ತುಮಕೂರು ಜಿಲ್ಲೆಯಲ್ಲಿ ತೆಂಗಿನ ಕೃಷಿಗೆ ಕೀಟ ಮತ್ತು ರೋಗಗಳ ದಾಳಿ ಗಂಭೀರ ಸವಾಲಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ತೆಂಗಿನ ಬೆಳೆ ವ್ಯಾಪಕವಾಗಿರುವುದರಿಂದ ರೈತರ ಬದುಕಿನ ಪ್ರಮುಖ ಆದಾಯ ಮೂಲವಾಗಿರುವ ಈ ಬೆಳೆ ಈಗ ರೆಡ್ ಪಾಮ್ ವೀವಿಲ್ (Red Palm Weevil) ಕೀಟ ಹಾಗೂ ರೂಟ್ ವಿಲ್ಟ್ (Root Wilt) ರೋಗದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ವಿಧಾನಪರಿಷತ್‌ನಲ್ಲಿ ಸದಸ್ಯ ಚಿದಾನಂದ್ ಎಂ ಗೌಡ ತೋಟಗಾರಿಕಾ ಸಚಿವರಿಗೆ ಪ್ರಶ್ನೆ ಕೇಳಿದ್ದರು.
ತೋಟಗಾರಿಕಾ ಇಲಾಖೆ ನೀಡಿರುವ ಮಾಹಿತಿಯಂತೆ, ಜಿಲ್ಲೆಯಲ್ಲಿ ಸುಮಾರು 8,817 ಹೆಕ್ಟೇರ್ ಪ್ರದೇಶದಲ್ಲಿ ರೆಡ್ ಪಾಮ್ ವೀವಿಲ್ ಕೀಟದ ದಾಳಿ ಕಂಡುಬಂದಿದೆ. ಜೊತೆಗೆ, ತೆಂಗಿನ ರೂಟ್ ವಿಲ್ಟ್ ರೋಗವು 22,071 ಹೆಕ್ಟೇರ್ ವ್ಯಾಪ್ತಿಗೆ ವಿಸ್ತಾರಗೊಂಡಿದೆ ಎಂದು ವರದಿಯಾಗಿದೆ. ತುಮಕೂರು ಜಿಲ್ಲೆಯು ಕರ್ನಾಟಕದಲ್ಲೇ ತೆಂಗಿನ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಜಿಲ್ಲೆಯ ಒಟ್ಟು 1.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಕೃಷಿ ನಡೆಯುತ್ತಿದೆ. ತೆಂಗಿನ ಬೆಳೆ ಉಳಿಸಲು ಮತ್ತು ರೈತರ ನೆರವಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ರೋಗ–ಕೀಟ ನಿಯಂತ್ರಣದ ಜೊತೆಗೆ ಪುನಶ್ಚೇತನ ಕಾರ್ಯಗಳಿಗೆ ಸಹಾಯಧನ ಒದಗಿಸಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ತೆಂಗಿನ ಪುನಶ್ಚೇತನ–ಪುನರ್ ನಾಟಿ ಯೋಜನೆಯ ಅಡಿಯಲ್ಲಿ ತೆಂಗಿನ ಮರಗಳ ಪುನಶ್ಚೇತನ ಹಾಗೂ ಮರುನಾಟಿಗೆ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ₹54,000 ಸಹಾಯಧನ ನೀಡುತ್ತಿದ್ದು ಮೊದಲ ವರ್ಷ ₹45,250 ಹಾಗೂ ಎರಡನೇ ವರ್ಷ ನಿರ್ವಹಣೆಗಾಗಿ ₹8,750 ನೀಡಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 1,084 ರೈತರಿಗೆ ನೆರವು ನೀಡಲಾಗಿದ್ದು 591 ಹೆಕ್ಟೇರ್ ವ್ಯಾಪ್ತಿಗೆ ₹187 ಲಕ್ಷ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೀಟ–ರೋಗ ವ್ಯಾಪಕ ಪ್ರದೇಶಗಳಿಗೆ ಗುಂಪು ವಿಧಾನದಲ್ಲಿ ನಿಯಂತ್ರಣ ಕೈಗೊಳ್ಳಲಾಗಿದ್ದು, ಪ್ರತಿ ಹೆಕ್ಟೇರ್‌ಗೆ ₹35,000 ಸಹಾಯಧನ ನೀಡಲಾಗಿದ್ದು ಈ ಯೋಜನೆ ಅವಧಿ 2 ವರ್ಷವಾಗಿದೆ. ತುಮಕೂರು ಜಿಲ್ಲೆಯಲ್ಲಿ 9,840 ಹೆಕ್ಟೇರ್ ವ್ಯಾಪ್ತಿಗೆ ₹1829.87 ಲಕ್ಷ ಅನುದಾನ ನೀಡಿದ್ದು 15,338 ರೈತರಿಗೆ ಲಾಭ ದೊರೆತಿದೆ ಎಂದು ತಿಳಿಸಿದ್ದಾರೆ.
ಬ್ಲಾಕ್ ಹೆಡೆಡ್ ಕ್ಯಾಟರ್ಪಿಲ್ಲರ್ ಮತ್ತು ವೈಟ್‌ಫ್ಲೈ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು ತೆಂಗಿನ ಎಲೆಗಳನ್ನು ನಾಶಮಾಡುವ ಕೀಟ ನಿಯಂತ್ರಣಕ್ಕೆ 23 ಪ್ರಯೋಗ ಕೇಂದ್ರಗಳ ಸ್ಥಾಪನೆ, ಜೈವಿಕ ನಿಯಂತ್ರಣ ಪರೋಪಜೀವಿಗಳ ಉತ್ಪಾದನೆ ಸೇರಿದಂತೆ ಒಟ್ಟು ₹1.4 ಕೋಟಿ ವೆಚ್ಚ ಮಾಡಲಾಗಿದ್ದು ತುಮಕೂರಿಗೆ ₹21 ಲಕ್ಷ ವಿಶೇಷ ಅನುದಾನ ನೀಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸಹಾಯದಿಂದ ಪೋಷಕಾಂಶ ಕೊರತೆ ಹಾಗೂ ಕೀಟ ನಿರ್ವಹಣೆಗೆ ಒಟ್ಟು ವೆಚ್ಚ ₹5,000ನಲ್ಲಿ ₹1,500 ಸಹಾಯ ಹಾಗೂ ಗರಿಷ್ಠ 2 ಹೆಕ್ಟೇರ್ ವರೆಗೆ ₹3,000 ಮಿತಿ ಇದ್ದು ಇದರಿಂದ ರೈತರಿಗೆ ನೇರ ಆರ್ಥಿಕ ನೆರವು ಒದಗುತ್ತಿದೆ ಎಂದು ಉತ್ತರದಲ್ಲಿ ಉಲ್ಲೇಖಿಸಲಾಗಿದೆ.
ತೆಂಗಿನ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ, CPCRI ಕಾಸರಗೋಡು ತಜ್ಞರು 2025ರ ಜುಲೈ–ಆಗಸ್ಟ್‌ನಲ್ಲಿ ತುಮಕೂರು ಭೇಟಿ ನೀಡಿದ್ದಾರೆ. ಈ ವೇಳೆ 12 ಪ್ರದರ್ಶನ ಕಾರ್ಯಕ್ರಮ, 85 ತರಬೇತಿ ಶಿಬಿರ, 12,500 ರೈತರಿಗೆ ಜಾಗೃತಿ ಕಾರ್ಯಕ್ರಮಗಳು ಜರುಗಿವೆ ಎಂದು ತಿಳಿಸಿದ್ದಾರೆ.
ತೋಟಗಾರಿಕಾ ಇಲಾಖೆಯಲ್ಲಿನ ಪ್ರಸ್ತುತ ವ್ಯವಸ್ಥೆಯಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಪ್ರತ್ಯೇಕ ಯೋಜನೆ ಇಲ್ಲ. 2023-24 ರಿಂದ 2025-26ರ ಅವಧಿಯಲ್ಲಿ10.56 ಲಕ್ಷ ತೆಂಗಿನ ಮರಗಳಿಗೆ ರೆಡ್ ಪಾಮ್ ವೀವಿಲ್ ದಾಳಿ, 26.48 ಲಕ್ಷ ಮರಗಳಿಗೆ ರೂಟ್ ವಿಲ್ಟ್ ಸೋಂಕು ತಗುಲಿದೆ ಎಂದು ಅಂದಾಜಿಸಲಾಗಿದೆ. ತೆಂಗಿನ ಕೀಟ–ರೋಗ ನಿಯಂತ್ರಣಕ್ಕಾಗಿ CPCRI ಹಾಗೂ NBAIR ಸಹಕಾರದೊಂದಿಗೆ ₹791.05 ಕೋಟಿ ಮೊತ್ತದ ಸಮಗ್ರ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




