ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯ ಶಾಲೆಯ ಕರುಣಾಜನಕ ಕಥೆ ಇದು. ಸ್ವಾತಂತ್ರ್ಯ ಬಂದು 76 ವರ್ಷ ಕಳೆಯುತ್ತಾ ಬಂದರೂ ಇಂದಿಗೂ ಎಷ್ಟೋ ಸರಕಾರಿ ಶಾಲೆಗಳಿಗೆ ಸರಿಯಾದ ಕಟ್ಟಡ ಇಲ್ಲ. ಮರದ ಕೆಳಗೆ, ಸಮುದಾಯ ಭವನದ ಅಡುಗೆ ಕೋಣೆಯಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ಅಷ್ಟಕ್ಕೂ ಇದು ಯಾವುದೋ ಹಳ್ಳಿಯ ಮೂಲೆಯಲ್ಲಿರುವ ಶಾಲೆಯಲ್ಲ, ಬದಲಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ನಗರದ ವ್ಯಾಪ್ತಿಯಲ್ಲಿ ಹಳೇ ಮಂಡ್ಲಿಯ ಪಂಪ್ ಹೌಸ್ ಪಕ್ಕದಲ್ಲಿರುವ ಮರಳಯ್ಯನ ಮಠ ಇದೆ. ಈ ಮಠದ ಸಮೂದಾಯ ಭವನ ಮತ್ತು ಆವರಣದಲ್ಲಿ ಸರ್ಕಾರಿ ಶಾಲೆ ನಡೆಸಲಾಗುತ್ತಿದೆ. ಈ ಮಠದ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ. ಇದರ ಪಕ್ಕದಲ್ಲೇ ಮಠದ ಆವರಣದಲ್ಲಿ ನ್ಯೂ ಮಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ತರಗತಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ಕೇವಲ ಒಂದೇ ಒಂದು ಸಮೂದಾಯ ಭವನ. ತಿಂಗಳಿಗೆ ಆರು ಸಾವಿರ ಬಾಡಿಗೆ ಶಿಕ್ಷಣ ಇಲಾಖೆ ನೀಡುತ್ತದೆ. 4, 5 ಮತ್ತು 6 ಮೂರು ಕ್ಲಾಸ್ ಗಳು ಇಲ್ಲಿಯೇ ನಡೆಯುತ್ತಿವೆ. ಬಡ ಸರಕಾರಿ ಶಾಲೆಯ ಮಕ್ಕಳು ಅಂದರೆ ಯಾರು ತಾನೇ ಗಮನ ಹರಿಸುತ್ತಾರೆ. 4 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಕೊಠಡಿ ಮರದ ಕೆಳಗೆ, 5ನೇ ಕ್ಲಾಸ್ ಸಮುದಾಯ ಭವನದ ಅಡುಗೆ ಕೋಣೆಯ ತಗಡಿನ ಶೆಡ್ ನಲ್ಲಿ, 6ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಸಮುದಾಯ ಭವನದಲ್ಲಿ ಹೀಗೆ ಮೂರು ಕ್ಲಾಸ್ ನ ತರಗತಿಗಳ ಪಾಠ ಇಲ್ಲಿ ನಡೆಯುತ್ತಿದೆ. ನಿತ್ಯ ಸ್ಮಶಾನ ಪಕ್ಕದಲ್ಲೇ ಮತ್ತು ಮರ ಮತ್ತು ತಗಡಿನ ಶೆಡ್ ಕೆಳಗೆ ಮಕ್ಕಳು ಅಪಾಯದಲ್ಲಿ ಮಕ್ಕಳು ನಿತ್ಯ ಪಾಠ ಕೇಳಬೇಕು. ಕಳೆದ ಎರಡು ವರ್ಷಗಳಿಂದ ಕೊಠಡಿ ಇಲ್ಲದೇ ಮೂರು ತರಗತಿ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.
ಪೋಷಕರು ಸ್ಮಶಾನ ಪಕ್ಕದಲ್ಲಿ ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಮಕ್ಕಳ ಟಿಸಿಯನ್ನು ಪಡೆದುಕೊಂಡು ಬೇರೆ ಶಾಲೆಗೆ ಪೋಷಕರು ಸೇರಿದ್ದಾರೆ. ಸರಕಾರಿ ಶಾಲೆ ಉಳಿಸಬೇಕು. ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಬೇಕೆಂದು ಸಿಎಂ ನಿಂದ ಹಿಡಿದು ಶಿಕ್ಷಣ ಸಚಿವರು ಸೇರಿದಂತೆ ಎಲ್ಲರೂ ಹೇಳುತ್ತಾರೆ. ಅವರ ಮಾತಿನಲ್ಲಿರುವ ಕಾಳಜಿಯು ಅವರ ಕೃತಿಯಲ್ಲಿ ಕಂಡು ಬರುವುದಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಡ ದಲಿತ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸದೇ ಇರುವುದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇಸರ ಮೂಡಿಸಿದೆ.
ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 175 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದರು. ಶಾಲೆಯಲ್ಲಿ 8 ಶಿಕ್ಷಕರು ವರ್ಗವಿದೆ. ಆದರೆ ಸಮಸ್ಯೆ ಇರೋದು ಕಟ್ಟಡದ್ದು. ಕಳೆದ 3 ವರ್ಷಗಳ ಹಿಂದೆ ಸುರಿದ ಅತಿಯಾದ ಮಳೆಗೆ ಕೊಠಡಿಗಳು ಬಿದ್ದು ಹೋಗಿದೆ. ಬಿದ್ದು ಹೋಗಿರುವ ಕೊಠಡಿ ಬದಲಿಗೆ ಹೊಸ ಕೊಠಡಿಗಳ ಭಾಗ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 8 ಹೊಸ ಕೊಠಡಿ ಕಾಮಗಾರಿ ನಡೆಯುತ್ತಿದೆ. ಆದರೆ ಒಂದೂವರೆ ವರ್ಷದಿಂದ ಅದು ಇನ್ನೂ ಪೂರ್ಣಗೊಂಡಿಲ್ಲ. ಸರಕಾರ ಬದಲಾಗುತ್ತಿದ್ದಂತೆ ಅನುದಾನ ಕುಂಠಿತಗೊಂಡಿದೆ. ಗುತ್ತಿಗೆದಾರ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಕೊಠಡಿ ಕಾಮಗಾರಿ ಕೆಲಸ ನಿಲ್ಲಿಸಿದ್ದಾರೆ. ನಿತ್ಯ ಮೂಲ ಶಾಲೆಯಿಂದ ತಾತ್ಕಾಲಿಕ ದೇವಸ್ಥಾನದ ಆವರಣದ ತಾತ್ಕಾಲಿಕ ಕೊಠಡಿಗಳಿಗೆ ಮೂರು ತರಗತಿಯ ಮಕ್ಕಳು ಓಡಾಡಬೇಕಿದೆ.
ಮದ್ಯಾಹ್ನ ಬಿಸಿಯೂಟಕ್ಕೆ ಮೂಲ ಶಾಲೆಗೆ ಬಂದು ಊಟ ಮಾಡಿಕೊಂಡು ಮತ್ತೆ ತಾತ್ಕಾಲಿಕ ಕೊಠಡಿಗಳಿಗೆ ಮಕ್ಕಳು ತೆರಳಬೇಕು. ಶಿವವಮೊಗ್ಗ ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಇರುವುದರಿಂದ ಮಕ್ಕಳು ನಿತ್ಯ ಅಪಾಯದಲ್ಲೇ ಅಂದಾಜು 1 ಕಿ.ಮೀ ನಡೆದುಕೊಂಡು ಹೋಗಿ ವಾಪಸ್ ಬರುತ್ತಿದ್ದಾರೆ. ಶಾಲಾ ಮಕ್ಕಳಿಗೆ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಈ ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ದುಬಾರಿ ದುನಿಯಾದಲ್ಲಿ ಬಡವರು, ದಲಿತ ಕೂಲಿ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದುವ ಸಾಮರ್ಥ್ಯ ಇಲ್ಲ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ವಿಧಿಯಿಲ್ಲದೇ ವಿದ್ಯಾಭ್ಯಾಸ ಮುಂದುವರಿಸಿದ್ಧಾರೆ.
ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಶಾಲಾ ಕೊಠಡಿ ಸಮಸ್ಯೆಗೆ ಪರಿಹಾರ ಸಿಕಿಲ್ಲ. ಮಕ್ಕಳು ನಿತ್ಯ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರಕಾರಿ ಬಡ ಮಕ್ಕಳ ನೋವು ಕೂಗು ಯಾರಿಗೆ ಕೇಳಿಸದೇ ಇರುವುದು ಮಾತ್ರ ವಿಪರ್ಯಾಸ.
– ಅಂತರ್ಜಾಲ ಮಾಹಿತಿ
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…