ನಮ್ಮ ಪರಿಸರಕ್ಕೆ ಬಹುದೊಡ್ಡ ತಲೆ ನೋವಾಗಿ ಕಾಡ್ತಿರೋದು ಕರಗಿಸಲಾಗ ಪ್ಲಾಸ್ಟಿಕ್ ಗಳು. ಎಷ್ಟೆ ಕಡಿವಾಣ ಹಾಕಿದರೂ ರಕ್ತ ಬೀಜಾಸುರನಂತೆ ಮತ್ತೆ ಹುಟ್ಟಿಕೊಳ್ಳುತ್ತೆ. ಹಾಗೆ ಜನ ಕೂಡ ಪ್ಲಾಸ್ಟಿಕ್ ಇಲ್ಲದಿದ್ದರೆ ನಾವು ಬದುಕೋದು ಕಷ್ಟ ಅನ್ನುವಷ್ಟರ ಮಟ್ಟಿಗೆ ಕ್ಲೋಸ್ ಆಗ್ಬಿಟ್ಟಿದ್ದಾರೆ. ಏನೆ ಆದ್ರೂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ಹಾಡಲೇ ಬೇಕಾಗಿದೆ. ಬೇಡದ ಪ್ಲಾಸ್ಟಿಕ್ ಗಳನ್ನು ಎಷ್ಟುಂತ ಗುಡ್ಡೆ ಹಾಕಬಹುದು…?
ಅದಕ್ಕೆ ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಗರ ಸಭೆ ಹೊಸ ಐಡಿಯಾವೊಂದನ್ನು ಮಾಡಿದೆ. ಸದ್ಯ ಕಾರವಾರ ನಗರಸಭೆ ವ್ಯಾಪ್ತಿಯ ಕಲಿಕಾ ಕೇಂದ್ರದ ಫ್ಲೋರಿಂಗ್ಗೆ ಪ್ಲಾಸ್ಟಿಕ್ ವೇಸ್ಟ್ಗಳನ್ನು ಬಳಸಲಾಗಿದೆ. ಥೇಟ್ ಕಾಂಕ್ರೀಟ್ ಅಥವಾ ಸಿಮೆಂಟ್ ಇಂಟರ್ಲಾಕ್ಗಳಂತೆಯೇ ಕಾಣೋ ಪಕ್ಕಾ ಪ್ಲಾಸ್ಟಿಕ್ನಿಂದ ತಯಾರಿಸಿದ ಟೈಲ್ಸ್ ಗಳನ್ನು ಅಳವಡಿಸಿದೆ.
ನೋಡಲು ಗಟ್ಟಿಮುಟ್ಟಾಗಿ ಕಾಣುವ ಈ ಟೈಲ್ಸ್ಗಳು ಆಕರ್ಷಕವಾಗಿಯೂ ಇವೆ. ಮೇಲಾಗಿ ಉಳಿದ ಟೈಲ್ಸ್ನಂತೆ ಇವು ಒಡೆದು ಹೋಗೋದಿಲ್ಲ. ಸಾಮಾನ್ಯವಾಗಿ ನಡೆದಾಡಿಕೊಂಡು ಹೋಗೋರೆಲ್ಲ ಇದೇನೋ ಸಾಮಾನ್ಯ ಸಿಮೆಂಟ್ ಇಂಟರ್ಲಾಕ್ಗಳು ಅಂದ್ಕೊಳ್ತಾರೆ. ಆದ್ರೆ ಈ ಇಂಟರ್ಲಾಕ್ ಅಥವಾ ಟೈಲ್ಸ್ಗಳು ತಯಾರಿಸಿರೋದು ಪ್ಲಾಸ್ಟಿಕ್ ವೇಸ್ಟೇಜ್ನಿಂದ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪ್ಲಾಸ್ಟಿಕ್ನಿಂದ ಟೈಲ್ಸ್ ಮಾಡುವ ಕಂಪೆನಿಯೊಂದಿದೆ. ಈ ಬಗ್ಗೆ ವಿಷಯ ತಿಳಿದುಕೊಂಡು ಕಾರವಾರ ನಗರಸಭೆಯು ಅಂತಹದ್ದೇ ಪ್ಲಾಂಟ್ನ್ನ ಕಾರವಾರದಲ್ಲೂ ತಯಾರಿಸಲು ನಿರ್ಧರಿಸಿದೆ. ಈ ಮಧ್ಯೆ ಬೆಳ್ತಂಗಡಿಯಿಂದಲೇ ಟೈಲ್ಸ್ ತರಿಸಿಕೊಂಡು ಕಲಿಕಾಕೇಂದ್ರದ ಫ್ಲೋರಿಂಗ್ ತಯಾರಿಸಲಾಗಿದೆ. ಇನ್ನೇನು ಇದೇ ರೀತಿಯ ಟೈಲ್ಸ್ ತಯಾರಿಕಾ ಘಟಕ ಕಾರವಾರದಲ್ಲೂ ತಲೆ ಎತ್ತಲಿದೆ.
ಹೀಗೆ ಆದಲ್ಲಿ ಕಾರವಾರದಲ್ಲಿ ಪ್ರತಿದಿನ ಸಂಗ್ರಹಿಸುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಮುಕ್ತಿ ಸಿಕ್ಕಂತಾಗುವುದಲ್ಲದೇ, ಪರಿಸರ ಸ್ನೇಹಿ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಕೇವಲ ಕಾರವಾರದಲ್ಲಿ ಮಾತ್ರವಲ್ಲದೆ ಪ್ರತೀ ನಗರ ಸಭೆ, ವಾರ್ಡ್ಗಳಲ್ಲಿ ಇಂಥ ಘಟಕಗಳನ್ನು ಅಳವಡಿಸಿದ್ರೆ ಅತೀ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ಎಂಬ ಪೆಡಂಭೂತಕ್ಕೆ ಅಂತ್ಯ ಹಾಡಬಹುದು.