(Source:ANI) ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು ‘ಆಪರೇಷನ್ ಗಂಗಾ’ವನ್ನು ಪ್ರಾರಂಭಿಸಿದೆ. ಈ ಕಾರ್ಯದಲ್ಲಿ ಇದೀಗ ವಾಯುಪಡೆ ಜೊತೆಯಾಗಿದೆ. ಇಂದು, ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಉಕ್ರೇನ್‌ನ ನೆರೆಹೊರೆಯ ವಿವಿಧ ಸ್ಥಳಗಳಿಗೆ ವಾಯುಪಡೆಯು ಇನ್ನೂ ಮೂರು ವಿಮಾನಗಳನ್ನು ಕಳುಹಿಸುತ್ತಿದೆ ಎಂದು ಭಾರತೀಯ ವಾಯುಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ರಷ್ಯಾ ಉಕ್ರೇನ್ ಸಂಘರ್ಷದ ಬಳಿಕ ಭಾರತೀಯ ಪ್ರಜೆಗಳ ರಕ್ಷಣೆಯಲ್ಲಿ ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತಿರುವಂತೆಯೇ ದೇಶದ ಪ್ರತೀ ರಾಜ್ಯಗಳೂ ಸಹಾಯ ಮಾಡುತ್ತಿವೆ. ಫೆ.24 ರ ನಂತರ ಉಕ್ರೇನ್ ವಿವಿಧ ಭಾಗಗಳಿಂದ ಭಾರತೀಯರ ರಕ್ಷಣೆ ಮಾಡುತ್ತಿರುವಂತೆಯೇ ಸುಮಾರು 20,000 ಭಾರತೀಯರ ಪೈಕಿ ಮಂಗಳವಾರದ ಹೊತ್ತಿಗೆ ಸುಮಾರು 8,000 ಭಾರತೀಯರು, ಮುಖ್ಯವಾಗಿ ವಿದ್ಯಾರ್ಥಿಗಳು, ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾಹಿತಿ ನೀಡಿದ್ದರು. ಇದೀಗ ಅವರೆಲ್ಲರ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ. ಧಾಳಿ ನಡೆಯುತ್ತಿರುವ ನಗರಗಳಿಂದ ರಕ್ಷಣೆ ಮಾಡುವ ಸವಾಲಿನ ಕೆಲಸವನ್ನು ಈಗ ನಡೆಸಲಾಗುತ್ತಿದೆ. ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಉಕ್ರೇನ್‌ನ ಪಶ್ಚಿಮ ನೆರೆಹೊರೆಯ ನಾಲ್ವರು ಕೇಂದ್ರ ಸಚಿವರು ಹೋಗಿದ್ದಾರೆ.
ಬುಡಾಪೆಸ್ಟ್ (ಹಂಗೇರಿ) ನಿಂದ ಭಾರತೀಯರನ್ನು ಹೊತ್ತ ವಿಮಾನ ಇಂದು ಮುಂಜಾನೆ ದೆಹಲಿಗೆ ಬಂದಿಳಿಯಿತು.ಕೇಂದ್ರ ಮಂತ್ರಿಗಳಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ವೀರೇಂದ್ರ ಕುಮಾರ್ ಅವರು ಬುಡಾಪೆಸ್ಟ್ (ಹಂಗೇರಿ) ಮೂಲಕ ಯುದ್ಧ ಪೀಡಿತ ಉಕ್ರೇನ್ ನಿಂದ ಬಂದ ಭಾರತೀಯರನ್ನು ಸ್ವಾಗತಿಸಿದ್ದಾರೆ.ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿಗಳು, ಕೀವ್ ಮತ್ತು ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಸ್ಥಳಾಂತರಿಸಬೇಕಿದೆ ಎಂದು ದೆಹಲಿ ವಿಮಾನ ನಿಲ್ದಾಣ ತಲುಪಿದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ಇಂದು ಉಕ್ರೇನ್‌ನಿಂದ ದೆಹಲಿಗೆ ಆಗಮಿಸುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಕೇರಳ ರಾಜ್ಯ ಸರ್ಕಾರ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಕೊಚ್ಚಿ ವಿಮಾನ ನಿಲ್ದಾಣದಿಂದ ತಿರುವನಂತಪುರಂ ಮತ್ತು ಕಾಸರಗೋಡಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಉಕ್ರೇನ್‌ನಿಂದ ಹಿಂದಿರುಗಿದವರಿಗೆ ಸಹಾಯ ಮಾಡಲು ರಾಜ್ಯದ ಎಲ್ಲಾ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಈ ನಡುವೆ ರಷ್ಯಾ ಮತ್ತು ಉಕ್ರೇನ್ ನಡುವೆ ಎರಡನೇ ಸುತ್ತಿನ ಮಾತುಕತೆ ಇಂದು ನಡೆಯಲಿದೆ. ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರು ಉಕ್ರೇನ್ ಯುದ್ಧದಲ್ಲಿ ತನ್ನ 498 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 1,597 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.