ಕಾಸರಗೋಡು ಸಿಪಿಸಿಆರ್‌ಐ ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಯುವ ಪೀಳಿಗೆಯನ್ನು ಆಕರ್ಷಿಸುವಂತೆ ವಿನೂತನ ಹಾಗೂ ಮೌಲ್ಯವರ್ಧಿತ ತೆಂಗಿನಕಾಯಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ತೆಂಗಿನಕಾಯಿಯ ಸಹಜ ರುಚಿ ಹಾಗೂ ಪೌಷ್ಟಿಕತೆಯನ್ನು ಉಳಿಸಿಕೊಂಡು, ಆಧುನಿಕ ಆಹಾರ ಅಭಿರುಚಿಗೆ ತಕ್ಕಂತೆ ಈ ಉತ್ಪನ್ನಗಳನ್ನು ರೂಪಿಸಲಾಗಿದೆ.
ಕಾರ್ಯಕ್ರಮದಲ್ಲಿ ವೆಗನ್ ತೆಂಗಿನ ಕುಲ್ಫಿ, ವೇಫರ್ ಕೋನ್, ಕಲ್ಪಾ ಕ್ಯೂಬಿಟ್ಸ್ ಹಾಗೂ ವೆಲ್ವೆಟ್ ಚಾಕೊಲೇಟ್‌ಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳಲ್ಲಿ ತೆಂಗಿನ ಹಾಲು ಮತ್ತು ತೆಂಡೆ ತೆಂಗಿನ ನೀರನ್ನು ಪ್ರಮುಖವಾಗಿ ಬಳಸಲಾಗಿದೆ. ಸಾಂಪ್ರದಾಯಿಕ ವಿಧಾನಗಳಿಂದ ಭಿನ್ನವಾಗಿ, ಸಂಪೂರ್ಣ ಆರೋಗ್ಯಕರ ಪದಾರ್ಥಗಳಿಂದಲೇ ಈ ಉತ್ಪನ್ನಗಳನ್ನು ತಯಾರಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಉತ್ಪನ್ನಗಳ ವಿವರ:
-
ಕಲ್ಪಾ ವೇಫರ್ ಕೋನ್: ತೆಂಡೆ ತೆಂಗಿನಕಾಯಿಯ ತಾಜಾ ರುಚಿಯೊಂದಿಗೆ.
-
ತೆಂಗಿನ ವೇಫರ್ ಕೋನ್: ಸಿಹಿ ಆಲೂಗಡ್ಡೆ ಹಿಟ್ಟು, ತೆಂಗಿನ ಹಾಲು ಮತ್ತು ತೆಂಗಿನ ಸಕ್ಕರೆಯ ಸಂಯೋಜನೆ.
-
ವೆಗನ್ ತೆಂಗಿನ ಕುಲ್ಫಿ: ತೆಂಗಿನ ಸಕ್ಕರೆ, ತೆಂಗಿನ ಹಾಲು ಹಾಗೂ ಏಲಕ್ಕಿಯಿಂದ ತಯಾರಿಸಿದ ಮೃದುವಾದ ಕುಲ್ಫಿ; ಮಾರುಕಟ್ಟೆಯ ಸಾಂಪ್ರದಾಯಿಕ ಕುಲ್ಫಿಗಿಂತ ಹೆಚ್ಚು ಪೌಷ್ಟಿಕ ಹಾಗೂ ರುಚಿಕರ ಎಂದು ಸಂಶೋಧಕರು ತಿಳಿಸಿದ್ದಾರೆ.
-
ಕಲ್ಪಾ ಕ್ಯೂಬಿಟ್ಸ್: ಪರಿಪಕ್ವ ತೆಂಗಿನ ನೀರಿನಿಂದ ತಯಾರಿಸಿದ ಜ್ಯೂಸಿ, ಜೆಲ್‌ನಂತಿರುವ ಉತ್ಪನ್ನ; ನೀರಾ ಸಿಹಿಯೊಂದಿಗೆ.
-
ಕಲ್ಪಾ ವೆಲ್ವೆಟ್ ಚಾಕೊಲೇಟ್: Directorate of Cashew Research (ಪುತ್ತೂರು) ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಚಾಕೊಲೇಟ್; ಕೋಕೋ, ತೆಂಗಿನ ಪುಡಿ, ತೆಂಗಿನ ಸಕ್ಕರೆ, ಗೋಡಂಬಿ ಹಾಗೂ ಬೆಣ್ಣೆ ಇದರ ಪ್ರಮುಖ ಕಚ್ಚಾ ವಸ್ತುಗಳು. …… ಮುಂದೆ ಓದಿ……



ಈ ಬಗ್ಗೆ ಮಾತನಾಡಿದ CPCRI ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ ಅವರು, ತೆಂಗಿನಕಾಯಿ ಹಾಗೂ ಅಂತರ ಬೆಳೆಗಳಿಂದ ರೈತರಿಗೆ ಗರಿಷ್ಠ ಆದಾಯ ಒದಗಿಸುವ ಉದ್ದೇಶದಿಂದ ಈ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ರೈತ ಸಮುದಾಯಕ್ಕೆ ಹೊಸ ಅವಕಾಶಗಳನ್ನು ಒದಗಿಸಲು ಪ್ರತಿವರ್ಷವೂ ವ್ಯಾಪಕ ಸಂಶೋಧನೆ ನಡೆಸಲಾಗುತ್ತಿದೆ ಎಂದರು.
ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿದ ಪ್ರೊ. ಅಲ್ಗೂರ್ ಅವರು ತೋಟಗಾರಿಕೆ ಹಾಗೂ ಪ್ಲಾಂಟೇಶನ್ ಕ್ಷೇತ್ರ ಎದುರಿಸುತ್ತಿರುವ ಹವಾಮಾನ ಬದಲಾವಣೆ, ಬೆಲೆ ಏರುಪೇರು, ಕಾರ್ಮಿಕ ಕೊರತೆ ಸೇರಿದಂತೆ ಹಲವು ಸವಾಲುಗಳ ಬಗ್ಗೆ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಉಳಿಯಬೇಕಾದರೆ ಸಂಶೋಧನೆ, ತಂತ್ರಜ್ಞಾನ ಸಂಯೋಜನೆ, ವಿಜ್ಞಾನಿಗಳ ಸಹಕಾರ, ಜೊತೆಗೆ ಡೇಟಾ ಅನಾಲಿಟಿಕ್ಸ್, ಪ್ರಿಡಿಕ್ಟಿವ್ ಮಾಡೆಲಿಂಗ್ ಮತ್ತು ಪ್ರಿಸಿಷನ್ ಫಾರ್ಮಿಂಗ್ ತಂತ್ರಜ್ಞಾನಗಳನ್ನು ಮೊಬೈಲ್ ಮೂಲಕ ರೈತರ ಬಳಿಗೆ ತಲುಪಿಸುವುದು ಅಗತ್ಯ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಭಾಷಣ ಮಾಡಿದ ಸಿಪಿಸಿಆರ್‌ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್, ಹವಾಮಾನ ಹೊಂದಾಣಿಕೆ, ಸಂಪನ್ಮೂಲ ದಕ್ಷತೆ, ಕೀಟ–ರೋಗ ನಿರ್ವಹಣೆ, ಮೌಲ್ಯವರ್ಧನೆ, ಯಾಂತ್ರೀಕರಣ, ಕಾರ್ಬನ್ ಸಂಗ್ರಹಣೆ ಮತ್ತು ರೈತರ ಆದಾಯ ಹೆಚ್ಚಿಸುವ ತಂತ್ರಗಳು ಇಂದು ಪ್ರಮುಖ ಚರ್ಚಾ ವಿಷಯಗಳಾಗಿವೆ ಎಂದರು. ಇದೇ ವೇಳೆ ಸಂಸ್ಥೆಯ ಪ್ರಮುಖ ಸಾಧನೆಗಳಾಗಿ ಸುಧಾರಿತ ತೆಂಗಿನಕಾಯಿ ತಳಿಗಳ ಖಾಸಗಿ ನರ್ಸರಿಗಳಿಗೆ ಪರವಾನಗಿ, ಕಡಿಮೆ ಅರಿಕೋಲಿನ್ ಅಡಿಕೆ ತಳಿ ‘ಶತಮಂಗಳ’, ಹಾಗೂ ದಕ್ಷಿಣ ಭಾರತದಲ್ಲಿ ಪಾಲಿಕ್ಲೋನಲ್ ಕೋಕೋ ತೋಟಗಳ ಸ್ಥಾಪನೆ ಬಗ್ಗೆ ವಿವರಿಸಿದರು. 2047ರ ಸ್ವಾತಂತ್ರ್ಯದ ಶತಮಾನೋತ್ಸವದ ಗುರಿಯೊಂದಿಗೆ, ಹವಾಮಾನ ಬದಲಾವಣೆ ನಿಯಂತ್ರಣ, ಕಾರ್ಬನ್ ಸೆಕ್ವೆಸ್ಟ್ರೇಷನ್, ಮೌಲ್ಯವರ್ಧನೆ, ಯಾಂತ್ರೀಕರಣ ಹಾಗೂ ಕೃತಕ ಬುದ್ಧಿಮತ್ತೆ (AI) ಬಳಕೆಯ ಕುರಿತು 200ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ತಜ್ಞರು ಚರ್ಚಿಸುತ್ತಿದ್ದಾರೆ ಎಂದು ಉಲ್ಲೇಖಿಸಿದರು.



