ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಹೇಳಿದರು.
ಅವರು ನಗರದ ವೆನ್‍ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ಮಾನ್ ವಿಭಾಗದಲ್ಲಿ ಮಾ.16ರ ಬುಧವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಕೋರ್ಬೇ ವ್ಯಾಕ್ಸ್ ಲಸಿಕೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಮುನ್ನೆಚ್ಚರಿಕಾ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಾದ್ಯಂತ ಲಸಿಕೆಗಳು ಲಭ್ಯವಿದ್ದು, ಈಗಾಗಲೇ ಜನರು ಎಚ್ಚೆತ್ತುಕೊಂಡು ಲಸಿಕೆಗಳನ್ನು ಪಡೆದರೆ ಮುಂಬರುವ ಕೋವಿಡ್ ಸೋಂಕಿನ ಅಪಾಯಗಳಿಂದ ಪಾರಾಗಬಹುದು ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಡೋಸ್ 100 ಶೇಕಡಾ, ಎರಡನೇ ಡೋಸ್ 91 ಶೇಕಡಾ ಮತ್ತು 15ವರ್ಷ ಮೇಲ್ಪಟ್ಟವರಿಗೆ 85 ಶೇಕಡಾ ಲಸಿಕೆ ನೀಡಲಾಗಿದೆ. ಇದರೊಂದಿಗೆ ಸುಮಾರು 72 ಸಾವಿರ ಮಕ್ಕಳಿಗೆ ಕೋರ್ಬೇ ವ್ಯಾಕ್ಸ್ ಲಸಿಕೆ ನೀಡುವ ಸಲುವಾಗಿ ಶಾಲೆಗಳಲ್ಲೂ ಲಸಿಕಾ ಅಭಿಯಾನ ಆರಂಭಿಸಲಾಗುವುದು. ಜಿಲ್ಲೆಯಲ್ಲಿರುವ 60 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಮುನ್ನೆಚ್ಚರಿಕಾ ಲಸಿಕೆ ನೀಡುವ ಕೆಲಸಗಳಾಗುತ್ತಿದೆ ಎಂದು ಹೇಳಿದರು.
ವೈದ್ಯಕೀಯ ಸಿಬ್ಬಂದಿಗಳು ಕೂಡ ಕಡ್ಡಾಯವಾಗಿ ಮುನ್ನೆಚ್ಚರಿಕಾ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆಯ ಬಗ್ಗೆ ಜನರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸಿ ಜಿಲ್ಲೆಯಾದ್ಯಂತ ಎಲ್ಲಾ ವಯೋಮಾನದವರಿಗೂ ಶೇಕಡಾ 100ರಷ್ಟು ಲಸಿಕೆ ನೀಡಲು ಯಶಸ್ವಿಯಾಗಿ ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳು ಶ್ರಮಿಸುತ್ತಿವೆ ಎಂದರು.