ಮೊನ್ನೆ ಸಂಜೆ ನಮ್ಮ ತಯಾರಿಕೆಯ ಗೊಬ್ಬರದ(Manure) ವ್ಯಾಪಾರದ ನಿಮಿತ್ತವಾಗಿ ನಾನೊಬ್ಬ ರೈತ(Farmer)ಬಾಂಧವರ ಮನೆಗೆ ಹೋಗಿದ್ದೆ. ನಾನು ಅವರ ಮನೆಗೆ ಹೋದಾಗ ಅವರು ಮನೆಯಂಗಳದಲ್ಲಿ ಹೂ ತೋಟ(Garden) ನಿರ್ವಹಣೆ ಮಾಡುತ್ತಿದ್ದರು. ನಾನು ಅವರಲ್ಲಿ ಲೋಕಾಭಿರಾಮ ಮಾತನಾಡಿ ಮುಗಿದ ನಂತರ ” ನಿಮ್ಮ ಮನೆಯಲ್ಲಿ ಯಾರು ಯಾರಿದ್ದೀರಿ…?” ಎಂದು ಕೇಳಿದೆ. ಅದಕ್ಕೆ ಅವರು “ನಾನೊಬ್ಬನೇ ” ಎಂದರು. ನನಗೆ ಬಹಳ ಅಚ್ಚರಿಯಾಯಿತು. ಅವರು ಮುಂದುವರಿದು “ಸ್ವಾಮಿ ನನಗೀಗ ಐವತ್ತೆಂಟು ವರ್ಷ ವಯಸ್ಸು. ಹಿಂದೆ ಮದುವೆ ಆಗುವ ವಯಸ್ಸಿನಲ್ಲಿ ಜಮೀನು ಪಾಲು, ಮನೆ ಎನ್ನುವ ಧಾವಂತಗಳು ಎಲ್ಲ ಮುಗಿದ ಒಂದು ಹಂತಕ್ಕೆ ಬರುವಾಗ ” ಹಳ್ಳಿ ಮನೆ ಕೃಷಿಕ ಹುಡುಗನಿಗೆ ಮದುವೆಗೆ ಹೆಣ್ಣು ಬ್ಯಾನ್ ಅಂತ ಆಯಿತು , ಹಾಗಾಗಿ ನಾನು “ಅವಿವಾಹಿತ”(Unmarried) ಒಬ್ಬಂಟಿ” ಎಂದರು ತುಂಬಾ ಹತಾಶೆಯಿಂದ.
ಒಂಟಿತನ(Loneliness), ಒಂಟಿ ಮನೆಯ ಬದುಕು ಬಹಳ ಕಷ್ಟ. ಇಂತಹವರಿಗೆ ನಮ್ಮವರು ಎಂಬುವ ಅಕ್ಕ, ಅಣ್ಣ ,ತಮ್ಮ ಇದ್ದರೂ ಅವರೂ ಈ ಕಾಲದಲ್ಲಿನ ಸಾಮಾಜಿಕ ಪರಿಸ್ಥಿತಿಯಿಂದ ಸಂಸಾರಸ್ಥರಾಗಿಯೂ, ಮಕ್ಕಳಿದ್ದೂ ಏಕಾಂಗಿತನದಲ್ಲಿರುತ್ತಾರೆ. ಯಾರೂ ಇಂತಹ ಒಂಟಿ ಅವಿವಾಹಿತ ಹತ ಭಾಗ್ಯರ ನೋವು ಕಷ್ಟ ರೋಗ ರುಜಿನದಲ್ಲಿ ಜೊತೆಗಿದ್ದು ಸಾಂತ್ವನ ನೀಡಲು ಸಾಧ್ಯವಿಲ್ಲ. ಅಣ್ಣನೋ ಅಕ್ಕನೋ ತಮ್ಮನೋ ತಂಗಿಯೋ ತನ್ನ ಇಳಿ ವಯಸ್ಸಿನಲ್ಲಿ ತನಗೆ ಆಸರೆ ಕೊಟ್ಟು ತನ್ನ ನೋಡಿಕೊಳ್ಳುತ್ತಾರೆಂಬ “ಭ್ರಮೆ” ಯಲ್ಲಿ ಇರುತ್ತಾರೆ…!! ನಾನು ಅವರ ಸ್ಥಾನದಲ್ಲಿ ನಿಂತು ಒಂದು ಕ್ಷಣ ತುಂಬಾ ಸಂಕಟ ಪಟ್ಟೆ.
ಇವರು ಹಳ್ಳಿ ಮನೆ ಹುಡುಗರಿಗೆ ಹೆಣ್ಣು ಕೊಡುವ ಕಾಲದಲ್ಲಿ ಏನೋ ವ್ಯತ್ಯಾಸ ಮಾಡಿಕೊಂಡು ಮದುವೆ ಆಗದೇ ಉಳಿದ ಹತಭಾಗ್ಯರು. ಆದರೆ ಇವರ ನಂತರದ 55, 52 , 50 , 48, 45, 43, 40, 38, 35 ,33, 30 ರ ತನಕದ ವಯಸ್ಸಿನ ಸಹಸ್ರಾರು ಅವಿವಾಹಿತ ಯುವ ಪ್ರೌಢ ವಿವಾಹಾಪೇಕ್ಷಿತರು ಮಲೆನಾಡು ಕರಾವಳಿಯಲ್ಲಿ ಮದುವೆಯ ಆಸೆಯನ್ನೇ ಬಿಟ್ಟು ಕೂತಿದ್ದಾರೆ…!! ಈ 1990 ರ ಈಚೆ ಹುಟ್ಟಿದ ಮಕ್ಕಳ ಪೋಷಕರು ಈ ಬೆಳವಣಿಗೆಯಿಂದ ಬಹಳ ಜಾಗೃತರಾಗುತ್ತಿದ್ದಾರೆ.
ಎಷ್ಟೇ ಜಮೀನು ಆಸ್ತಿ ಅಂತಸ್ತಿದ್ದರೂ ತಮ್ಮ ಮಕ್ಕಳನ್ನು ಹಳ್ಳಿಯಲ್ಲಿ(Village) ಉಳಿಸಿಕೊಳ್ಳುತ್ತಿಲ್ಲ. ಅವರಿಗೆ ಅವರ ಗಂಡು ಮಕ್ಕಳ ಮದುವೆ ಬಗ್ಗೆ ಬಹಳ ಭಯ ಕಾಡುತ್ತಿದೆ. ಅದಕ್ಕಾಗಿ ಈಗಿನ ಎಲ್ಲಾ ಪೋಷಕರು ತಮ್ಮ ಮಕ್ಕಳ ವಿಧ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡುತ್ತಾರೆ. ಯಾರೂ ತಮ್ಮ ಮಕ್ಕಳನ್ನು ಜಮೀನು ಮನೆ ನೋಡಿಕೊಳ್ಳಲು ಉಳಿಸಿಕೊಳ್ಳುತ್ತಿಲ್ಲ.
ಮಲೆನಾಡಿನಲ್ಲಿ ಇನ್ನ ಇಪ್ಪತ್ತೈದು ಮೂವತ್ತು ವರ್ಷಗಳ ಕಾಲ ಸಾಂಪ್ರದಾಯಿಕ ಕೃಷಿ ಪದ್ದತಿ, ಗೋವು, ಹಬ್ಬ ಹರಿದಿನ, ಜಾನಪದ ಆಚರಣೆ ಇತರೆ ಚಟುವಟಿಕೆಗಳು ನಡೆಯಬಹುದು. ಇದು ಇಂದಿನ ನಲವತ್ತು ವರ್ಷಗಳ ವಯಸ್ಸಿನ ಕೃಷಿಗೆ ಧುಮುಕಿರುವವರೇ ಈ ಮಲೆನಾಡು ಕರಾವಳಿಯ ಹಳ್ಳಿ ಮನೆಯ ಕಟ್ಟ ಕಡೆಯ ಕೃಷಿಕ ಸಮುದಾಯ. ಈ ನಲವತ್ತು ವರ್ಷ ವಯಸ್ಸಿನ ಕೃಷಿಕರ “ಕೃಷಿ ಬದುಕಿನ ನಿವೃತ್ತಿ” ಯ ನಂತರ ಮಲೆನಾಡು ಕರಾವಳಿ ಜನ ಜೀವನ ಸ್ತಭ್ದ. 2050 ನೇ ಇಸವಿಯ ನಂತರ ಮಲೆನಾಡು ಕರಾವಳಿಯ ಎಲ್ಲಾ ಹಳ್ಳಿಗಳೂ ಖಾಲಿ ಖಾಲಿ….!!
ಇವತ್ತು ಮಲೆನಾಡು ಕರಾವಳಿಯ 2000 ನೇ ಇಸವಿಯ ನಂತರದ ಪೀಳಿಗೆ ಕೃಷಿಗೆ ಹಳ್ಳಿಗೆ ಬರದಿರುವುದು ಮುಂದಿನ ಮೂವತ್ತು ವರ್ಷಗಳಲ್ಲಿ ದೊಡ್ಡ “ನಿರ್ವಾತ” ವನ್ನು ಸೃಷ್ಟಿಸಲಿದೆ. 2050 ರ ನಂತರ ಮಲೆನಾಡು ಕರಾವಳಿಯ ಅಲ್ಲಲ್ಲಿ ಅಳಿದುಳಿದ ಪಳಿಯುಳಿಕೆಯಂತೆ ಒಂಟಿಬಡುಕ ವೃದ್ದರು ವೃದ್ದೆಯರು, ಹಾಳು ಬಿದ್ದ ಜಮೀನು ಕಾಣ ಸಿಗಬಹುದು…. ಇಂತಹ ಒಂದಷ್ಟು ಜಮೀನನ್ನು ಹೊರಗಿನವರು ಖರೀದಿಸಿ ಅದರಲ್ಲಿದ್ದ ಸಹಜ ಕಾಡು ಇತರೆ ನೈಸರ್ಗಿಕ ವಾತಾವರಣವನ್ನು ಜೆಸಿಬಿ ಇತರೆ ಭೂ ರಾಕ್ಷಸ ಯಂತ್ರ ಗಳ ಮೂಲಕ ಮುಲಾಜಿಲ್ಲದೇ ನಾಶ ಮಾಡಿ ‘ಏನೋ” ಕೃಷಿ ಮಾಡಬಹುದು, ಅದಕ್ಕೆ ರಾಸಾಯನಿಕ ಗೊಬ್ಬರ ಮತ್ತು ವಿಷ’ದ ಔಷಧಗಳನ್ನು ತಂದು ಸುರಿದು ಭೂಮಿ ನೀರನ್ನು ವಿಷ ಮಾಡಬಹುದೇನೋ…? ಏನೇ ಆದರೂ ಮುಂದಿಲ್ಲಿ ಜನ ವಾಸ ಮಾಡುವುದು ‘ಅಸಂಭವ’ ಎನಿಸುತ್ತದೆ. ಜಮೀನು ಪರಭಾರೆ ಯಾದರೂ ವಾರಸುದಾರರ “ವಾಸ” ಇಲ್ಲವಾಗುತ್ತದೆ.
ಇನ್ನು ಮೂವತ್ತು ವರ್ಷಗಳಲ್ಲಿ ಮಾನ್ ಸೂನ್ ನೈಋತ್ಯ ಮಾರುತದ ಮಳೆ ವ್ಯಾಪ್ತಿ “ಘಟ್ಟದ” ಹತ್ತು ಕಿಲೋಮೀಟರ್ ಗೇ ಸೀಮಿತವಾಗಿ ಈ ವರ್ಷದಂತೇ ಮುಂದಿನ ಪ್ರತಿ ವರ್ಷವೂ ಸಹಜ ಮಳೆ , ಸಹಜ ಬೇಸಿಗೆ , ಸಹಜ ಚಳಿ ಋತುಮಾನ ವ್ಯತ್ಯಾಸವಾಗುತ್ತಾ ಹೋಗಿ ಮಲೆನಾಡು ಪ್ರದೇಶದಲ್ಲಿ ಮುಂದಿನ ವರ್ಷಗಳಲ್ಲಿ ಕೃಷಿ ಮಾಡಲಾರದಂತಹ “ಹಸಿರು ಮರು ಭೂಮಿ ” ಆಗುವುದಂತೂ ನಿಶ್ಚಿತ. ಈ ವಾತಾವರಣದ ವ್ಯತ್ಯಯ ಕಾರಣವೂ ಮುಂದಿನ ಪೀಳಿಗೆ ಮಲೆನಾಡು ಕರಾವಳಿಯ ತಲತಲಾಂತದ ಕೃಷಿಗೆ ಮರಳಲಾರದಂತೆ ತಡೆಯುತ್ತದೆ.
2016 ಕ್ಕೆ ಎಸ್ ಎಸ್ ಎಲ್ ಸಿ ಮುಗಿಸಿ ಪಿಯುಸಿಯಿಂದ ಹಾಸ್ಟೆಲ್ ಸೇರಿದ “ಮಗ” ಮತ್ತೆ ಶಿಕ್ಷಣ ಮುಗಿಸಿ, ಮದುವೆ ಆಗಿ , ಬೆಂಗಳೂರಿನಲ್ಲಿ ಉದ್ಯೋಗ ಮನೆ ಎಲ್ಲಾ ಮಾಡಿ, ಅವನ ಮಕ್ಕಳಿಗೆ ಮದುವೆ ಮಾಡಿ, ಆ ಮಕ್ಕಳ ಬದುಕು ಭವಿಷ್ಯಕ್ಕೊಂದು ವ್ಯವಸ್ಥೆ ಮಾಡಿ ಸುಮಾರು 2050ಕ್ಕೆ ನಗರ ಜೀವನದಿಂದ ನಿವೃತ್ತನಾಗಿ ಅಪ್ಪ ಅಮ್ಮ ಇರುವ ಮಲೆನಾಡು/ಕರಾವಳಿಗೆ
ಕೃಷಿ ಮಾಡಲು ಬಂದರೆ ಈ ಸುದೀರ್ಘ ನಲವತ್ತನಾಲ್ಕು ವರ್ಷಗಳ ಅಂತರದಲ್ಲಿ ಮಲೆನಾಡಿನ ಭೌಗೋಳಿಕ, ಸಾಮಾಜಿಕ ಎಲ್ಲಾ ಬಗೆಯ ಪರಿಸರವೂ ವ್ಯತ್ಯಾಸ ಆಗಿರುತ್ತದೆ. ಖಂಡಿತವಾಗಿಯೂ ಅವನಿಗೆ ಅವನ ಅಪ್ಪನ ಕಾಲದ ವಾತಾವರಣ ಮಲೆನಾಡಿನಲ್ಲಿ ಇರದ ಕಾರಣ ಅಪ್ಪನ ಕೃಷಿಯನ್ನು ಮಗ ಮಾಡಿಸಿಕೊಂಡು ನೆಡೆಸಿಕೊಂಡು ಹೋಗುವುದು ಅಸಾಧ್ಯ.
ಸಾಮಾನ್ಯವಾಗಿ ಇವತ್ತು ಮಲೆನಾಡಿನಿಂದ ಉದ್ಯೋಗಕ್ಕಾಗಿ ಹೊರ ಹೋಗಿರುವ ಯುವಕರು ಮತ್ತೆ ಹಳ್ಳಿಗೆ ಮರಳಿ ಬಂದು ಕೃಷಿ ಬದುಕು ಮಾಡುವ ಸಾಧ್ಯ ಮತ್ತು ಸಾಧ್ಯತೆ ಖಂಡಿತವಾಗಿಯೂ ಇಲ್ಲ. 2015 ರಲ್ಲಿ ಎಸ್ಎಸ್ಎಲ್ ಸಿ ಮುಗಿಸಿ ಪಿಯುಸಿಯಿಂದ ಹಾಸ್ಟೇಲ್ ʻವನʻವಾಸ ಶುರು ಮಾಡಿ ಮತ್ತೆ ಆತ ಮಗನಾಗಿ ಮನೆಗೆ ಬರುವುದೇ ಇಲ್ಲ. ತನ್ನ ಹದಿನಾರನೇ ವಯಸ್ಸಿನಲ್ಲಿ ಆ ಹುಡುಗ ಮನೆ ಬಿಟ್ಟಾಗ ಅವನು ಒಬ್ಬನೇ ಆಗಿರುತ್ತಾನೆ. ಆದರೆ ವಿಧ್ಯಾಭ್ಯಾಸ ಕೆಲಸ ಮದುವೆ ಮಕ್ಕಳು ಎಲ್ಲಾ ಆಗಿ ನಲವತ್ತನಾಲ್ಕು ವರ್ಷದ ನಂತರ ಮನೆಗೆ ಮರಳಬೇಕು ಎಂಬಾಗ ಆತ ಸಂಸಾರಸ್ಥನಾಗಿರುತ್ತಾನೆ. ಅವನ ಜೊತೆಗೆ ಮಲೆನಾಡಿಗೆ ಕೃಷಿ ಬದುಕು ಮಾಡಲು ಹಳ್ಳಿಗೆ ಮರಳಲು ಅವನ ಹೆಂಡತಿ ಬರುತ್ತಾಳೆಯೇ…? ಬಹುಶಃ ” ಇಲ್ಲ… ” ಎನ್ನಬಹುದು. ಆ ನಿವೃತ್ತಿ ಯ ವಯಸ್ಸಿನಲ್ಲಿ ಆತ ಒಂಟಿಯಾಗಿ ಮಲೆನಾಡಿಗೆ ಮರಳಬೇಕು “ಮರಳುತ್ತಾನೆಯಾ……!?”.. ಬಹುತೇಕ ಆ ಸಾಧ್ಯತೆಯೂ ಇಲ್ಲ ಎನಿಸುತ್ತದೆ.
ನಮ್ಮ ಹಿಂದೂಗಳಲ್ಲಿ ಈ ಹಿಂದಿನ ಮೂವತ್ತು ವರ್ಷಗಳ ಕಾಲದಲ್ಲಿ “ಕುಟುಂಬ ಯೋಜನೆ” ಗೊಳಗಾದ ಪರಿಣಾಮ ಬಹುತೇಕ ಕುಟುಂಬದಲ್ಲಿ ” ನಾವಿಬ್ಬರು ನಮಗೆ “ಒಬ್ಬರು’ ಇಲ್ಲ “ಇಬ್ಬರು “…!! ಅಂತಾಗಿದೆ. ಈ ಒಬ್ಬ ಇಬ್ಬ ಮಕ್ಕಳು ಬೆಳೆ ಬೆಳೆಯುತ್ತಲೇ “ನಗರ ಜೀವನ ಮುಖಿ” ಯಾಗಿ ಬೆಳೆಯುತ್ತಿರುವುದು, ಪೋಷಕರು ಹಳ್ಳಿಯ ಜೀವನದ ಸೋಂಕಿಲ್ಲದೇ “ಬೆಳೆಸುತ್ತಿರುವುದು” ಗಮನಾರ್ಹ ಸಂಗತಿಯಾಗಿದೆ…!! ನಾವು ಹಿಂದೂಗಳು “ಏನಕ್ಕೋ ಭಯ” ಪಟ್ಟು ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ “ಮೂಲ ನೆಲೆಯೂ ಇಲ್ಲ'” ಕಷ್ಟ ನಷ್ಟ ಸಾವಿಗೆ ಮಿಡಿಯಲು ” ಬಂಧು ಬಾಂಧವರೂ” ಇಲ್ಲದಂತೆ ಮಾಡಿಕೊಳ್ಳುತ್ತಿದ್ದೇವೆ. ಈ ಮಕ್ಕಳು ಮುಂದೆ ತಮ್ಮ ಬಂಧು ಬಳಗ ಇಲ್ಲದ ಹಳ್ಳಿ ಗೆ ಬಂದು ಹೊಸದಾಗಿ ಬದುಕು ಕಟ್ಟಿ ಕೊಳ್ಳುವುದು ಕಷ್ಟವೇನೋ…??
ಕೂತು ಈ ಬಗ್ಗೆ ಚಿಂತನೆ ಮಾಡಿದರೆ ಹಲವಾರು ವಿಚಾರಗಳು ಹೊರ ಬರುತ್ತದೆ.
ಇವತ್ತು ನಮ್ಮ ಮಲೆನಾಡಿನ ಬಹುತೇಕ ತೊಂಬತ್ತೆಂಟು ಪ್ರತಿಶತ ಯುವ ಪೀಳಿಗೆ ನಗರ ಪ್ರದೇಶಕ್ಕೆ ವಲಸೆ ಹೋಗಿದೆ ಮತ್ತು ಬಹುತೇಕ ಹೊಸ ಪೀಳಿಗೆಯ ಗುರಿ ಪಟ್ಟಣದ ನೌಕರಿಯೇ…!! ಇಲ್ಲಿ ಚಾಲ್ತಿ ಕೃಷಿಕರಲ್ಲಿ ಮುಕ್ಕಾಲು ಪಾಲು ಜನರಲ್ಲಿ ನಲವತ್ತು ದಾಟಿದವರು ಒಂದು ಹತ್ತು ಪರ್ಸೆಂಟ್ ಇದ್ದರೆ ಅರವತ್ತು ದಾಟಿದ ವೃದ್ದರು ತೊಂಬತ್ತು ಪ್ರತಿಶತ…!! ಇಲ್ಲಿ ಈ ಹೊತ್ತಿನ ತನಕದ ಜಮೀನ್ದಾರರಲ್ಲಿ ಹೆಚ್ಚಿನವರು ಮೇಲ್ಜಾತಿಯವರು. ಐವತ್ತು ವರ್ಷಗಳ ಹಿಂದೆ ಮಲೆನಾಡಿಗೆ ಕರಾವಳಿಯಿಂದ ವಲಸೆ ಬಂದ ಕಾರ್ಮಿಕರು ಇಂದು ಮಲೆನಾಡಿನಲ್ಲಿ ಕೃಷಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಅವರೂ ಈಗಿನ ಪೀಳಿಗೆಯ ಅವರ ಮಕ್ಕಳ ವಿಧ್ಯಾಭ್ಯಾಸ ದತ್ತ ಗಮನ ಕೊಟ್ಟಿರುವುದು ಗಮನಾರ್ಹ….
ಈ ವಲಸೆ ಎನ್ನವ ಪ್ರಕ್ರಿಯೆ ನಿರಂತರವಾಗಿ ನೆಡೆಯುವಂತಹದ್ದು. ಬಹುಶಃ ಜಾಗತೀಕರಣ ಆರಂಭವಾದ ಹೊತ್ತಿನಲ್ಲೇ ಕೃಷಿ ಕ್ಷೇತ್ರವೊಂದನ್ನ ಹೊರತು ಪಡಿಸಿ ಉಳಿದೆಲ್ಲ ದೇಸಿ ಬದುಕುಗಳು ಅಜ್ಞಾತವಾಸದತ್ತ ಸಾಗಿತ್ತು. ಪಾರಂಪರಿಕವಾಗಿ ಉದ್ಯೋಗ ಮಾಡುತ್ತಿದ್ದವರು ಪರ್ಯಾಯ ಬದುಕಿನತ್ತ ಹೊರಳಿ ಬದಲಾವಣೆಯತ್ತ ಮುಖ ಮಾಡಿಯಾಗಿದೆ. ಈಗ ದೇಶದ ಅತ್ಯಂತ ಪುರಾತನ ಉದ್ಯಮ “ಕೃಷಿ” ಆ ಪರ್ಯಾಯ ಅಥವಾ ಮುಕ್ತಾಯದತ್ತ ಮುಖ ಮಾಡಿ ನಿಂತಿದೆ.
ಒಂದು ಕಾಲದಲ್ಲಿ ನಮ್ಮ ತೀರ್ಥಹಳ್ಳಿ ಪಟ್ಟಣದಲ್ಲಿ “ಗೌಡಸಾರಸ್ವತ ಬ್ರಾಹ್ಮಣರು” ದೀನಸಿ ಜವಳಿ ಉದ್ಯಮದಲ್ಲಿ ಮಾರಾಟ ಪಾರಮ್ಯ ಗಳಿಸಿದ್ದರು. ಆದರೆ ಇಂದು ನೂರಾರು ವರ್ಷಗಳ ಅವರ ಪಾರಮ್ಯದ ಪಟ್ಟಣದ ದೀನಸಿ ವ್ಯಾಪಾರ ವಹಿವಾಟಿನಲ್ಲಿ ಹಳೇ ವ್ಯಾಪಾರಿಗಳ ಅಂಗಡಿ ಮಳಿಗೆ ಉಳಿದಿರುವುದು ಕೇವಲ ನಾಲ್ಕೈದು ಮಾತ್ರ…!! ತೀರ್ಥಹಳ್ಳಿ ಪಟ್ಟಣ ಈ ಐವತ್ತು ವರ್ಷಗಳಲ್ಲಿ ಹಿಂದಿಗಿಂತ ಹತ್ತಾರು ಪಟ್ಟು ಬೆಳವಣಿಗೆಯಾಗಿದೆ.
ಆದರೆ ಕೊಂಕಣಿಕ ವ್ಯಾಪಾರಿ ಕುಟುಂಬಗಳ ಮೂರು ನಾಲ್ಕನೇ ತಲೆಮಾರಿನ ಪೀಳಿಗೆ ತಮ್ಮ ಹಿರಿಯರ ಉದ್ಯೋಗವಾದ “ವ್ಯಾಪಾರ ವಹಿವಾಟನ್ನು ” ಮುಂದುವರಿಸಿಕೊಂಡು ಹೋಗಲಿಚ್ಚಿಸದೇ ದೊಡ್ಡ ಪಟ್ಟಣ ಸೇರಿದ್ದಾರೆ. ಈಗ ದಿನಸಿ ಜವಳಿ ವ್ಯಾಪಾರದಲ್ಲಿ ದೂರದ ಉತ್ತರ ಭಾರತದ ಮಾರ್ವಾಡಿಗಳು ಪಾರಮ್ಯ ಸಾಧಿಸತೊಡಗಿದ್ದಾರೆ…!! ಈಗ್ಗೆ ಮೂವತ್ತು ವರ್ಷಗಳ ಹಿಂದೆ ತೀರ್ಥಹಳ್ಳಿ ಪಟ್ಟಣದಲ್ಲಿ ಪುರುಸೊತ್ತಿಲ್ಲದೇ ಬಂಗಾರದ ಆಭರಣ ತಯಾರಿಸಿಕೊಡುತ್ತಿದ್ದ “ಸೊನಗಾರ ಬಂಧುಗಳಿಂದು” ತಮ್ಮ ಪರಂಪರಾಗತ ಕುಲ ಕಸಬು ನೆಡಸಲಾಗದೇ “ಖಾಲಿ” ಕೂತಿದ್ದಾರೆ…!! ಈಗ ಕುಲ ಕಸುಬಲ್ಲದವರು ಬಂಗಾರದ ರೆಡಿಮೇಡ್ ಆಭರಣವನ್ನ ಎಲ್ಲಿಂದಲೋ ತಂದು ಐಷಾರಾಮಿ ವಾತಾನುಕೂಲ ಇರುವ ಕಟ್ಟಡದಲ್ಲಿ ವ್ಯಾಪಾರ ನೆಡಸುತ್ತಿದ್ದಾರೆ.
ಇದೆಲ್ಲಾ ಸಾಮಾಜಿಕ ಬದಲಾವಣೆ..!!
ನೀವು ತೀರ್ಥಹಳ್ಳಿಯಿಂದ ಉಡುಪಿ ಕಡೆ ಆಗುಂಬೆ ಘಾಟಿ ಇಳಿದು ಹೆಬ್ರಿ ‘ವಯ’ ಹೋಗುವಾಗ ರಸ್ತೆಯ ಇಕ್ಕೆಲವನ್ನು ಗಮನಿಸಿ ನೋಡಿ, ನಿಮಗೆ ಬಾಗಿಲು ಬೀಗ ಹಾಕಿದ ಮನೆಗಳು, ಹಾಳು ಬಿಟ್ಟ ತೋಟ ಗದ್ದೆಗಳು ಕಾಣಿಸುತ್ತದೆ. ಅದರ ಮುಂದುವರಿದ ಭಾಗವಾಗಿ ನಮ್ಮ ಮಲೆನಾಡು ಕೂಡ ಇನ್ನು ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ಜನ ಜಾನುವಾರುಗಳಿಲ್ಲದೇ ಹಾಳು ಬೀಳುತ್ತದೆ.
ಆದರೆ, ಈ ವಲಸೆ ಇಲ್ಲಿನ ನಿವಾಸಿ ಕೃಷಿಕರ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವೋ ಅಥವಾ ಪಾಲಾಯನವೋ,
ಏನೋ ಒಂದು. ಆದರೆ ಈ ವಲಸೆ ಮುಂದೊಂದು ದಿನ ಮಲೆನಾಡು ಕರಾವಳಿಯ ಗ್ರಾಮೀಣ ಪ್ರದೇಶವನ್ನು “ನಿರ್ವಾತ” ಮಾಡಲಿರುವುದು ನಿಶ್ಚಿತ. ಇದನ್ನು ಈ ಪರಿಸರ ಹೇಗೆ ಸಂಭಾವಿಸುತ್ತದೆ…….? ಬದಲಿಗೆ ಇಲ್ಲಿ ಬರುವವರಾರು..?, ಮಲೆನಾಡಿನ ಹಳ್ಳಿಗಳು ಜನರಿಲ್ಲದೇ ಕೃಷಿ ಇಲ್ಲದೇ ಮರಳಿ ಕಾಡಾಗಿ ಪರಿವರ್ತನೆಯಾಗುವುದೇ..? ಅಥವಾ ಈ ಮಣ್ಣಿನ ಪಾರಂಪರಿಕ ಜನರಲ್ಲದವರು ಇಲ್ಲಿ ಬಂದು ಜಮೀನು ಕೊಂಡು ನೆಲಸಿದರೆ ಈ ಪರಿಸರಕ್ಕೆ ಮುಂದಾಗುವ ಅಪಾಯವೇನು…? ಸವಾಲುಗಳೇನು…? ಎಲ್ಲ ಕಳೆದುಕೊಂಡು ಹೋಗುವುದೇ ಭವಿಷ್ಯವಾ…? ಇದೊಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ…?
……………………
ಕೃಷಿಕ ಪ್ರಬಂಧ ಅಂಬುತೀರ್ಥ ಅವರು ಬಹಳ ಗಂಭೀರವಾದ ವಿಚಾರವನ್ನು ತೆರೆದಿಟ್ಟಿದ್ದಾರೆ. ಈ ಬಗ್ಗೆ ಈಗಲೇ ಯೋಚನೆ ಅಗತ್ಯ ಇದೆ. ಏನು ಮಾಡಬಹುದು ಎನ್ನುವುದು ಒಂದು ಭಾಗವಾದರೆ, ಇನ್ನೊಂದು ಬಹುಮುಖ್ಯವಾದ ಭಾಗ ಇದೆಲ್ಲದರ ನಡುವೆಯೇ ಹಳ್ಳಿಯನ್ನು ಸುಂದರ ಮಾಡುತ್ತಿರುವ, ಹಳ್ಳಿಯನ್ನು, ಕೃಷಿಯನ್ನು ಬೆಳೆಸುತ್ತಿರುವ ಸುದ್ದಿಗಳು, ಸಂಗತಿಗಳು ಹಲವು ಕಡೆ ಇದೆ. ಈಗ ಅಂತಹ ಕೆಲವು ಮಾದರಿಗಳು ಬೇಕಾಗಿದೆ. ಅಂತಹ ಸಂಗತಿಗಳು ಇದ್ದರೆ ನಮಗೆ ತಿಳಿಸಿ. ನಮ್ಮ ವಾಟ್ಸಪ್ ಸಂಖ್ಯೆ 9449125447 ….. ದ ರೂರಲ್ ಮಿರರ್ ತಂಡ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…