ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿ ಹೇಳಿದರು.
ಮುಂಗಾರು ಅಧಿವೇಶನಲದ ಪ್ರಶ್ನೋತ್ತರ ಕಲಾಪದಲ್ಲಿ, ಕೃಷಿಕರಿಗಾಗಿ ಕೃಷಿ ಸಮ್ಮಾನ್ ನಿಧಿಯನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿವರೆಗಿನ ಬೆಂಬಲವನ್ನು ಒದಗಿಸಲಾಗುತ್ತಿದೆ. ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ಎಲ್ಲಾ ಭೂ ಹಿಡುವಳಿ ರೈತ ಕುಟುಂಬಗಳಿಗೆ ಇದು ಅನ್ವಯ ಆಗುತ್ತಿದೆ ಎಂದು ಹೇಳಿದರು. ಈಗಾಗಲೇ 10 ಕೋಟಿಗೂ ಅಧಿಕ ಕೃಷಿಕರು ಈ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಸಚಿವರು ವಿವರಿಸಿದರು.
ರೈತರಿಗೆ ನೀಡುತ್ತಿರುವ ಸಹಾಯಧನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೃಷಿಕರಿಗೆ ಸರ್ಕಾರದಿಂದ ಹಲವಾರು ಸಹಾಯ ಧನ ಮತ್ತು ಸಬ್ಸಿಡಿ ಯೋಜನೆಗಳು ಲಭ್ಯ ಇವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ ಮತ್ತು ಮೀನುಗಾರಿಕಾ ಇಲಾಖೆಯಿಂದ ಒಳನಾಡು ಮೀನುಗಾರಿಕೆ ರಚಿಸುವ ಪ್ರತಿ ಮೀನು ಸಾಕಾಣಿಕ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ಕೃಷಿ ಕ್ಷೇತ್ರದ ಕಲ್ಯಾಣವನ್ನು ಪ್ರಥಮ ಆದ್ಯತೆಯಾಗಿಸಿಕೊಂಡಿದ್ದಾರೆ ಎಂದರು.
ಬರ, ಪ್ರವಾಹ, ಚಂಡಮಾರುತ ಸೇರಿದಂತೆ ವಿವಿಧ ರೀತಿಯ ನೈಸರ್ಗಿಕ ವಿಕೋಪಗಳಿಂದ ರೈತರ ಬೆಳೆ ನಷ್ಟವನ್ನು ಸರಿದೂಗಿಸಲು ಆರ್ಥಿಕ ನೆರವು ನೀಡುವ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಸಚಿವರು ಹೇಳಿದರು . ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಇದೇ ಉದ್ದೇಶಕ್ಕಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.ಇದು ರೈತರ ಬೇಡಿಕೆ ಆಧರಿತ ಯೋಜನೆಯಾಗಿದ್ದು, ಬೆಳೆ ವೈಫಲ್ಯದ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವ ಮೂಲಕ, ಇದು ರೈತರ ಆದಾಯವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದರು. 2024-25 ರ ಅವಧಿಯಲ್ಲಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.


