ತೆಂಗಿನಕಾಯಿಯ ಮೌಲ್ಯವರ್ಧನೆಯ ಕಡೆಗೆ ಮಹಿಳೆಯರು ಮನಸ್ಸು ಮಾಡಿದ್ದಾರೆ. ಗ್ರಾಮೀಣ ಅಭಿವೃದ್ಧಿ ಹಾಗೂ ಗ್ರಾಮೀಣ ಆರ್ಥಿಕಕತೆಯನ್ನು ಹೆಚ್ಚಿಸುವ, ಬಲಪಡಿಸುವ ಉದ್ದೇಶದಿಂದ ಮಹತ್ವ ಯೋಜನೆಗಳು ಸಿದ್ಧವಾಗುತ್ತಿದೆ. ಈ ಯೋಜನೆಯ ಮೂಲಕ ಸಂಜೀವಿನಿ ಒಕ್ಕೂಟದ ಮಹಿಳೆಯರು ಸ್ವಾವಲಂಬನೆಯ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇಲ್ಲಿ ತೆಂಗಿನ ಕಾಯಿಯ ಗೆರಟೆ ಉಪಯೋಗಿಸಿ ಹಲವು ವಸ್ತುಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸದಸ್ಯರು ಈಗ ತೆಂಗಿನಕಾಯಿಯ ಚಿಪ್ಪಿಯ ಮೂಲಕ ಕಲಾಕೃತಿ ರಚನೆಯ ಮೂಲಕ ಸುದ್ದಿ ಮಾಡುತ್ತಿದ್ದಾರೆ. ತೆಂಗಿನ ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳಾ ಆರ್ಥಿಕ ಸ್ವಾವಲಂಬನೆಯ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಹೀಗೇ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ವಿವಿಧ ಬಗೆಯ ತರಬೇತಿ ನಡೆದಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೂಲಕ ಆರ್ಥಿಕ ಸ್ವಾವಲಂಬನೆಯ ಹಾದಿಯ ಕಡೆಗೆ ದಾರಿ ತೋರಿಸಲಾಗುತ್ತಿದೆ.
ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸಂಜೀವಿನಿ ಒಕ್ಕೂಟ ಹಾಗೂ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗಿದೆ. ತೆಂಗಿನ ಗೆರಟೆಯ ಮೂಲಕ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಪುತ್ತೂರಿನ ಕೋಡಿಂಬಾಡಿ, ವಿಟ್ಲದ ಪಡ್ನೂರು, ಮೂಡಬಿದರೆಯ ಅಳಿಯೂರು ತರಬೇತಿ ನೀಡಲಾಗಿದೆ. ಇದರ ಜೊತೆಗೆ ಪೊಳಲಿ ರಾಮಕೃಷ್ಣ ತಪೋವನದ ಆಶ್ರಯದಲ್ಲಿವಿಜಯಾ ಗ್ರಾಮೀಣ ಬ್ಯಾಂಕ್ ಸಹಯೋಗದೊಂದಿಗೆ ಕೂಡಾ ಪೊಳಲಿಯಲ್ಲಿ ತರಬೇತಿ ನೀಡಲಾಗಿದೆ. ವಿಶೇಷವಾಗಿ ತೆಂಗಿನ ಗೆರಟೆಯ ಮೌಲ್ಯವರ್ಧನೆಯ ಕಡೆಗೆ ಗಮನಹರಿಸಲಾಗಿತ್ತು. ತರಬೇತಿ ಪಡೆದ ಎಲ್ಲಾ ಸಂಘದ ಮಹಿಳಾ ಸದಸ್ಯರು ಕೆಲಸ ಆರಂಭಿಸುತ್ತಿದ್ದಾರೆ. ಅದರಲ್ಲೂ ಆರಂಭದಲ್ಲಿ ತರಬೇತಿ ಪಡೆದ ಕೋಡಿಂಬಾಡಿ ತಂಡವು ತನ್ನ ಕೆಲಸವನ್ನು ವಿಸ್ತರಿಸಿದೆ.
ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಿಳೆಯರು ಫೆಬ್ರವರಿ ತಿಂಗಳಲ್ಲಿ ತರಬೇತಿ ಪಡೆದಿದ್ದು, ಒಟ್ಟು ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಮೂರೂ ತಂಡಗಳಿಗೆ ಪಾಲಿಶ್ ಮತ್ತು ಕಟಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಪರಿಣತಿ ಇದೆ.ಈಗ ಗಟ್ಟಿಮುಟ್ಟಾದ ಕೀಚೈನ್, ಅಡುಗೆ ಮನೆಗೆ ಬೇಕಾದ ಪಾತ್ರೆಗಳು, ಕಪ್, ಸ್ಮರಣಿಕೆ ಇತ್ಯಾದಿ ಮಾಡಿದ್ದಾರೆ. ಈ ಬಾರಿ ತ್ರಿವರ್ಣದ ಬ್ಯಾಡ್ ಕೂಡ ತಯಾರಿಸಿದ್ದಾರೆ. ಮಹಿಳಾ ತಂಡದ ಕೆಲಸಗಳು ಹೆಚ್ಚು ಗಮನ ಸೆಳೆದಿದೆ.
ಈ ತಂಡದಲ್ಲಿ 30 ಮಂದಿ ಮಹಿಳೆಯರು 3 ತಂಡಗಳಾಗಿ ಕೆಲಸ ಮಾಡುತ್ತಿದ್ದಾರೆ. ಜನನಿ, ಅಕ್ಷಯ ಹಾಗೂ ಜ್ಞಾನ ಸಂಜೀವಿನಿ ಘಟಕಗಳಾಗಿ ಕೆಲಸ ಆರಂಭಿಸಿದ್ದಾರೆ. ಕೆಲವರು ಮನೆಗಳಲ್ಲಿ ಹಾಗೂ ಕೋಡಿಂಬಾಡಿ ಗ್ರಾಪಂ ನೀಡಿರುವ ಕಟ್ಟದಲ್ಲಿ ಕೆಲಸ ಮಾಡುತ್ತಾರೆ. ಕಳೆದ 3 ತಿಂಗಳಿನಿಂದ ಕೆಲಸ ಮಾಡುತ್ತಿರುವ ಮಹಿಳೆಯರು ಪ್ಲಾಸ್ಟಿಕ್ ಬಳಸದೆಯೇ ಹಲವು ಉತ್ಪನ್ನಗಳನ್ನು ತಯಾರು ಮಾಡುವಷ್ಟು ಕುಶಲತೆಯನ್ನು ಈಗ ಪಡೆದಿದ್ದಾರೆ. ಸದ್ಯ ಸಂಜೀವಿನಿ ಒಕ್ಕೂಟವು ಸದಸ್ಯರು ತಯಾರಿಸಿರುವ ಉತ್ಪನ್ನಗಳ ಮಾರಾಟವನ್ನೂ ಮಾಡುತ್ತಿದ್ದಾರೆ.
This slideshow requires JavaScript.
ಇವರಂತೆಯೇ ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸಂಜೀವಿನಿ ಒಕ್ಕೂಟ ಹಾಗೂ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ವಿಟ್ಲದಲ್ಲಿ , ಮೂಡಬಿದರೆಯಲ್ಲಿ ಕೂಡಾ ತರಬೇತಿ ನೀಡಲಾಗಿದೆ. ಇಲ್ಲೂ ಕೂಡಾ ಮಹಿಳಾ ತಂಡಗಳು ಕೆಲಸ ಆರಂಭಿಸಿದೆ.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಜೀವನ್ ಅವರು ಕಾರ್ಯಕ್ರಮ ವ್ಯವಸ್ಥಾಪಕರಾಗಿ ನಬಾರ್ಡ್ ಮೂಲಕ ನೆರವನ್ನು ಸಂಜೀವಿನಿ ಘಟಕ ಹಾಗೂ ಕಾರ್ಯಕ್ರಮ ಆಯೋಜನೆಗೆ ನೆರವು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಆರ್ಥಿಕ ಸುಧಾರಣೆ ಹಾಗೂ ಸ್ವಾವಲಂಬನೆಯೇ ಮುಖ್ಯ ಉದ್ದೇಶವಾಗಿದೆ.