ತುಂಬಾ ಅಪರೂಪಕ್ಕೆ ಟಂಕಿಸಲ್ಪಡುವ ಪದ ‘ತ್ರಿಶಂಕು’. ಭಾಷಣಗಳಲ್ಲಿ, ಉಪನ್ಯಾಸಗಳಲ್ಲಿ ಆಗಾಗ್ಗೆ ಇಣುಕುತ್ತಿರುತ್ತದೆ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಗೋಚರವಾಗುತ್ತದೆ. ಹಳ್ಳಿಯ ಪರಿಭಾಷೆಯಲ್ಲಿ ಬಳಕೆ ಕಡಿಮೆ.
ಉತ್ತರ ಸಿಗದ ಸಮಸ್ಯೆಯೊಂದನ್ನು ಬಿಂಬಿಸುವಾಗ, ‘ಈ ಸಮಸ್ಯೆಗೆ ಉತ್ತರವೇ ಸಿಗ್ತಾ ಇಲ್ಲ’ ಎನ್ನುತ್ತೇವೆಯೋ ಹೊರತು, ‘ಒಟ್ಟಿನಲ್ಲಿ ತ್ರಿಶಂಕು ಸ್ಥಿತಿ’ ಎನ್ನುವುದಿಲ್ಲ. ಒಂದು ಸಮಸ್ಯೆಗೆ ಹತ್ತಾರು ಉತ್ತರಗಳಿರುತ್ತವೆ. ಯಾವುದನ್ನು ಆಯ್ದುಕೊಳ್ಳಬೇಕೆಂಬ ಗೊಂದಲದಲ್ಲಿರುತ್ತೇವೆ. ಕೆಲವೊಮ್ಮೆ ಒಂದು ವಿಷಯದ ಕುರಿತು ಎರಡೂ ಅಭಿಪ್ರಾಯಗಳು ಧನಾತ್ಮಕವಾಗಿರುತ್ತದೆ. ಆಗ ಯಾವುದಲ್ಲಿ ಆಯ್ಕೆ ಮಾಡಿಕೊಳ್ಳಲಿ ಎನ್ನುವ ಗೊಂದಲ ಸಹಜ. ಈ ಸಂದರ್ಭದ ಮನಃಸ್ಥಿತಿ ಇದೆಯಲ್ಲಾ, ಅದುವೇ ‘ತ್ರಿಶಂಕು’ ಸ್ಥಿತಿ.
ಬದುಕಿನಲ್ಲಿ ಹಲವು ಸಂದರ್ಭದಲ್ಲಿ ಅಲ್ಲಿಯೂ ಸಲ್ಲದ, ಇಲ್ಲಿಯೂ ಸಲ್ಲದ ‘ತ್ರಿಶಂಕು ಸ್ಥಿತಿ’ ಎದುರಾಗುತ್ತದೆ. ಉತ್ತಮ ಉದ್ಯೋಗಕ್ಕಾಗಿ ದೂರದೂರಿನಿಂದ ಕರೆಬಂದರೂ, ಮನೆಮಂದಿಯನ್ನು ಬಿಡಲಾಗದ ಸಂದಿಗ್ಧ ಮತ್ತು ಮನೆಯಲ್ಲೇ ಇದ್ದು ಬೇರೆ ಉದ್ಯೋಗ ನೋಡುವಂತೆ ಒತ್ತಾಯಿಸುವ ಮನೆಮಂದಿಯ ಚಿತ್ತಸ್ಥಿತಿಯನ್ನು ಎದುರಿಸಲಾಗದ ಅಸಹಾಯಕತೆ. ಅದು ತ್ರಿಶಂಕು ಸ್ಥಿತಿ.
ಕೊರೋನಾ ಸಂದರ್ಭದಲ್ಲಿ ಐಟಿ ಉದ್ಯೋಗಸ್ಥರಿಗೆ ಮನೆಯಲ್ಲೇ ಉದ್ಯೋಗ ಮಾಡಲು ಕಂಪೆನಿಗಳು ಅವಕಾಶ ಕಲ್ಪಿಸಿದುವು. ಇಂತಹ ಸಂದರ್ಭದಲ್ಲಿ ಬೇರೆ ಕಂಪೆನಿಯಿಂದ ಆಫರ್ ಬಂದರೂ ಹೋಗಲಾಗದ, ಇದ್ದ ಉದ್ಯೋಗವನ್ನು ಬಿಡಲಾಗದ ಅತಂತ್ರ ಸ್ಥಿತಿ. ಸ್ನೇಹಿತ ರಘು ಹೇಳುತ್ತಾನೆ, “ಏನು ಮಾಡಲು ತೋಚುವುದಿಲ್ಲ. ತ್ರಿಶಂಕು ಸ್ಥಿತಿಯಾಗಿತ್ತು.”
ಕೌಟುಂಬಿಕ ಬದುಕಿನಲ್ಲೂ ತ್ರಿಶಂಕು ಇಣುಕುತ್ತಾನೆ! ತಮ್ಮನಿಗೆ ವಧು ನಿಶ್ಚಯವಾಗಿರುತ್ತದೆ. ಅಣ್ಣನಿಗೆ ಜಾತಕದಲ್ಲಿ ವಿವಾಹ ಯೋಗವಲ್ಲ. ಗುರುಬಲವಿಲ್ಲ. ಬಂದ ಸಂಬಂಧಗಳು ನಂಟಾಗುವುದಿಲ್ಲ. ಕೆÉಲವೊಮ್ಮೆ ವಧುವಿನ ಮನೆಯವರಿಗೆ ಒಪ್ಪಿಗೆಯಾದ್ರೂ ಅನ್ಯಾನ್ಯ ಕಾರಣಗಳಿಂದ ಮೌನವಾಗಿ ಬಿಡುತ್ತಾರೆ.
ಮೂರು, ಆರು, ಎಂಟು ತಿಂಗಳು ಕಳೆದರೂ ಋಣಾನುಬಂಧ ಸೇರಿಬರುವುದಿಲ್ಲ. ಇಲ್ಲಿ ತಮ್ಮನ ಮನಃಸ್ಥಿತಿಯನ್ನು ಊಹಿಸಿ. “ಹೌದು ಮಾರಾಯ್ರೆ.. ಅಣ್ಣನಿಗೆ ಆಗದೆ ಹೇಗೆ ಮದುವೆಯಾಗುವುದು. ಒಂದು ತರಹದ ತ್ರಿಶಂಕು ಸ್ಥಿತಿಯಲ್ಲಿದ್ದೇನೆ.” ಎನ್ನುತ್ತಾನೆ.
ಶೈಕ್ಷಣಿಕ ಕ್ಷೇತ್ರಕ್ಕೆ ಬನ್ನಿ. ಮಿತಿಮೀರಿದ ಆಂಗ್ಲ ವ್ಯಾಮೋಹದಿಂದಾಗಿ ‘ಇಂಗ್ಲೀಷ್ ಮೀಡಿಯಂ’ ಭ್ರಮೆಯಲ್ಲಿರುವ ಹೆತ್ತವರು ಒಂದೆಡೆ, ಅದನ್ನು ಕಲಿಯಲಾಗದೆ ಒದ್ದಾಡುವ ಮಗು ಮತ್ತೊಂದೆಡೆ. ಮಾತೃಭಾಷೆಯ ಕಲಿಕೆಗೆ ಒಲವು ತೋರದ ಪಾಲಕರು. ಮಗುವಿಗೆ ಮಾತೃಭಾಷೆಯಲ್ಲಿ ಕಲಿಯಲಾಗದ ಒದ್ದಾಟ. ಒಟ್ಟಿನಲ್ಲಿ ಮಗು ಅನುಭವಿಸುವ ಸ್ಥಿತಿ – ತ್ರಿಶಂಕು ಸ್ಥಿತಿ. ಆಂಗ್ಲವೂ ಇಲ್ಲ, ಕನ್ನಡವೂ ಇಲ್ಲ!
ವ್ಯಕ್ತಿಗೆ ಅನಾರೋಗ್ಯ ಬಂದಾಗಲೂ ತ್ರಿಶಂಕು ಸ್ಥಿತಿ ನಿರ್ಮಾಣವಾಗಿರುತ್ತದೆ. ಚಿಕಿತ್ಸೆಗೆ ಅಲೋಪತಿ, ಆಯುರ್ವೇದ, ಹೋಮಿಯೋಪತಿ ಪದ್ಧತಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಗೊಂದಲ. ಮನಸ್ಸು ಪೂರ್ತಿ ಆಯುರ್ವೇದತ್ತ ಒಲವು ಇದ್ದರೂ, ಕಾಯಿಲೆ ಬೇಗ ಗುಣವಾಗಲಿ ಎನ್ನುವ ಕಾರಣದಿಂದ ಅಲೋಪತಿಯತ್ತಲೇ ವಾಲುತ್ತಾರೆ. ಈ ಆಯ್ಕೆಯ ಮಧ್ಯೆ ಉಂಟಾಗುವ ಗೊಂದಲದಲ್ಲಿ ತ್ರಿಶಂಕು ಸ್ಥಿತಿಯದ್ದೇ ಕಾರುಬಾರು. ಒಂದು ನಿಲುವಿಗೆ ಬರಲು ಒದ್ದಾಟ.
ದುಕು ಕೂಡಾ ‘ತ್ರಿಶಂಕು’ ಅಲ್ವಾ! ಶ್ರಮಿಕರಿಗೆ ದುಡಿತವೇ ದೇವರು. ದುಡಿದು ತಿನ್ನುವುದು ಸ್ವಾಭಿಮಾನ. ದುಡಿಯುತ್ತಲೇ ಇರುವುದು ಜಾಯಮಾನ. ಬಹುತೇಕರನ್ನು ಕಾಣುತ್ತೇವೆ, ಒಂದು ಉದ್ಯೋಗ ಹಿಡಿದುಕೊಂಡು ಮುಂದುವರಿದರೆ, ಅದರಲ್ಲಿ ನೆಮ್ಮದಿ ಕಂಡರೆ, ಸಿಗುವ ಪಗಾರದತ್ತ ಯೋಚಿಸದೆ ಆ ಉದ್ಯೋಗಕ್ಕೆ ಅಂಟಿ ಕೊಂಡಿರುತ್ತಾರೆ. ಅದರಿಂದ ಹೊರಗೆ ಬರುವ ಯೋಚನೆಯನ್ನು ಮಾಡಿರುವುದಿಲ್ಲ. ಜತೆಯಲ್ಲಿ ಬೆಳೆದ ಸ್ನೇಹಿತರು, ಬಂಧುಗಳು ಉದ್ಯೋಗಗಳನ್ನು ಬದಲಿಸುತ್ತಾ ಆರ್ಥಿಕವಾಗಿ ಸದೃಢರಾಗುತ್ತಾ ಹೋಗುತ್ತಾರೆ. ಇವರನ್ನು ನೋಡುತ್ತಾ, ಹೊಸ ಉದ್ಯೋಗದ ಯೋಚನೆಗಳು ಬರುವಾಗ ವಯಸ್ಸು ಮೀರಿರುತ್ತದೆ. ಆಗ ಇರುವ ಉದ್ಯೋಗವನ್ನು ಬಿಡುವಂತಿಲ್ಲ, ಹೊಸ ಉದ್ಯೋಗವನ್ನು ಅರಸಲು ವಯಸ್ಸು ಬಿಡುತ್ತಿಲ್ಲ ಎನ್ನುವಂತಹ ‘ತ್ರಿಶಂಕು ಸ್ಥಿತಿ’ಯ ಅನುಭವ. ಈ ಪಯಣದಲ್ಲಿ ನಿಂದೆ, ಅಪಮಾನ, ಚುಚ್ಚು ಮಾತುಗಳನ್ನು ಅನಿವಾರ್ಯವಾಗಿ ಕೇಳುತ್ತಾ ಕೇಳುತ್ತಾ, ಕೆಲವೊಮ್ಮೆ ಪೂರ್ತಿ ಕಿವುಡನಾಗಿ ಬದುಕಿನ ಯಾನವನ್ನು ಪೂರೈಸಬೇಕಾಗುತ್ತದೆ.
ನನ್ನ ಪತ್ರಿಕಾ ಲೇಖನ ಒಂದಕ್ಕೆ ಪ್ರಶಸ್ತಿ ಬಂದಿತ್ತು. ಹೈದರಾಬಾದಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಆ ದಿವಸ ನಾನು ದುಡಿಯುವ ಸಂಸ್ಥೆಯ ಮಹಾಸಭೆ. ಅತ್ತ ಹೋಗಲೋ ಇತ್ತ ಸಂಸ್ಥೆಯ ಮುಖ್ಯ ಸಭೆ. ಇತ್ತ ಇರೋಣವೋ ಅತ್ತ ಪ್ರಶಸ್ತಿಯ ಗುಂಗು. ಇಂತಹ ತ್ರಿಶಂಕು ಸ್ಥಿತಿಯಲ್ಲಿ ಒಂದೆರಡು ದಿವಸದ ಒದ್ದಾಟ. ಕೊನೆಗೆ ಪ್ರಶಸ್ತಿಗಿಂತ ಸಭೆಯಲ್ಲಿ ಭಾಗವಹಿಸುವುದೆನ್ನುವ ನಿರ್ಧಾರದಿಂದ ಸಮಸ್ಯೆಗೆ ಸುಖಾಂತ್ಯ. ಮತ್ತೆ ಅಂಚೆಯಲ್ಲಿ ಪ್ರಶಸ್ತಿಗೆ ಸಂಬಂಧಪಟ್ಟ ಪತ್ರ, ಸ್ಮರಣಿಕೆಗಳು ಬಂದುವು ಎನ್ನುವುದು ಬೇರೆ ಮಾತು.
ತ್ರಿಶಂಕು : ಸತ್ಯಸಂಧನಾದ ಅಯೋಧ್ಯೆಯ ತ್ರಿಶಂಕು (ಸತ್ಯವೃತ) ಮಹಾರಾಜನಿಗೆ ‘ಸಶರೀರನಾಗಿ ಸ್ವರ್ಗಾರೋಹಣ ಮಾಡಬೇಕು’ ಎಂಬ ಕಾಮನೆ ಉಂಟಾಯಿತು. ಅದಕ್ಕಾಗಿ ಯಜ್ಞವೊಂದನ್ನು ಮಾಡಲು ನಿರ್ಧರಿಸಿದ. ಯಜ್ಞವನ್ನು ನೆರವೇರಿಸಿಕೊಡಲು ವಶಿಷ್ಟರು ನಿರಾಕರಿಸಿದರು. ವಶಿಷ್ಟರ ನೂರು ಮಂದಿ ಪುತ್ರರಲ್ಲಿ ವಿನಂತಿಸಿದ. ಅವರಿಂದಲೂ ತಿರಸ್ಕಾರ. ಪರಪರಿಯಿಂದ ಕಾಡಿದ, ಬೇಡಿದ. ಅವರು ತಿರಸ್ಕಾರದಿಂದ ಮರ್ಮಬೇಧಕವಾದ ಮಾತುಗಳನ್ನಾಡಿ, ‘ನೀನು ಚಾಂಡಾಲನಾಗಿ ಹೋಗು’ ಎಂದು ಶಪಿಸಿದರು. ಶಾಪದ ಪ್ರಭಾವದಿಂದ ರಾಜನ ದೇಹ ಕುರೂಪವಾಯಿತು.
ವಶಿಷ್ಟರೊಡನೆ ಹಲವು ಬಾರಿ ಯುದ್ಧ ಮಾಡಿದ ವಿಶ್ವಾಮಿತ್ರ ಮಹರ್ಷಿಯು ‘ಬ್ರಹ್ಮರ್ಷಿ’ಯಾಗಲು ಘೋರ ತಪ್ಪಸ್ಸನ್ನು ಮಾಡುತ್ತಿದ್ದರು. ತ್ರಿಶಂಕು ಪರಿಪರಿಯಿಂದ ಸ್ತುತಿಗೈದು ಪ್ರಾರ್ಥಿಸಿದ. ವಿಶ್ವಾಮಿತ್ರರು ಪ್ರಸನ್ನರಾದರು. ರಾಜನ ಕಾಮನೆ ಮತ್ತು ಚಂಡಾಲ ದೇಹವನ್ನು ನೋಡಿ ದಯೆತೋರಿದರು. ‘ಚಾಂಡಾಲ ದೇಹಧಾರಿಯಾಗಿಯೇ ನಿನ್ನನ್ನು ಸ್ವರ್ಗಕ್ಕೆ ಕಳುಹಿಸುತ್ತೇನೆ’ ಎಂದು ಆಭಯ ನೀಡಿದರು.
ವಿಶ್ವಾಮಿತ್ರರ ನೇತೃತ್ವದಲ್ಲಿ ಯಜ್ಞ ಆರಂಭವಾಯಿತು. ದೇವತೆಗಳಿಗೆ ಹವಿರ್ಭಾಗವನ್ನು ಸಲ್ಲಿಸಿದರೂ, ಅದನ್ನು ದೇವತೆಗಳು ಸ್ವೀಕರಿಸಲಿಲ್ಲ. ಕ್ರುದ್ಧರಾದ ವಿಶ್ವಾಮಿತ್ರರು ತಮ್ಮ ತಪಸ್ಸಿನ ಶಕ್ತಿಯಿಂದ ತ್ರಿಶಂಕುವನ್ನು ಸ್ವರ್ಗಕ್ಕೆ ಏರಿಸಿದರು. ಅಂತರಿಕ್ಷ ಮಾರ್ಗವಾಗಿ ರಾಜನು ಸ್ವರ್ಗ ಪ್ರವೇಶಿಸುತ್ತಿದ್ದಾಗ, ದೇವೇಂದ್ರನು ಆತನನ್ನು ಪುನಃ ಭೂಲೋಕಕ್ಕೆ ತಳ್ಳಿದ. ತಲೆಕೆಳಗಾಗಿ ಭುವಿಯೆಡೆಗೆ ಬೀಳುತ್ತಿದ್ದ ತ್ರಿಶಂಕು ಮೊರೆಯಿಟ್ಟಾಗ ವಿಶ್ವಾಮಿತ್ರರು ಆತನನ್ನು ಅಂತರಿಕ್ಷದಲ್ಲೇ ಸ್ತಂಭಿಸಿದರು. ಆಂತರಿಕ್ಷದಲ್ಲಿ ಪ್ರತಿಸ್ವರ್ಗವನ್ನು ನಿರ್ಮಿಸಿದರು. ಅದು ದೇವೇಂದ್ರದ ಸ್ವರ್ಗಕ್ಕಿಂತಲೂ ಸುಂದರವಾಗಿದ್ದಿತು. ಬೃಹಸ್ಪತಿಯ ಕೋರಿಕೆಯಂತೆ ‘ಇಚ್ಛಾಗಮನ, ಹವಿರ್ಭೋಜನ, ವರಪ್ರಸಾದ’ಗಳೆಂಬ ದೇವತೆಗಳಿಗಿರುವ ಭಾಗ್ಯ. ಇದರ ಹೊರತು ಮಿಕ್ಕಂತೆ ಸ್ವರ್ಗದ ಎಲ್ಲಾ ಭೋಗಗಳನ್ನು ಅನುಭವಿಸಬಹುದು.
ಹೀಗೆ ಅತ್ತ ಸ್ವರ್ಗಕ್ಕೂ ಹೋಗದೆ, ಇತ್ತ ಧರೆಗೂ ಇಳಿಯದೆ ತ್ರಿಶಂಕು ಮಹಾರಾಜನು ‘ತ್ರಿಶಂಕು’ಸ್ಥಿತಿಯಲ್ಲಿ ಪ್ರತಿಸ್ವರ್ಗದಲ್ಲಿ ನೆಲೆಸಿದ. ವಿಶ್ವಾಮಿತ್ರರು ‘ಬ್ರಹ್ಮರ್ಷಿ’ಯಾಗಲು ಪುನಃ ತಪಸ್ಸಿಗೆ ತೆರಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


