ಅಡಿಕೆಯ ಮೌಲ್ಯವರ್ಧನೆ… | ಗುಟ್ಕಾ ಜೊತೆಗೆ ಅಡಿಕೆ ಸಾಂಪ್ರದಾಯಿಕ ತಾಂಬೂಲವಾಗಿ ಮೌಲ್ಯವರ್ಧನೆಯಾಗಲಿ |

March 13, 2024
2:03 PM
ಅಡಿಕೆ ಉಳಿಯಬೇಕು, ಬೆಳೆಯಬೇಕು.ಅದಕ್ಕಾಗಿ ಮೌಲ್ಯವರ್ಧನೆ ಆಗಬೇಕಾಗಿದೆ. ಇದಕ್ಕಾಗಿ ಮನೆಮನೆಗಳಲ್ಲಿ ತಾಂಬೂಲವೂ ಹೆಚ್ಚಾಗಬೇಕು.

ಇತ್ತೀಚೆಗೆ ಮೇಘಾಲಯದ(Meghalaya) ವಿಜ್ಞಾನಿಗಳು‌(Scientist) ಅಡಿಕೆ ಸಿಪ್ಪೆಯಿಂದ(Arecanut peel) ಕೋಟ್(Coat) ಮಾಡಿದ್ದು ಸುದ್ದಿಯಾಗಿತ್ತು.  ಅಡಿಕೆ ಚೊಗರಿನಲ್ಲಿ ಸೀರೆಗೆ ಬಣ್ಣ(color) ಹಾಕಿದ್ದೂ ಹೊಸ ಪ್ರಯೋಗವೆನಿಸಿತ್ತು. ಬಹಳ ವರ್ಷಗಳ ಹಿಂದೆ ಮಲೆನಾಡು ಮೂಲದ ಯುವ ಸಂಶೋಧಕರಿಂದ ಅಡಿಕೆ ಟೀ(Areca tea) ಕೂಡ ತಯಾರಾಗಿ ಅಡಿಕೆ ಬೆಳೆಗಾರರ ಮನದಲ್ಲಿ ಹೊಸ ಸಾದ್ಯತೆಯ ಭರವಸೆ ಮೂಡಿತ್ತು. ಆದರೆ ಬೃಹತ್ ಪ್ರಮಾಣದಲ್ಲಿ ವಿಸ್ತರಣೆಯಾಗುವ ಅಡಿಕೆ ಬೆಳೆ(Arecanut) “ಬೆಲೆ ” ನಿಯಂತ್ರಣವಾಗಿಡುವಲ್ಲಿ ಈ ಯಾವ ಪ್ರಯತ್ನ ಪ್ರಯೋಗಗಳೂ ಯಶಸ್ವಿಯಲ್ಲ.

Advertisement

ಅಡಿಕೆಯು ತತ್ಸಮವಾದರೆ ತದ್ಬವ ಗುಟ್ಕಾ…. ಅಷ್ಟೇ… ಒಂದು ಪೌಚ್ ಪ್ಯಾಕೆಟ್ ನಲ್ಲಿ ಮೂರು ಗ್ರಾಂ ಅಡಿಕೆ ಪುಡಿ ಗುಟ್ಕಾ ಮಾದ್ಯಮ ಸೇರುವುದೊಂದೇ ಅಡಿಕೆಯ ಬೆಳೆ ಬೆಲೆಗೆ ಆಧಾರ. ಅಡಿಕೆ ಬೆಳೆಗಾರರೆಲ್ಲಾ ‘”ಗುಟ್ಕಾದಾತ” ರು ಅಷ್ಟೇ. ಇದನ್ನು ನಾನೂ ಒಬ್ಬ ಅಡಿಕೆ ಬೆಳೆಗಾರನಾಗಿ ಬಹಳ ದುಃಖದಿಂದ ಹೇಳಿ ಕೊಳ್ಳುತ್ತಿದ್ದೇನೆ. ಇಪ್ಪತ್ತು ವರ್ಷಗಳ ಹಿಂದೆ ಗುಟ್ಕಾ ಬ್ಯಾನ್ ಮುನ್ನೆಲೆಗೆ ಬಂದಾಗ ಸಾಗರದ ಹೆಗ್ಗೋಡಿನ ನೀನಾಸಂ ಸ್ಥಾಪಕ ದಿವಂಗತ ಕೆ ವಿ ಸುಬ್ಬಣ್ಣರವರು “ಅಡಿಕೆ ಗೆ ಗುಟ್ಕಾ ಆಧಾರವಾಗಿರುವುದಾದರೆ ನಮಗೆ ಅಡಿಕೆ ಬೆಳೆಯೇ ಬೇಡ ” ಎಂಬಂತಹ ಹೇಳಿಕೆಯನ್ನು ನೀಡಿದ್ದರು.
ಅಂದರೆ ಗುಟ್ಕಾ ಹಾನಿಕಾರಕ ; ಅಂತಹ ಗುಟ್ಕಾ ಮಾರಾಟದ ಲಾಭ ನಮ್ಮ “ಅನ್ನದ ಮೂಲ” ವಾಗುವುದು ಬೇಡ ಎಂಬ ನಿಲವು ಅವರದಾಗಿತ್ತು.

ಗುಟ್ಕಾ ತಿಂದವ “ಗುಟ್ಕಾ ದಾತೋ ಸುಖಿ ಭವ” ಎಂದು ಹಾರೈಸಿ ಗುಟ್ಕಾದಾತನ ಕುಟುಂಬಕ್ಕೆ ಸುಖ ನೆಮ್ಮದಿ ಬಯಸುತ್ತಾನಾ…? ಆದರೆ ನಾವು ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಈ ಗುಟ್ಕಾ ಬರುವ ಮುಂಚೆಯೇ ಅಡಿಕೆ ಬೆಳೆಯುತ್ತಿದ್ದೆವು. ಈಗಲೂ ಬೆಳೆಯುತ್ತಿದ್ದೇವೆ. ನಮ್ಮ ಮಲೆನಾಡಿನಲ್ಲಿ ಅಡಿಕೆ ಈ ಇಪ್ಪತ್ತೈದು ವರ್ಷಗಳ ಹಿಂದಿನ ತನಕವೂ ಸಂಪೂರ್ಣ ಕೈ ಸುಲಿತದಲ್ಲಿ ಸಂಸ್ಕರಣೆಯಾಗುತ್ತಿತ್ತು. ಮಲೆನಾಡು ತೀರ್ಥಹಳ್ಳಿಯ ಅಡಿಕೆಯಲ್ಲಿ ಮೊದಲ ಮಾದರಿ ಹಸ -, ಹಗುರ ತೂಕದ ಕರ್ಜೂರದ ನಮೂನೆಯ ಎಳೆ ಅಡಿಕೆ. ಇದು ರಾಶಿ ಇಡಿ ಮಾದರಿಯ ಅಡಿಕೆಯ ಲೆಕ್ಕಾಚಾರ ಹಾಕಿದರೆ ಸುಮಾರು ಎರಡು ಪಟ್ಟಿಗಿಂತ ತುಸು ಹೆಚ್ಚೇ ಅಡಿಕೆ ಬೇಕಾಗುತ್ತದೆ. ಇದು ಅಡಿಕೆ ಮಾದರಿಯಲ್ಲಿ ಎಲ್ಲಕ್ಕಿಂತ ಹೆಚ್ಚು ದರ ಮಾರುಕಟ್ಟೆಯಲ್ಲಿ ನಮೂದಾಗುತ್ತದೆ.

ಬೆಟ್ಟೆ: ಇದು ಎರಡನೇ ದರ್ಜೆ ಅಡಿಕೆ. ಇದು ಹಸಿ ಅಡಿಕೆಯನ್ನ “ಹೆಚ್ಚುವಷ್ಟು” ಗಟ್ಟಿ ಇರುತ್ತದೆ. ಇದು ಅಡಿಕೆಯಲ್ಲಿ ಎರಡನೇ ಅತಿ ಹೆಚ್ಚು ಬೆಲೆಯುಳ್ಳದ್ದಾಗಿದೆ.

ಇಡಿ ಅಥವಾ ರಾಶಿ ಇಡಿ: ಇದು ಹೆಚ್ಚಲು ಬರದಷ್ಟು ಗಟ್ಟಿ ಆದರೆ ಸುಲಿಯಲು ಬರುವ ಗಟ್ಟಿ ಅಡಿಕೆ ಮಾದರಿ. ಇದು ಅಡಿಕೆ ದರದ ಲೆಕ್ಕಾಚಾರದಲ್ಲಿ ಮೂರನೇ ದರ್ಜೆ.

ಗೊರಬಲು : ಇದು ಹಸಿ ಅಡಿಕೆ ಸುಲಿಯುವ ಸಂಧರ್ಭದಲ್ಲಿ ಅತ್ತ ಚಾಲಿ ಸಿಪ್ಪೆ ಗೋಟು ಅಲ್ಲದ ಇತ್ತ ರಾಶಿ ಇಡಿಯೂ ಅಲ್ಲದ ಹಸಿ ಅಡಿಕೆಯ ಸುತ್ತಲಿನ ಹೊದಿಕೆಯ ಸಹಿತ ಬರುವ ಒರಟಾದ ಅಡಿಕೆ. ಇದು ಅಡಿಕೆ ಮಾದರಿಯಲ್ಲಿ ನಾಲ್ಕನೇ ದರ್ಜೆ ಅಡಿಕೆ. ಬೆಲೆಯೂ ಕಡಿಮೆ.

ಸಿಪ್ಪೆ ಗೋಟು : ಇದು ಸುಲಿಯಲು ಬಾರದ ಅಡಿಕೆ. ಇದಕ್ಕೆ ಸುಲಿದ ಒಣ ಅಡಿಕೆ ಚಾಲಿ ಯ ಅರ್ಧದಷ್ಟು ಬೆಲೆ ಇರುತ್ತದೆ.

ಚಾಲಿ : ಒಣ ಸಿಪ್ಪೆ ಗೋಟು ಸುಲಿದರೆ ಸಿಗುವ ಬೇಯಿಸದ ಆದರೆ ಸುಲಿದ ಒಣ ಅಡಿಕೆ. ಇದಕ್ಕೆ ಸಾಮಾನ್ಯವಾಗಿ ಸಿಪ್ಪೆ ಗೋಟಿನ‌ ಎರಡು ಪಟ್ಟು ಬೆಲೆ ಇರುತ್ತದೆ. ಕರಾವಳಿಯ ಅಡಿಕೆ ಸಾಮಾನ್ಯವಾಗಿ ಚಾಲಿ ಮಾದರಿಯೇ ಹೆಚ್ಚು. ಆದರೆ ಅಲ್ಲಿ ಸಿಗುವ ಬೆಲೆ ಮಲೆನಾಡಿನಲ್ಲಿ ಇಲ್ಲ. ಮಲೆನಾಡಿನಲ್ಲಿ ಹಸಿ ಸುಲಿದೇ ಸಂಸ್ಕರಣೆ ಮಾಡುವುದು. ಗುಟ್ಕಾ ಕಂಪನಿಯ ಗ್ರಾಹಕ ಅಡಿಕೆ ಗೆ ಬರುವ ಮುಂಚೆ ತುಂಬಾ ಶಿಸ್ತಾಗಿ ಹಸ ಬೆಟ್ಟೆ ರಾಶಿ ಇಡಿ ಮಾದರಿ ಗೆ ಬಣ್ಣ ಗುಣಮಟ್ಟದ ಆಧಾರದ ಮೇಲೆ ಬೆಲೆ ಇರುತ್ತಿತ್ತು. ಬಹುಶಃ ಉತ್ತರ ಭಾರತದ ವ್ಯಾಪಾರಿಗಳು ಅಡಿಕೆಯನ್ನ ಇಲ್ಲಿಂದ ಖರೀದಿಸಿ ಅಲ್ಲಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಅಲ್ಲಿ ಆ ಅಡಿಕೆಯನ್ನು ನೇರವಾಗಿಯೇ ಬಳಸುತ್ತಿದ್ದರು. ಹಾಗಾಗಿ ಮಲೆನಾಡಿನ ಅಡಿಕೆಯ ರುಚಿ‌ ಬಣ್ಣಕ್ಕೆ ವಿಶೇಷ ಬೆಲೆ ಇರುತ್ತಿತ್ತು. ಯಾವಾಗ ಗುಟ್ಕಾ ಕಂಪನಿ ಅಡಿಕೆಯನ್ನು ಔದ್ಯಮಿಕ ಕಚ್ಚಾ ವಸ್ತುಗಳಾಗಿ‌ ಖರೀದಿಸ ತೊಡಗಿತೋ ಆಗ ಅಡಿಕೆ ಬೆಲೆ ಬಂತು. ಆದರೆ ಅಡಿಕೆಯ “ಗುಣಮಟ್ಟ ” ಕೇಳುವವರಿಲ್ಲವಾಯಿತು. ಇದೇ ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ದೊಡ್ಡ ಆಘಾತವಾಗಿರುವುದು….!!

ಗುಟ್ಕಾ ತಯಾರಿಕನಿಗೆ ವಿಷಯುಕ್ತ ಚೋದಕ ಡ್ರಗ್ಸ್ ಸೇರಿಸಿ‌, ಆ ಡ್ರಗ್ಸ್ ಚೋದಕಗಳನ್ನ‌ ಆ ಅಡಿಕೆ ಪುಡಿ‌ ಬಹುಕಾಲ ಉಳಿಸಿಕೊಳ್ಳಲು durability  ಇರುವ ಏಕೈಕ ಮಾದ್ಯಮ “ಅಡಿಕೆ”ಮಾತ್ರ. ಈ ಗುಟ್ಕಾಕ್ಕೂ expiry ಇರುತ್ತದೆ. ‌expiry ಮುಗಿದ ಮೇಲೆ ಈ ಗುಟ್ಕಾ ಪುಡಿ ವಿಷ ಯುಕ್ತವಾಗುತ್ತದೆ…‌ ಕಹಿಯಾಗುತ್ತದೆ.

ಹೆಚ್ಚು ಕಾಲ ಚೋದಕವನ್ನ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಮಾದ್ಯಮ ಅಡಿಕೆ ಯಾಗಿರುವುದೂ ಮತ್ತು ಸಮಾಜದಲ್ಲಿ ಅಡಿಕೆಗೊಂದು ಗೌರವಯುತ ಪೂಜನೀಯ ಸ್ಥಾನ ಇರುವುದರಿಂದ ಗುಟ್ಕಾ ದೊರೆಗಳು ಅಡಿಕೆಯನ್ನು ಗುರಾಣಿಯಾಗಿಟ್ಟುಕೊಂಡು ಅಡಿಕೆಯನ್ನು ಸಾಕಷ್ಟು ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ. ಇಲ್ಲ ಅಂದರೆ ಈ ನಿಷೇಧಿತ ಚೋದಕವನ್ನು ಮುಕ್ತವಾಗಿ ಮಾರಾಟ ಮಾಡಲು ಇವರಿಗೆ ಹೇಗೆ ಸಾದ್ಯವಾಗುತ್ತಿತ್ತು….?

ಈ ಗುಟ್ಕಾದವರು ಅಡಿಕೆಯ ವಿಷಯದಲ್ಲಿ ನೋಡುವ ಏಕೈಕ ಗುಣ ಎಂದರೆ ಅಡಿಕೆಯ‌” ಗಟ್ಟಿ ತನ ಮಾತ್ರ”.
ಅಡಿಕೆ ಕನಿಷ್ಠ ಮೂರು ವರ್ಷಗಳ ತನಕ ಉತ್ತಮ ವಾತಾವರಣದಲ್ಲಿ shelf life ಹೊಂದಿದೆ. ಹಿಂದೆ ಭಾರತದಾದ್ಯಂತ ಎಲ್ಲರ ಕೈಲೂ‌ ‘ಎಲೆ ಅಡಿಕೆ ಚೀಲ” ಸಾಮಾನ್ಯವಾಗಿರುತ್ತಿತ್ತು. ಎರಡು ಜನ ಬಸ್ ನಲ್ಲಿ ಅಕ್ಕ ಪಕ್ಕ ಕೂತಿದ್ದರು ಒಬ್ಬರಿಗೊಬ್ಬರು ಸ್ನೇಹಿತರಾಗಲು ಒಂದು ವೀಳ್ಯದೆಲೆಯೋ, ಒಂದು ಅಡಿಕೆಯೋ, ಒಂದು ಚೂರು ಸುಣ್ಣವೋ, ಒಂದು ಚಿಕ್ಕ ತುಂಡು ಹೊಗೆಸೊಪ್ಪೋ ಕಾರಣವಾಗುತ್ತಿತ್ತು. ಹಿಂದಿನ ಕಾಲದ ನಾಣ್ಯ ವರಹ ಗಳನ್ನು ಇಟ್ಟುಕೊಳ್ಳುವಂತಹ ಒಂದು ಬಟ್ಟೆಯ ಚೀಲ. ಅದರಲ್ಲಿ ಎಲೆ ಅಡಿಕೆ ಸುಣ್ಣದ ಡಬ್ಬಿ ಇರುತ್ತಿತ್ತು.

ಕಾಲ ಬದಾಲಾಯಿತು : ಈಗ ಬಹುತೇಕ ಅಡಿಕೆ ಬೆಳೆಗಾರರ ಮನೆಯ ಟಿಪಾಯಿ ಮೇಲೆ ಎಲೆ ಅಡಿಕೆ ತಟ್ಟೆ ಇರುವುದಿಲ್ಲ.
ಸ್ವಚ್ಛ ಹಲ್ಲುಗಳು, ಉಗಳುವ ಜಾಗದ ಕೊರತೆ… .ಹೀಗಿನೆಲ್ಲಾ ಕಾರಣಕ್ಕೆ ಎಲೆ ಅಡಿಕೆ ಹಾಕುವವರ ಸಂಖ್ಯೆ ಗಂಭೀರ ಪ್ರಮಾಣದಲ್ಲಿ ಕಡಿಮೆಯಾತು. ಆದರೆ ಪವಿತ್ರ ತಾಂಬೂಲದ ಸ್ಥಾನದಲ್ಲಿ ‌ಗುಟ್ಕಾ ಬಂದಿದೆ. ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಮಹಾ ಶತ್ರು “ಗುಟ್ಕಾ”…!!!! ಆಶ್ಚರ್ಯವಾದರೂ ಪರಮ ಸತ್ಯದ ಮಾತಿದು. ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಗಲ್ಲಿ ಗಲ್ಲಿಯಲ್ಲೂ ಪಾನ್ ಬೀಡಾ ಶಾಪ್ ಗಳು ಇರುತ್ತಿತ್ತು. ‌ಇದೀಗ ಒಂದೂರಿಗೆ ಒಂದೆರಡೂ ಪಾನ್ ಶಾಪ್ ಗಳಿಲ್ಲ…!!

ಈ ಪಾನ್ ಶಾಪ್ ಗಳು ಸಾಂಪ್ರದಾಯಿಕ ಅಡಿಕೆ ಉತ್ಪನ್ನದ ಮುಖ್ಯ ಖರೀದಿದಾರರಾಗಿದ್ದರು. ಗುಟ್ಕಾ ಪ್ಯಾಕೆಟ್ ಗಳು ಇವತ್ತು ಅಂಗಡಿಗಳಲ್ಲಿ ಮಾವಿನ ತೋರಣ ಹಾಕಿದಂತೆ ಹಾಕಿರುತ್ತಾರೆ.‌ ಕಮಟು ವಾಸನೆಯ ಗುಟ್ಕಾ ಖಂಡಿತವಾಗಿಯೂ ಅನಾರೋಗ್ಯಕಾರಿಯೇ… ಅದೇಕೋ ಗೊತ್ತಿಲ್ಲ… ಎಲೆ ಅಡಿಕೆ ತಾಂಬೂಲ ಆಧುನಿಕೀಕರಣ ವಾಗಲೇ ಇಲ್ಲ….!! ಅಕಸ್ಮಾತ್ತಾಗಿ ಮಾರುಕಟ್ಟೆಗೆ ಗುಟ್ಕಾ ಬರದೇ ಎಲೆ ಅಡಿಕೆ ತಾಂಬೂಲವೇ ಇದ್ದಿದ್ದರೆ ಇಂದು ಸಾಂಪ್ರದಾಯಿಕ ಅಡಿಕೆ ಗೆ ಬಂಗಾರದ ಬೆಲೆ ಇರುತ್ತಿತ್ತು.

Native Areca net : ಹೌದು‌‌‌‌… ಶಿರಸಿ ಸಿದ್ದಾಪುರ ದಿಂದ ಕಾಸರಗೋಡಿನ ತನಕ ಪ್ರತಿ ಐವತ್ತು ಕಿಲೋಮೀಟರ್ ಗೆ ಒಂದು ಮಾದರಿಯ ಅಡಿಕೆ ಉತ್ಪನ್ನ ಬರುತ್ತದೆ. ಇದು ಅತ್ಯಂತ ವೈಶಿಷ್ಟ್ಯ ಪೂರ್ಣ… ತೀರ್ಥಹಳ್ಳಿ ಟಾಲ್ ತಳಿಯ ಅಡಿಕೆ ಬೀಜವನ್ನು ನೀವು ದಾವಣಗೆರೆಯೋ ಮೈಸೂರಿಗೆ ತೆಗೆದುಕೊಂಡು ಹೋಗಿ ನೆಟ್ಟು ತೋಟ ಮಾಡಿದರೆ ಆ ಅಡಿಕೆ ಮರದಲ್ಲಿ ಮಲೆನಾಡಿನ ಮಣ್ಣಿನ ಘಮದ ಸ್ವಾದದ ಅಡಿಕೆ ಬರುವುದಿಲ್ಲ. ತೀರ್ಥಹಳ್ಳಿಯಿಂದ ಅರವತ್ತು ಕಿಲೋಮೀಟರ್ ದೂರದ ಸಾಗರದ ಅಡಿಕೆ ಮಾದರಿ ರುಚಿ ಬೇರೆ. ಸಾಗರದಿಂದ ಅರವತ್ತು ಕಿಲೋಮೀಟರ್ ದೂರದ ಶಿರಸಿಯ ಅಡಿಕೆ ಮಾದರಿ ರುಚಿ ಬೇರೆ. ಮಂಗಳೂರು ಪುತ್ತೂರಿನ ಅಡಿಕೆ ಮಾದರಿ ರುಚಿ ಬೇರೆ…

ಇದರಲ್ಲೂ ಒಂದು ವಿಶೇಷವೆಂದರೆ ಮಲೆನಾಡು ಕರಾವಳಿಯ ಹೊರತಾಗಿ ದಾವಣಗೆರೆ, ಚಿತ್ರದುರ್ಗ, ತುಮಕೂರು,‌ ಮೈಸೂರು ಮುಂತಾದ ಬಯಲು ಸೀಮೆ ಪ್ರದೇಶದ ಅಡಿಕೆ ಮಾದರಿ ಸಾಮಾನ್ಯವಾಗಿ ಒಂದೇ ಬಗೆಯಲ್ಲಿ ಇರುತ್ತದೆ. ಈಗ ನಾನು ಮೊದಲು ಪ್ರಸ್ತಾಪ ಮಾಡಿದ ತೀರ್ಥಹಳ್ಳಿ ಮಾದರಿ ಅಡಿಕೆಯ ಬಗ್ಗೆ ಒಂದು ಚಿಕ್ಕ ಚಿಂತನೆ ಮಾಡೋಣ.. ಈಗ್ಗೆ ಮೂರು ತಿಂಗಳ ಹಿಂದೆ ಅಡಿಕೆ ರಾಶಿ ಇಡಿಗೆ ಕ್ವಿಂಟಾಲ್ ಗೆ 56000 ರೂಪಾಯಿಗೆ ಏರಿಕೆಯಾಗಿತ್ತು.‌ ಇದೇ ಸಂಧರ್ಭದಲ್ಲಿ ಕೈ ಸುಲಿತದ ಬೆಟ್ಟೆ ಅಡಿಕೆಗೆ ಕ್ವಿಂಟಾಲ್ ಗೆ 51000 ರೂಪಾಯಿ ಇತ್ತು. ಇದರಲ್ಲೂ ತೀರ್ಥಹಳ್ಳಿ, ಶಿವಮೊಗ್ಗ, ಸಾಗರ ಪ್ರಾಂತ್ಯದ ಸಾಂಪ್ರದಾಯಿಕ ಗುಣಮಟ್ಟದ ರಾಶಿ ಇಡಿ ಅಡಿಕೆ ಯ ಮಾರುಕಟ್ಟೆ”ಬೆಲೆ” ಗಿಂತ ಚೆನ್ನಾಗಿರಿ‌ ದಾವಣಗೆರೆ ಚಿತ್ರದುರ್ಗದ ಮಾರುಕಟ್ಟೆಯ ರಾಶಿ ಇಡಿ ಬೆಲೆ ಹೆಚ್ಚಿನ ಬೆಲೆಗೆ ವ್ಯಾಪಾರವಾಯಿತು.! ಇದು ಅಡಿಕೆ ಗುಣಮಟ್ಟಕ್ಕೆ ಬೆಲೆ ಇಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ.

ಮಲೆನಾಡಿನ ಅಡಿಕೆಯನ್ನು ಕೈಯಲ್ಲಿ ಸುಲಿದರೂ, ಮಿಷನ್ ನಲ್ಲಿ ಸುಲಿದರೂ ಒಂದೇ ಬೆಲೆ. ಕೈಯಿಂದ ಸುಲಿದ ಅಡಿಕೆಗೂ ಮಿಷನ್ ‌ನಲ್ಲಿ ಸುಲಿದ ಅಡಿಕೆಗೂ ರುಚಿಯಲ್ಲಿ ವ್ಯತ್ಯಾಸವಿರುತ್ತದೆ, ಬಣ್ಣದಲ್ಲೂ ವ್ಯತ್ಯಾಸ ಇರುತ್ತದೆ. ಆದರೂ ಮಲೆನಾಡಿನ ಚೊಗರಿನ‌ ಗುಣಮಟ್ಟ ಮತ್ತು ಭೂಮಿಯ ಮಣ್ಣಿನ ಆಧಾರಿದ ಸ್ವಾದಕ್ಕೆ ಮಾರುಕಟ್ಟೆ ಯಲ್ಲಿ ಯಾವುದೇ ಬೆಲೆಯೂ ಇಲ್ಲ…!! ಮಲೆನಾಡು ಅಡಿಕೆ- ಕರಾವಳಿ‌ ಅಡಿಕೆ ಎಂಬ native ಮಾನ್ಯತೆ ಗೆ ವಿಶೇಷ “ಬೆಲೆ” ಇಲ್ಲ…!! ಇದು ಚಿಂತನೆ ಮಾಡಬೇಕಾದ ವಿಚಾರ ಅಲ್ವ..?! . ಅಡಿಕೆ ಮಾಗಿ ಬೆಳೆದರೆ ಎರಡು ಕ್ವಿಂಟಾಲ್ “ರಾಶಿ ಇಡಿ” ಆಗುತ್ತಿದ್ದ “ಹಸ ಮಾದರಿ” ಗೆ ಶಿವಮೊಗ್ಗ ತೀರ್ಥಹಳ್ಳಿ ಯಲ್ಲಿ ಎಪ್ಪತ್ತು ಸಾವಿರದಿಂದ ಎಂಬತ್ತು ಸಾವಿರದ ತನಕ‌ ಟೆಂಡರುದಾರರು ದರ ಬರೆದರೂ ಖರೀದಿ ಯಾಗುವ “ಹಸ”ದ ಬೆಲೆ ರೂಪಾಯಿ 54000 ದಿಂದ 64000 ಮಾತ್ರ…!!!

ಇವತ್ತು ಅತ್ಯಂತ ಸೂಕ್ಷ್ಮತಮವಾಗಿ‌ ಓಜೋನ್ ಪದರದಂತಹ ಅಡಿಕೆ ಮೇಲು ಹೊದಿಕೆ ಇರುವ ಚೊಗರು ಹಿಂಡದ ಮೂಲ ಸ್ವಾದ ಇರುವ “ಸುಲಿದ ಅಡಿಕೆ ” ಯಾರಿಗೂ ಬೇಡ…!!! “ಕುಟ್ಟಿ ಪುಡಿ ಮಾಡುವ ಗುಟ್ಕಾ ಕಂಪನಿಯ ಅಡಿಕೆ ಖರೀದಿದಾರನಿಗೆ ಅಡಿಕೆ Quantity ಮಾತ್ರ ಮುಖ್ಯ…!!ಇದೇ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಸೋಲು… ಅಕಸ್ಮಾತ್ತಾಗಿ ಸಾಂಪ್ರದಾಯಿಕ ಅಡಿಕೆ ಗೆ ಬೇಡಿಕೆಯಿದ್ದಿದ್ದರೆ ನಮ್ಮ ಹಸ ಬೆಟ್ಟೆ ಇಡಿ ಅಡಿಕೆಗೆ ಕ್ವಿಂಟಾಲ್ ಗೆ ಒಂದು ಲಕ್ಷ ರೂಪಾಯಿ ಮಾರುಕಟ್ಟೆ ಮೌಲ್ಯ ಸಿಗುತ್ತಿತ್ತು….!! ಮತ್ತು ಮಲೆನಾಡು ಕರಾವಳಿಯ ಅಡಿಕೆಗೆ ಅಡಿಕೆ ಬೆಳೆ ಸಾಂಪ್ರದಾಯಿಕೇತರ ಜಾಗದಲ್ಲಿ ಎಷ್ಟೇ ವಿಸ್ತರಣೆಯಾದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಯಾವತ್ತೂ ಇರುತ್ತಿತ್ತು… ಮಲೆನಾಡು ಕರಾವಳಿಯಲ್ಲಿ ಸಾವಿರ ಸಾವಿರ ವರ್ಷಕ್ಕೂ ಅಡಿಕೆ /ಅಡಿಕೆ ಬೆಳೆಗಾರರು ಉಳಿಯುತ್ತಿದ್ದರು.

ಮಲೆನಾಡು ಕರಾವಳಿಯ ಯುವಕರು‌ ನಗರ ಪ್ರದೇಶಕ್ಕೆ ವಲಸೆ ಹೋಗಿ‌ ಮಲೆನಾಡು ಕರಾವಳ ಸ್ವಾತಂತ್ರ್ಯ ವೃದ್ದಾಶ್ರಮವಾಗುತ್ತಿರಲಿಲ್ಲ. ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರ ಮನೆಯ ಯುವಕರಿಗೆ ಮದುವೆಗೆ ಹೆಣ್ಣು ಸಿಕ್ಕಿ ಮದುವೆ ಆಗುತ್ತಿತ್ತು. ಮಲೆನಾಡು ಕರಾವಳಿಯ ಅಡಿಕೆಯ ಎಲೆಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗಕ್ಕೆ ರೈತರು ಪರಿಹಾರ ಮತ್ತು ಜಾಗೃತೆಯನ್ನ ಇನ್ನಷ್ಟು ಮಾಡಿ ಅಡಿಕೆ ಯನ್ನು ಉಳಿಸಿ ಕೊಳ್ಳುತ್ತಿದ್ದರು ಎನಿಸುತ್ತದೆ… ಇದೇ ಗುಟ್ಕಾ ಕಂಪನಿಯಿಂದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಮೇಲಿನ‌ ಪ್ರಹಾರ…!! ಆಕಸ್ಮಾತ್ತಾಗಿ ಅಡಿಕೆ ಉತ್ಪನ್ನ ಕ್ಕೆ ಗುಟ್ಕಾ ವೇ ಅಂತಿಮ ಪರಮೋಚ್ಚ ಆಧಾರ ವಾಗದಿದ್ದಲ್ಲಿ ಅಡಿಕೆ ಈ ಪರಿ ವಿಸ್ತರಣೆ ಯಾಗುತ್ತಿರಲಿಲ್ಲ.

ಅಡಿಕೆ ಬಯಲು ಸೀಮೆಗೆ ಯಾಕೆ ವಿಸ್ತರಣೆಯಾಯಿತು…? : ಇಪ್ಪತ್ತೈದು ವರ್ಷಗಳ ಹಿಂದೆ ಭದ್ರಾವತಿಯ ಖಾಸಗಿ ಸಕ್ಕರೆ ಕಾರ್ಖಾನೆ ನಿಲುಗಡೆಯಾದದ್ದು ಮತ್ತು ತಾಳೆ ಎಣ್ಣೆ ಕಾರ್ಖಾನೆ ವಿವಾದವಾಗಿ ನಿಂತು ಹೋಗಿದ್ದು.. ರೈತರು ಕಬ್ಬು ಬಿಟ್ಟು, ನೆಟ್ಟು ಎತ್ತರವಾಗಿದ್ದ ತಾಳೆ ಕಿತ್ತೊಗೆದು ಅಡಿಕೆ ನೆಟ್ಟರು. ಭದ್ರೆಯ ಸುಭದ್ರ ನೀರಾವರಿಯ ಬತ್ತ ಬೆಳೆವ ಬಂಗಾರದ ಭೂಮಿಯಲ್ಲಿ ಸುಪುಷ್ಟಿಯಾಗಿ ಅಡಿಕೆ ಬೆಳೆದು ಬಯಲು ಸೀಮೆಯ ಕೃಷಿಕರಿಗೆ ಅಡಿಕೆ ಹೊಸ ಬರವಸೆಯ ಬೆಳೆ ಎನಿಸಿತು. ಇದಕ್ಕೆ ಸರಿಯಾಗಿ‌ ಗುಟ್ಕಾ ಕಂಪನಿಯ ಖರೀದಿದಾರನಿಗೆ ಅಡಿಕೆ ಗುಣಮಟ್ಟ ಬೇಡವಾಗಿತ್ತು. ಎಲ್ಲಾ ಒಟ್ಟಾಗಿ ಅಡಿಕೆ ವಿಸ್ತರಣೆ ನಾಗಾಲೋಟದಿಂದ ಆಯಿತು….!! ಇವತ್ತು ಚೆನ್ನಾಗಿರಿ ಅಡಿಕೆ ಚಿತ್ರದುರ್ಗ ಅಡಿಕೆಯ ನಾಡಾಗಿದೆ.‌‌ ಮಲೆನಾಡು ಎಲೆಚುಕ್ಕಿ ಬೀಡಾಗಿದೆ…!! ಇದೆಲ್ಲಾ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಆದ ಬೆಳವಣಿಗೆ.

ಇರಲಿ…., ಈಗಲೂ‌ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಯತ್ನಿಸಲು ಸಾದ್ಯವೇ …? ಬೆಳೆಗಾರ ಒಂಟಿಯಾಗಿ ಈ ಪ್ರಯತ್ನ ಮಾಡಲಾರ‌..‌‌‌

ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೋಗಳು ಈ ಮೌಲ್ಯವರ್ಧನೆ ಯ ಬಗ್ಗೆ ಪ್ರಯೋಗ ಪ್ರಯತ್ನ ಮಾಡಬೇಕಿದೆ. ಕ್ಯಾಮ್ಕೋ ಅಡಿಕೆ ಮೌಲ್ಯ ವರ್ಧನೆಯ ಅನೇಕ ಪ್ರಯತ್ನ ಮಾಡಿದೆ. ಆದರೆ ಎಲೆ ಅಡಿಕೆ ಸುಣ್ಣ ಹಾಕಿ ಸಾಂಪ್ರದಾಯಿಕವಾಗಿ ಮೆಲ್ಲುವ ಬಗೆಯಲ್ಲಿ ಮೌಲ್ಯವರ್ಧನೆಯಾಗಬೇಕು. ಈಗ ಮಾರುಕಟ್ಟೆಯಲ್ಲಿರುವುದು “ಸುಗಂಧಿತ ಅಡಿಕೆ ಪುಡಿ” … ಆದರೆ ಇದಕ್ಕಿಂತ ಬಿನ್ನವಾಗಿ‌ ಅಡಿಕೆಯನ್ನು ಯಾರು ಬೇಕಾದರೂ ಅಗೆದು ನುಂಗುವುದು ಅಥವಾ ಅಗೆದು ಉಗುಳುವ ಮಾದರಿಯ ಚಾಕೊಲೇಟ್, ಬಿಸ್ಕೇಟ್ ಮಾದರಿಯ ತಿನಿಸು ತಯಾರಿಸಿ “ದೇಸಿ” ಅಡಿಕೆ ಉಳಿಸಬೇಕಿದೆ.

ಈ ಕಾಲದವರು ಮೆಲ್ಲಲು ಅನುಕೂಲ ಆಕರ್ಷಣೀಯವಾಗಿ ರುಚಿಕರವಾಗಿ, ಒಂದು ವೇಳೆ ಅಡಿಕೆಯನ್ನು ನುಂಗಿದರೂ ಜೀರ್ಣವಾಗವಂತೆ ಇಲ್ಲವೇ ಅಡಿಕೆ ಚಾಕಲೇಟ್ ಮಾದರಿಯಲ್ಲಿ ಚೀಪುವಂತೆ ಅಡಿಕೆ ಸಂಸ್ಕರಣೆ ಆಗಬೇಕು. ಇದು ಯಾವುದೇ ಹೊರಗಿನ ಚೋದಕವನ್ನ ಬೆರಸದ “ಸ್ವಾಭಾವಿಕ ತಾಂಬೂಲ”ವಾಗ ಬೇಕು. ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ದೇಶದಾದ್ಯಂತ ವ್ಯಾಪಾರವಾಗುತ್ತಿತ್ತು. ಆಗ ಚೆನ್ನಾಗಿರಿ , ದಾವಣಗೆರೆ, ಚಿತ್ರದುರ್ಗದ ಅಡಿಕೆ ಮಾರುಕಟ್ಟೆಯಲ್ಲಿ ಇರಲಿಲ್ಲ. ಅಕಸ್ಮಾತ್ತಾಗಿ ಆಗಲೂ ಈ ಬಯಲು ಸೀಮೆಯ ಅಡಿಕೆ ಇದ್ದಿದ್ದರೆ ಖಂಡಿತವಾಗಿಯೂ ನೇರವಾಗಿ ತಿನ್ನುವ ಗ್ರಾಹಕರು ಆ ಬಯಲು ಸೀಮೆಯ ಅಡಿಕೆಯನ್ನ ಖಂಡಿತವಾಗಿಯೂ ತಿನ್ನುತ್ತಿರಲಿಲ್ಲ. ಇದೇ ಸಾಂಪ್ರದಾಯಿಕ ಅಡಿಕೆಗಿರುವ ಮಹತ್ವ…

ಮಲೆನಾಡಿನ ಸಾಂಪ್ರದಾಯಿಕವಾಗಿ ಕೈಯಿಂದ ಸುಲಿದ ಚೊಗರುಯುಕ್ತ ಅಡಿಕೆ ಅತ್ಯಂತ ಆರೋಗ್ಯವರ್ಧಕ‌. ಹಿಂದಿನವರು ಅಡಿಕೆಯನ್ನ ಕೇವಲ ಚಟಕ್ಕೆ ತಿನ್ನುತ್ತಿರಲಿಲ್ಲ. ಅಡಿಕೆಯಲ್ಲಿನ ಮನುಷ್ಯನನ್ನು ಆರೋಗ್ಯವಂತನನ್ನಾಗಿ ಉತ್ಸಾಹಿಯನ್ನಾಗಿ ಮಾಡುವ ಅಂಶಗಳು ಅಡಿಕೆಯಲ್ಲಿದ್ದದ್ದನ್ನ ಗಮನಿಸಿಯೇ ಅಡಿಕೆಯನ್ನು ಪೂಜನೀಯವಾಗಿ ಬಳಸಿ ತಾಂಬೂಲ ಮೆಲ್ಲುತ್ತಿದ್ದರು. ಅಡಿಕೆ ಯಿಂದ ಏನೆಲ್ಲಾ ಸಂಸ್ಕರಣೆ ಮಾಡಿ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿದರೂ ಅಡಿಕೆಯನ್ನು ಎಲೆ ಅಡಿಕೆ ಸುಣ್ಣದ ಪ್ರಾಥಮಿಕ ಬಳಕೆಯ ಯಥಾವತ್ ಸಂಸ್ಕರಿತ ಉತ್ಪನ್ನ ತಯಾರಿಸಲಿಲ್ಲ..!!  ಆಹಾರ ಸಂಶೋಧಕರು ಅಡಿಕೆಯ ಈ ಮಲೆನಾಡು ಕರಾವಳಿಯ ಪ್ರಾದೇಶಿಕ ವೈವಿಧ್ಯಮಯ ಅಡಿಕೆ ಉತ್ಪನ್ನಗಳನ್ನು ಬೇರೆ ಬೇರೆ ಮಾಡಿ ದೇಶ ವಿದೇಶಗಳಲ್ಲಿ ಆರೋಗ್ಯ ವರ್ದಕ ಆಹಾರೋತ್ಪನ್ನವಾಗಿ ಬಳಸಲು ಅನುಕೂಲವಾಗುವಂತಹ ಉತ್ಪನ್ನ ತಯಾರಿಸಿ ಮಾರುಕಟ್ಟೆ ವಿಸ್ತರಣೆ ಮಾಡಿದರೆ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಉಳಿತಾರೆ.‌

ಮ್ಯಾಮ್ಕೋಸ್, ಕ್ಯಾಂಪ್ಕೋಗಳು ಈ ತಾಂಬೂಲವನ್ನ‌ ಪ್ರತಿ‌ ಅಡಿಕೆ ವಲಯಕ್ಕೆ ತಕ್ಕಂತೆ ಪ್ರತ್ಯೇಕ ಉತ್ಪನ್ನ ತಯಾರಿಸಿ ಅದನ್ನು ದೇಶದ ಮೂಲೆ ಮೂಲಗೂ ತಲುಪಿಸಿ ಮಾರುಕಟ್ಟೆ ವಿಸ್ತರಣೆ ಮಾಡಬೇಕು. ಈ ಗುಟ್ಕಾ ಬರುವ ಮುಂಚೆ ಮಲೆನಾಡಿನ ಹಸ, ಮಲೆನಾಡಿನ ಬೆಟ್ಟೆಯನ್ನು ಯಾವ ಭಾಗದವರು ಖರೀದಿಸುತ್ತಿದ್ದರು ಎಂಬ ಬಗ್ಗೆ ಅಧ್ಯಯನ ಮಾಡಿ ಆ ದಿಕ್ಕಿನಲ್ಲಿ ಪ್ರಯತ್ನ ಪಟ್ಟು ಮರಳಿ ಮಾರುಕಟ್ಟೆ ಹೊಂದಾಣಿಕೆ ಮಾಡಿಕೊಳ್ಳ ಬೇಕು. ಇದಕ್ಕೆಲ್ಲ ಈಗಿನ ಆಧುನಿಕ on line ಮಾರುಕಟ್ಟೆಯನ್ನೂ ಬಳಸಿಕೊಳ್ಳಬೇಕಿದೆ.

ಕ್ಯಾಂಪ್ಕೋ ಈಗ ತಯಾರಿಸುವ ಚಾಕೊಲೇಟ್ ಗಳು ಕೂಡ ಅತ್ಯುತ್ತಮವಾಗಿದೆ . ಆದರೆ ಬಹುರಾಷ್ಟ್ರೀಯ ಕಂಪನಿಗಳ ಚಾಕೊಲೇಟ್ ಗಳು ನಮ್ಮಲ್ಲಿ ಮೂಲೆ ಮೂಲೆಗಳಲ್ಲೂ ಸಿಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ನಮ್ಮ ಕ್ಯಾಮ್ಕೋ ಮಾರುಕಟ್ಟೆ ವಿಸ್ತರಣೆ ಏನೇನೂ ಸಾಲದು. ಕ್ಯಾಮ್ಕೋ ಚಾಕೊಲೇಟ್ ಉತ್ಪನ್ನವನ್ನು ಹಳ್ಳಿ ಹಳ್ಳಿಗೂ ತಲುಪಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಖಂಡಿತವಾಗಿಯೂ ಪೈಪೋಟಿ ನೀಡಿ ಮೇಲ್ಗೈ ಸಾಧಿಸಲು ಸಾಧ್ಯ. ಹಾಗೆಯೇ ಮುಂದೆ ಅಡಿಕೆ ಚಾಕೊಲೇಟ್ ಉತ್ಪನ್ನವನ್ನೂ ದೇಶದ ಮೂಲೆ ಮೂಲೆಗೂ ತಲುಪಿಸಿ ಜಯಿಸಿ ಸಾಂಪ್ರದಾಯಿಕ ಅಡಿಕೆಗೆ ಅಡಿಕೆ ಬೆಳೆಗಾರರಿಗೆ ಬೆಲೆ ಮಾನ ತಂದು ಕೊಡಬಹುದು.

ಮಲೆನಾಡು ಕರಾವಳಿಯ ಅಡಿಕೆ ಉತ್ಪನ್ನಗಳು ಮೊದಲು ಗುಟ್ಕಾ ಉತ್ಪನ್ನ ತಯಾರಿಕೆಯಿಂದ ಬೇರಾದರೆ ಮಾತ್ರ ಅಡಿಕೆ ಗೆ ಭವಿಷ್ಯವಿದೆ…. ಗುಟ್ಕಾದ ಜೊತೆಗೇ ಮಲೆನಾಡು ಕರಾವಳಿ ಅಡಿಕೆ ಮತ್ತು ಅಡಿಕೆ ಬೆಳೆಗಾರರು ಇದ್ದರೆ ಅದೋಗತಿ… ಅಡಿಕೆ ಸಾಂಪ್ರದಾಯಿಕ ತಾಂಬೂಲವಾಗಿ ಮೌಲ್ಯವರ್ಧನೆಯಾಗಲಿ….. ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆ – ಬೆಳೆಗಾರರು ಉಳಿದು ಬಾಳಲಿ…

Service title
ಪ್ರಬಂಧ ಅಂಬುತೀರ್ಥ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ
ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ
April 14, 2025
6:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group