Advertisement
Opinion

ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ

Share

ಭಾರತದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಅಡಿಕೆ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿದ, ಸಹಕಾರ ಚಳವಳಿಯ ಮೂಲಕ ಲಕ್ಷಾಂತರ ರೈತರ ಬದುಕಿನಲ್ಲಿ ಆಶಾಕಿರಣವಾದ ಕ್ಯಾಂಪ್ಕೋ ಸಂಸ್ಥೆಯ ಸ್ಥಾಪಕ, ಕ್ಯಾಂಪ್ಕೋ ಬ್ರಹ್ಮ, ಯುಗಪುರುಷ ವಾರಣಾಶಿ ಸುಬ್ರಾಯ ಭಟ್‌ ಅವರ ಜನ್ಮದಿನ ಇಂದು. 1927ರ ಜೂನ್ 8ರಂದು ಜನಿಸಿದ ಅವರು 2026ರ ಜೂನ್ 8ರಂದು ತಮ್ಮ ಜನನದ 99ನೇ ವರ್ಷವನ್ನು ಪೂರೈಸಿದ್ದು, ಇದು ಅವರ ಜನ್ಮಶತಮಾನೋತ್ಸವ ವರ್ಷದ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲು ಗ್ರಾಮದಲ್ಲಿ ಜನಿಸಿದ ವಾರಣಾಶಿ ಸುಬ್ರಾಯ ಭಟ್‌ ಅವರು ಕೃಷಿಕ ಕುಟುಂಬದಲ್ಲಿ ಬೆಳೆದವರು. ತಂದೆ ವಾರಣಾಶಿ ಕೃಷ್ಣಯ್ಯ ಹಾಗೂ ತಾಯಿ ತಿರುಮಲೇಶ್ವರಿ ಅಮ್ಮ. ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲು ಹಾಗೂ ಅಡ್ಯನಡ್ಕದಲ್ಲಿ ಪೂರ್ಣಗೊಳಿಸಿದ ಅವರು, ಪ್ರೌಢಶಾಲಾ ಶಿಕ್ಷಣವನ್ನು ನೀಲೇಶ್ವರದಲ್ಲಿ ಪಡೆದರು. ಹದಿನೈದನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಅನಿವಾರ್ಯ ಕಾರಣಗಳಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ.

ಆದರೆ ಜೀವನಾನುಭವ, ಜನಸಂಪರ್ಕ ಹಾಗೂ ಸಾಮಾಜಿಕ ಚಟುವಟಿಕೆಗಳು ಅವರನ್ನು ಒಬ್ಬ ಅದ್ಭುತ ಸಂಘಟಕ ಮತ್ತು ದೂರದರ್ಶಿ ನಾಯಕನನ್ನಾಗಿ ರೂಪಿಸಿದವು. ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅವರ ನಾಯಕತ್ವದ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಸ್ವತಃ ಅಡಿಕೆ ಕೃಷಿಕರಾಗಿದ್ದ ವಾರಣಾಶಿ ಸುಬ್ರಾಯ ಭಟ್‌ ಅವರು ಅಡಿಕೆ ಬೆಳೆಗಾರರು ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಪಡೆಯದೇ ಸಂಕಷ್ಟ ಅನುಭವಿಸುತ್ತಿರುವುದನ್ನು ಹತ್ತಿರದಿಂದ ಕಂಡಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅವರು ಸಹಕಾರ ಚಳವಳಿಯತ್ತ ಮುಖ ಮಾಡಿದರು.

ಅದರ ಫಲವಾಗಿ 1973ರ ಜುಲೈ 11ರಂದು ಅಡಿಕೆ ಬೆಳೆಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಸ್ಥಾಪನೆಯಾಯಿತು. ಅವರ ನೇತೃತ್ವದಲ್ಲಿ ಸಂಸ್ಥೆ ಬೆಳೆಯುತ್ತಾ ರೈತರಿಗೆ ಮಾರುಕಟ್ಟೆ ಭದ್ರತೆ, ಉತ್ತಮ ಬೆಲೆ ಮತ್ತು ಆರ್ಥಿಕ ಸ್ಥಿರತೆಯನ್ನು ಒದಗಿಸುವ ಶಕ್ತಿಶಾಲಿ ಸಂಸ್ಥೆಯಾಗಿ ರೂಪುಗೊಂಡಿತು.

1986ರಲ್ಲಿ ಪುತ್ತೂರಿನಲ್ಲಿ ಕ್ಯಾಂಪ್ಕೋ ಚಾಕೊಲೇಟ್ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಅನೇಕ ಅಡೆತಡೆಗಳು ಮತ್ತು ಅಂತರರಾಷ್ಟ್ರೀಯ ಕಂಪನಿಗಳ ವಿರೋಧದ ನಡುವೆಯೂ ಅಗತ್ಯ ಯಂತ್ರೋಪಕರಣಗಳನ್ನು ವಿದೇಶದಿಂದ ತರಿಸಿ ಕಾರ್ಖಾನೆಯನ್ನು ಯಶಸ್ವಿಯಾಗಿ ಸ್ಥಾಪಿಸಿದರು. ಈ ಕಾರ್ಖಾನೆ ಬಳಿಕ ಕೊಕ್ಕೊ ಬೆಳೆಗಾರರ ಆಶಾಕಿರಣವಾಗಿ ಪರಿಣಮಿಸಿತು.

ಕ್ಯಾಂಪ್ಕೋದಿಂದ ನಿವೃತ್ತರಾದ ನಂತರವೂ ರೈತರ ಸೇವೆ ಮುಂದುವರಿಸಿದ ಅವರು, 1992ರಲ್ಲಿ ಕಾಫಿ ಬೆಳೆಗಾರರ ಹಿತಕ್ಕಾಗಿ ‘ಕೊಮಾರ್ಕ್’ ಸಂಸ್ಥೆಯನ್ನು ಸ್ಥಾಪಿಸಿದರು.

ಮಂಗಳೂರಿನಿಂದ ದೆಹಲಿವರೆಗೆ ಸಂಸ್ಥೆಯ ಆಸ್ತಿಗಳು, ಕಚೇರಿಗಳು ಮತ್ತು ಮಾರಾಟ ಜಾಲವನ್ನು ವಿಸ್ತರಿಸುವಲ್ಲಿ ಅವರ ದೂರದೃಷ್ಟಿ ಪ್ರಮುಖ ಪಾತ್ರ ವಹಿಸಿತು. 1973ರಿಂದ 1990ರವರೆಗೆ ಸುಮಾರು 18 ವರ್ಷಗಳ ಕಾಲ ಕ್ಯಾಂಪ್ಕೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಸ್ಥೆಯನ್ನು ಭದ್ರ ಅಡಿಪಾಯದ ಮೇಲೆ ನಿಲ್ಲಿಸಿದರು.

ಸರಳ ಜೀವನ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಶಿಸ್ತು ಮತ್ತು ಅವಿರತ ಪರಿಶ್ರಮ ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿದ್ದವು. ಅವರ ಸೇವೆಯನ್ನು ಗುರುತಿಸಿ 2005ರಲ್ಲಿ ರಾಷ್ಟ್ರಮಟ್ಟದ ‘ಸಹಕಾರಿತಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2017ರ ಡಿಸೆಂಬರ್ 27ರಂದು 87ನೇ ವಯಸ್ಸಿನಲ್ಲಿ ಅವರು ವಿಧಿವಶರಾದರು. ಆದರೆ ಅವರು ಕಟ್ಟಿದ ಕ್ಯಾಂಪ್ಕೋ ಸಂಸ್ಥೆ ಇಂದಿಗೂ ಸಾವಿರಾರು ರೈತರು, ಸಿಬ್ಬಂದಿ ಮತ್ತು ಕಾರ್ಮಿಕ ಕುಟುಂಬಗಳ ಬದುಕಿಗೆ ಆಸರೆಯಾಗಿದೆ.

ಇಂದು ಅವರ ಜನ್ಮಶತಮಾನೋತ್ಸವ ವರ್ಷದ ಆರಂಭದ ಸಂದರ್ಭದಲ್ಲಿ, ಕ್ಯಾಂಪ್ಕೋ ಕುಟುಂಬ, ಅಡಿಕೆ ಬೆಳೆಗಾರರು ಮತ್ತು ಸಹಕಾರ ಕ್ಷೇತ್ರದ ಅನೇಕರು ಕೃತಜ್ಞತೆಯಿಂದ ಅವರನ್ನು ಸ್ಮರಿಸುತ್ತಿದ್ದಾರೆ. ಅಡಿಕೆಗೆ ಒಂದು ಗೌರವಯುತ ಸ್ಥಾನಮಾನ ತಂದುಕೊಟ್ಟ, ರೈತರ ಸ್ವಾಭಿಮಾನದ ಬದುಕಿಗೆ ದಾರಿ ತೋರಿದ ಈ ಮಹಾನ್ ದಾರ್ಶನಿಕನ ಸೇವೆ ಚಿರಸ್ಮರಣೀಯವಾಗಿದೆ.

ಬರಹ : ಶಂ ನಾ ಖಂಡಿಗೆ

June 8, 2026 marks the beginning of the birth centenary year of CAMPCO founder Varanashi Subraya Bhat. Through his visionary leadership and cooperative movement, he transformed the lives of arecanut farmers and laid a strong foundation for CAMPCO, one of India’s most successful agricultural cooperatives.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

8 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

15 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

19 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

1 day ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

1 day ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

1 day ago