ತುಳುವರ ಆಟಿ ತಿಂಗಳು ಸೌರಮಾನದ ನಾಲ್ಕನೇ ತಿಂಗಳು. ಸಾಮಾನ್ಯವಾಗಿ ಜುಲೈ – ಆಗಸ್ಟ್ ತಿಂಗಳ ನಡುವೆ ಬರುತ್ತದೆ. ಆಟಿ ತಿಂಗಳನ್ನು ಅನಿಷ್ಟದ ತಿಂಗಳು ಎಂದು ಹೇಳಲಾಗುತ್ತದೆ. ಇದಕ್ಕೆ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಕೃಷಿ ಚಟುವಟಿಕೆಗಳೇ ಹೆಚ್ಚಿದ್ದವು. ಈ ಅತಿ ಮಳೆ ಬಿಸಿಲಿನಿಂದಾಗಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಮಳೆ, ಬಿಸಿಲುಗಳ ಸಂಕ್ರಮಣ ಕಾಲಘಟ್ಟವಾದ ಈ ತಿಂಗಳು ಸೂರ್ಯನ ಪರಿಭ್ರಮಣೆಯು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಬದಲಾಗುವುದನ್ನು ಸೂಚಿಸುತ್ತದೆ. ಈ ಪರಿಭ್ರಮಣೆಯು ಒಂದು ತರಹದ ಸಂಕ್ರಮಣ ಜೊತೆಗೆ ಮಳೆ ಮತ್ತು ಬಿಸಿಲುಗಳಿಂದಾಗಿ ಹವಾಮಾನದಲ್ಲಿ ಸ್ಥಿತ್ಯಂತರ ಉಂಟಾಗುತ್ತದೆ. ಎರಡು ವೈರುಧ್ಯದ ನಡುವಿನ ಸಂಕ್ರಮಣ, ಸ್ಥಿತ್ಯಂತರದ ಸ್ಥಿತಿಯು ತುಳು ಜನಪದರಲ್ಲಿ ಆತಂಕ, ಭಯ, ಬೇಸರ ಅಥವಾ ಸಂತೋಷದ ಭಾವನೆಗಳನ್ನು ಉಂಟುಮಾಡುತ್ತದೆ. ಇದು ಸೌರಮಾನ ಪದ್ಧತಿಯಂತೆ ಕಾಲಮಾಪನ ಮಾಡುವ ತುಳುವ ಸಂಸ್ಕೃತಿಯಲ್ಲಿ ಸಂಕ್ರಮಣವು ವಿಶೇಷ ಮಹತ್ವವನ್ನು ಪಡೆದಿರುವುದು, ಆಚರಣೆ ಹಬ್ಬಗಳನ್ನು ಹೊಂದಿರುವುದು ಮುಖ್ಯವೆನಿಸುತ್ತದೆ.…… ಮುಂದೆ ಓದಿ……
ಈ ನೆಲೆಯಲ್ಲಿ ವಿವಿಧ ಬಗೆಗೆ ಆಚರಣೆ, ಊರಿಗೆ ಬಂದ ಮಾರಿಯನ್ನು ಕಳೆಯಲು ಬೇಕಾಗಿ ಆಟಿ ಕಳಂಜ, ಮುಗೇರ ಆಟಿ ಕಳಂಜ, ಬೇಡನ್, ಮರ್ದನ್ ಕುಣಿತಗಳು ಕಾಣಸಿಗುತ್ತದೆ. ಆರೋಗ್ಯಕ್ಕಾಗಿ ಬಗೆ ಬಗೆಯ ಆಹಾರಗಳನ್ನು ತಮ್ಮ ದೈನಂದಿನ ಆಹಾರದೊಂದಿಗೆ ತುಳುವರು ಸೇವಿಸುವುದನ್ನು ನೋಡಬಹುದು.
ಆಟಿಯು ಆಡಿ (Aḍi) ಎಂಬ ದ್ರಾವಿಡ ಪದಮೂಲದಿಂದ ಬಂದಿದೆ. ತಮಿಳಿನ ಆಡಿಯ ಡ ಕಾರ ತುಳುವಿಗಾಗುವಾಗ ಟ ಕಾರದಿಂದ ಆಟಿಯಾಗಿರಬಹುದು. ಆದು ಸಂಸ್ಕೃತದ ಆದಿಯ ಅರ್ಥವನ್ನು ನೀಡುತ್ತದೆ ಎಂಬ ಊಹೆಯಿದೆ. ತಮಿಳುನಾಡಿನಲ್ಲಿ ಇದು ಮಳೆಗಾಳದ ಆರಂಭವಾಗುವ ತಿಂಗಳು. “ಆಡಿ” ಎಂದರೆ ಆರಂಭ, ಇದು ತಮಿಳರ ಮಳೆಗಾಲದ ಆರಂಭವನ್ನು ಪ್ರತಿನಿಧಿಸುತ್ತದೆ.
ಆಟಿ ತಿಂಗಳಲ್ಲಿ ಬರುವ ಆಟಿ ಅಮವಾಸ್ಯೆ ಎಲ್ಲ ಹಬ್ಬಗಳಿಗೂ ಆಹ್ವಾನ ನೀಡುವ ಹಬ್ಬ. ತುಳುವರಿಗೂ ಅಮಾವಾಸ್ಯೆಗಳು ವಿಶೇಷ, ಹಲವಾರು ಅಮಾವಾಸ್ಯೆಗಳ ಆಚರಣೆ ಇಲ್ಲಿ ನೋಡಬಹುದು. ಆದು ಮಹಾಲಯ, ಇರನಾಮಾವಾಸ್ಯೆ, ದೀಪಾವಳಿ ಅಮಾವಾಸ್ಯೆ ಹೀಗೆ ಹಲವು., ಹಬ್ಬಗಳ ಮಹಾದ್ವಾರ ಎನಿಸಿರುವ ಆಟಿ ಅಮವಾಸ್ಯೆಗೆ ತುಳುನಾಡಿನ ಹಬ್ಬಗಳ ಪೈಕಿ ವಿಶೇಷ ಮಹತ್ವವಿದೆ. ಅದರಲ್ಲೂ ಮುಖ್ಯವಾಗಿ ಆಟಿ ಅಮವಾಸ್ಯೆಯ ದಿನ ಮಾಡುವ ಹಾಲೆ ಮರದ ಕೆತ್ತೆಯ ಕಷಾಯವನ್ನು ಔಷಧಿಯ ನೆಲೆಯಲ್ಲಿ ಕುಡಿಯುವುದು. ಹಾಲು ಬರುವ ಹಾಲೆ ಮರವನ್ನು ತುಳುನಾಡಿನ ಕೆಲವು ಸಮುದಾಯಗಳು ಮುಖ್ಯವಾಗಿ ಅಜಿಲ ಅಥವಾ ಪಾಣಾರ ಸಮುದಾಯದವರು ತಮ್ಮ ಕುಲ ವೃಕ್ಷವೆಂದು ನಂಬುತ್ತಾರೆ. ಜೊತೆಗೆ Thurston’s ರವರ Castes and Tribes of Southern India ಪುಸ್ತಕದಲ್ಲಿ ಹಾಲುಗಂಬ(Milk Pole)ಗಳ ಬಗೆಗೆ ಹಲವು ಉಲ್ಲೇಖಗಳು ಬರುತ್ತವೆ. ಮುಖ್ಯವಾಗಿ ಮದುವೆಯಂತಹ ಶುಭ ಸಂದರ್ಭದಲ್ಲಿ ಫಲವಂತಿಗೆಯ ಸಂಕೇತವಾಗಿ ಹಾಲು ಬರುವ ಮರವನ್ನೇ ಬಳಸುತ್ತಾರೆ. ಆ ವಿಶೇಷ ನಂಬಿಕೆಯಿರುವ ಈ ಮರದಲ್ಲಿ ಆಟಿ ಅಮಾವಾಸ್ಯೆ ಸಮಯದಲ್ಲಿ ದೇವ, ಮರ್ತ್ಯ, ಪಾತಾಳ ಲೋಕಗಳ ಔಷಧಿಗಳು ಬಂದು ಸಂಗ್ರಹಗೊಳ್ಳುವುದರಿಂದ ಈ ಮರದಿಂದ ಮುಂಜಾನೆ ತೆಗೆದ ತೊಗಟೆಯ ರಸವನ್ನು ಕುಡಿದರೆ ಸರ್ವರೋಗಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಜನಪದರಲ್ಲಿದೆ.…… ಮುಂದೆ ಓದಿ……
ಹಾಲೆ ಮರವು ಭಾರತ ಮತ್ತು ಪೂರ್ವದ ಕೆಲವು ರಾಷ್ಟ್ರಗಳ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ʼಅಪೋಸಿಯ ನೇಸಿಯʼ ಕುಟುಂಬಕ್ಕೆ ಸೇರಿದ ಸಸ್ಯಪ್ರಭೇಧವಾಗಿದೆ. ಆಯುರ್ವೇದದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ತ್ರಿದೋಷ ನಿವಾರಣಾಶಕ್ತಿಯನ್ನು ಹೊಂದಿರುವ ಇದು ವಾತ, ಪಿತ್ತ, ಕಫಗಳ ಮೇಲೆ ಏಕ ಕಾಲದಲ್ಲಿ ಪರಿಣಾಮವನ್ನು ಬೀರುತ್ತದೆ. ರಸದಲ್ಲಿ ಲಘು, ಸ್ನಿಗ್ಧತಿಕ್ತ, ವಿಕಾಯದಲ್ಲಿ ಕಟು, ವೀರ್ಯದಲ್ಲಿ ಉಷ್ಣ ಎಂದು ಹೇಳಲಾಗುತ್ತದೆ. ಏಳು ಎಲೆಗಳ ವೃತ್ತಾಕರದ ಜೋಡಣೆಯ, ನಿತ್ಯವು ಹಸಿರಿನಿಂದ ಕಂಗೊಳಿಸುವ ಎಲೆಯ ಗೊಂಚಲನ್ನು ಹೊಂದಿದೆ. ಆದುದರಿದ ಈ ಮರವನ್ನು ಸಂಸ್ಕೃತದಲ್ಲಿ ಸಪ್ತವರ್ಣಿ ಎಂದು ಕರೆಯಾಲಾಗುತ್ತದೆ. ಸಂಸ್ಕೃತದಲ್ಲಿ ಸಪ್ತಪರ್ಣಿ ಕನ್ನಡದಲ್ಲಿ ಹಾಲೆಮರ, ಏಳೆಲೆ, ಏರುಮಣಿ ತುಳುವಿನಲ್ಲಿ ಪಾಲೆತಮರ, ಬೊಳ್ಯಂದರ ಮರ, ಬಾಲೆಕ್ಕಿ ಮರ, ತಮಿಳಿನಲ್ಲಿ ಏಳೆಲೆಪಾಳ್ಯ, ಮಲಯಾಲಂನಲ್ಲಿ ಇಳ್ಳೆಲಂಪಾಲ, ತೆಲುಗಿನಲ್ಲಿ ಏಡಾಕುಲಾರಿಟಿಚೆಟ್ಟು, ಇದರ ಹಾಲಿನಂತಹ ದ್ರವ್ಯದಲ್ಲಿ ಡೈಟಾಮೈನ್ (Ditamine) ಮತ್ತು ಎಕಿಟಾನೈನ್ (Echitanine) ಇರುತ್ತದೆ. ಇವು ಬ್ಯಾಕ್ಟಿರಿಯಾ ಬಗ್ಗು ಬಡಿಯುವ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ರೋಗನಿರೋಧಕ ಶಕ್ತಿಯಿಂದ ಶೀತ, ಜ್ವರ, ವಾಂತಿ, ಭೇದಿಗಳ ನಿಯಂತ್ರಣವಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.…… ಮುಂದೆ ಓದಿ……
ರವೀಂದ್ರನಾಥ ಟ್ಯಾಗೋರರು ಪಶ್ಚಿಮ ಬಂಗಾಳದ ಶಾಂತಿ ನಿಕೇತನದ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮತ್ತು ಸ್ನಾತಕ ಪದವಿ ಪ್ರಮಾಣಪತ್ರದೊಂದಿಗೆ, ವಿಧಿವತ್ತಾಗಿ ಸಪ್ತಪರ್ಣಿ ಹೂವನ್ನು ಯುವ ಪದವೀಧರರಿಗೆ ನೀಡುವ ಸಂಪ್ರದಾಯ ಹಾಕಿಕೊಟ್ಟ ಉಲ್ಲೇಖಗಳಿವೆ. ಗೌತಮ ಬುದ್ಧ ಜ್ಞಾನೋದಯಕ್ಕಾಗಿ ತಪಸ್ಸಿಗೆ ಕುಳಿತದ್ದು ಮತ್ತು ಜ್ಞಾನದೋಯವಾದದ್ದು ಈ ಬೋಧಿ ವೃಕ್ಷದ ಕೆಳಗಡೆ. ಅದುದರಿಂದ ಬೌದ್ಧರು ಈ ಮರವನ್ನು ಆದರದಿಂದ ಕಾಣುತ್ತಾರೆ.
ಆಟಿ ತಿಂಗಳು ಕುಲೆಗಳ ತಿಂಗಳು, ಈ ತಿಂಗಳಲ್ಲಿ ಕುಲೆಗಳಿಗೆ ಬಡಿಸುವ ಕ್ರಮವಿದೆ. ಮನೆಯಲ್ಲಿ ಮರಣ ಹೊಂದಿದವರಿಗೆ ಆಟಿ ಅಮಾವಾಸ್ಯೆ ದಿನ ವಿಶೇಷ ಅಗೇಲು ಬಡಿಸುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ. ಕುಲೆ ಮದುವೆ ತುಳುನಾಡಿನಲ್ಲಿ ಅವಿವಾಹಿತರಾಗಿ ಸತ್ತ ತರುಣಿ ಅಥವಾ ತರುಣರಿಗೆ ಆಟಿ ಅಮವಾಸ್ಯೆ ನಡುರಾತ್ರಿಯಲ್ಲಿ ಸತ್ತ ಪ್ರೇತಗಳ ವಿವಾಹ ಮಾಡುವ ಸಂಪ್ರದಾಯವನ್ನು ಕುಲೆ ಮದುವೆ, ಪ್ರೇತ ವಿವಾಹ ಎಂದು ಕರೆಯಲಾಗುತ್ತದೆ. ಮದುವೆಯಾಗದ ಸತ್ತವರು ಕುಲೆ, ಪ್ರೇತ, ಪೀಡೆ, ಬ್ರಹ್ಮರಕ್ಕಸಗಳಾಗಿರುತ್ತಾರೆಂಬ ನಂಬಿಕೆ ತುಳುವರಲ್ಲಿದೆ. ಸತ್ತವರು ಮನೆಯವರಿಗೆ ತೊಂದರೆ ಕೊಡುತ್ತಾರೆ, ಪೀಡೆಗಳಾಗಿ ಕಾಡುತ್ತಾರೆ. ಸಣ್ಣ ಮಕ್ಕಳಿಗೆ, ಮದುವೆಯ ಹಂತಕ್ಕೆ ಬಂದ ಹುಡುಗ ಹುಡುಗಿಗೆ ಒಂದಲ್ಲ ಒಂದು ರೀತಿ ತೊಂದರೆಯಾಗುತ್ತದೆ. ಇದರ ಪರಿಹಾರಕ್ಕಾಗಿ ಈ ಕುಲೆ ಮದುವೆ ಮಾಡುವ ಪದ್ಧತಿ ಇವರಲ್ಲಿದೆ.
ಆಟಿಯ ಈ ತಿಂಗಳು “ಆಡಿ ಪೆರುಕ್ಕು’ ಎಂದು ತಮಿಳುನಾಡಿನಲ್ಲಿ ಆಚರಿಸುವ ಹಬ್ಬವಾಗಿದ್ದು, ತಮಿಳು ಸೌರಮಾನ ತಿಂಗಳ ಆಡಿ(ಆಟಿ) ತಿಂಗಳ 18 ನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವು ಜೀವಜಲ ನೀರು, ನದಿಗಳ ಹರಿಯುವಿಕೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿದೆ. ತಮಿಳುನಾಡಿನ ನದಿ ಜಲಾನಯನ ಪ್ರದೇಶಗಳು, ನೀರಿನ ಟ್ಯಾಂಕ್‌ಗಳು, ಸರೋವರಗಳು ಮತ್ತು ಬಾವಿಗಳು ಇತ್ಯಾದಿಗಳ ಬಳಿ ಇದನ್ನು ಆಚರಿಸಲಾಗುತ್ತದೆ, ಅಲ್ಲಿ ನೀರಿನ ಮಟ್ಟವು ಗಮನಾರ್ಹವಾಗಿ ಏರಿದಾಗ ಮಳೆಗಾಲದ ಆರಂಭವನ್ನು ಸೂಚಿಸುತ್ತದೆ. ಈ ಆಚರಣೆಯು ಕಾವೇರಿ ನದಿ ಮತ್ತು ಅದರ ನದಿ ಮುಖಜ ಭೂಮಿ ಹಾಗೂ ಇತರ ನದಿಗಳ ದಡಗಳಲ್ಲಿ ವಿಶೇಷವಾಗಿ ಕಾಣಬಹುದಾಗಿದೆ.
ಆಟಿ ತಿಂಗಳಲ್ಲಿ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ತುಳುನಾಡಿನ ನೂರಾರು ದೇವಿ ದೇವಸ್ಥಾನಗಳಲ್ಲಿ ಆಟಿ ತಿಂಗಳಲ್ಲಿ ಸಂಜೆ ಪೂಜೆ ನಡೆಯುವುದು ವಿಶೇಷ. ಆಟಿ ಆರಂಭವು ಭೌಗೋಳಿಕ, ಜ್ಯೋತಿಷ್ಯ ಮತ್ತು ಪೌರಾಣಿಕ ದೃಷ್ಟಿಕೋನಗಳಿಂದ ಮಹತ್ವದ ಸಮಯವನ್ನು ಸೂಚಿಸುತ್ತದೆ. ದೇವರು, ದೇವತೆಗಳಿಗೆ ಉತ್ತರಾಯಣವೆಂದರೆ ಹಗಲು ದಕ್ಷಿಣಾಯಣವೆಂದರೆ ರಾತ್ರಿಯಾಗಿರುತ್ತದೆ ಎಂಬ ನಂಬಿಕೆ ಇದೆ. ಜನರು ರಾತ್ರಿಯ ಸಮಯದಲ್ಲಿ ತಮ್ಮ ಕುಟುಂಬದ ಶುಭ ಕಾರ್ಯಕ್ರಮಗಳನ್ನು ನಡೆಸಲು ಬಯಸುತ್ತಿರಲಿಲ್ಲ. ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನ ದಕ್ಷಿಣ ದಿಕ್ಕಿನ ಚಲನೆ ಪ್ರಾರಂಭವಾದಾಗ, ಸೂರ್ಯನಿಂದ ಸೂಕ್ಷ್ಮ ಶಕ್ತಿಗಳು ಹರಡುತ್ತವೆ ಮತ್ತು ಹೆಚ್ಚುವರಿ ಪ್ರಮಾಣದ ಆಮ್ಲಜನಕ ಪೂರೈಕೆಯಾಗುತ್ತದೆ; ಆತ್ಮಗಳಿಗೆ ಮೂಲಭೂತ ಬೆಂಬಲದ ಶಕ್ತಿಗಳನ್ನು ಒದಗಿಸುವ ಸಮಯವೂ ಇದೇ ಆಗಿದೆ ಎಂದು ನಂಬುತ್ತಾರೆ.
ಆಟಿ ತಿಂಗಳು ಜನಪದರ ಸಾಮಾಜಿಕ ಕಟ್ಟುಕಟ್ಟಲೆ, ಧಾರ್ಮಿಕ ವಿಧಿ ನಂಬಿಕೆಗಳಿಂದ ಒಂದು ತರಹದ ಭಯ, ಭ್ರಮೆ ಮತ್ತು ಬೇಸರದಿಂದ ಈ ಆಟಿ ಸೂತಕದ ತಿಂಗಳು ಎಂದು ಕರೆದರೂ ತಪ್ಪಲ್ಲ. ಯಾವುದೇ ಮುಖ್ಯ ಶುಭಸಮಾರಂಭ ನಡೆಯುವುದಿಲ್ಲ. ಹೊಸ ವಸ್ತುಗಳನ್ನು ಬಂಗಾರ ಇತ್ಯಾದಿ ಖರೀದಿಸುವುದಿಲ್ಲ, ಜಡೀ ಮಳೆಗೆ ಮನೆಯಿಂದ ಹೊರಗೆ ಕೆಲಸ ಮಾಡುವಂತಿಲ್ಲ, ಬಹುತೇಕ ಕೃಷಿ ಕೆಲಸಗಳು ನಿಂತಂತೆ ಇರುತ್ತದೆ. ಇದರಿಂದಾಗಿ ತುಳುವರ ಆರ್ಥಿಕತೆ, ಸಾಮಾನ್ಯ ಉದ್ಯೋಗದ ಮೇಲು ಪರಿಣಾಮವನ್ನು ಉಂಟುಮಾಡುತ್ತದೆ. ಪರೋಕ್ಷವಾಗಿ ಅವಲಂಬಿತವಾಗಿರುವ ಕೃಷಿ ಕೂಲಿಯಾಲು, ಆಂಗಡಿ ಮುಂಗಟ್ಟು, ಬಟ್ಟೆಯಂಗಡಿ, ಶಾಮಿಯಾನ, ಸಮಾರಂಭ ಮಂಟಪಗಳೆಲ್ಲ ಖಾಲಿ ಖಾಲಿಯಾಗಿ ಹಲವು ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆ ಆಟಿ ಕಷ್ಟದ ತಿಂಗಳು ಅದರೂ ಎಲ್ಲರಿಗೂ ಇಷ್ಟದ ತಿಂಗಳು.…… ಮುಂದೆ ಓದಿ……
ಆಟಿ ತಿಂಗಳ ಬಗೆಗಿರುವ ನುಡಿಗಟ್ಟುಗಳು:
ಅಟಿಡ್ ತೆಡಿಲ್ ಬತ್ತ್ಂಡ ಅಟ್ಟ ಪೊಲಿಪೋವು, ಸೋಣೊಡು ತೆಡಿಲ್ ಬತ್ತ್ಂಡ ಸೊಂಟ ಪೊಲಿಪೋವು – ಆಟಿಯಲ್ಲಿ ಸಿಡಿಲು ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣದಲ್ಲಿ ಸಿಡಿಲು ಬಂದರೆ ಸೊಂಟ ಮುರಿಯುತ್ತದೆ.
ಆಟಿಡ್ ಕಣೆ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ಕಣೆ ಬತ್ತ್ಂಡ ಸೊಂಟ ಪೊಲಿಪೋವು – ಆಟಿಯಲ್ಲಿ ಕಳೆ ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣದಲ್ಲಿ ಕಳೆ ಬಂದರೆ ಸೊಂಟ ಮುರಿದು ಹೋಗಬಹುದು.
ಆಟಿದ ಪೆಲಕಾಯಿ ನಂಜಿ ಮಗಾ- ಆಮ್ಮೆ ಬರ್ಪೆನಾ ತೂಲ ಮಗಾ – ಆಟಿಯ ಹಲಸಿನಕಾಯಿ ನಂಜು ಮಗಾ, ಅಪ್ಪ ಬರುತ್ತಾನಂತ ನೋಡು ಮಗ
ಅಟಿಡ್ ಪೊಣ್ಣು ಪುಟ್ಟುನು ಹೆಚ್ಚಗೆ -ಆಟಿ ತಿಂಗಳಲ್ಲಿ ಹೆಣ್ಣು ಹುಟ್ಟುವುದು ಹೆಚ್ಚು.…… ಮುಂದೆ ಓದಿ……
ಆಟಿದ ದೊಂಬುಗು ಆನೆದ ಬೆರಿ ಪುಡಾವು – ಆಟಿಯ ಬಿಸಿಲಿಗೆ ಆನೆಯ ಬೆನ್ನು ಒಡೆದೀತು.
ಆಟಿಗೊರ ಸೋಣೊಗೊರ
ಆಟಿ ಆಡೊಣ್ತ್ ಪೋಪುಂಡು ಸೋಣೊ ಸೋಡೊಣ್ತ್ ಪೋಪುಂಡು.
ಆಟಿದ ಅಗೆಲ್ ಸೋಣೊದ ಕೋಲ



