ಭಾರತದಲ್ಲಿ ನೈಸರ್ಗಿಕ ರಬ್ಬರ್‌ನ ಬೇಡಿಕೆ-ಪೂರೈಕೆ ಅಂತರ ಇದೆ. ಈ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ತೊಟ ನಿರ್ಮಾಣಕ್ಕೆ ಟೈರ್ ತಯಾರಕರು ರಬ್ಬರ್ ಬೋರ್ಡ್ ಸಹಯೋಗದೊಂದಿಗೆ 1,100 ಕೋಟಿ ರೂ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.
ಈಶಾನ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ರಬ್ಬರ್ ತೋಟವನ್ನು ಹೆಚ್ಚಿಸುವ ಗುರಿಯೊಂದಿಗೆ, ನಾಲ್ಕು ಪ್ರಮುಖ ಟೈರ್ ತಯಾರಕರು ಮುಂದಿನ ಐದು ವರ್ಷಗಳ ಯೋಜನೆಯ ಭಾಗವಾಗಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಒಟ್ಟಾಗಿ ಏಳು ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ರಬ್ಬರ್ ತೋಟವನ್ನು ಹೆಚ್ಚಿಸಲು ಮುಂದಿನ ಐದು ವರ್ಷಗಳಲ್ಲಿ 1,100 ಕೋಟಿ ರೂ. ಹೂಡಿಕೆಯಾಗಲಿದೆ. ಇದರಿಂದ ಭಾರತದಲ್ಲಿ ರಬ್ಬರ್ ಕಚ್ಚಾವಸ್ತುಗಳ ಲಭ್ಯತೆ ಹೆಚ್ಚಾಗಲಿದೆ. ನೈಸರ್ಗಿಕ ರಬ್ಬರ್ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರಿ ಏಜೆನ್ಸಿಗಳ ಸಹಯೋಗದೊಂದಿಗೆ ಒಂದು ಉದ್ಯಮವು ಕಾರ್ಯನಿರ್ವಹಿಸುತ್ತಿರುವ ವಿಶ್ವದ ಮೊದಲ ರೀತಿಯ ಯೋಜನೆ ಇದಾಗಿದೆ. ಯೋಜನೆಯ ಭಾಗವಾಗಿ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ಲಕ್ಷ ಹೆಕ್ಟೇರ್ ರಬ್ಬರ್ ತೋಟವನ್ನು ಅಭಿವೃದ್ಧಿಪಡಿಸಲು ಯೋಜನೆ ಹಾಕಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ರಬ್ಬರ್ ಬೋರ್ಡ್ ಕಾರ್ಯನಿರ್ವಾಹಕ ನಿರ್ದೇಶಕ ಕೆಎನ್ ರಾಘವನ್, ಭಾರತದಲ್ಲಿ ನೈಸರ್ಗಿಕ ರಬ್ಬರ್‌ನ ಬೇಡಿಕೆ-ಪೂರೈಕೆ ಅಂತರವಿದೆ. ಹೀಗಾಗಿ ಭಾರತವು ರಬ್ಬರ್ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. 2021-22ರಲ್ಲಿ ಭಾರತ 12.3 ಲಕ್ಷ ಟನ್ ನೈಸರ್ಗಿಕ ರಬ್ಬರ್ ಬಳಕೆ ಮಾಡಿದೆ. ಆದರೆ ದೇಶೀಯ ರಬ್ಬರ್ ಉತ್ಪಾದನೆಯು 7.7 ಲಕ್ಷ ಟನ್‌ಗಳಷ್ಟಿತ್ತು. 2030ರ ವೇಳೆಗೆ ನೈಸರ್ಗಿಕ ರಬ್ಬರ್‌ನ ಬೇಡಿಕೆ 20 ಲಕ್ಷ ಟನ್‌ಗೆ ಏರಲಿದೆ ಎಂದು ಅಂದಾಜಿಸಲಾಗಿದೆ,. ಹೀಗಾಗಿ ರಬ್ಬರ್ ಉತ್ಪಾದನೆಯೂ ಹೆಚ್ಚಳವಾಗಬೇಕಿದೆ ಎಂದರು.
ಈ ಹಿನ್ನೆಲೆಯಲ್ಲಿ, ನೈಸರ್ಗಿಕ ರಬ್ಬರ್‌ನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೆಲವು ರಾಜ್ಯಗಳು ಮುಂದೆ ಬಂದಿತ್ತು. ಹೀಗಾಗಿ ಕೆಲವು ಸಂಸ್ಥೆಗಳ ನಡುವಿನ ಚರ್ಚೆಯ ನಂತರ, ಈಶಾನ್ಯ ಭಾರತದಲ್ಲಿ ವಿಶೇಷ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಇಲ್ಲಿ ಭೂಮಿಯ ಲಭ್ಯತೆ ಮತ್ತು ಸೂಕ್ತವಾದ ಹವಾಮಾನ ಪರಿಸ್ಥಿತಿಗಳಿಂದ ರಬ್ಬರ್ ತೋಟಕ್ಕೆ ಉತ್ತಮ ವಾತಾವರಣ ಇದೆ ಎಂದು ರಾಘವನ್ ಹೇಳಿದರು.
ದೇಶವು ಪ್ರತಿ ವರ್ಷ 7.75 ಲಕ್ಷ ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತದೆ, ಅದರಲ್ಲಿ ಶೇ.73 ರಷ್ಟು ರಬ್ಬರ್ ಆಟೋಮೋಟಿವ್ ಟೈರ್ ವಿಭಾಗದಲ್ಲಿ ಬಳಕೆಯಾಗುತ್ತದೆ. ಉಳಿದವು ಸೈಕಲ್ ಟೈರ್‌ಗಳು, ಬೆಲ್ಟ್‌ಗಳು, ಬಲೂನ್‌ಗಳು, ಕಾಂಡೋಮ್‌ಗಳು ಮತ್ತು ಪಾದರಕ್ಷೆಗಳಿಗೆ ಬಳಕೆಯಾಗುತ್ತದೆ. ಪ್ರಸ್ತುತ ಈಶಾನ್ಯ ರಾಜ್ಯಗಳು ರಬ್ಬರ್ ಉತ್ಪಾದನೆಯಲ್ಲಿ ಶೇ.18 ರಷ್ಟು ಕೊಡುಗೆ ನೀಡುತ್ತಿವೆ. ಯೋಜನೆಯಡಿಯಲ್ಲಿ ಹೆಚ್ಚುವರಿ ಎರಡು ಲಕ್ಷ ಹೆಕ್ಟೇರ್ ರಬ್ಬರ್ ತೋಟವನ್ನು ನಿರ್ಮಾಣ ಮಾಡಿದ ನಂತರ ಈಶಾನ್ಯದ ಪಾಲು ಶೇ.32 ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಎರಡು ಲಕ್ಷ ಹೆಕ್ಟೇರ್ ತೋಟದಿಂದ ಸುಮಾರು 1.5 ಲಕ್ಷ ಟನ್ ರಬ್ಬರ್ ಉತ್ಪಾದಿಸುವ ಪ್ರದೇಶವು 2032 ರ ವೇಳೆಗೆ ಆರು ಲಕ್ಷ ಟನ್ ಉತ್ಪಾದಿಸುವ ಸಾಧ್ಯತೆಯಿದೆ ಎಂದು ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಘವನ್ ಹೇಳಿದ್ದಾರೆ.