ವಿಟ್ಲದ ಕೋಡಪದವು ಬಳಿಯ ಸರವು ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಶಬ್ದ ಕೇಳಿತೆಂದು ನಿಲ್ಲಿಸಿ ನೋಡಿದಾಗ ಬೆಂಕಿ ಹತ್ತಿಕೊಂಡ ಬಗ್ಗೆ ಅರಿವಿಗೆ ಬಂದಿದೆ. ಕೆಲಿಂಜದ ನಿವಾಸಿ ಸಿಟ್ರಿನ್ ಪಾಯಸ್ ಎಂಬವರಿಗೆ ಸೇರಿದ ಕಾರು ಇದಾಗಿದೆ. ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದ್ದಾರೆ. ಅದಾಗಲೇ ಕಾರು ಭಸ್ಮವಾಗಿದೆ.
ಶನಿವಾರ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಚಾಲಕ ಸಜೀವ ದಹನಗೊಂಡಿದ್ದರು. ದೆಹಲಿ, ಹೈದರಾಬಾದ್ ನಲ್ಲೂ ಎರಡು ದಿನಗಳ ಹಿಂದೆ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ವಿಶ್ವದ ಎಲ್ಲೆಡೆಯೂ ಬೇಸಗೆಯ ಕಾಲದಲ್ಲಿ ಅದರಲ್ಲೂ ವಾತಾವರಣದ ಉಷ್ಣತೆ 40 ಡಿಗ್ರಿಗಿಂತ ಹೆಚ್ಚಾದ ಸಮಯದಲ್ಲಿ ಕಾರುಗಳಿಗೆ ಬೇಗನೆ ಬೆಂಕಿ ತಗಲುತ್ತದೆ. ಅಂತರಾಷ್ಟ್ರೀಯ ಸಮೀಕ್ಷೆ ಪ್ರಕಾರ ವರ್ಷಕ್ಕೆ ಸುಮಾರು 229,500 ವಾಹನಗಳ ಬೆಂಕಿಗೆ ಆಹುತಿಯಾಗುತ್ತದೆ. ಹೀಗೆ ಬೆಂಕಿಯ ಅವಘಡದಿಂದಲೇ ಅಂತರಾಷ್ಟ್ರೀಯವಾಗಿ ವರ್ಷಕ್ಕೆ ಸರಾಸರಿ 328 ಸಾವುಗಳು, 1,426 ಗಾಯಗಳಾದ ಬಗ್ಗೆ ವರದಿಗಳು ಇವೆ. ಬೆಂಕಿಯ ಅವಘಡಕ್ಕೆ ಕೆಲವೊಮ್ಮೆ ವಾಹನದ ಕಳಪೆ ನಿರ್ವಹಣೆ ಕೂಡಾ ಕಾರಣವಾಗಿರುತ್ತದೆ. ಕೆಲವೊಮ್ಮೆ ತಾಂತ್ರಿಕ ದೋಷಗಳು ಇರುತ್ತವೆ. ಇತರ ಋತುಗಳಿಗೆ ಹೋಲಿಸಿದರೆ ಬೇಸಗೆಯಲ್ಲಿ ಸುಮಾರು 20% ರಿಂದ 30% ರಷ್ಟು ಹೆಚ್ಚು ವಾಹನ ಬೆಂಕಿಗೆ ಕಾರಣವಾಗಿದೆ.
ಬಹುಮುಖ್ಯವಾಗಿ ಬೇಸಗೆಯ ಕಾಲದಲ್ಲಿ ಎಲ್ಲರೂ ಎಸಿ ಬಳಕೆ ಮಾಡುತ್ತಾರೆ. ಹೀಗಾಗಿ ವಾಹನದ ಸಾಮರ್ಥ್ಯ ಹೆಚ್ಚು ಬಳಕೆಯಾಗುತ್ತದೆ. ಈ ಸಮಯದಲ್ಲಿ ಎಂಜಿನ್ ಕೂಡಾ ಹೆಚ್ಚು ಬಿಸಿಯಾಗುತ್ತದೆ. ವಾತಾವರಣದ ಉಷ್ಣತೆಯೂ 40 ಡಿಗ್ರಿಗಿಂತ ಹೆಚ್ಚಿರುವ ಕಾಲದಲ್ಲಿ ವಾಹನದ ಕೂಲೆಂಟ್ ಅಥವಾ ಆಯಿಲ್ ಆಗಾಗ ಪರಿಶೀಲನೆ ಮಾಡಲೇಬೇಕಾಗುತ್ತದೆ. ಇಂದಿನ ಪೈಪೋಟಿ ಯುಗದಲ್ಲಿ ಕಾರುಗಳಲ್ಲಿ ಹೊಸ ಪೀಚರ್ ನೀಡಲಾಗುತ್ತದೆ. ಆದರೆ ಸಣ್ಣ ಸಣ್ಣ ಸಂಗತಿಗಳೂ ಕೂಡಾ ಇಂದು ಅಪಾಯವನ್ನು ತರುತ್ತದೆ. ರೇಡಿಯೇಟರ್‌ನಲ್ಲಿ ಕೂಲಂಟ್ ಕೊರತೆಯಿಂದಾಗಿ ಸಮಸ್ಯೆ ಬಂದರೆ, ಇಂಧನ ಸೋರಿಕೆ ಅಥವಾ ಇಂಜಿನ್ ಅತಿಯಾಗಿ ಬಿಸಿಯಾಗುವುದರಿಂದ ಕಾರು ಚಾಲನೆಯಲ್ಲಿರುವಾಗಲೇ ಬೆಂಕಿ ತಗುಲಬಹುದು. ಅಥವಾ ಅತಿಯಾದ ಬಿಸಿಲಿನಲ್ಲಿ ನಿಲುಗಡೆ ಮಾಡುವಾಗಲೂ ದೋಷಗಳ ಕಾರಣದಿಂದ ಬೆಂಕಿ ಹಿಡಿಯುವ ಘಟನೆಗಳು ನಡೆದಿವೆ. ಈ ಕಾರಣಗಳಿಂದಾಗಿ ಬೇಸಗೆಯಲ್ಲಿ ಕಾರಿನ ನಿರ್ವಹಣೆ ಅತೀ ಎಚ್ಚರಿಕೆಯಿಂದ ನಡೆಯಬೇಕಿದೆ.