ಗ್ರಾಮೀಣ ಭಾಗಗಳನ್ನು ಯಾಕೆ ಇಷ್ಟು ನಿರ್ಲಕ್ಷ್ಯ ಮಾಡುತ್ತಾರೆ ? ಈ ಪ್ರಶ್ನೆ ಇದೀಗ ಸುಳ್ಯದಲ್ಲಿ ಕೇಳಲೇಬೇಕು. ಏಕೆಂದರೆ ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳನ್ನು ಕಂಡರೆ, ಅವರೊಡನೆ ಮಾತನಾಡಿದರೆ ಈ ಮಾತುಗಳನ್ನು ಯಾರಾದರೂ ಕೇಳುತ್ತಾರೆ. ಭಾರೀ ಮಳೆಯಿಂದಾಗಿ ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳ ಸಂಪರ್ಕ ಕೊಂಡಿಯಾಗಿದ್ದ ಮಾನವ ನಿರ್ಮಿತ ಕಾಲು ಸಂಕ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋಗಿ ದ್ವೀಪದಂತಾಗಿತ್ತು.ಇದೀಗ ತಾತ್ಕಾಲಿಕವಾಗಿ ಶೌರ್ಯ ವಿಪತ್ತುನಿರ್ವಹಣೆ ಘಟಕದ ಸದಸ್ಯರು ನೆರವಿಗೆ ಬಂದಿದ್ದಾರೆ. ತಾತ್ಕಾಲಿಕ ಮರದ ಕಾಲು ಸಂಕ ಮತ್ತೆ ನಿರ್ಮಾಣವಾಗಿದೆ.

ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಇದುವರೆಗೂ ಗತಿಯಾಗಿತ್ತು. 49 ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು ಒಬ್ಬ ಅಂಗವಿಕಲರೂ ಇದ್ದಾರೆ. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ. ಸ್ವಾತಂತ್ರ್ಯ ನಂತರ ಇದುವರೆಗೂ ಇದೇ ಮಾದರಿಯಲ್ಲಿ ಇವರು ಸಂಚರಿಸುತ್ತಾರೆ. ಈಗ ಅಮೃತಮಹೋತ್ಸವ ಸಂದರ್ಭ ಹೊರಜಗತ್ತಿಗೆ ತಿಳಿದಿದೆ.

ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ ಸ್ಥಳೀಯವಾಗಿ ಸಿಗುವ ಮರ,ಬಿದಿರು, ಬಳ್ಳಿಗಳನ್ನು ಬಳಸಿ ಕಾಲು ಸೇತುವೆ ದುರಸ್ತಿ ಪಡಿಸಿ ಜೀವಮಾನ ಕಳೆಯುತ್ತಿದ್ದಾರೆ. ಈ ಭಾರಿ ಸುರಿದ ವಿಪರೀತ ಮಳೆಗೆ ಹೆಚ್ಚಿನ ಪ್ರವಾಹ ಬಂದು ಕಾಲು ಸೇತುವೆ ನೀರಿನಲ್ಲಿ ಭಾಗಶಃ ಕೊಚ್ಚಿ ಹೋಗಿದೆ. ಇಲ್ಲಿ ನೆಲೆಸಿರುವ 11 ಮನೆಗಳಿಗೆ ಈ ದಾರಿಯಿಲ್ಲದಾಗಿತ್ತು. ಹೊರಜಗತ್ತಿಗೆ ಈ ಸಮಸ್ಯೆ ಗೋಚರಿಸಿದ ಬಳಿಕ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ನಡುವೆ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು ತಾತ್ಕಾಲಿಕ ಮರದ ಕಾಲು ಸಂಕ ಮತ್ತೆ ನಿರ್ಮಾಣ ಮಾಡಿದ್ದಾರೆ ಹೀಗಾಗಿ ಸದ್ಯ ಈಲ್ಲಿನ ಜನರಿಗೆ ಓಡಾಟಕ್ಕೆ ಅನುಕೂಲವಾಗಿದೆ. ಆದರೆ ಗ್ರಾಮೀಣ ಭಾಗದ ಈ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸುವುದೇ ? ಮುಂದಿನ ಚುನಾವಣೆ ವೇಳೆಗೆ ಈ ಭರವಸೆ ಈಡೇರಬಹುದೇ ? ಎನ್ನುವುದು ಪ್ರಶ್ನೆ.




