ಅನುಕ್ರಮ

ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

“ಕಷ್ಟಪಡದೆ ಇಷ್ಟ ಸಿಗದು” ಎಂಬುದು ನಾಣ್ಣುಡಿ. “ಇಷ್ಟ” ಅಂದರೆ ಕೇವಲ ಸಂತೋಷ, ಖುಷಿ ಅಷ್ಟೇ ಅಲ್ಲ. ಅದಕ್ಕಿಂತ ಮಿಗಿಲಾದ ಅರ್ಥವಿದೆ. ಖುಷಿಪಡಲು ಇಷ್ಟಪಡುತ್ತೇವೆ. ಆದರೆ ಖುಷಿಯೇ ಇಷ್ಟವಲ್ಲ. ಗಳಿಸುವುದರಲ್ಲಿರುವ ಖುಷಿಯೇ ನಿಜವಾದ ಇಷ್ಟ. ಹಾಗಾಗಿಯೇ ಅದನ್ನು ಇಷ್ಟಾರ್ಥ ಎನ್ನುತ್ತೇವೆ. ಇಲ್ಲಿ ಅರ್ಥ ಎಂಬುದು ಗಳಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಉದಾಹರಣೆಗೆ ವಿದ್ಯೆಯನ್ನು ಗಳಿಸುವಾತ ಅಥವಾ ಗಳಿಸುವಾಕೆಯನ್ನು ವಿದ್ಯಾರ್ಥಿ ಎನ್ನುತ್ತೇವೆ. ಕಷ್ಟಪಟ್ಟಾದರೂ ವಿದ್ಯೆಯನ್ನು ಗಳಿಸುವುದು ವಿದ್ಯಾರ್ಥಿಗಳ ಇಷ್ಟವಾಗಬೇಕು. ಕಷ್ಟಪಡಲು ಇಷ್ಟವಿಲ್ಲದವರಿಂದ ವಿದ್ಯೆಯನ್ನು ಗಳಿಸಲು ಸಾಧ್ಯವಾಗದು. ಆಗ ಅವರು ಅಂಕಗಳಿಗಾಗಿ ಪೇಚಾಡುತ್ತಾರೆ. ಹೇಗೋ ಒಂದಿಷ್ಟು ಅಂಕಗಳು ಬಂದರೂ ಪರೀಕ್ಷೆಗಳಲ್ಲಿ ತೇರ್ಗಡೆಯಾದರೂ ವಿದ್ಯೆಗಳಿಸಿದ ಪ್ರಭೆ ಅವರ ಮುಖದಲ್ಲಿರುವುದಿಲ್ಲ. ಅವರಲ್ಲಿ ಆತ್ಮವಿಶ್ವಾಸವೂ ಇರುವುದಿಲ್ಲ. ಆಗಬೇಕಾದ ರೀತಿಯಲ್ಲಿ ಅವರ ಸಬಲೀಕರಣ ಆಗುವುದಿಲ್ಲ. ಒಂದು ತಲೆಮಾರಿನ ಜನಾಂಗ ಹೀಗೆ ಕುಗ್ಗುವುದು ಇಡಿಯ ಸಮಾಜದ ಅವನತಿಗೆ ಕಾರಣವಾಗುತ್ತದೆ .…….ಮುಂದೆ ಓದಿ…..

Advertisement

ಶಿಕ್ಷಣದ ಉದ್ದೇಶವು ಪ್ರತಿ ಮುಂದಿನ ತಲೆಮಾರನ್ನು ಬಲಗೊಳಿಸುವುದಾಗಿದೆ. ಆದರೆ ನಮ್ಮ ದೇಶದಲ್ಲಿ ಕಾರಕೂನರನ್ನು ರೂಪಿಸಲು ಬ್ರಿಟಿಷರು ಅಳವಡಿಸಿದ ಪದ್ಧತಿಯೇ ಜಾರಿಯಲ್ಲಿರುವುದರಿಂದ ಸ್ವಾಧ್ಯಾಯಶೀಲ ಮತ್ತು ಪ್ರಯತ್ನಶೀಲ ವಿದ್ಯಾರ್ಥಿಗಳು ತಯಾರಾಗುತ್ತಿಲ್ಲ. ‘ಇದು ಹೀಗೆ’ ಎಂದು ಗುರುಗಳು ಹೇಳಿದ್ದನ್ನು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಒಪ್ಪಿಸಿ ಅಂಕಗಳನ್ನು ಪಡೆಯುವಲ್ಲಿ ಸಾರ್ಥಕತೆಯನ್ನು ಕಂಡಿರುವ ಈ ಶಿಕ್ಷಣ ಪದ್ಧತಿಯಲ್ಲಿ ‘ಇದು ಯಾಕೆ ಹೀಗೆ?’ ಎಂತ ಕೇಳುವ ಅಥವಾ ತಾವಾಗಿಯೇ ತಿಳಿದುಕೊಳ್ಳುವ ಅವಕಾಶಗಳಿಲ್ಲ. ಹಾಗಾಗಿ ಇಂದಿನ ಶಿಕ್ಷಣವು ಆಸಕ್ತಿದಾಯಕವಾಗಿಲ್ಲ. ಇದಕ್ಕೊಂದು ಸಾಕ್ಷಿ ಪಬ್ಲಿಕ್ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ತಿದ್ದಿದವರ ಸಭಾಷಣೆಗಳನ್ನು ಕೇಳಿದಾಗ ಸಿಗುತ್ತದೆ .

ಎಪ್ರಿಲ್ ಆರಂಭದಲ್ಲಿ ಎಸ್ .ಎಸ್. ಎಲ್. ಸಿ ಪಬ್ಲಿಕ್ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಶಿಕ್ಷಕರು ಊರಿಗೆ ಮರಳಿದ್ದಾರೆ. ಇಂಗ್ಲಿಷ್ ಮೀಡಿಯಂ ಶಾಲೆಗಳ ಪ್ರತಿ ನೂರು ಉತ್ತರ ಪತ್ರಿಕೆಗಳಲ್ಲಿ ಕೆಲವೇ ಕೆಲವು ಬಿಟ್ಟರೆ ಉಳಿದವುಗಳು ಗೋತಾ ಮಟ್ಟದಲ್ಲೇ ಇದ್ದುವಂತೆ. ಇಡಿಯಾಗಿ ಪ್ರಶ್ನೆ ಪತ್ರಿಕೆಯನ್ನೇ ಮರಳಿ ಬರೆದಿಟ್ಟ ಉದಾಹರಣೆಗಳು ಅದೆಷ್ಟೋ ಇದ್ದುವಂತೆ . ಹಾಗೆ ಪ್ರಶ್ನೆ ಪತ್ರಿಕೆಯನ್ನು ನೋಡಿ ಬರೆಯುವಾಗಲೂ ಅಕ್ಷರ ತಪ್ಪುಗಳು ಸಾಮಾನ್ಯವಾಗಿದ್ದುವಂತೆ. ವಾಕ್ಯ ರಚನೆಯೂ ಸರಿಯಾಗಿ ಇರಲಿಲ್ಲ. ಹಾಗಿದ್ದರೆ ಇವರು ಇಡೀ ವರ್ಷದಲ್ಲಿ ಏನು ಕಲಿತಿದ್ದಾರೆ? ಏನೇನೂ ಗೊತ್ತಿಲ್ಲವೆಂದರೇನರ್ಥ? ನೂರರಲ್ಲಿ ಸೊನ್ನೆ ಯಿಂದ 20 ಅಂಕಗಳೊಳಗೆ ನಿಲ್ಲುವ ಉತ್ತರ ಪತ್ರಿಕೆಗಳ ಬರಹದಾರರು ಸೂಕ್ತ ಉತ್ತರ ನೀಡುವ ಬಗ್ಗೆ ಆಸಕ್ತಿಯನ್ನೇ ಹೊಂದಿಲ್ಲದಿದ್ದುದು ಗಮನಕ್ಕೆ ಬರುತ್ತದೆ.

ಅಂದರೆ ವಿದ್ಯಾರ್ಥಿಗಳು ವರ್ಷವಿಡೀ ಅಭ್ಯಾಸ ಮಾಡಿದ್ದಾರೆನ್ನುವುದರ ಯಾವ ಕುರುಹೂ ಸಿಗುವುದಿಲ್ಲ. ಅವರು ಒಂದಾದರೂ ಪಾಠವನ್ನು ಕೇಳಿದ್ದಾರೆಯೇ ಅಥವಾ ಇವರು ಪಾಠವನ್ನು ಆಲಿಸುವ ಬಗ್ಗೆ ಶಿಕ್ಷಕರು ಗಮನ ನೀಡಿದ್ದಾರೆಯೇ ಎಂಬ ಪ್ರಶ್ನೆಯೂ ಬರುತ್ತದೆ. ಇದರ ಅರ್ಥ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಕನ್ನಡವನ್ನು ಪೂರ್ತಿಯಾಗಿ ಶಿಕ್ಷಕರೂ ವಿದ್ಯಾರ್ಥಿಗಳೂ ಅವಗಣಿಸಿದ್ದಾರೆ. ಕನ್ನಡ ಕಲಿಯದಿದ್ದರೂ ನಡೆಯುತ್ತದೆಂಬ ಚಿಂತನೆಯೂ ಅವರಲ್ಲಿ ಇದ್ದಂತೆ ಕಾಣುತ್ತದೆ. ಆದರೆ ಅವರಿಗೆ ಕನ್ನಡದಲ್ಲಿ ತೇರ್ಗಡೆಯಾಗದಿದ್ದರೆ ಎಸ್. ಎಸ್. ಎಲ್. ಸಿ. ಯಲ್ಲಿ ತೇರ್ಗಡೆಯಾಗುವುದಿಲ್ಲವೆಂದು ಗೊತ್ತಿದೆ. ಹಾಗಾಗಿ ಮೌಲ್ಯಮಾಪಕರಲ್ಲಿ ದಯನೀಯ ವಿನಂತಿಗಳನ್ನು ಮಾಡುತ್ತಾರೆ. ಮನೆಯಲ್ಲಿ ಬಡತನ, ವಿದ್ಯುತ್ ಕೊರತೆ, ಅಮ್ಮನಿಗೆ ಅನಾರೋಗ್ಯ ಎಂಬ ಸಬೂಬು ಹೇಳಿ ಪಾಸು ಮಾಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಉತ್ತರ ಪತ್ರಿಕೆಯಲ್ಲಿ ಚಲನ ಚಿತ್ರಗೀತೆಗಳನ್ನು ಬರೆದಿರುತ್ತಾರೆ. ಇನ್ನು, ಹಣ ಕೊಡುವ ಆಮಿಷಗಳನ್ನು ಒಡ್ಡಲು ಯತ್ನಿಸುತ್ತಾರೆ. ತಮ್ಮ ಫೋನ್ ನಂಬರ್ ನೀಡಿ ಕರೆ ಮಾಡಿದರೆ ಹಣ ಕೊಡುವುದಾಗಿ ಬರೆಯುತ್ತಾರೆ. ಏಕೆಂದರೆ ಮೌಲ್ಯಮಾಪಕರು ಕನಿಕರ ತೋರುವವರಾದರೆ ಇಂತಹ ವಿಧಾನಗಳು ಫಲ ನೀಡುತ್ತವೆ ಎಂಬ ಬೋಧನೆಯನ್ನು ಹಿರಿಯ ವಿದ್ಯಾರ್ಥಿಗಳಿಂದ ಪಡೆದಿರುತ್ತಾರೆ.

ಸಾಮರ್ಥ್ಯ ಮತ್ತು ಅರ್ಹತೆಗಳಿಲ್ಲದಿದ್ದರೂ ಮೌಲ್ಯಮಾಪಕರನ್ನು ಕಾಡಿ-ಬೇಡಿ ತೇರ್ಗಡೆಯಾಗುತ್ತದೆಂದಾದರೆ ಯಾಕೆ ಓದಿ ಕಷ್ಟ ಪಡಬೇಕು? “ದೊಡ್ಡಕ್ಕನ ಚಾಳಿ ಮನೆ ಮಂದಿಗೆಲ್ಲ” ಎಂಬ ಮಾತಿನಂತೆ ಈ ಅಧ್ಯಯನ ರಾಹಿತ್ಯದ ಗೀಳು ಮತ್ತು ಅಂಕಗಳನ್ನು ಬೇಡಿ ಪಡೆಯುವ ಚಾಳಿ ಸಣ್ಣ ತರಗತಿಗಳಿಗೂ ಹಬ್ಬಿದೆ. “ಮಾರ್ಕು ಕೊಡಿ ಟೀಚರ್”, “ಪ್ಲೀಸ್ ಟೀಚರ್” ಎಂದು ಎರಡನೇ ಮೂರನೇ ತರಗತಿಯ ಮಕ್ಕಳು ಗೋಗರೆಯುವುದು ಸಾಮಾನ್ಯವಾಗಿದೆ. ಹೇಗೂ ಶಿಕ್ಷಕರು ಸರಿಯಾಗಿ ಕಲಿಸಿರುವುದಿಲ್ಲ. ಅಂಕಗಳನ್ನು ಕೊಡುವುದಕ್ಕೇನು ತೊಂದರೆ? ಈ ಪ್ರಶ್ನೆಯನ್ನು ಪೋಷಕರೂ ಕೇಳುತ್ತಾರೆ.

ಶಿಕ್ಷಕರು ಕಲಿಸಿಲ್ಲದೇ ಇರುವುದಕ್ಕೇನು ಕಾರಣ? ಅನೇಕ ಕಾರಣಗಳಿವೆ.

ಮೊದಲನೆಯದು ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರಿರುವುದಿಲ್ಲ. ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಪಾತವಾಗಿ ಅಷ್ಟೇ ಶಿಕ್ಷಕರನ್ನು ನೇಮಿಸುವ ನೀತಿಯಿಂದಾಗಿ ಏಳು ತರಗತಿಗಳಿಗೆ ಎರಡು ಮೂರು ಶಿಕ್ಷಕರಿರುವ ಉದಾಹರಣೆಗಳು ಅದೆಷ್ಟೋ ಇವೆ. ಅಂತಲ್ಲಿ ಪಾಠಗಳೇ ನಡೆಯುವುದಿಲ್ಲ. ಮತ್ತೆ ಉದಾರವಾಗಿ ಅಂಕಗಳನ್ನು ನೀಡದೆ ಏನು ಮಾಡುವುದು? ತಮ್ಮ ಪರಿಶ್ರಮವಿಲ್ಲದೆ ಅಂಕಗಳು ಸಿಗುವುದಾದರೆ ಮತ್ತೆ ವಿದ್ಯಾರ್ಥಿಗಳು ಏಕೆ ಕಲಿಯುತ್ತಾರೆ? ಬದಲಾಗಿ ಅವರು ಅಂಕಗಳ ಮತ್ತು ತೇರ್ಗಡೆಯ ಹಕ್ಕು ಮಂಡಿಸುತ್ತಾರೆ. ಮೇಲಿನ ತರಗತಿಗಳಿಗೆ ಹೋದಂತೆ ಆಲಸ್ಯವೇ ಅಭ್ಯಾಸವಾಗಿ ಬಿಡುತ್ತದೆ. ಏಳನೇ ತರಗತಿ ದಾಟಿ ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಗೆ ಏರಿದಾಗ ಕನಿಷ್ಟ ಅಕ್ಷರಭ್ಯಾಸವೂ ಇಲ್ಲದವರಾಗಿರುತ್ತಾರೆ. ಏನೂ ಗೊತ್ತಿಲ್ಲದ ಮಕ್ಕಳಿಗೆ ಅಕ್ಷರ ಕಲಿಸುವಲ್ಲಿಂದಲೇ ಪಾಠ ಮಾಡುವ ಶೋಚನೀಯ ಸ್ಥಿತಿ ಪ್ರೌಢಶಾಲಾ ಶಿಕ್ಷಕರಿಗೆ ಎದುರಾಗುತ್ತದೆ. ಅವರು ಹೊಂದಿಕೊಳ್ಳುವ ಅಂದರೆ ಉಚಿತ ಅಂಕಗಳನ್ನು ಕೊಟ್ಟು ಎಂಟನೇ ಮತ್ತು ಒಂಭತ್ತನೇ ತರಗತಿಗಳಲ್ಲಿ ತೇರ್ಗಡೆಗೊಳಿಸುವ ಒಳದಾರಿ ಕಂಡುಕೊಳ್ಳುತ್ತಾರೆ. ಮುಂದೆ ಹತ್ತನೆಯ ಪಬ್ಲಿಕ್ ಪರೀಕ್ಷೆಯಲ್ಲಿ ಕೃಪಾಂಕಗಳು ತೇರ್ಗಡೆಯಾಗಲು ನೆರವಾಗುತ್ತವೆ. ವಾಸ್ತವವಾಗಿ ಈ ವಿಧಾನವು ಬಿಟ್ಟಿ ಭಾಗ್ಯಗಳ ಹಂಚಿಕೆಯೇ ಆಗಿದೆ. ಇಲ್ಲಿಂದಲೇ ನಮ್ಮ ಹೊಸ ತಲೆಮಾರಿಗೆ ಉಚಿತಗಳ ಪರಿಚಯವಾಗುತ್ತದೆ. ಅಂದರೆ ಸಾಮರ್ಥ್ಯಗಳನ್ನು ಗಳಿಸದೆ ಪ್ರಸಾದ ಪಡೆಯುವುದು ಅಭ್ಯಾಸವಾಗುತ್ತದೆ. ಹೀಗೆ ಮಾಡುವುದರ ಮೂಲಕ ಉಚಿತಗಳಿಗೆ ಬಲಿಬೀಳುವ ಪ್ರವೃತ್ತಿಯನ್ನು ಜನರಲ್ಲಿ ತುಂಬುವ ಪ್ರಕ್ರಿಯೆಯು ನಮ್ಮ ಸಮಾಜದ ದುರ್ಬಲೀಕರಣಕ್ಕೆ ಕಾರಣವಾಗಿದೆ. ಪ್ರಸ್ತುತ ಉಚಿತಗಳ ವಿತರಣೆಯ ಮೂಲಕ ಮತ ಗಳಿಸಿ ಸರಕಾರವನ್ನು ರಚಿಸುವಲ್ಲಿಯವರೆಗೆ ತಲುಪಿದ್ದೇವೆ. ಇನ್ನು ಹಿಂದಿರುಗಲು ಸಾಧ್ಯವೇ?

ಶಿಕ್ಷಕರ ಅಕ್ರಮ ನೇಮಕಾತಿಯು ಉಚಿತ ಅಂಕಗಳು ಹಾಗೂ ಉದಾರತೆಯ ತೇರ್ಗಡೆಗೆ ಕಾರಣವಾಗಿದೆ. ಕೃಪಾಂಕಗಳನ್ನೇ ಪಡೆದು ತೇರ್ಗಡೆಯಾಗಿ ಸಮರ್ಪಕವಾಗಿ ತರಬೇತಿಯನ್ನೂ ಪಡೆಯದೆ ನೇಮಕಾತಿ ಪಡೆದು ಶಾಲೆಗಳಲ್ಲಿ ತುಂಬಿದ ಶಿಕ್ಷಕರು ಕಲಿಸುವುದನ್ನೇ ತಿಳಿಯದವರಾಗಿರುವುದು ದೊಡ್ಡ ದುರಂತ. ಆದರೆ ಮಕ್ಕಳನ್ನು ಉಚಿತವಾಗಿ ತೇರ್ಗಡೆ ಮಾಡುವ ಅಂಕಗಳು ಅವರ ಕೈಯಲ್ಲಿರುತ್ತವೆ. ಮಕ್ಕಳ ಪ್ರಗತಿ ಪತ್ರದಲ್ಲಿ 80 ರಿಂದ 90ರ ರೇಂಜ್ ನಲ್ಲಿ ಅಂಕಗಳನ್ನು ನೀಡಿ ಹೆತ್ತವರನ್ನು ಖುಷಿ ಪಡಿಸುತ್ತಾರೆ. ಮಕ್ಕಳ ನಿಜ ಸಾಮರ್ಥ್ಯವನ್ನು ಅರಿಯದ ಹೆತ್ತವರು ನಿಜಕ್ಕೂ ವಂಚನೆಗೆ ಒಳಗಾಗುತ್ತಾರೆ. ಅವರು ತಮ್ಮ ಮಕ್ಕಳನ್ನು ಫಸ್ಟ್ ಕ್ಲಾಸ್, ಡಿಸ್ಟಿಂಕ್ಷನ್ ಪಡೆದ ಜಾಣರೆಂದೇ ತಿಳಿಯುತ್ತಾರೆ. ಅಂಕಪಟ್ಟಿಯನ್ನು ಮಕ್ಕಳ ಅರಿವಿನ ವಾಸ್ತವಿಕ ಮಾಪಕವೆಂದೇ ತಿಳಿದು ಉನ್ನತ ಶಿಕ್ಷಣಕ್ಕೆ ಕಳಿಸುತ್ತಾರೆ. ಆದರೆ ಅಲ್ಲೂ ಅದೇ ದುಸ್ಥಿತಿ ಇರುತ್ತದೆ. ಕೃಪಾಂಕಗಳ ರೋಗ ಅಲ್ಲಿಗೂ ವ್ಯಾಪಿಸಿರುತ್ತದೆ. ಕೊನೆಗೆ ಎಂ. ಎ. ಪಡೆದವರು ಕ್ಲಾರ್ಕ್ ಹುದ್ದೆಗೂ ನಾಲಾಯಕ್ ಗಳಾಗಿ ಬಿಡುತ್ತಾರೆ. ಪ್ರತಿಷ್ಠೆ ಮತ್ತು ಹಸಿವು ಅವರನ್ನು ದಯನೀಯ ಪರಿಸ್ಥಿತಿಗೆ ಇಳಿಸಿ ಬಿಡುತ್ತದೆ. ಇದು ಹೀಗಾಗಬಾರದು.

ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು. ಉಚಿತ ಹಂಚಿಕೆಗಳಿಗೆ ಕೈ ಚಾಚುವವರಾಗಬಾರದು. ಅದನ್ನು ಬೇಡ ಎನ್ನುವವರಾಗಬೇಕು. ಅಂತಹ ಮನೋಧರ್ಮವು ಬಾಲ್ಯದಲ್ಲಿ ಶಿಕ್ಷಣದೊಂದಿಗೆ ಮೂಡಿಬರಬೇಕು..……ಮುಂದೆ ಓದಿ…..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

10 hours ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

11 hours ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

11 hours ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

11 hours ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

19 hours ago