ತುಳು ಭಾಷೆಗೆ(Tulu Language) ಉಳಿದ ಭಾಷೆಗಳಿಗೆ ಇರುವಷ್ಟೇ ಇತಿಹಾಸ(History), ಬಳಕೆ ಇದೆ. ಆದರೆ ಅದನ್ನು ಯಾಕೋ ಸರ್ಕಾರಗಳು ಅಧಿಕೃತ ಭಾಷೆಯನ್ನಾಗಿಸದೆ ನಿರ್ಲಕ್ಷಿಸಿವೆ. ಆದರೆ ತುಳು ಭಾಷಿಗರು ತಮ್ಮ ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ. ಈ ಬಾರಿ ತುಳು ಭಾಷೆಯ (Tulu Language) ಅಧಿಕೃತ ಸ್ಥಾನಮಾನಕ್ಕಾಗಿ ವಿಶಿಷ್ಟ ಅಭಿಯಾನಕ್ಕೆ ಕರಾವಳಿಗರು ಮುಂದಾಗಿದ್ದಾರೆ. ಜನವರಿ 29ರಿಂದ ಫೆಬ್ರವರಿ 2 ರವರೆಗೆ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗಿದೆ.
ವಿವಿಧ ಕ್ಷೇತ್ರದ ಗಣ್ಯರು, ರಾಜಕಾರಣಿಗಳು, ಕಲಾವಿದರು, ವಿವಿಧ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ (8th Schedule) ಸೇರ್ಪಡೆ ಹಾಗೂ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆ(official language) ಸ್ಥಾನಮಾನ ನೀಡಬೇಕೆನ್ನುವುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 10 ಸಾವಿರ ಪತ್ರಗಳನ್ನು ಬರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಈ ಅಭಿಯಾನಕ್ಕೆ ಪಕ್ಷ ಭೇದ ಮರೆತು ಜನ ಬೆಂಬಲಿಸಿದ್ದಾರೆ. ಕರಾವಳಿ ಭಾಗದ ಕನ್ನಡ ಸಂಘಟನೆಗಳು ಕೂಡಾ ಈ ಅಭಿಯಾನದಲ್ಲಿ ಕೈ ಜೋಡಿಸುವುದಾಗಿ ತಿಳಿಸಿದೆ. ತುಳು ಭಾಷೆಯು ಅಧಿಕೃತ ಲಿಪಿಯನ್ನು ಹೊಂದಿದ್ದು, ಈ ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನಮಾನ ಸಿಕ್ಕಲ್ಲಿ ಸಾಂವಿಧಾನಿಕ ಮಾನ್ಯತೆ ಸಿಗಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
– ಅಂತರ್ಜಾಲ ಮಾಹಿತಿ