ಬಳಕೆಯಲ್ಲಿರದ ಕಿಂಡಿ ಆಣೆಕಟ್ಟುಗಳಲ್ಲಿ ಮಳೆಗಾಲದಲ್ಲಿ ಮರದ ತುಂಡು, ಕಸ ತುಂಬಿ ಎರಡು ಬದಿಯ ಹೊಳೆಯ ಮಧ್ಯೆ ಇರುವ ರಸ್ತೆ ಕಡಿತಕ್ಕೆ ಕಾರಣವಾಗುತ್ತಿರುವುದರಿಂದ ತಕ್ಷಣ ತೆರವುಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿಯವರು ಮಾಡಿದ ಆದೇಶವನ್ನು ಸ್ಥಳೀಯಾಡಳಿತ ಜಾರಿಗೊಳಿಸದೇ ಇರುವುದರಿಂದ ಅಪಾಯದ ಸ್ಥಿತಿ ಮುಂದುವರಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರಿನಲ್ಲಿ ನಡೆಯುತ್ತಿದೆ.
ಕಿಂಡಿಅಣೆಕಟ್ಟು ಸಮಸ್ಯೆ. ಪುತ್ತೂರು ತಾಲೂಕಿನ ಬಡಗನ್ನೂರಿನಲ್ಲಿ ಬಳಕೆಯಾಗದ ಕಿಂಡಿಅಣೆಕಟ್ಟಿನಿಂದ ಈಗ ಜನರಿಗೆ ಸಮಸ್ಯೆಯಾಗಿದೆ. ಮರ ಹಾಗೂ ಕಸ ತುಂಬಿ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. #ಮಳೆ #rain pic.twitter.com/9x51AWKTef
Advertisement— theruralmirror (@ruralmirror) July 7, 2022
ಬಡಗನ್ನೂರು ಗ್ರಾಮದ ಪಟ್ಟೆಯಿಂದ ಮುಂಡೋಳೆ, ಅಂಬಟೆಮೂಳೆ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕಿಸುವ ಬಹುಮುಖ್ಯ ರಸ್ತೆಯ ಪಟ್ಟೆಯಿಂದ 200 ಮೀ. ದೂರದಲ್ಲಿ ದಶಕಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಕಿಂಡಿ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೆಲವು ಸಮಯ ಹಲಗೆ ಆಳವಡಿಸಿ ಪ್ರಯೋಜನಕಾರಿಯಾಗಿದ್ದ ಈ ಕಿಂಡಿ ಆಣೆಕಟ್ಟು ಈ ಸಮಸ್ಯೆಗೆ ಕಾರಣವಾಗುತ್ತಿದೆ.
ಏನು ಸಮಸ್ಯೆ ? : ಇಲ್ಲಿ ಯು ಮಾದರಿಯಲ್ಲಿ ಸೀರೆ ಹೊಳೆ ಹರಿಯುತ್ತದೆ. ಹೊಳೆ ಸುತ್ತು ಬಳಸಿ ಹರಿಯುತ್ತಿದ್ದು, ಮಧ್ಯೆ ಕಿರು ಸೇತುವೆಯ ಮೂಲಕ ಸಾಗುವ ರಸ್ತೆ ಇದೆ. ತಗ್ಗಿನಲ್ಲಿರುವ ಕಿಂಡಿ ಆಣೆಕಟ್ಟಿನಲ್ಲಿ ಮಳೆಗಾಲದಲ್ಲಿ ತೇಲಿ ಬರುವ ಮರದ ತುಂಡು, ಕಸ ಕಡ್ಡಿಗಳು ನಿಂತು ಸರಾಗ ನೀರು ಹರಿಯಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿದೆ. ಇದರ ಪರಿಣಾಮ ಪಕ್ಷದಲ್ಲಿರುವ ಸ್ಥಳೀಯ ನಿವಾಸಿಯೊಬ್ಬರ ಸುಮಾರು ಅರ್ಧ ಎಕ್ರೆಯಷ್ಟು ಕೃಷಿ ತೋಟ ಕೊರೆದು ಹೋಗಿದೆ. ಜತೆಗೆ ಮಳೆಗಾಲದಲ್ಲಿ ಇಕ್ಕೆಲಗಳ ತೋಡಿನ ನೀರು ಸಂಗಮಗೊಂಡು ರಸ್ತೆಯಲ್ಲಿ ಹರಿದು ರಸ್ತೆ ಕಡಿತಗೊಳ್ಳುತ್ತಾ ಹೋಗುತ್ತಿದೆ. ರಕ್ಷಣಾ ಕ್ರಮಗಳು ಪ್ರಯೋಜನಕ್ಕೆ ಬರುತ್ತಿಲ್ಲ.