ಕರ್ನಾಟಕ ನದಿಗಳ ತವರೂರು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅನೇಕ ನದಿಗಳು ಉಗಮಗೊಳ್ಳುತ್ತವೆ. ರೈತಾಪಿ ವರ್ಗಕ್ಕೆ ಈ ನದಿಗಳೇ ನೀರಿನ ಮೂಲ. ಕಡು ಬೇಸಿಗಯಲ್ಲೂ ನದಿಗಳು ಕೃಷಿಗೆ ನೀರು ಒದಗಿಸುತ್ತವೆ. ನಮ್ಮ ಪೂರ್ವಜರು ಕಟ್ಟಿದ ವಿವಿಧ ನಾವಿನ್ಯತೆಯ ಅಣೆಕಟ್ಟುಗಳು ಇದನ್ನು ಸಾಧ್ಯವಾಗಿಸಿವೆ. ರಾಜ್ಯದಲ್ಲಿ ಅನೇಕ ಜಲಾಶಯಗಳಿವೆ. ಆದರೆ ಈ ಜಲಾಶಯ ಮಾತ್ರ ವಿಶೇಷ. ಹಾಗೆ ಈ ಜಲಾಶವನ್ನು ನೋಡಿರುವವರು ಬಹು ವಿರಳ. ಇದು ವರ್ಷಪೂರ್ತಿ ನೀರಿನಲ್ಲೇ ಮುಳುಗಿರುತ್ತದೆ. ಈ ಜಲಾಶಯ ಕಾಣಲು ಸಿಗೋದು ಹತ್ತಾರು ವರ್ಷಗಳಿಗೊಮ್ಮೆ ಮಾತ್ರ! ಶಿವಮೊಗ್ಗ ಜಿಲ್ಲೆಯ ಶರಾವತಿ ಒಡಲಲ್ಲಿ ಮುಳುಗಿ ಹೋಗಿರುವ ರಾಜ್ಯದ ಹಳೆಯ ಜಲಾಶಯ ಇದು.
ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಿಂತ ಮೊದಲು, ಅಂದರೆ 20 ವರ್ಷಗಳ ಹಿಂದೆ ಇನ್ನೊಂದು ಜಲಾಶಯ ನಿರ್ಮಿಸಲಾಗಿತ್ತು. ಶರಾವತಿ ನದಿಗೆ ಅಡ್ಡಲಾಗಿ ಮೊದಲು ಹಿರೇಭಾಸ್ಕರ ಎಂಬ ಡ್ಯಾಂನ್ನು ಸರ್.ಎಂ.ವಿಶ್ವೇಶ್ವರಯ್ಯನವರು ನಿರ್ಮಿಸಿದ್ದು. ಶರಾವತಿ ಹಾಗೂ ಎಣ್ಣೆ ಹೊಳೆ ಸಂಗಮ ಸ್ಥಾನದ ಹಿರೇಬಚ್ಚಗಾರು ಎಂಬಲ್ಲಿ ಸಮುದ್ರ ಮಟ್ಟದಿಂದ 1778 ಅಡಿ ಎತ್ತರದಲ್ಲಿ ಡ್ಯಾಂ ನಿರ್ಮಾಣಗೊಂಡಿತ್ತು.