ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ವೈರಸ್‌ಗಳು ಮತ್ತು ಪ್ರೊಟೊಜೋವಾ ಸೇರಿದಂತೆ ವಿವಿಧ ಸೂಕ್ಷ್ಮಾಣುಜೀವಿಗಳಿಗೆ ಮಣ್ಣು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ, ಈ ಸೂಕ್ಷ್ಮಜೀವಿಗಳು ಮಣ್ಣಿನಲ್ಲಿ ಹೇರಳವಾಗಿ ಮತ್ತು ಕೆಲವೊಮ್ಮೆ ದಟ್ಟವಾಗಿ ಕಂಡುಬರುತ್ತವೆ. ಪ್ರತಿ ಗ್ರಾಂ ಮಣ್ಣಿನಲ್ಲಿ ಸುಮಾರು ಒಂದರಿಂದ ಹತ್ತು ಮಿಲಿಯನ್ ಸೂಕ್ಷ್ಮಾಣುಜೀವಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಸೂಕ್ಷ್ಮಾಣುಜೀವಿಗಳಲ್ಲಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹೆಚ್ಚು ಸಾಮಾನ್ಯವಾಗಿದೆ. ಮಣ್ಣಿನಲ್ಲಿರುವ ಈ ಎಲ್ಲಾ ಸೂಕ್ಷ್ಮಾಣುಜೀವಿಗಳು ನಿರಂತರವಾಗಿ ಬದಲಾಗುವ ಪರಿಸ್ಥಿತಿಗಳನ್ನು ಸೃಷ್ಟಿಸಲು ಪರಸ್ಪರ ಸಂವಹನ ನಡೆಸುತ್ತವೆ. ಈ ಬಹು ಅಂಶಗಳ ನಡುವಿನ ಪರಸ್ಪರ ಕ್ರಿಯೆಗಳು ಒಂದು ನಿರ್ದಿಷ್ಟ ಸ್ಥಳದಲ್ಲಿ ವಿವಿಧ ರೀತಿಯ ಮಣ್ಣಿಗೆ ಕಾರಣವಾಗಿವೆ.
ಒಳ್ಳೆ ಫಸಲು ಬರಬೇಕಾದ್ರೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಬಹಳ ಮುಖ್ಯ. ನಾಟಿ ಹಸುವಿನ ಹಾಲನ್ನು ಬಳಸಿ ಕೂಡ ಒಂದಷ್ಟು ಜೀವಾಣುಗಳನ್ನು ನಾವೇ ಸಿದ್ಧಗೊಳಿಸಬಹುದು. ಇದನ್ನು ಹೇಗೆ ಮಾಡೋದು ಅನ್ನೋದನ್ನು ತಿಳಿಸಿಕೊಡ್ತಾರೆ ಡಾ|| ಮಂಜುನಾಥ ಹೆಚ್.,ಸಹಜ ಕೃಷಿ ವಿಜ್ಞಾನಿಗಳು.
ನೆಲಮಂಗಲದ ಮಲ್ಲಣ್ಣ ಹಾಗು ತಮಿಳುನಾಡಿನ ಕಾಂಗಾಯಂ ತಾಲೂಕಿನ ಪ್ರಭು ರವರ ತೋಟದಲ್ಲಿ ನಡೆಸಿದ ನಾಟಿ ಹಸುವಿನ ಹಾಲಿನಲ್ಲಿ ಸೂಕ್ಷ್ಮಾಣು ತಯಾರಿಸುವ ಪದ್ಧತಿ ಬಗ್ಗೆ ತಿಳಿಯೋಣ..
1. ಅರ್ಧ ಕೆಜಿ ಅಕ್ಕಿ ಹಿಟ್ಟನ್ನು 7 ಲೀಟರ್ ನೀರಿಗೆ ಸೇರಿಸಿ ಒಲೆಯಲ್ಲಿ ಮೂರೂ ನಾಲ್ಕು ಗಂಟೆಗಳ ಕಾಲ ಕುದಿಸಬೇಕು (ಮದ್ಯಾಹ್ನದ ಸಮಯದಲ್ಲಿ) ನಾಲ್ಕು ಗಂಟೆಗಳ ಕಾಲ ತಣ್ಣಗಾಗಲು ಬಿಡಬೇಕು. ಗಂಜಿ ಮಿಶ್ರಣ ಸುಮಾರು 6 ಲೀಟರ್ ನಷ್ಟು ಸಿಗುತ್ತದೆ.
2. ಮೂರು ಲೀಟರ್ ಅಂದೇ ಕರೆದಿದ್ದ ನಾಟಿ ಹಸುವಿನ ಹಾಲು (ಬೆಳಗಿನ ಅಥವಾ ಫ್ರಿಡ್ಜ್ ನಲ್ಲಿಟ್ಟಿರುವ ಹಾಲು ಸಲ್ಲದು).
3. ಹತ್ತು ಲೀಟರ್ ಹಿಡಿಯುವಷ್ಟು ದೊಡ್ಡದಾದ ಮಣ್ಣಿನ ಮಡಿಕೆಯನ್ನು ತಂಪಾದ ಜಾಗದಲ್ಲಿ ಮರಳಿನ ಮೇಲೆ ಇರಿಸಬೇಕು (ಭೂಮಿಯ ಒಳಗಡೆ ಅಥವಾ ಮೇಲಾದರೂ ಸರಿ; ಸುತ್ತ ಮರಳನ್ನು ಹಾಕಿ ತಂಪಾಗಿರಿಸಬೇಕು).
4. ಸಂಜೆ ಸುಮಾರು 7 ಗಂಟೆಗೆ, ಮಡಿಕೆಯಲ್ಲಿ ಮೊದಲು 3 ಕೆಜಿ ಬೆಲ್ಲ ಹಾಕಿ ನಂತರ, 6 ಲೀಟರ್ ನಷ್ಟು ಇರುವ ಗಂಜಿ ಮತ್ತು 3 ಲೀಟರ್ ಹಾಲನ್ನು ಮಡಿಕೆಗೆ ತುಂಬಿಸಿ. ಪೂರ್ತಿ ಭರ್ತಿ ಮಾಡಬೇಡಿ. 10 ಲೀಟರ್ ಸಾಮರ್ಥ್ಯದ ಮಡಿಕೆಗೆ 9 ಲೀಟರ್ ಮಿಶ್ರಣ ಸಾಕು, ಮೇಲೆ ಗಾಳಿಯಾಡಲು ಸ್ಥಳಾವಕಾಶವಿರಲಿ. ಮಡಿಕೆಯನ್ನು ಮಣ್ಣಿನ ಮುಚ್ಚಳದಿಂದ ಮುಚ್ಚಿಡಬೇಕು.
5. ಏಳು ರಿಂದ ಎಂಟು ದಿನದ ಅವಧಿಯಲ್ಲಿ ಮೇಲಿನ ಪದರ ಹೆಪ್ಪುಗಟ್ಟಿ, ಬಣ್ಣ ಬಣ್ಣದ ಪುಟ್ಟ ಪುಟ್ಟ ಸಾಮ್ರಾಜ್ಯದ ಗುಂಪುಗಳು ನಿರ್ಮಾಣಗೊಂಡಿರುತ್ತದೆ.
6. ನಿಧಾನವಾಗಿ ಚಮಚದಿಂದ ಈ ಮೇಲ್ಕಂಡ ಗಟ್ಟಿ ಹೆಪ್ಪನ್ನು ತಗೆದು ಇನ್ನೊಂದು ಮಡಿಕೆಗೆ ರವಾನೆ ಮಾಡಿಕೊಳ್ಳಿ.
7. ಗಟ್ಟಿ ಕೆನೆ ತಗೆದ ಬಳಿಕ ಉಳಿದ, ಹಳದಿ ಬಣ್ಣಕ್ಕೆ ತಿರುಗಿದ ಹಾಲನ್ನು ಡ್ರಮ್ ಗೆ ರವಾನೆ ಮಾಡಿಕೊಳ್ಳಿ. ಒಂದು ಲೀಟರ್ ಗೆ 1೦೦ ಲೀಟರ್ ನೀರು ಬೆರಸಿ ಗಿಡಗಳ ಅಥವಾ ಮರಗಳ ಬುಡಕ್ಕೆ ಕೊಡಬೇಕು.
ಬೇಸಿಗೆ ಕಾಲದಲ್ಲಿ ಪ್ರತಿ 15-20 ದಿನಕ್ಕೊಮ್ಮೆ ಕೊಟ್ಟರೆ ಒಳ್ಳೆಯದು. ಮಳೆಗಾಲ ಮತ್ತು ಚಳಿಗಾಲದಲ್ಲಿ ತಿಂಗಳಿಗೊಮ್ಮೆ ಸಾಕು.
ಎರಡು ವರುಷ ಹೀಗೆ ಮಾಡಿದಲ್ಲಿ, ಮಣ್ಣು ಬಹುಬೇಗ ಸಮೃದ್ಧಿಯಾಗುತ್ತದೆ.
ಬಂದ ಅರ್ಧ ಕೆಜಿಯಷ್ಟು ಹೆಪ್ಪು / ಕೆನೆಯನ್ನು 200 ಲೀಟರ್ ನೀರಿಗೆ ಸೇರಿಸಿ ಸಿಂಪಡನೆ ಮಾಡತಕ್ಕದ್ದು
ಇದನ್ನು ಏಕೆ ಮಾಡಬೇಕು.? ಪ್ರಯೋಜನವೇನು.?
1. ಹಸಿರು / ಹಳದಿ / ಅಲ್ಲಲ್ಲಿರುವ ಬಿಳಿ ಛಾಯೆಗಳು – ಟ್ರೈಕೋಡರ್ಮಾ ಎಂದರ್ಥ.
2. ಹಳದಿ-ಹಸಿರು ಪ್ರತಿದೀಪಕ ವರ್ಣದ್ರವ್ಯ. ಸಾಂದರ್ಭಿಕ ಸೂಡೋಮೊನಾಸ್ ತಳಿಗಳು ಕಡು ಕೆಂಪು (ಪಯೋರುಬಿನ್) ಅಥವಾ ಕಪ್ಪು (ಪಯೋಮೆಲನಿನ್) ವರ್ಣದ್ರವ್ಯವನ್ನು ಸಹ ಉತ್ಪತ್ತಿ ಮಾಡುತ್ತವೆ.
3. ಫಾಸ್ಫರಸ್ ಕರಗಿಸುವ ಬ್ಯಾಕ್ಟೀರಿಯಾದ ಗುಂಪಿನ ಬಣ್ಣವು ಬಿಳಿ, ಕಂದು ಮತ್ತು ಕ್ಷೀರ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಕೆಲವು ಲೋಳೆಸರದ ಅಥವಾ ಜೊಲ್ಲಿನ ರೀತಿ ಸ್ಥಾಪಿತವಾಗಿರುತ್ತದೆ.
ಈ ಮೂರೂ ಬಹು ಮುಖ್ಯವಾದ ಜೀವಾಣುಗಳು…
ಮಿಕ್ಕುಳಿದಂತೆ ಇನ್ನೂ ಹಲವಾರು ಜೀವಾಣುಗಳು ಕಡಿಮೆ ಪ್ರಮಾಣದಲ್ಲಿ ಅಲ್ಲಲ್ಲಿ ಗುಂಪು ಗಟ್ಟಿರುತ್ತದೆ..
ಟ್ರೈಕೋಡರ್ಮ ಕೊಳೆ ರೋಗಕ್ಕೆ,
ಸೂಡೋಮೋನಾಸ್ ಬೆಂಕಿ ಹಾಗು ಇನ್ನಿತರೇ ಶಿಲಿಂದ್ರ ರೋಗಕ್ಕೆ ಮದ್ದಾದರೆ,
ಪಿ ಯಸ್ ಬಿ ; ಫಾಸ್ಫರಸ್ ನ ಕರಗಿಸುವಲ್ಲಿ ಬಹು ಮುಖ್ಯ ಸ್ಥಾನ ಪಡೆದುಕೊಂಡಿದೆ..
ಸೂಕ್ಷ್ಮತೆಗಳು :
1. ಮಡಿಕೆಯನ್ನು ಅಲುಗಾಡಿಸಬಾರದು.
2. ಮಡಿಕೆಯನ್ನು ತಂಪಾದ ಪ್ರದೇಶದಲ್ಲಿ (ಮರದ ಕೆಳಗಡೆ ಹೂತಿಡಿ) ಅಥವಾ ಮನೆಯ ಕೋಣೆಯಲ್ಲೇ ಮರಳಿನಲ್ಲಿ ತಂಪಾಗಿರಿಸಿ.
3. ಮುಚ್ಚಳದ ಮೇಲೆ ಒದ್ದೆ ಪಂಚೆ ಅಥವಾ ಸೀರೆ ಬಟ್ಟೆ
ಹೊದಿಸಿ. ದಿನಕ್ಕೆ ಎರಡು ಬಾರಿ ಬಟ್ಟೆ ಒದ್ದೆ ಮಾಡಿ ಮುಚ್ಚಿಡಿ.
4. ಏಳು ದಿನದ ನಂತರ ಮುಚ್ಚಳ ತಗೆದು ಬಣ್ಣದ ಗುಂಪುಗಳನ್ನು ಗಮನಿಸಿಕೊಳ್ಳಿ..
ಹೀಗೆ ನಿಮ್ಮ ಜೀವಾಣುಗಳನ್ನು ನೀವೇ ಸಿದ್ಧಗೊಳಿಸಿಕೊಳ್ಳಿ..
ನಿಮ್ಮ ಮಣ್ಣನ್ನು ನೀವೇ ನಿಧಾನವಾಗಿ ಅರ್ಥೈಸಿಕೊಳ್ಳಿ..
ನಿಮಗೆ ನೀವೇ ಗುರು, ಹೊರಗೆ ಹುಡುಕುತ್ತ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ..
ಎಲ್ಲಾ ನಿಮ್ಮಲ್ಲಿಯೇ ಇದೆ..
ಹೆಕ್ಕಿ ತಗೆಯುವ ಸಾಮರ್ಥ್ಯ ಬೆಳಸಿಕೊಳ್ಳಬೇಕಷ್ಟೆ ..
ಜೀವಾಣುಗಳನ್ನು ಕೊಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಕಳಿತ ಗೊಬ್ಬರವನ್ನು ಕೊಡುವುದು.
ಇವೆರಡು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮುಚ್ಚುಗೆ ಬೆಳೆಯನ್ನು (ಕವರ್ ಕ್ರಾಪ್ / cover crop) ಸದಾಕಾಲವೂ ಬೆಳೆದು ಭೂಮಿಯನ್ನು ಉರಿ ಬಿಸಿಲಿನಿಂದ ಕಾಪಾಡಿಕೊಳ್ಳುವುದು.
ಇವು ಮೂರೂ ಒಂದಕ್ಕೊಂದು ಬೆಸೆದ ಕೊಂಡಿ.. ಒಂದನ್ನು ಬಿಟ್ಟರೆ, ಇನ್ನುಳಿದೆರಡು ವ್ಯರ್ಥವಾಗುತ್ತದೆ..
ವಾಯುಗುಣಕ್ಕೆ ಹೊಂದಿಕೊಳ್ಳುವ ಕೃಷಿ ಪದ್ಧತಿ ನಿರ್ಮಾಣ ಮಾಡಿಕೊಂಡರೆ ಹೊಲ, ಗದ್ದೆ, ತೋಟಗಳನ್ನು ಉಳಿಸಿಕೊಳ್ಳಬಹುದು.. ಆಯ್ಕೆ ನಮ್ಮದು..
– ಡಾ|| ಮಂಜುನಾಥ ಹೆಚ್.,
ಸಹಜ ಕೃಷಿ ವಿಜ್ಞಾನಿಗಳು, ಗಾಂಧಿ ಸಹಜ ಬೇಸಾಯಾಶ್ರಮ, ತುಮಕೂರು.