ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಮಾಡುವುದರಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣುತ್ತಿದ್ದವೆ. ಸಾಂಪ್ರದಾಯಿಕ ಕೃಷಿಯಿಂದ ಲಾಭದಾಯಕವಾದ ವಾಣಿಜ್ಯ ಬೆಳೆ, ತೋಟಗಾರಿಕಾ ಕೃಷಿಯತ್ತ ರೈತರು ಸಾಗುತ್ತಿದ್ದಾರೆ. ಇನ್ನೂ ಕೆಲವರು ಮಿಶ್ರ ಬೇಸಾಯದಲ್ಲಿ ಮಾಡಿ ಆದಾಯ ತೆಗೆಯುತ್ತಿದ್ದಾರೆ. ವಿದ್ಯಾವಂತರೂ ಇತ್ತೀಚೆಗೆ ಕೃಷಿಯತ್ತ ವಾಲುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯನ್ನು ವಿಸ್ತಾರ ಮಾಡುತ್ತಿದ್ದಾರೆ. ಗ್ರಾಮೀಣ ಬದುಕನ್ನು ನೆಚ್ಚಿಕೊಳ್ಳುತ್ತಿದ್ದಾರೆ.ಅಂತಹ ಯುವಕರಿಗೆ ಇಲ್ಲೊಬ್ಬರು ಕೃಷಿಕರು ಮಾದರಿಯಾಗಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯ ರಾಜನಗರ ಬ್ಲಾಕ್ನ ಭಟ್ಸಿಮಾರ್ ಗ್ರಾಮದ ಕೃಷಿ ತಜ್ಞ ಅಶುತೋಷ್ ಠಾಕೂರ್ ಎಂಬುವವರು ಹಲವು ವರ್ಷಗಳಿಂದ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.ಅವರು ತಮ್ಮ ತೋಟದಲ್ಲಿ ಮಾವಿನ ಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದಾರೆ. ಸುಮಾರು 3 ಎಕರೆಯಲ್ಲಿ ಮಾವು ಕೃಷಿ ಮಾಡುತ್ತಿರುವ ಇವರು ವಿವಿಧ ರೀತಿಯ ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಇದರಿಂದ ಅವರು ಉತ್ತಮ ಲಾಭ ಪಡೆಯುತ್ತಾರೆ.
ಮೂರು ಎಕರೆಯ ಮಾವಿನ ತೋಟದಲ್ಲಿ ಆಮ್ರಪಾಲಿ, ತೋಟಫಲಿ, ಲಾಂಗ್ಡಾ, ಸಿಂಧೂರಿ, ದುಸ್ಸೆರಿ ಮೊದಲಾದ 100 ಬಗೆಯ ರಸಭರಿತ ಮಾವಿನ ಮರಗಳಿವೆ. ಇವರ ತೋಟದ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ವ್ಯಾಪಾರಿಗಳು ಮುಂಗಡವಾಗಿ ಹಣ ನೀಡಿ ನಂತರ ತೆಗೆದುಕೊಂಡು ಹೋಗುತ್ತಾರೆ.
ಅಶುತೋಷ್ ತಮ್ಮ ಜಮೀನಿನಲ್ಲಿ ಮಾವು ಸೇರಿದಂತೆ ವಿವಿಧ ಬಗೆಯ ಹಣ್ಣುಗಳ ಉದ್ಯಾನವನ್ನೂ ಸಿದ್ಧಪಡಿಸಿದ್ದಾರೆ. ಹಣ್ಣುಗಳ ಮಿಶ್ರ ಕೃಷಿ ಮಾಡಿ ಆದಾಯ ಗಳಿಸುತ್ತಾರೆ. ಆಶುತೋಷ್ ಅವರ ತೋಟದಿಂದ ಮಾವು ಖರೀದಿಸಲು ವ್ಯಾಪಾರಿಗಳು ನಗರಗಳಿಂದ ಬರುತ್ತಲೇ ಇರುತ್ತಾರೆ. ಮಾವಿನ ಹಣ್ಣನ್ನು ಕೆಜಿಗೆ 80 ರಿಂದ 100 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.
ಇದಲ್ಲದೇ ಲಿಚಿ ಗಿಡಗಳನ್ನು ನೆಟ್ಟಿದ್ದಾರೆ. ಇದರೊಂದಿಗೆ ಬಾಳೆ, ಪೇರಲ, ನಿಂಬೆ, ಪಪ್ಪಾಯ ಮರಗಳಿವೆ. ಸೇಬು, ಲವಂಗ, ಪಿಸ್ತಾ ಇತ್ಯಾದಿ ಸಸಿಗಳನ್ನೂ ನೆಡಲಾಗಿದೆ. ತರಕಾರಿಗಳಲ್ಲಿ ಅಣಬೆ, ಹಾಗಲಕಾಯಿ, ಸೋರೆಕಾಯಿ, ಬೆಂಡೆಕಾಯಿ ಇತ್ಯಾದಿಗಳನ್ನೂ ಬೆಳೆಯುತ್ತಾರೆ.
ಅಶುತೋಷ್ ಠಾಕೂರ್ ತಮ್ಮಂತೆಯೇ ಮಾವು ಬೆಳೆಯಲು ಇಷ್ಟ ಪಡುವ ರೈತರಿಗೆ ಅಗ್ಗದ ಬೆಲೆಯಲ್ಲಿ ಮಾವಿನ ಗಿಡಗಳನ್ನ ಮಾರಾಟ ಮಾಡುತ್ತಾರೆ. ಈಗ ಅವರು ಕೇವಲ 25 ರಿಂದ 60 ರೂಪಾಯಿಗಳಲ್ಲಿ ಜನರಿಗೆ ಉತ್ತಮವಾದ ಮಾವಿನ ಗಿಡಗಳನ್ನು ನೀಡುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರು ಮಾವು ಕೃಷಿ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸಬೇಕು ಎಂಬುದು ಅವರ ಆಶಯ.
ಇದರಿಂದ ಉದ್ಯೋಗವೂ ಹೆಚ್ಚುತ್ತದೆ. ಅವರ ಪ್ರಕಾರ, ಮಾಲ್ಡಾ ಎಂಬ ಮಾವು ಬಿಹಾರದಲ್ಲಿ ಬಹಳ ಪ್ರಸಿದ್ಧವಾಗಿದೆ, ಅದನ್ನು ಬೆಳೆಯುವುದರಿಂದ ರೈತರು ಲಕ್ಷಗಟ್ಟಲೇ ಗಳಿಸಬಹುದು. ಇದೇ ಕಾರಣಕ್ಕೆ ಮಾಲ್ಡಾದ ಮಾವಿನ ಗಿಡವನ್ನು ಅಗ್ಗವಾಗಿ ಮಾರಾಟ ಮಾಡುತ್ತಿದ್ದಾರೆ. ಕೇವಲ 5-6 ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಉತ್ತಮ ಲಾಭ ಗಳಿಸುತ್ತಿದ್ದಾರೆ.
ಈ ರೈತ ನಮ್ಮ ಊರುಗಳಿಂದ ದೂರದಲ್ಲಿದ್ದರು, ಇದು ನಮಗೆಲ್ಲಾ ಮಾದರಿಯಾಗುವ ವರದಿ. ಕೇವಲ ನಮ್ಮ ಸಾಂಪ್ರದಾಯಿಕ ಬೆಳೆಯನ್ನು ಮಾತ್ರ ನಂಬದೇ, ಮಿಶ್ರ ಬೆಳೆ ಬೆಳಯುವುದರಿಂದ ಕೃಷಿಯಲ್ಲಿ ಆಗುವ ನಷ್ಟಗಳನ್ನು ಸರಿದೂಗಿಸಬಹುದು. ಕೇವಲ ಒಂದು ಬೆಳೆಯನ್ನು ನಂಬಿ ಬದುಕು ಕಟ್ಟಿಕೊಳ್ಳುವುದಕ್ಕಿಂತ ಈ ರೀತಿಯಾಗಿ ವಿವಿಧ ಬೆಳೆಗಳನ್ನು ಬೆಳೆದು ಸಂಪಾದನೆಯೂ, ಮಾನಸಿಕ ಖುಷಿಯೂ ಲಭ್ಯವಾಗಲು ಸಾಧ್ಯವಿದೆ.
(ಮೂಲ : ಜಾಲತಾಣ ಸಂಗ್ರಹ )