ಗುತ್ತಿಗಾರಿನ ಯಕ್ಷಕಲಾಭಿಮಾನಿ ಮಿತ್ರರ ವತಿಯಿಂದ ಹನುಮಗಿರಿ ಮೇಳದಿಂದ “ಪಾರಿಜಾತ-ಅಕ್ಷಯಾಂಬರ-ಕುಶಲವ” ಯಕ್ಷಗಾನ ಬಯಲಾಟವು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಡಿ.31 ರಂದು ನಡೆಯಲಿದೆ. ಈ ಸಂದರ್ಭ ಹಿರಿಯ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ.…..ಮುಂದೆ ಓದಿ….
ಹಿರಿಯ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯವರು. ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಬಳಿಕ ರೆಂಜಾಳ ರಾಮಕೃಷ್ಣ ರಾವ್ , ಬಣ್ಣದ ಮಹಾಲಿಂಗ ಯಕ್ಷಗಾನ ಕಲಿತರು. ಬಳಿಕ ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಇನ್ನಷ್ಟು ಯಕ್ಷಗಾನದ ಕಲಿಕೆಯನ್ನು ಮಾಡಿದರು. ಈಗ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿಯನ್ನೂ ನೀಡುತ್ತಿದ್ದಾರೆ.
2 ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ, ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ಕಾಲ ಬಣ್ಣದ ವೇಷಧಾರಿಯಾಗಿ ತಿರುಗಾಟ, ಆಮೇಲೆ 13 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ. ನಂತರದ ಈ ಹದಿಮೂರು ವರ್ಷಗಳಲ್ಲಿ ಹೊಸನಗರ, ಎಡನೀರು ಮತ್ತು ಈಗ ಹನುಮಗಿರಿ ಮೇಳಗಳಲ್ಲಿ ಕಲಾವಿದರಾಗಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಅಯೋಧ್ಯೆ, ಕಾಶಿ, ಕೋಲ್ಕತ್ತಾ, ಕೇರಳ, ಹರಿದ್ವಾರ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿ ಕಲಾಸೇವೆ ಮಾಡಿದ್ದಾರೆ.
ಇದುವರೆಗೆ ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗಳನ್ನು ಪಡೆದುದಲ್ಲದೆ ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಗುತ್ತಿಗಾರಿನ ಯಕ್ಷಕಲಾಭಿಮಾನಿ ಮಿತ್ರರು ಕಳೆದ 4 ವರ್ಷಗಳಿಂದ ಯಕ್ಷಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದು ಸತತ ನಾಲ್ಕು ವರ್ಷಗಳಲ್ಲಿ ಕಲಾಸೇವೆಯ ಸಂದರ್ಭ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಹಿರಿಯ ಕಲಾವಿದ ದಿವಂಗತ ಸೂರ್ಯನಾರಾಯಣ ಪಂಜಾಜೆ, ಹಿಮ್ಮೇಳ ವಾದಕರಾದ ಕುಮಾರ ಸುಬ್ರಹ್ಮಣ್ಯ ವಳಕುಂಜ, ಹಿರಿಯ ವೇಷದಾರಿಗಳಾದ ರೆಂಜಾಳ ರಾಮಕೃಷ್ಣ ರಾವ್ ಹಾಗು ಉಬರಡ್ಕ ಉಮೇಶ ಶೆಟ್ಟಿ ಇವರನ್ನು ಗೌರವಿಸಿದ್ದರು.