ಪ್ರವಾಸೋದ್ಯಮ ಮತ್ತು ಪ್ರಕೃತಿಯ ಅವಘಡಗಳು | ಪರಿಸರದ ಹಾನಿಗಷ್ಟೇ ಸೀಮಿತವಾಯ್ತೇ ಈ ಉದ್ಯಮ..?

August 3, 2024
1:27 PM

ಭಾರತದಾದ್ಯಂತ ಬೃಹತ್ ಜನಸಂಖ್ಯೆಯ ದೇಶದಲ್ಲಿ ಪ್ರವಾಸೋದ್ಯಮ(Tourism) ಒಂದು ದೊಡ್ಡ ಉದ್ಯಮವಾಗಬೇಕೆ ? ನಿರುದ್ಯೋಗ(Unemployment) ನಿವಾರಣೆಗೆ ಪ್ರವಾಸೋದ್ಯಮವು ಒಂದು ಉತ್ತಮ ಮಾರ್ಗವೇ ? ಕೇರಳದ(Kerala) ವೈನಾಡಿನ(Wayanad) ಮಂಡಕೈ ಭೂಕುಸಿತ(Land slide) ಪ್ರಕರಣದ ನಂತರ ಈ ರೀತಿಯ ಪ್ರಶ್ನೆಗಳು ಏಳುತ್ತಿವೆ.. ಪ್ರವಾಸೋದ್ಯಮ ಉದ್ಯಮವಾಗಿ ಅಭಿವೃದ್ಧಿ ಹೊಂದಬೇಕಾದರೆ, ಅದು ಬಹುದೊಡ್ಡ ಆದಾಯ ಮೂಲವಾಗಬೇಕಾದರೆ, ಪ್ರಕೃತಿ ಬಹಳಷ್ಟು ಒತ್ತಡಕ್ಕೆ ಸಿಕ್ಕಿಹಾಕಿಕೊಳ್ಳುವುದು ಖಚಿತ. ಅದರಲ್ಲೂ ‌ಹಿಮಾಚ್ಚಾದಿತ ಪ್ರದೇಶಗಳು, ಬೆಟ್ಟ ಗುಡ್ಡಗಳು, ನದಿ ಕಣಿವೆಗಳು, ಜಲಪಾತಗಳು, ನಿತ್ಯ ಹರಿದ್ವರ್ಣದ ಹೆಚ್ಚ ಹಸುರಿನ ಕಾಡು ಮೇಡುಗಳು ಈ ಪ್ರವಾಸೋದ್ಯಮದ ಒತ್ತಡಕ್ಕೆ ಸಾಕಷ್ಟು ನಲುಗುತ್ತಿದೆ‌. ಪರಿಸರದ ಹಾನಿಗಷ್ಟೇ(Environment Pollution) ಸೀಮಿತವಾಗಿದ್ದ ಈ ಉದ್ಯಮ ಈಗ ಭೂಕುಸಿತಗಳಿಗೂ ಕಾರಣವಾಗುತ್ತಿರುವುದು ಬಹುದೊಡ್ಡ ಎಚ್ಚರಿಕೆ..

Advertisement

ಗಮನಿಸಿ ನೋಡಿ, ಒಂದು ಕ್ಷೇತ್ರ ಸಹಜವಾಗಿಯೇ ಸಾರ್ವಜನಿಕರ ಆಕರ್ಷಕ ಕ್ಷೇತ್ರವಾದರೆ ಒಂದಷ್ಟು ಜನ ಪ್ರವಾಸ ಪ್ರಿಯರು ಆಗಾಗ ಅಲ್ಲಿಗೆ ಹೋಗಿ ಆ ವೈಭವದ ದೃಶ್ಯಗಳನ್ನು ಕಣ್ತುಂಬಿಕೊಂಡು ಅಲ್ಲಿನ ಅನುಭವಗಳನ್ನು ಆಸ್ವಾದಿಸಿ ಬರುತ್ತಿದ್ದರು. ಹೆಚ್ಚುಕಡಿಮೆ ಅದು ಒಂದು ಸಾಹಸ ಪ್ರವೃತ್ತಿಯೇ ಆಗಿತ್ತು. ಅದು ಅತ್ಯಂತ ಸಹಜ ಬೆಳವಣಿಗೆ….

ಆದರೆ ಯಾವಾಗ ಸರ್ಕಾರಗಳು ಪ್ರವಾಸೋದ್ಯಮವನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ಅದರಿಂದ ಆದಾಯ ಗಳಿಸಬೇಕು ಎಂಬ ಹಂಬಲಕ್ಕೆ, ದುರಾಸೆಗೆ ಒಳಗಾದವೋ ಆಗ ದೊಡ್ಡ ದೊಡ್ಡ ರಸ್ತೆಗಳು, ವಿದ್ಯುತ್ ಸಂಪರ್ಕಗಳು, ಸೇತುವೆಗಳು, ಬೆಟ್ಟಗುಡ್ಡಗಳಲ್ಲಿ ಮಣ್ಣು ಕುಸಿಯದಂತೆ ಕಾಂಕ್ರೀಟ್ ವ್ಯವಸ್ಥೆಗಳು ಅಂದರೆ ನೀರಿನ ಚಿಲುಮೆಯನ್ನು, ಜಲ ಮೂಲಗಳನ್ನು ಮುಚ್ಚುವುದು, ಬೆಟ್ಟ ಗುಡ್ಡಗಳನ್ನ ಕೊರೆದು ಸುರಂಗಗಳನ್ನು ನಿರ್ಮಿಸುವುದು ಒಂದು ಅಭಿವೃದ್ಧಿ ಎಂಬಂತೆ ಬಿಂಬಿಸಿದವು. ಕೆಲವು ಮೂಲ ನಿವಾಸಿಗಳು ಮತ್ತು ಸಣ್ಣ ಉದ್ಯಮಿಗಳು ಸಹ ಹೋಮ್ ಸ್ಟೇ, ರೆಸಾರ್ಟ್ ರೀತಿಯ ದೊಡ್ಡ ಮನರಂಜನೆಯ ತಾಣಗಳನ್ನು ನಿರ್ಮಿಸಿ ಗುಡ್ಡಗಳ ಮೇಲೆ ಕೃತಕ ಕೆರೆ, ಸ್ವಿಮ್ಮಿಂಗ್ ಪೂಲ್, ಕಟ್ಟಡಗಳನ್ನು ನಿರ್ಮಿಸಲು ಪ್ರಾರಂಭಿಸಿದರು. ಇದು ಒಂದು ರೀತಿ ಆದಾಯದ ಮೂಲವಾಗಿದ್ದೇನೊ ನಿಜ, ಆದರೆ ಅದಕ್ಕಾಗಿ ಆಯ್ಕೆ ಮಾಡಿಕೊಂಡ ವಿಧಾನ ಮಾತ್ರ ಈಗ ತುಂಬಾ ದುಬಾರಿಯಾಗುತ್ತಿದೆ. ಸಣ್ಣ ಹಣಕ್ಕಾಗಿ ಭಾರಿ ಬೆಲೆ ತೆರಬೇಕಾಗಿದೆ….

ವಾಸ್ತವದಲ್ಲಿ ಪ್ರಕೃತಿ ಪ್ರಿಯರು, ಆಸಕ್ತ ಪ್ರವಾಸಿಗಳು ಹೇಗೋ ಕಷ್ಟಪಟ್ಟು ಕೆಲವು ಸುಂದರ ಪ್ರದೇಶಗಳ ಸ್ಥಳ ತಲುಪಿ ಇರುವ ವ್ಯವಸ್ಥೆಯಲ್ಲಿಯೇ ಸೌಂದರ್ಯ ಸವಿದು ತೃಪ್ತಿ ಹೊಂದುತ್ತಾರೆ. ಆದರೆ ಈ ಕುಡುಕರು, ಶೋಕಿ ವಾಲಾಗಳು, ಉಡಾಫೆ ಮನೋಭಾವದವರು ಆ ಕಠಿಣ ಪರಿಸ್ಥಿತಿಯ ನಡುವೆಯೂ ಲಗ್ಜುರಿ ಜೀವನಶೈಲಿಯನ್ನು ಅಪೇಕ್ಷಿಸುತ್ತಾರೆ. ಅವರಿಗೆ ಪ್ರಕೃತಿ ಸವಿಯುವುದಕ್ಕಿಂತ ಕುಡುಕ ಪಾರ್ಟಿ ಮಾಡುವುದೇ ಒಂದು ಶೋಕಿ ಆಗಿರುತ್ತದೆ. ಅವರ ತೆವಲಿಗಾಗಿ ಪ್ರಕೃತಿಯ ಮೇಲೆ ನಿರಂತರ ಒತ್ತಡ ಬೀಳುತ್ತಿದೆ….

ಇದು ಒಂದು ಕಡೆಯಾದರೆ, ಜನಸಂಖ್ಯೆಯ ಹೆಚ್ಚಳದಿಂದ ಎಲ್ಲೆಂದರಲ್ಲಿ ಮನೆಗಳನ್ನು, ವಾಸ ಸ್ಥಳಗಳನ್ನು ನಿರ್ಮಿಸಿಕೊಳ್ಳಬೇಕಾದ ಅನಿವಾರ್ಯತೆಯು ಉಂಟಾಗಿದೆ. ಇದರಿಂದಾಗಿ ಎಂದೋ ಸಂಭವಿಸಬಹುದಾದ ಘಟನೆಗಳ ಬಗ್ಗೆ ನಿರ್ಲಕ್ಷ ಹೊಂದಿ ಕಟ್ಟಡಗಳನ್ನು ಕಟ್ಟಲಾಗುತ್ತದೆ. ಊರುಗಳನ್ನು ವಾಸಯೋಗ್ಯ ಮಾಡಲಾಗುತ್ತದೆ. ಪ್ರಕೃತಿ ಯಾವಾಗಲೋ ಒಮ್ಮೆ ವಿಕೋಪಕ್ಕೆ ಹೋದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ನಿಜಕ್ಕೂ ಇವುಗಳಿಗೆ ಸ್ಪಷ್ಟವಾದ, ನೇರವಾದ ಪರಿಹಾರ ಕ್ರಮಗಳು ಖಂಡಿತ ಇಲ್ಲ. ಆದರೆ ಸ್ವಲ್ಪಮಟ್ಟಿಗೆ ಊಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದೇ ಹೊರತು ದಿಢೀರನೆ ಆಗುವ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಕಷ್ಟ……

ಅವುಗಳನ್ನು ಎದುರಿಸಿಯೇ ಜಗತ್ತಿನ ನಾಗರಿಕತೆಗಳು ಇನ್ನೂ ಉಳಿದಿವೆ. ನಾವು ಕೂಡ ಈಗಲೂ ಅದರೊಂದಿಗೆ ಸಂಘರ್ಷ ನಡೆಸುತ್ತಲೇ ಬದುಕುತ್ತಿದ್ದೇವೆ..ವೈನಾಡಿನ ಈ ಕ್ಷಣದ ಮುನ್ನೂರಕ್ಕೂ ಹೆಚ್ಚು ಸಾವುಗಳಿಗೆ ಪ್ರವಾಸೋದ್ಯಮ ನೇರ ಸಂಬಂಧ ಹೊಂದಿಲ್ಲದೇ ಇರಬಹುದು. ಅಲ್ಲಿನ ಗುಡ್ಡ ಕುಸಿತದ ಪರಿಣಾಮದಿಂದ ನದಿಯ ನೀರು ಬೇರೆ ಕಡೆ ತಿರುಗಿ ಊರು ಕೊಚ್ಚಿಕೊಂಡು ಹೋಗಿದೆ. ಆದರೆ ಭವಿಷ್ಯದಲ್ಲಿ ಸಹಜವಾಗಿ ಆಗುವ ಪ್ರಾಕೃತಿಕ ವಿಕೋಪಕ್ಕಿಂತ ಕೃತಕವಾಗಿ ಮಾನವನೇ ನಿರ್ಮಿಸಿಕೊಂಡ ಬಲೆಯೊಳಗೆ ಸಿಕ್ಕಿಹಾಕಿಕೊಳ್ಳದೆ ಬದುಕಬೇಕಾದರೆ ಪ್ರವಾಸೋದ್ಯಮದ ಬಗ್ಗೆ ಮರುಚಿಂತನೆ ನಡೆಸಬೇಕಿದೆ…..

ಹಾಗೆಂದು ಪ್ರವಾಸೋದ್ಯಮವನ್ನು ನಿರ್ಲಕ್ಷಿಸಬೇಕೆಂದಲ್ಲ. ಜನರ ಜ್ಞಾನಾರ್ಜನೆ, ಮನೋಲ್ಲಾಸ, ಬದುಕಿನ ಏಕತಾನತೆ ಮುರಿಯಲು, ಜೀವನೋತ್ಸಾಹ ತುಂಬಲು, ಕೌಟುಂಬಿಕ ಮತ್ತು ಗೆಳೆತನದ ಸಂಬಂಧಗಳ ಆನಂದ ಅನುಭವಿಸಲು ಪ್ರವಾಸಗಳು ಬೇಕೇಬೇಕು. ಆದರೆ ಅದರಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪರಿಸರಕ್ಕೆ ಶಾಶ್ವತ ಹಾನಿ ಮಾಡಬಾರದು. ಅನೇಕ ಸುಂದರ ಸ್ಥಳಗಳನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಬಾರದು. ಮೌಂಟ್ ಎವರೆಸ್ಟ್ ಪರ್ವತದ ಮೇಲೆಯೇ ಎಷ್ಟೋ ಟನ್ ಕಸದ ರಾಶಿ ಇದೆಯಂತೆ. ಈಗಲೂ ಅನೇಕ ಪ್ರವಾಸಿ ಸ್ಥಳಗಳಲ್ಲಿ ಕೊಳಚೆ ಪ್ರದೇಶಗಳು ಸೃಷ್ಟಿಯಾಗುತ್ತಿವೆ……

ಸಿಂಗಪುರ, ದುಬೈ, ಥೈಲ್ಯಾಂಡ್, ಶ್ರೀಲಂಕಾ ಸ್ವಿಟ್ಜರ್ಲ್ಯಾಂಡ್ ಮುಂತಾದ ಸ್ಥಳಗಳು ಪ್ರವಾಸೋದ್ಯಮಕ್ಕೆಂದೇ ಇವೆ. ಅವರಿಗೆ ಅದೇ ಆದಾಯದ ಮೂಲಗಳು. ಆದರೆ ನಾವು ಆ ರೀತಿಯ ಜೀವನಕ್ಕೆ ಸಂಪೂರ್ಣ ಬಲಿಯಾಗದೆ, ಕಷ್ಟಪಟ್ಟು ದುಡಿದು, ಉತ್ಪಾದನೆ ಮಾಡಿ ಬದುಕುವ ಜೀವನ ಶೈಲಿಗೆ ಹೊಂದಿಕೊಂಡರೆ ಉತ್ತಮ. ಅದರಿಂದ ಆರೋಗ್ಯವು ಉತ್ತಮವಾಗುತ್ತದೆ. ನೆಮ್ಮದಿಯು ಇರುತ್ತದೆ. ಸರಳ ಬದುಕು ನಮ್ಮದಾಗುತ್ತದೆ… ಹಣ ಮಾಡಬೇಕೆಂದು ಎಲ್ಲವನ್ನೂ ಉದ್ಯಮವಾಗಿ ಪರಿವರ್ತಿಸಿದರೆ ಮುಂದಿನ ದಿನಗಳು ಕಷ್ಟವಾಗಲಿದೆ. ಈಗಾಗಲೇ ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣದ ಒತ್ತಡಕ್ಕೆ ನಾವು ಬಲಿಯಾಗಿದ್ದೇವೆ. ಆಹಾರದ ಕಲಬೆರಕೆಯಿಂದ ಸುಸ್ತಾಗಿದ್ದೇವೆ. ಮಾಧ್ಯಮಗಳು ಒಂದು ಉದ್ಯಮವಾಗಿ ಮೌಲ್ಯಗಳ ಕುಸಿತ ಕಾಣುತ್ತಿದ್ದೇವೆ. ಇದೀಗ ಪ್ರವಾಸೋದ್ಯಮವೂ ಒಂದು ಪ್ರಜ್ಞಾಪೂರ್ವಕ ಆದಾಯದ ಮೂಲವಾದರೆ ಪ್ರಾಕೃತಿಕ ವಿಕೋಪಗಳಿಗೆ ನಾವು ಸಿದ್ದರಾಗಲೇಬೇಕಾಗುತ್ತದೆ.. ವಯ್ನಾಡಿನ ಮಂಡಕೈ ದೃಶ್ಯಗಳು ನಮ್ಮನ್ನು ಎಚ್ಚರಿಸದಿದ್ದರೆ ನಮ್ಮ ಸಂವೇದನಾಶೀಲತೆ ನಾಶವಾಗಿದೆ ಎಂದೇ ಭಾವಿಸಬೇಕು. ಉಳಿದದ್ದು ಅವರವರ ವಿವೇಚನೆಗೆ ಬಿಟ್ಟದ್ದು…….

ವಿವೇಕಾನಂದ. ಎಚ್. ಕೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
2030ರ ವೇಳೆಗೆ 170 ಮಿಲಿಯನ್ ಉದ್ಯೋಗ ಸೃಷ್ಟಿ | ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರ
March 31, 2025
3:50 PM
by: ದ ರೂರಲ್ ಮಿರರ್.ಕಾಂ
223 ಕಾಡ್ಗಿಚ್ಚು ಘಟನೆ – 130 ಹೆಕ್ಟೇರ್ ಅರಣ್ಯ ನಾಶ
March 30, 2025
11:24 PM
by: The Rural Mirror ಸುದ್ದಿಜಾಲ
ಜಲಸಂರಕ್ಷಣೆಯ ಮಾದರಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ | 8 ವರ್ಷಗಳಲ್ಲಿ ದೇಶದಲ್ಲಿ 11 ಶತಕೋಟಿ ಘನ ಮೀಟರ್ ನೀರು ಸಂರಕ್ಷಣೆ |
March 30, 2025
10:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group