ಟೋಕನ್ ಸಿಸ್ಟಮ್…| ಅಡಿಕೆ ಕೊಯ್ಲಿಗಾಗಿ ಈ ಸಿಸ್ಟಂ ಆದಷ್ಟು ಬೇಗ ಬಾರದೇ ಇರದು |

July 31, 2024
11:13 AM

ಭಟ್ಟರು ಬೆಳಗಿನ ಜಾವಕ್ಕೆ ನಾಲ್ಕು ಗಂಟೆಗೆ ಅಲರಾಂ ಸದ್ದಿಗೆ ಎದ್ದು ಅಂಗೈ ನೋಡಿಕೊಂಡು “ಕರಾಗ್ರೆ ವಸತೆ ” ಶ್ಲೋಕ ಹೇಳಿ ಪ್ರಾಥಕಾರ್ಯ ಮುಗಿಸಿ ಒಂದು ಲೋಟ “ಕಾಪಿ” ಕುಡುದವರೇ ಬರ ಬರ ಛತ್ರಿ ಹಿಡಕೊಂಡು ಬ್ಯಾಟರಿ ಬಿಟ್ಟುಕೊಂಡು “ಅವರ ಮನೆಗೆ ” ಹೊರಟರು. ತಾನೇ ಎಲ್ಲದರಲ್ಲೂ ಮುಂದೆ .. ಎಲ್ಲದರಲ್ಲೂ ಮೊದಲು ಎಂಬ ಹಮ್ಮಿನ‌ ಭಟ್ಟರಿಗೆ “ಈ ವಿಚಾರದಲ್ಲೂ ತಾನೇ ಮೊದಲು” ಆಗಬೇಕು ಎಂಬ ಗುರಿ…!

Advertisement

ಆ ಮನೆ ಸಮೀಪಿಸುತ್ತಿದ್ದಂತೆ ಆ ಮನೆಯ ಬೇಲಿ ಸಾಲಿನಲ್ಲಿ ಒಂದರ ಹಿಂದೆ ಒಂದರಂತೆ ಡಸ್ಟರ್ , ಸಿಫ್ಟ್ ಡಿಸೈರು, ಇಟೀಯೋಸು, ಥಾರು, ಸ್ಕಾರ್ಪಿಯೋ, ಐ ಟ್ವೆಂಟಿ , ಬೆಲೆನೋ ಕಾರುಗಳ ಸಾಲು ಎದುರಾಗಿ ಭಟ್ಟರ ಎದೆ ದಸಕ್ಕೆಂದಿತು. ಅವರ ಮನೆಯ ಉಣಗೋಲು ಸರಸಿ “ಆ ಮನೆಯ ಅಂಗಳಕ್ಕೆ ” ಕಾಲಿಟ್ಟರು. ಅಂಗಳದ ಕಡಿಮಾಡಿನಲ್ಲಿ ಹತ್ತು ಹನ್ನೆರಡು ಜನ ಟವಲ್ ಹೊದ್ದುಕೊಂಡು, ಶಾಲು ಹೊದ್ದುಕೊಂಡು ಕೂತಿದಾರೆ.

ಭಟ್ಟರು – ಹೋ ರಾಮ ರಾಮ …. (ಕರೆಗೆ ಒಳಗಿನಿಂದ ಸ್ಪಂದನೆಯಿಲ್ಲ)
ಕಡೀಕೆ ಭಟ್ಟರು – ಹೋ ರಾಮಣ್ಣ ರಾಮಣ್ಣ…‌ (ಅಂತ ಗೌರವಯುತವಾಗಿ ಕರೆದರು)
ಒಳಗಿನಿಂದ ರಾಮ ನ ಹೆಂಡತಿ ಜಲಜ ಹೊರ ಬಂದಲು.
ಭಟ್ಟರೆ ಈ ಟೋಕನ್ ತಗಳಿ. ನಿಮ್ಮ ಟೋಕನ್ ನಂ ಹನ್ನೆರಡು. ಇವರನ್ನ ಎದ್ದಿಲ್ಲ. ಎಂಟು ಗಂಟೆಗೆ ಹೆರ್ಗೆ ಬಂದು ಟೋಕನ್ ಪ್ರಕಾರ ನೋಡ್ತಾರೆ…” ಅಂದು ಭಟ್ಟರಿಗೆ ಟೊಕನ್ ಕೊಟ್ಟಳು.
ಭಟ್ಟರು ಆಶ್ಚರ್ಯ ಚಿಕಿತರಾಗಿ ಟೋಕನ್ ನೋಡ್ತಾ ಬಾಯಿ ಬಿಟ್ಟಾಗ ಜಲಜ ಭಟ್ಟರಿಗೆ – “ಭಟ್ಟರೆ ಇಲ್ಲಿ ಅಂಗಳದಲ್ಲಿ ಕೂತಿದಾರಲ್ಲಾ ಅವರೆಲ್ಲ ರಾತ್ರಿನೇ ಬಂದು ಟೋಕನ್ ತಗೊಂಡು ” ಇವರ ಹತ್ತಿರ ಔಷಧ  ಡೇಟ್ ತಗಣಕ್ಕೆ ಟೋಕನ್ ತಂಗಡ್ ಕಾಯ್ತದರೆ.. ನೀವು ಬಂದದ್ದು ತಡ ಆತು.. ಟೋಕನ್ ಬಗ್ಗೆ ಮಾಹಿತಿ ಬೇಕಾರೆ ಈ ಗ್ಯಾಡೆಲಿರೋ ಬೋರ್ಡು ಓದಿ. ” ಅಂತ ಹೇಳಿ ಮನೆಯೊಳಗೆ ಹೋಗಿ ಬಾಗಿಲು ಹಾಕಿ ಕೊಂಡಳು. ಭಟ್ಟರು ಆ ಬೋರ್ಡ್ ಓದಲು ಶುರು ಮಾಡಿದರು.

“” ಶ್ರೀ ಪಂಜುರ್ಲಿಯೇ ನಮಃ””
ಆತ್ಮೀಯ ಅಡಿಕೆ ತೋಟದ ಮಾಲಿಕರಿಗೆ…..

  1. ಒಂದೇ ಸತಿ ಮಳೆ ಬಿಟ್ಟಿರುವುದರಿಂದ ಒತಾವತಿ ಆಗಿರುವುದರಿಂದ ಟೋಕನ್ ಪ್ರಕಾರವೇ ಔಷಧ ಸಿಂಪಡಣೆ ಮಾಡಿಕೊಡಲಾಗುವುದು.
  2. ಈ ಮಧ್ಯೆ ಮತ್ತೆ ಮಳೆ ಬಂದಲ್ಲಿ ಟೋಕನ್ ಪ್ರಕಾರದ ದಿನಾಂಕ ಮುಂದು ಹೋಗುವುದು ಅನಿವಾರ್ಯ. ತೋಟದ ಮಾಲಿಕರು ಸಹಕರಿಸಿ ಎಂದು ಕೋರುತ್ತಿದ್ದೇನೆ.
  3. ಟೋಕನ್ ನಿಗದಿ ದಿನದ ಅಡಿಕೆ ತೋಟದ ಮಾಲಿಕರು ನಾವು ಔಷಧ ಸಿಂಪಡಣೆ ಗೆ ಬರುವ ಮುಂಚೆಯೇ ಔಷಧ ಸಿದ್ದಪಡಿಸಿಡಬೇಕು.
  4. ಒಂದು ವೇಳೆ ಆ ದಿವಸ ನಮಗೆ ನಿಮ್ಮ ತೋಟಕ್ಕೆ ಬಂದು ಔಷಧ ಸಿಂಪಡಣೆ ಮಾಡಲಾಗದಿದ್ದಲ್ಲಿ ಔಷಧ ಹಾಳಾದದ್ದಕ್ಕೆ ಅಥವಾ ಗುಣಮಟ್ಟ ಕಮ್ಮಿ ಆದದ್ದಕ್ಕೆ ನಾವು ಜವಾಬ್ದಾರಿ ಅಲ್ಲ.
  5. ತೋಟಕ್ಕೆ ವಿಮೆ ಕಡ್ಡಾಯ
  6.  ಔಷಧ ಸಿಂಪಡಣೆ ಗೆ ಬಂದಾಗ ಬೆಳಿಗ್ಗೆ ರುಚಿಕರವಾದ ತಿಂಡಿ ಕಾಫಿ , ಹನ್ನೊಂದು ಗಂಟೆಗೆ ಚಹಾ , ಒಂದು ಗಂಟೆಗೆ ಅತ್ಯುತ್ತಮ ತಯಾರಿಸಲಾದ ಚಿಕನ್ ಊಟ , ಮದ್ಯಾನ ನಾಲ್ಕು ಗಂಟೆಗೆ ಚಹಾ ಮತ್ತು ಸ್ನ್ಯಾಕ್ಸ್ ಕಡ್ಡಾಯ.
  7. ನಿಮ್ಮ ತೋಟಕ್ಕೆ ಬಂದ ಮೇಲೆ ಔಷಧ ಸಿಂಪಡಣೆ ಶುರುವಾದ ಮೇಲೆ ಡ್ರಂ ಕಾಲಿ ಯಾಗುವ ತನಕವೂ ಔಷಧ ಹೊಡಿತೀವಿ‌
    ಮದ್ಯೆ ಮಳೆ ಬಂದು ಔಷಧ ತೊಳೆದು ಹೋದಲ್ಲಿ ನಾವು ಜವಾಬ್ದಾರಿ ಅಲ್ಲ.
  8. “ನಿಮ್ಮ ತೋಟದ ಕೊಳೆ ರೋಗಕ್ಕೆ ನೀವೇ ಜವಾಬ್ದಾರರು”…

ಸಹಕಾರವಿರಲಿ…
ವಂದನೆಗಳು
ರಾಮಣ್ಣ..
ಕೊನೆಗಾರರು.
ಕೊಳೆತೋಟ ಗ್ರಾಮ.
ಅಡಿಕೆಹಿತ್ತಲು (ವಿ)
ತೀರ್ಥಹಳ್ಳಿ ತಾಲ್ಲೂಕು.
‌‌ ಸಮಾಪ್ತಿ

ಭಟ್ಟರು ಕುಸುದ್ ಅಂಗಳದಲ್ಲಿ ಹಾಕಿದ್ದ ಕೂತ್ರು. ಹಂಗೂ ಹಿಂಗೂ ಬೆಳಿಗ್ಗೆ ಎಂಟು ಗಂಟೆ ಆತು. ಶ್ರೀಮಾನ್ ರಾಮಣ್ಣನವರು ಒಂದು ಡೈರಿ ಬುಕ್ ಹಿಡಕೊಂಡು ಮನೆಯೊಳಗಿನಿಂದ ಹೊರಗೆ ಬಂದರು. ಅಂಗಳದಲ್ಲಿ ಖುರ್ಚಿ ಮೇಲೆ ಕೂತಿದ್ದ ಎರಡು ಎಕರೆ , ನಾಲ್ಕು ಎಕರೆ, ಎಂಟು ಎಕರೆ, ಹತ್ತು ಎಕರೆ ಅಡಿಕೆ ತೋಟದ ಮಾಲೀಕರೆಲ್ಲರೂ ಥಟ್ ನೆ ಎದ್ದು ನಿಂತರು. ರಾಮಣ್ಣ ಎಲ್ಲ ಅಡಿಕೆ ತೋಟದವರಿಗೆ ಕೂರಲು ಕೈ ಸನ್ನೆ ಮಾಡಿದರು. ಎಲ್ರೂ ವಿನಮ್ರತೆಯಿಂದ ಕೂತರು.

ರಾಮಣ್ಣನ ಮುಖ ಗಜ‌ಗಾಂಭೀರ್ಯವಾಗಿತ್ತು. ಅಂಗಳದ ವಾತಾವರಣ "ಮೆಸೇಜ್ ಬೀಪ್ ಸೌಂಡ್ ಸೈಲೆನ್ಸ್'" ಆಗಿತ್ತು. ಟೋಕನ್ ಪ್ರಕಾರ ಒಬ್ಬೊಬ್ಬರೇ ರಾಮಣ್ಣನ ಡೈರಿಯಲ್ಲಿ ಔಷಧ ಸಿಂಪಡಣೆಯ ದಿನಾಂಕದ ಅಪಾಯ್ಮಂಟ್ ತೆಗದುಕೊಂಡು ಕೈಮುಗಿದು ಕೃತಾರ್ಥರಾಗಿ ಹೊರಗೆ ಹೊರಟರು. 
ಭಟ್ಟರ ಹನ್ನೆರಡನೇ ನಂ ಟೋಕನ್ ಬಂತು.
ಭಟ್ಟರಿಗೆ ಆಗಷ್ಟ್ ಇಪ್ಪತ್ತನೇ ತಾರೀಖು ಔಷಧದ ದಿನಾಂಕ ಸಿಕ್ತು....!!
ಭಟ್ಟರ ಬಾಯಿ ಚಪ್ಪೆ ಚಪ್ಪೆಯಾತು..
" ರಾಮಣ್ಣ... ಅಷ್ಟು ದಿನ ಬಾಳ ತಡಾ ಆಗುತ್ತದೆ.. ಅಷ್ಟೊತ್ತಿಗೆ ನಮ್ಮ ತ್ವಾಟದ ಅಡಿಕೆ ಕೊನೆಯಲ್ಲಿ ಕೊಳೆ ಬಂದ್ ಅಡಿಕೆ ಕೊನೆಯಲ್ಲಿ ಮೂರು ಮತ್ತೊಂದು ಕಾಯಿ ಉಳಿಯಬಹುದು ಅಷ್ಟೇ... " ಅಂತ ಕಣ್ಣೀರೇ ಹಾಕಿದರು.

ರಾಮಣ್ಣ ನಿರ್ಲಿಪ್ತವಾಗಿ ನಿಷ್ಠೂರವಾಗಿ.. "ಭಟ್ಟರೆ ಅದಕ್ಕೆ ನಾನೇನೂ ಮಾಡೋಕೆ ಆಗೋಲ್ಲ... ಆಗ ಎಷ್ಟು ಕಾಯಿ ಉಳಿದಿರ್ತಾವೋ ಅಷ್ಟು ಕಾಯಿಗೆ ಔಷಧ ಸಿಂಪಡಣೆ ಮಾಡೋಣ..".. ಅಂದರು. ಭಟ್ಟರು ರಾಮಣ್ಣ ನ ಮಕ ನೋಡಿ ಆ ಗಾಂಭೀರ್ಯ ನೋಡಿ ಹೆಚ್ಚು ಮಾತನಾಡದೇ ರಾಮಣ್ಣ ನ ಮನೆಯಿಂದ ತಮ್ಮ ಮನೆಗೆ ನಿಧಾನವಾಗಿ ಹೊರಟರು. ಉಣುಗೋಲ್ ಮತ್ತೆ ಸರಿಸಿ ಮನೆಯ ಕಡೆ ಹೋಗುವಾಗ ಒಂದು ದೊಡ್ಡ ಮಳೆ ಬಂತು. ಛತ್ರಿ ಸಿಡಿಸಿ ಮನೆ ಕಡೆ ಹೋಗುವುದೇ ಮಾಡಿದರು.  ಭಟ್ಟರು ಬುದ್ದಿವಂತ ಆಗಲಿಲ್ಲ... ‌ 
(ತಮಾಷೆ ಗಾಗಿ....)

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಾರ್ವಜನಿಕ ಬದುಕಿನಲ್ಲಿ ನಿರಾಸೆಯ ಸ್ಫೋಟ…
April 2, 2025
6:40 AM
by: ರಮೇಶ್‌ ದೇಲಂಪಾಡಿ
ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಸಾಗರ ತಾಲೂಕಿನ ನೀಚಡಿಯಲ್ಲೊಂದು ವಿಶಿಷ್ಟ “ಕೆರೆ ಹಬ್ಬ”
March 24, 2025
7:25 AM
by: ಪ್ರಬಂಧ ಅಂಬುತೀರ್ಥ
ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror

Join Our Group