ತ್ರಿಪುರಾ ಸರ್ಕಾರವು 2026-27 ರ ಹೊತ್ತಿಗೆ ಸುಮಾರು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಕೃಷಿಯನ್ನು ಬೆಳೆಸುವ ಕಡೆಗೆ ಆಸಕ್ತವಾಗಿದೆ. ಇದಕ್ಕಾಗಿ ವಿವಿಧ ಕಂಪನಿಗಳ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ. ಇದೀಗ ಸರ್ಕಾರವೂ ತಾಳೆ ಕೃಷಿಯತ್ತ ಆಸಕ್ತವಾಗಿದೆ.ಈಗಾಗಲೇ ಈಶಾನ್ಯ ರಾಜ್ಯದಲ್ಲಿ 56.35 ಹೆಕ್ಟೇರ್ ಭೂಮಿಯಲ್ಲಿ ತಾಳೆ ಎಣ್ಣೆ ಗಿಡಗಳನ್ನು ಬೆಳೆಸಲಾಗುತ್ತಿದೆ.
ತ್ರಿಪುರಾದಲ್ಲಿ ತಾಳೆ ಎಣ್ಣೆ ಕೃಷಿಯನ್ನು ವಿಸ್ತರಿಸಲು, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಭಾರತೀಯ ತಾಳೆ ಸಂಶೋಧನಾ ಸಂಸ್ಥೆಯಿಂದ 2020 ರಲ್ಲಿ ಡಿಜಿಟಲ್ ಮ್ಯಾಪಿಂಗ್ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ, ತ್ರಿಪುರಾ ರಾಜ್ಯದಲ್ಲಿ 1,46,364 ಹೆಕ್ಟೇರ್ ಭೂಮಿಯನ್ನು ಗುರುತಿಸಲಾಗಿದೆ. ಅದರಲ್ಲಿ 2026-27ರ ವೇಳೆಗೆ 7000 ಹೆಕ್ಟೇರ್ ಭೂಮಿಯನ್ನು ಪಾಮ್ ಆಯಿಲ್ ಕೃಷಿಗೆ ಒಳಪಡಿಸಲಾಗುವುದು ಎಂದು ಅಲ್ಲಿನ ಕೃಷಿ ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ. ಇದಕ್ಕಾಗಿ ಕೃಷಿ ಇಲಾಖೆಯು ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ ಮತ್ತು ಪತಂಜಲಿ ಫುಡ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಅಡಿಯಲ್ಲಿ ಒಪ್ಪಂದಗಳಿಗೆ ಸಹಿ ಕೂಡಾ ಹಾಕಿದೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶದಿಂದ ಗೋದ್ರೇಜ್ ಅಗ್ರೋವೆಟ್ ಸಹ ತಾಳೆ ಗಿಡಗಳನ್ನು ತಂದು 52.01 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದೆ. ಪತಂಜಲಿ ಫುಡ್ ಪ್ರೈವೇಟ್ ಲಿಮಿಟೆಡ್ ಸಹ 56.35 ಹೆಕ್ಟೇರ್‌ನಲ್ಲಿ ತಾಳೆ ಗಿಡಗಳನ್ನು ನೆಟ್ಟಿದೆ. ತ್ರಿಪುರಾ ರಾಜ್ಯವು ತಾಳೆ ಕೃಷಿಗೆ ಉತ್ತಮ ವಾತಾವರಣ ಹೊಂದಿದೆ ಎಂದು ಸಚಿವರು ಹೇಳಿದ್ದಾರೆ. ತಾಳೆ ಎಣ್ಣೆ ಕೃಷಿಯ ಬಗ್ಗೆ ತರಬೇತಿ ನೀಡಲು ರಾಜ್ಯವು ಈಗಾಗಲೇ 18 ಅಧಿಕಾರಿಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿದೆ ಎಂದು ಸಚಿವರು ಹೇಳಿದರು. ಇಲಾಖೆಯು ಈಗಾಗಲೇ 2123 ರೈತರಿಗೆ ತರಬೇತಿ ನೀಡಿದ್ದು, ಅವರಲ್ಲಿ 1076 ರೈತರು ಉತ್ತಮ ಲಾಭಕ್ಕಾಗಿ ತಾಳೆ ಎಣ್ಣೆ ಗಿಡಗಳನ್ನು ಬೆಳೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ತಾಳೆ ಎಣ್ಣೆ ಬೆಳೆಯುವ ಸಾಮರ್ಥ್ಯವಿರುವುದರಿಂದ ಕೃಷಿ ಇಲಾಖೆ ಈ ಸಾಧ್ಯತೆಯನ್ನು ಅನ್ವೇಷಿಸಿದೆ. ಸದ್ಯಕ್ಕೆ ಕೃಷಿ ಅಭಿವೃದ್ಧಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದಲೂ ತಾಳೆ ಕೃಷಿಯ ಬಗ್ಗೆ ತ್ರಿಪುರಾ ಸಹಿತ ಈಶಾನ್ಯ ರಾಜ್ಯಗಳು ಆಸಕ್ತವಾಗಿದೆ. ಇದರ ಜೊತೆಗೆ ರಬ್ಬರ್ ಬೆಳೆಯತ್ತಲೂ ಮನಸ್ಸು ಮಾಡಿದ್ದವು. ಆದರೆ ತಾಳೆ ಆಹಾರ ಬೆಳೆಯಾಗಿಯೂ ಅಗತ್ಯ ಇರುವುದರಿಂದ ಮತ್ತು ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ತಾಳೆ ಮರದಿಂದ ಆದಾಯ ಲಭ್ಯವಾಗುತ್ತದೆ ಮತ್ತು ರೈತರು ಅದರಿಂದ 30 ವರ್ಷಗಳವರೆಗೆ ಆದಾಯ ಪಡೆಯಬಹುದು ಎಂಬುದು ಸರ್ಕಾರ ಯೋಚನೆ.
ಸದ್ಯ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒಡಿಶಾ, ಕರ್ನಾಟಕ, ಗೋವಾ, ಅಸ್ಸಾಂ, ತ್ರಿಪುರಾ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳು ಪ್ರಮುಖ ತಾಳೆ ಬೆಳೆಯುವ ರಾಜ್ಯಗಳಾಗಿವೆ. ಇಂಡೋನೇಷ್ಯಾ, ಮಲೇಷ್ಯಾ, ನೈಜೀರಿಯಾ, ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನಂತಹ ದೇಶಗಳು ವಿಶ್ವದ ಶೇಕಡಾ 90 ರಷ್ಟು ತಾಳೆ ಎಣ್ಣೆಯನ್ನು ಉತ್ಪಾದಿಸುತ್ತವೆ. ಈಗ ಖಾದ್ಯ ತೈಲಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇರುವುದರಿಂದ ಕೃಷಿಯಲ್ಲಿ ತಾಳೆ ಬೆಳೆಯ ಕಡೆಗೆ ತಾಳೆ ಬೆಳೆಗೆ ಸೂಕ್ತವಾದ ವಾತಾವರಣ ಹೊಂದಿರುವ ದೇಶಗಳು ಹೆಚ್ಚು ಆಸಕ್ತವಾಗಿದೆ.