ಅಡಿಕೆ ದಾಸ್ತಾನು ಮಾಡಿರುವ ಟ್ಯಾಂಕ್‌ಗೆ ಇಳಿದು ಸ್ವಚ್ಛ ಮಾಡುತ್ತಿರುವಾಗ ವಿಷಕಾರಿ ಅನಿಲ ಸೇವಿಸಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.ಅತಿಯಾದ ಮೀಥೇನ್ ಅನಿಲವು ಟ್ಯಾಂಕ್‌ನಲ್ಲಿ ತುಂಬಿ, ಆಮ್ಲಜನಕದ ಕೊರತೆಯನ್ನು ಉಂಟುಮಾಡಿತು ಎಂದು ವರದಿಯಾಗಿದೆ.
ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಅಡಿಕೆ ಕಟಾವು ಮಾಡಿದ ಬಳಿಕ ದಾಸ್ತಾನು ಮಾಡಿ ಸಂಸ್ಕರಣೆಯ ನಂತರ ಬಾಂಗ್ಲಾದೇಶದಲ್ಲಿ ಅಡಿಕೆ ಮಾರಾಟ ಮಾಡಲಾಗುತ್ತದೆ. ಹೀಗೆ ದಾಸ್ತಾನು ಮಾಡಿರುವ ಅಡಿಕೆಯ ಟ್ಯಾಂಕ್‌ಗೆ ಇಳಿದ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದು ದಿನದ ಹಿಂದೆ ಟ್ಯಾಂಕ್‌ನಲ್ಲಿ ಅಡಿಕೆ ದಾಸ್ತಾನು ಮಾಡಲಾಗಿತ್ತು, ಮರುದಿನ ಇನ್ನೊಂದು ಟ್ಯಾಂಕ್ ಸ್ವಚ್ಛಗೊಳಿಸಿ ಅಡಿಕೆ ತುಂಬಿದ್ದ ಟ್ಯಾಂಕ್ ತೆರೆಯುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದರು ಎಂದು ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಉಳಿದ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಮಾರು ಎಂಟು ಅಡಿ ಆಳದ ತೊಟ್ಟಿಯಲ್ಲಿ ಅಡಿಕೆ ಶೇಖರಣೆಯಾಗಿದ್ದು, ಅಡಿಕೆಯನ್ನು ಹೊರತೆಗೆಯಲು ಮುಂದಾದಾಗ ಅವಘಡ ಸಂಭವಿಸಿದೆ.ಅಡಿಕೆ ಕೊಳೆತ ತೊಟ್ಟಿಯಲ್ಲಿ ಅತಿಯಾದ ಮೀಥೇನ್ ಅನಿಲವನ್ನು ಉತ್ಪತ್ತಿಯಾಗುತ್ತದೆ. ಇದು ಆಮ್ಲಜನಕದ ಕೊರತೆಗೆ ಕಾರಣವಾಗುತ್ತದೆ. ಇದರಿಂದಾಗಿ ಅಸ್ವಸ್ಥತೆ ಉಂಟಾಗುತ್ತದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ.