ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ಲೈನ್ ದುರಸ್ತಿ ಸಮಸ್ಯೆಗೆ ಪರಿಹಾರವಾಗಿ ಗ್ರಾಮೀಣ ಭಾಗದಲ್ಲೂ ಭೂಗತ ಕೇಬಲ್ ಮೂಲಕ ಸಂಪರ್ಕ ನೀಡಬೇಕು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಸಂಪಾಜೆ ಗೂನಡ್ಕದ ನಿವಾಸಿಗಳಾದ ಇಸ್ಮಾಯಿಲ್ ಹಾಗೂ ಚಿದಾನಂದ ಅವರು ನಾಗರಿಕರ ಪರವಾಗಿ ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಗಾಳಿ ಮಳೆಗೆ ಕಂಬಗಳು ತುಂಡಾಗುತ್ತದೆ. ಗ್ರಾಮೀಣ ಭಾಗದಲ್ಲಿ ಭೀಕರ ಗಾಳಿ ಮಳೆಗೆ ಮರ ಬಿದ್ದು ಕಂಬ ತುಂಡಾಗುತ್ತದೆ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಮಸ್ಯೆಯಾಗುವುದು ಪ್ರತೀ ವರ್ಷ ಇದೆ. ಇದನ್ನು ದುರಸ್ತಿಪಡಿಸಲು ಕೂಡಾ ವೆಚ್ಚದಾಯುಕವೂ ಆಗುತ್ತಿದೆ. ಹೀಗಾಗಿ ಈ ಸಮಸ್ಯೆ ನಿವಾರಣೆಗೆ ದ ಕ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೂಡಾ ಭೂಗತ ಕೇಬಲ್ ಅಳವಡಿಕೆ ಮಾಡಿ ವಿದ್ಯುತ್ ಸಂಪರ್ಕಕ್ಕೆ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.