ಹವಾಮಾನ ಬದಲಾವಣೆಯಾಗುತ್ತಿದೆ. ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಬಿಸಿ ಗಾಳಿ ಉಂಟಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಕಾರಣದಿಂದ 48 ಗೆಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಬಿಸಿ ಗಾಳಿ ಉಂಟಾಗುವ ಸಾಧ್ಯತೆಗಳಿದೆ ಎಂದು ಇಲಾಖೆ ಎಚ್ಚರಿಸಿದೆ.
ಕರ್ನಾಟಕದಲ್ಲಿ ದಿನೇ ದಿನೇ ಬಿಸಿಲಿನ ಕಾವು ಹೆಚ್ಚುತ್ತಿದೆ. ಈ ಬಾರಿ ಅತ್ಯಧಿಕ ಉಷ್ಣಾಂಶದ ದಾಖಲಾಗುವ ಬಗ್ಗೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮಾರ್ಚ್, ಏಪ್ರೀಲ್ ಹಾಗೂ ಮೇ ಈ ಮೂರು ತಿಂಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲವಾಗಿದೆ. ಈ ಭಾರಿ ಅತ್ಯಧಿಕ ಬಿಸಿಲಾಗಲಿದೆ. ಕಳೆದ ಫೆಬ್ರವರಿಯಲ್ಲಿ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಬಿಸಿಲು ಕ್ರಮೇಣ ಏರತೊಡಗಿತು. ಆದರೆ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಹೆಚ್ಚಾಗಿರಲಿಲ್ಲ. ಆದರೆ ಮುಂದಿನ 90 ದಿನ ಕರ್ನಾಟಕ ಅತ್ಯಧಿಕ ಬಿಸಲಿಗೆ ಸಾಕ್ಷಿಯಾಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನ ಮತ್ತು ಹವಾಮಾನ ತಜ್ಞ ಡಾ.ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಗೆ ಪೂರಕವಾಗಿ ಈಗ ಕರಾವಳಿ ಭಾಗಗಳಲ್ಲಿ ಬೆಳಗಿನ ವೇಳೆ ಚಳಿಯ ವಾತಾವರಣ ಇದ್ದು, ಆ ಬಳಿಕ ಉಷ್ಣತೆ ಏರ ತೊಡಗುತ್ತದೆ. ಮಧ್ಯಾಹ್ನ ವಿಪರೀತವಾದ ಬಿಸಿಲು ಹಾಗೂ ಉಷ್ಣತೆ ಕಂಡುಬರುತ್ತಿದೆ. ಹೀಗಾಗಿ ಈ ಬಾರಿ ಮಳೆ ಸಾಧ್ಯತೆ ಕಡಿಮೆ ಇದ್ದು ಬಿಸಿಲಿನ ಝಳ ಹೆಚ್ಚಾಗುತ್ತಿದೆ.