕ್ಷಗಾನ ಕಲಾವಿದರಿಗೆ ಕನ್ನಡವೇ ಅನ್ನದ ಭಾಷೆ. ನಾಟಕದ ರಂಗಗಳಲ್ಲಿ ಮಿಂಚುವವರೂ ಕನ್ನಡವನ್ನೇ ಉಸಿರಾಡುತ್ತಾರೆ. ಕನ್ನಡ ವಾರ್ತಾವಾಹಿನಿಗಳಲ್ಲೂ ಮನರಂಜನಾ ವಾಹಿನಿಗಳಲ್ಲೂ ಕನ್ನಡ ಸಾಕಷ್ಟು ಬಳಕೆಯಾಗುತ್ತದೆ. ಅಲ್ಲದೆ ವೀಕ್ಷಕರ ಸಂಖ್ಯೆಯೂ ಸಾಕಷ್ಟಿದೆ. ಇಲ್ಲವಾದರೆ ಕನ್ನಡದಲ್ಲೇ ಅಷ್ಟೊಂದು ಜಾಹಿರಾತುಗಳು ಕಾಣಸಿಗಲು ಸಾಧ್ಯವಿಲ್ಲ. ಕಿರುಚಿತ್ರಗಳ ನಿರ್ಮಾಣ ಮತ್ತು ಪ್ರಸಾರ ಕಡಿಮೆಯಾಗಿಲ್ಲ. ಬಹಳ ಮುಖ್ಯವಾದ ಉದಾಹಣೆಯೆಂದರೆ ಹೊಸ ಅಲೆಯ ನಾಟಕಗಳು ಕೂಡಾ ಜನಪ್ರಿಯವಾಗಿವೆ. ಹೆಗ್ಗೋಡಿನ ನೀನಾಸಂ ನಾಟಕ ತಂಡದವರ ಪ್ರದರ್ಶನಗಳ ಛಾಯೆಯಲ್ಲಿ ವಿವಿಧ ಜಿಲ್ಲೆಯಲ್ಲಿ ಹೊಸ ನಾಟಕಗಳು ಜನರಂಜನೆಯ ಖ್ಯಾತಿ ಹೊಂದಿವೆ. ಸುಳ್ಯದ ಡಾ. ಜೀವನರಾಂ ಈಗ ಪ್ರಸಿದ್ಧ ಮತ್ತು ಬೇಡಿಕೆಯ ನಾಟಕ ನಿರ್ದೇಶಕರಾಗಿದ್ದಾರೆ. ಅವರು ಕನ್ನಡದ ಸಾಹಿತ್ಯದಿಂದಲೇ ಕಥೆಗಳನ್ನು ಆಯ್ಹು ಕನ್ನಡದಲ್ಲೇ ನಾಟಕಗಳನ್ನು ಪ್ರಸ್ತುತ ಪಡಿಸುವಾಗ ಸಾವಿರಾರು ಪ್ರೇಕ್ಷಕರು ಬಂದು ನೋಡುತ್ತಿರುವುದು ಕನ್ನಡವು ಅನ್ನದ ಭಾಷೆ ಅಲ್ಲ ಎನ್ನುವುದನ್ನು ಅಲ್ಲಗಳೆಯುತ್ತದೆ. ಜೀವನರಾಂರವರು ತಮ್ಮ ನಾಟಕಗಳನ್ನು ಕನ್ನಡದಲ್ಲೇ ರಾಷ್ಟ್ರೀಯ ರಂಗಭೂಮಿಯಲ್ಲೂ ಪ್ರದರ್ಶಿಸಿ ಬಹುಮಾನ ಗಳಿಸಿ ಕನ್ನಡಕ್ಕೆ ಮನ್ನಣೆ ತಂದವರು. ಪ್ರಸಿದ್ಧ ಜಾದೂಗಾರ ಶ್ರೀ ಕುದ್ರೋಳಿ ಗಣೇಶ್ ರವರು ತಮ್ಮ ಪ್ರದರ್ಶನಗಳಲ್ಲಿ ಕನ್ನಡವನ್ನೇ ಬಳಸುತ್ತಾರೆ. ಅದರಿಂದಾಗಿ ಅವರ ಆದಾಯಕ್ಕೆ ಕೊರತೆ ಬಂದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಕನ್ನಡದ ಜೀವ ತೆಗೆಯುವ ಮಾತನ್ನು ಎಡಪಂಥೀಯ ಕನ್ನಡ ಸಾಹಿತಿಗಳು ಮಾತಾಡಿ ಇಂಗ್ಲಿಷ್ ಶಾಲೆಗಳ ಬೆಂಬಲಕ್ಕೆ ನಿಲ್ಲುವುದೆಂದರೆ ಅದು ಭಾಷೆ ಮತ್ತು ಸಂಸ್ಕೃತಿಯ ಪತನಕ್ಕಾಗಿ ಮಾಡಿದ ದುಡಿಮೆ ಎನ್ನಿಸುತ್ತದೆ.
ಕಾರ್ಕಳದ ಶ್ರೀಮತಿ ವಂದನಾ ರೈ ಎಂಬ ಶಿಕ್ಷಕಿಯವರಿದ್ದು ಇನ್ನೊಂದು ಉದಾಹರಣೆ. ತನ್ನ ವಿದ್ಯಾರ್ಥಿಗಳಿಗೆ ಕನ್ನಡದ ಹಾಡುಗಳೊಂದಿಗೆ ನೃತ್ಯ ಸಹಿತವಾಗಿ ಲವಲವಿಕೆಯಿಂದ ಅವರು ಕಲಿಸುವ ಅನೇಕ ವೀಡಿಯೋಗಳು ಇಂದು ಅನುಕರಿಸಲ್ಪಡುತ್ತಿವೆ. ಇತ್ತೀಚೆಗೆ ಪ್ರಭಾವಶಾಲಿ ವ್ಯಕ್ತಿ  (Influencer)   ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಅವರು ಕನ್ನಡವೂ  ಅನ್ನದ ಭಾಷೆ ಎಂಬ ಮಾತಿಗೆ ಸಾಕ್ಷಿಯಲ್ಲವೆ? ಬೆಂಗಳೂರಲ್ಲಿ ‘ಬುಕ್ ಬ್ರಹ್ಮ’ ದಂತಹ ವೇದಿಕೆಗಳು ಕನ್ನಡ ಸಾಹಿತ್ಯದ ಮೇರು ಕೃತಿಗಳನ್ನು ಮೇರು ಸಾಹಿತಿಗಳ ಮೂಲಕ ಪರಿಚಯಿಸುತ್ತಿರುವಾಗ ಕನ್ನಡ ಅಸ್ತಿತ್ವದ ಭರವಸೆ ಹೆಚ್ಚುತ್ತದೆ.  ಸಾಹಿತ್ಯ ಸಮ್ಮೇಳನಗಳನ್ನು ಕನ್ನಡದ ಜಾತ್ರೆಗಳಂತೆ ಮಾಡಿದಾಗ ಅಲ್ಲಿ ಸೇರುವ ಲಕ್ಷಾಂತರ ಜನಸ್ತೋಮದ ಪ್ರಮಾಣವನ್ನು ಕಂಡ ಬಳಿಕವೂ ಕನ್ನಡದ ಎಡಚ ಸಾಹಿತಿಗಳಿಗೆ ತಮ್ಮ ಘೋಷಣೆಯನ್ನು ನಿಲ್ಲಿಸಬೇಕೆಂದು ಅನ್ನಿಸದೆ ಇರುವುದು ಒಂದು ದುರಂತ.
ಆಧುನಿಕ ತಾಂತ್ರಿಕತೆಯನ್ನು ಬಳಕೆಗೆ ತೆಗೆದುಕೊಳ್ಳುವಲ್ಲಿ ಕನ್ನಡಿಗರೇನೂ ಹಿಂದೆ ಬಿದ್ದಿಲ್ಲ. ಕಂಪ್ಯೂಟರ್ ಬಳಕೆಗೆ ಬೇಕಾದ ಕನ್ನಡದ ಕೀಲಿಮಣೆಯನ್ನು ಕನ್ನಡಿಗ ಪೆÇ್ರ.ಕೆ.ಪಿ. ರಾವ್ ರವರೇ ಮಾಡಿದ್ದಾರೆ. ಕಂಪ್ಯೂಟರ್ ಕೀಬೋರ್ಡ್‍ನಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಶ್ರೀ ಗುರುಪ್ರಸಾದ್ ಎಂಬ ತಜ್ಞ ಇಂಜಿನಿಯರು ಮಾಡಿದ್ದಾರೆ. ಇದಲ್ಲದೆ ಕನ್ನಡದಲ್ಲಿ ಬರಹ, ನುಡಿ ಇತ್ಯಾದಿ ತಂತ್ರಾಂಶಗಳ ಬಳಕೆಯಾಗುತ್ತಿವೆ. ಇವುಗಳ ಉಪಯೋಗದೊಂದಿಗೆ ಪೆÇ್ರ.ಯು.ಬಿ. ಪವನಜರು ಕನ್ನಡದ ವಿಕಿಪಿಡಿಯಾ ತಯಾರಿಸಿ ಬೆಳೆಸುತ್ತಿದ್ದಾರೆ. ಅನೇಕ ಕನ್ನಡ ಪ್ರಾಧ್ಯಾಪಕರು, ಲೇಖಕರು ಹಾಗೂ ವಿದ್ಯಾರ್ಥಿಗಳು ಮಾಹಿತಿಗಳನ್ನು ತುಂಬುತ್ತಿದ್ದಾರೆ. ಇದರಿಂದಾಗಿ ಮಾಹಿತಿಗಳನ್ನು ಹುಡುಕುವವರಿಗೆ ಯಥೇಷ್ಟ ಸಂಗ್ರಹಾಲಯವು ಕನ್ನಡದ ವಿಕಿಪಿಡಿಯಾದಲ್ಲೇ ಲಭ್ಯವಿದೆ. ಅರ್ಥಾತ್ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವ ಬಹುಮುಖ ಪ್ರಯತ್ನಗಳು ನಡೆಯುತ್ತಿವೆ.
ಇನ್ನು ಕರ್ನಾಟಕದಲ್ಲಿ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಸ್ವೋದ್ಯೋಗವನ್ನು ಮಹಾನಗರಗಳಲ್ಲಿ ಒಂದು  ಉದ್ಯಮವಾಗಿ ನಡೆಸುವವರು ಹುಟ್ಟಿಕೊಂಡಿದ್ದಾರೆ. ಈ ನಗರಗಳಿಗೆ ಉದ್ಯೋಗಾರ್ಥಿಗಳಾಗಿ ಬಂದ ಪರಭಾಷಿಕರಿಗೆ ಕನ್ನಡ ಕಲಿಯುವುದು ಒಂದು ಅರ್ಹತೆಯಾಗಿದೆ. ಹಾಗೆಯೇ ಸೌಲಭ್ಯವೂ ಆಗಿದೆ. ಹಾಗಾಗಿ ಕನ್ನಡ ಕಲಿಸಬಲ್ಲ ಪದವೀಧರರಿಗೆ ಅದು ಒಂದು ಅನ್ನದ ದಾರಿಯಾಗಿದೆ. ಕನ್ನಡದವರು  ಪರಭಾಷಿಕರಲ್ಲಿ ಅವರದೇ ಭಾಷೆಯಲ್ಲಿ ಮಾತಾಡುವ ಉದಾರಿಗಳಾದರೂ ಮಾತುಕತೆಯಲ್ಲೇ ಕನ್ನಡ ಕಲಿಸಬಲ್ಲ ಜಾಣರೂ ಆಗಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?

ಅಡಿಕೆ ಎಲೆಚುಕ್ಕಿ ರೋಗ ವ್ಯಾಪಕವಾಗಿದೆ. ಮಲೆನಾಡು ತಪ್ಪಲು ಭಾಗಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗ…

7 hours ago

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ

ಉತ್ತರ ಪ್ರದೇಶ ಸರ್ಕಾರವು ಕಿಸಾನ್ ಪಾಠಶಾಲೆ ಕಾರ್ಯಕ್ರಮದ ಮೂಲಕ 2025–26 ಹಂಗಾಮಿನಲ್ಲಿ 20.15…

16 hours ago

ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ

ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಆಹ್ವಾನ ಮಾಡಿದೆ.…

16 hours ago

ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ

ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು…

17 hours ago

ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!

ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ…

17 hours ago

ಯಶಸ್ವಿನಿ ಕಾರ್ಡ್ ಅರ್ಜಿ ಪ್ರಾರಂಭ

ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದದ ದೊಡ್ಡ ಮಟ್ಟದ…

17 hours ago