ಬಹುತೇಕ ಕೊಳೆತು ಮಣ್ಣುಪಾಲಾಗುವ ಗೇರುಹಣ್ಣಿಗೂ(Cashew fruit) ಮೌಲ್ಯವಿದೆ. ಆದರೆ ಮೌಲ್ಯವರ್ಧನೆ (Value addition) ಮಾಡಿದಾಗ ಮಾತ್ರ! ಈ ನಿಟ್ಟಿನಲ್ಲಿ ಕೇರಳದ ಸಂಶೋಧನಾ ಸಂಸ್ಥೆಯೊಂದು(Research Institute of Kerala) ಮಾಡಿದ ಕೆಲಸಗಳ ವಿವರಗಳಿಲ್ಲಿವೆ..
“ಗೇರುಹಣ್ಣಿನಲ್ಲಿರುವ ಗಂಟಲು ಕೆರೆತ ಉಂಟುಮಾಡುವ ಅಂಶ – ಟ್ಯಾನಿನ್(Tannin)- ತೆಗೆಯುವ ವಿಧಾನ, ಹಣ್ಣನ್ನು ಜ್ಯೂಸ್(Juice) ಮಾಡುವ ಹಾಗೂ ಕಾಪಿಡುವ ವಿಧಾನಗಳನ್ನು ನಮ್ಮ ಸಂಸ್ಥೆ ಅಭಿವೃದ್ಧಿಪಡಿಸಿದೆ. ಗೇರುಹಣ್ಣಿನಿಂದ ಮೂವತ್ತಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದ್ದೇವೆ” ಎನ್ನುತ್ತಾರೆ ಡಾ. ಜಲಜಾ ಮೆನೋನ್. ಇವರು ಕೇರಳದ ತ್ರಿಶೂರಿನ ಸಮೀಪ ಮಾಡಕ್ಕತರ ಎಂಬಲ್ಲಿರುವ ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥರು. ಈ ಸಂಸ್ಥೆ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನಡಿಯಲ್ಲಿರುವ ರಾಷ್ಟ್ರವ್ಯಾಪಿ ಗೇರು ಸಂಶೋಧನಾ ಸಮನ್ವಯ ಕೇಂದ್ರಗಳ ಪೈಕಿ ಒಂದು. ಕೇರಳ ಕೃಷಿ ವಿಶ್ವವಿದ್ಯಾಯಲದಡಿಯಲ್ಲಿ ಕೆಲಸ ನಿರ್ವಹಿಸುವ ಈ ಕೇಂದ್ರ ಗೇರುಹಣ್ಣಿನ ಮೌಲ್ಯವರ್ಧನೆಯಲ್ಲಿ ಮುಂಚೂಣಿಯಲ್ಲಿದೆ. ಬಹುಷ: ದೇಶದ ಯಾವುದೇ ಸಂಸ್ಥೆ ಮಾಡದಷ್ಟು ಕೆಲಸ ಈ ಕೇಂದ್ರ ಮಾಡಿದೆ.
ಸಂಸ್ಥೆಗೆ ಭೇಟಿ ನೀಡಿದಾಗ ಇತ್ತೀಚೆಗಷ್ಟೇ ಬಿಡುಗಡೆಯಾದ ಗೇರುಹಣ್ಣಿನ ಟಾಫಿಯನ್ನು ನೀಡಿ'”ಇದು ಕೇರಳದಲ್ಲಿ ಗೇರುಹಣ್ಣಿನಿಂದ ಸಾಂಪ್ರದಾಯಿಕವಾಗಿ ತಯಾರಿಸುವ “ಪೊಲ್ಲಿಟ್ಟು” ಎಂಬ ಉತ್ಪನ್ನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮಾಡಿದ ಪ್ರಾಡಕ್ಟ್. ಇದರಲ್ಲಿ ಗೇರುಹಣ್ಣಿನ ರಸ ಮತ್ತು ತೆಂಗಿನತುರಿ ಮುಖ್ಯ ವಸ್ತುಗಳು” ಮಾಹಿತಿ ನೀಡಿದರು ಡಾ. ಮೆನೋನ್. ಮೊದಲು ಗೇರುಹಣ್ಣಿನ ಸ್ವಾದ ನಂತರ ತೆಂಗಿನತುರಿಯ ರುಚಿ. ಆಹ್ಲಾದಕರ ಅನುಭವ ಕೊಡುವ ಟಾಫಿ. ವೃತ್ತಿಪರ ಪ್ಯಾಕಿಂಗ್ ಮತ್ತು ಮಾಹಿತಿ. “ಈ ಉತ್ಪನ್ನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ” ನಮ್ಮೊಡನೆ ಇದ್ದ ಡಾ. ದೇಸಾಯಿಯವರ ಉದ್ಗಾರ.
ಕೇರಳದಲ್ಲಿ ಗೇರುಹಣ್ಣನ್ನು ಮನೆಬಳಕೆಗೆ ಅಲ್ಪ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ವಾಣಿಜ್ಯಮಟ್ಟದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ ಎಂಬ ಸ್ಥಿತಿ ಇತ್ತು. ಇದನ್ನು ಮನಗಂಡ ಕೇಂದ್ರ ವಿಭಿನ್ನ ಉತ್ಪನ್ನಗಳನ್ನು ತಯಾರಿಸಿದೆ. ಇವು ವಾಣಿಜ್ಯಮಟ್ಟದಲ್ಲಿ ಯಶಸ್ವಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. “ಇಲ್ಲಿ 1999 ರಷ್ಟು ಮುಂಚೆಯೇ ಹಲವು ಉತ್ಪನ್ನಗಳನ್ನು ತಯಾರಿಸಿದ್ದರು. ಸದ್ಯಕ್ಕೆ ಏಳು ಉತ್ಪನ್ನಗಳು – ಗೇರುಹಣ್ಣಿನ ಸಿರಪ್, ಮಿಕ್ಸೆಡ್ ಫ್ರುಟ್ ಜಾಮ್, ಉಪ್ಪಿನಕಾಯಿ, ಸೋಡಾ, ಟಾಫಿ, ಎನರ್ಜಿ ಬಾರ್, ಕ್ಯಾಂಡಿ – ಇವನ್ನು ಕೇಂದ್ರದಲ್ಲಿರುವ ಸೇಲ್ ಕೌಂಟರಿನ ಮೂಲಕ ಮಾರಾಟಮಾಡುತ್ತಿದ್ದೇವೆ. ಸಾಕಷ್ಟು ಮಾರಾಟವಾಗುತ್ತಿದೆ. ಇದನ್ನು ಬಿಟ್ಟರೆ ಕೊಲ್ಲಂನಲ್ಲಿರುವ ಕೇರಳ ರಾಜ್ಯ ಗೇರು ಅಭಿವೃದ್ಧಿ ನಿಗಮದ ಮೂಲಕ, ಕೇರಳ ತೋಟದ ಬೆಳೆಗಳ ನಿಗಮದಡಿಯಲ್ಲಿ ಕಾಸರಗೋಡಿನಲ್ಲಿ ಮತ್ತು ಅರಳಮ್ ಫಾರ್ಮಿಂಗ್ ಕಾರ್ಪೋರೇಷನ್ ಅಡಿಯಲ್ಲಿ ಕಣ್ಣೂರಿನಲ್ಲಿ ಗೇರುಹಣ್ಣಿನ ಉತ್ಪನ್ನಗಳ ಮಾರಾಟ ಇದೆ. ಕೇರಳದ ಬೇರೆಡೆಯಲ್ಲಿ ಗೇರುಹಣ್ಣಿನ ಉತ್ಪನ್ನಗಳು ಅಷ್ಟಾಗಿ ಲಭ್ಯವಿಲ್ಲ” ಮೆನೋನ್ ಮಾಹಿತಿ. ಈ ಕೇಂದ್ರದಲ್ಲಿ ಚಿಕ್ಕದಾದರೂ ಗೇರುಹಣ್ಣಿನ ಮೌಲ್ಯವರ್ಧನೆಯ ಬಗ್ಗೆ ಗಣನೀಯ ಮಾಹಿತಿ ನೀಡುವ ಮ್ಯೂಸಿಯಂ ಇದೆ. ಈ ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿದ ಗೇರುಹಣ್ಣಿನ ಮೌಲ್ಯವರ್ಧನೆಯ ತಂತ್ರಜ್ಞಾನದ ಪ್ಯಾಕೇಜುಗಳು ಆಸಕ್ತ ವಾಣಿಜ್ಯೋದ್ಯಮಿಗಳಿಗೆ ಲಭ್ಯವಿದೆ. ಜೊತೆಗೆ ತರಬೇತಿಯೂ.
ಕರ್ನಾಟಕದಲ್ಲಿ ಮೊದಲು ಕರಾವಳಿಗೆ ಗೇರು ಕೃಷಿ ಸೀಮಿತವಾಗಿತ್ತು. ಮಲೆನಾಡಿನಲ್ಲಿ ಗೇರು ಇದ್ದರೂ ವ್ಯವಸ್ಥಿತ ಕೃಷಿ ಈಚೆಗೆ ಶುರುವಾಗಿದೆ. ಆದರೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಯಲುಪ್ರದೇಶಗಳ ಕೆಂಪು ಮಣ್ಣಿನಲ್ಲಿ ಗೇರು ಜೋರಾಗಿಯೇ ಬೇರು ಬಿಡುತ್ತಿದೆ. ಗದಗ, ಬೀದರ್, ಬೆಳಗಾಂ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಕೋಲಾರ ಇತ್ಯಾದಿ ಜಿಲ್ಲೆಗಳಲ್ಲಿ ಗೇರು ಕೃಷಿ ಗಮನಾರ್ಹ ಪ್ರಮಾಣದಲ್ಲಿ ವಿಸ್ತಾರವಾಗುತ್ತಿದೆ. ಈ ಎಲ್ಲಾ ಭಾಗಗಳಲ್ಲಿ ಗೇರುಹಣ್ಣಿನ ಬಳಕೆ ಅತೀ ಕಡಿಮೆ. ಬಹುಪಾಲು ಬಿದ್ದು ಮಣ್ಣು ಸೇರುವ ಗೇರುಹಣ್ಣನ್ನು ಸದ್ಬಳಕೆ ಮಾಡುವ ಉಪಾಯಗಳು ಈಗಾಗಲೇ ಇವೆ. ಒಂದಿಷ್ಟು ಅಡಿಕಟ್ಟು ಸೌಕರ್ಯ ಹಾಗೂ ಕಲಿಕೆ ಇದ್ದರೆ ಗೇರುಹಣ್ಣಿನ ಉತ್ಪನ್ನಗಳು ಕರ್ನಾಟಕದಲ್ಲಿ ಸಿಗುವ ದಿನಗಳು ದೂರವಿಲ್ಲ. ಅದಕ್ಕೆ ಕೇರಳ ಕೃಷಿ ವಿವಿಯ ತಂತ್ರಜ್ಞಾನಗಳು ಸಾಕಷ್ಟು ಸಹಾಯ ಮಾಡಬಲ್ಲವು.
ಹೆಚ್ಚಿನ ಮಾಹಿತಿಗೆ ಡಾ. ಜಲಜಾ ಮೆನೋನ್ : 94461 41724
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…