ಕಚ್ಚಾ ಗೋಡಂಬಿ ಉತ್ಪಾದನೆಯಲ್ಲಿ ಮಾತ್ರವಲ್ಲ, ಅದರ ಸಂಸ್ಕರಣೆ, ಮೌಲ್ಯವರ್ಧನೆ, ಗುಣಮಟ್ಟ, ಪ್ಯಾಕೇಜಿಂಗ್ ಮತ್ತು ಜಾಗತಿಕ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸುವ ಮೂಲಕ ವಿಯೆಟ್ನಾಂ ವಿಶ್ವದ ಪ್ರಮುಖ ಗೋಡಂಬಿ ಸಂಸ್ಕರಣಾ ಮತ್ತು ರಫ್ತು ಕೇಂದ್ರವಾಗಿ ಬೆಳೆದಿದೆ. ದೇಶದ ಗೋಡಂಬಿ ಉದ್ಯಮದ ವಿಶೇಷತೆಯೆಂದರೆ, ತನ್ನ ಸಂಸ್ಕರಣಾ ಘಟಕಗಳಿಗೆ ಅಗತ್ಯವಿರುವ ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಿತ ಗೋಡಂಬಿ ರಫ್ತಿನಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ.
ಕಚ್ಚಾ ವಸ್ತು ಹೊರಗಿನಿಂದ, ಮೌಲ್ಯವರ್ಧನೆ ವಿಯೆಟ್ನಾಂನಲ್ಲಿ : ಗೋಡಂಬಿಯ ಜಾಗತಿಕ ಮೌಲ್ಯ ಸರಪಳಿಯಲ್ಲಿ ಆಫ್ರಿಕಾ ರಾಷ್ಟ್ರಗಳು ಕಚ್ಚಾ ಗೋಡಂಬಿ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಐವರಿ ಕೋಸ್ಟ್, ನೈಜೀರಿಯಾ ಸೇರಿದಂತೆ ಹಲವು ದೇಶಗಳಿಂದ ಕಚ್ಚಾ ಗೋಡಂಬಿ ವಿಯೆಟ್ನಾಂಗೆ ಬರುತ್ತದೆ.
2025ರಲ್ಲಿ ವಿಯೆಟ್ನಾಂನ ಉದ್ಯಮಗಳು 31.22 ಲಕ್ಷ ಟನ್‌ಗೂ ಹೆಚ್ಚು ಕಚ್ಚಾ ಗೋಡಂಬಿಯನ್ನು ಆಮದು ಮಾಡಿಕೊಂಡಿದ್ದು, ಅದರ ಮೌಲ್ಯ 466.7 ಕೋಟಿ ಡಾಲರ್‌ಗೂ ಅಧಿಕವಾಗಿತ್ತು ಎಂದು ಉದ್ಯಮದ ವರದಿಗಳು ತಿಳಿಸಿವೆ. 2026ರಲ್ಲಿಯೂ ಆಮದು ವೇಗ ಮುಂದುವರಿದಿದ್ದು, ಜುಲೈ ಮಧ್ಯದ ವೇಳೆಗೆ ಕಚ್ಚಾ ಗೋಡಂಬಿ ಆಮದು ಮೌಲ್ಯ 300 ಕೋಟಿ ಡಾಲರ್ ದಾಟಿತ್ತು.
ವಿಯೆಟ್ನಾಂನ ಮಾದರಿ ಹೀಗಿದೆ: ಕಚ್ಚಾ ಗೋಡಂಬಿಯನ್ನು ಜಾಗತಿಕ ಮೂಲಗಳಿಂದ ಖರೀದಿ ಮಾಡುತ್ತದೆ. ಅದನ್ನು ವಿಯೆಟ್ನಾಂನಲ್ಲಿ ಸಂಸ್ಕರಣೆ ಮಾಡಿ ಮೌಲ್ಯವರ್ಧಿತ ಉತ್ಪನ್ನ ಮಾಡಿ ಮತ್ತೆ ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತದೆ. ಅಂದರೆ ಶೆಲ್ ತೆಗೆದ ಗೋಡಂಬಿ ರಫ್ತಿನಲ್ಲಿ ಶೇ.83ರಷ್ಟು ಪಾಲು ವಿಯೆಟ್ನಾಂನದ್ದೇ.
2024ರ ಮಾಹಿತಿಯ ಪ್ರಕಾರ, ಶೆಲ್ ತೆಗೆದ ಗೋಡಂಬಿಯ ಜಾಗತಿಕ ರಫ್ತಿನಲ್ಲಿ ವಿಯೆಟ್ನಾಂನ ಪಾಲು ಸುಮಾರು ಶೇ.83ರಷ್ಟಿತ್ತು. ಎರಡನೇ ಸ್ಥಾನದಲ್ಲಿದ್ದ ಐವರಿ ಕೋಸ್ಟ್‌ನ ಪಾಲು ಸುಮಾರು ಶೇ.12ರಷ್ಟಿತ್ತು. ಹೀಗಾಗಿ ವಿಯೆಟ್ನಾಂ ವಿಶ್ವದ ಅತಿದೊಡ್ಡ ಗೋಡಂಬಿ ಉತ್ಪಾದಕ ಎನ್ನುವುದಕ್ಕಿಂತ, ವಿಶ್ವದ ಪ್ರಮುಖ ಗೋಡಂಬಿ ಸಂಸ್ಕರಣೆ ಮತ್ತು ರಫ್ತು ಕೇಂದ್ರ ಎನ್ನುವುದು ಹೆಚ್ಚು ಸೂಕ್ತವಾದ ವಿವರಣೆ.
ನಮ್ಮ ರೈತರಿಗೆ ಸಂದೇಶ – ಬೆಳೆ ಮಾತ್ರವಲ್ಲ, ಮೌಲ್ಯವರ್ಧನೆಯೂ ಮುಖ್ಯ : ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೃಷಿ ಉತ್ಪನ್ನಗಳು ಬಹುತೇಕ ಕಚ್ಚಾ ರೂಪದಲ್ಲೇ ಮಾರುಕಟ್ಟೆಗೆ ಬರುತ್ತವೆ. ಆದರೆ ವಿಯೆಟ್ನಾಂನ ಮಾದರಿ ಬೇರೆ. ಕಚ್ಚಾ ವಸ್ತುವಿನ ಮೂಲ ನಮ್ಮಲ್ಲಿರಲೇಬೇಕೆಂದಿಲ್ಲ; ಆದರೆ ಅದರ ಮೌಲ್ಯವರ್ಧನೆಯ ಸಾಮರ್ಥ್ಯ ನಮ್ಮಲ್ಲಿರಬೇಕು. ಇದು ಭಾರತದ ಗೋಡಂಬಿ ವಲಯಕ್ಕೂ ಪ್ರಮುಖ ಪಾಠವಾಗಿದೆ.
ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರದ ಗೋಡಂಬಿ ಬೆಳೆಗಾರರು ಕಚ್ಚಾ ಗೋಡಂಬಿ ಮಾರಾಟದ ಜೊತೆಗೆ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಮೂಲಕ ಹೆಚ್ಚಿನ ಮೌಲ್ಯ ಪಡೆಯುವ ಅವಕಾಶ ಹೊಂದಿದ್ದಾರೆ.
ಗೋಡಂಬಿಯಿಂದ ಹಲವು ಮೌಲ್ಯವರ್ಧಿತ ಉತ್ಪನ್ನ : ಗೋಡಂಬಿ ಕೇವಲ ಮಾರಾಟಕ್ಕೆ ಸೀಮಿತವಾಗಬೇಕಿಲ್ಲ. ಸಂಸ್ಕರಣೆಯ ಬಳಿಕ ವಿವಿಧ ಗ್ರೇಡ್‌ಗಳ ಗೋಡಂಬಿ , ಹುರಿದ ಗೋಡಂಬಿ, ಉಪ್ಪು ಮತ್ತು ಮಸಾಲೆ ಗೋಡಂಬಿ, ಗೋಡಂಬಿ ಬೆಣ್ಣೆ ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ತಯಾರಿಸಬಹುದು. ಇದರ ಜೊತೆಗೆ ಗೋಡಂಬಿ ಚಿಪ್ಪು ಮತ್ತು ಚಿಪ್ಪಿನ ದ್ರವಕ್ಕೂ ಕೈಗಾರಿಕಾ ಬಳಕೆಯ ಅವಕಾಶವಿದೆ. ಅಂದರೆ ಕಚ್ಚಾ ಗೋಡಂಬಿಯ ಬೆಲೆ ಮತ್ತು ಸಿದ್ಧ ಉತ್ಪನ್ನದ ಬೆಲೆಯ ನಡುವಿನ ಮೌಲ್ಯವರ್ಧನೆಯೇ ಉದ್ಯಮದ ದೊಡ್ಡ ಅವಕಾಶ.
ಭಾರತಕ್ಕೆ ದೊಡ್ಡ ಅವಕಾಶ… ಸವಾಲೂ ಇದೆ : ಭಾರತವೂ ಪ್ರಮುಖ ಗೋಡಂಬಿ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ಆದರೆ ಮೌಲ್ಯವರ್ಧನೆಯಲ್ಲಿ ಅದೇ ಸಾಲಿನಲ್ಲಿ ಇಲ್ಲ. ಇದಕ್ಕೆ ಸಂಸ್ಕರಣೆ, ಗುಣಮಟ್ಟ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ರಫ್ತು ಮಾರುಕಟ್ಟೆ ಸಂಪರ್ಕಗಳು ಪ್ರಮುಖವಾಗುತ್ತವೆ. ಸಣ್ಣ ಮತ್ತು ಮಧ್ಯಮ ಗೋಡಂಬಿ ಸಂಸ್ಕರಣಾ ಘಟಕಗಳಿಗೆ ತಂತ್ರಜ್ಞಾನ ಹಾಗೂ ಹಣಕಾಸು ನೆರವು ದೊರೆತರೆ ಸ್ಥಳೀಯ ಮಟ್ಟದಲ್ಲೇ ಹೆಚ್ಚಿನ ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು.
ರೈತನಿಗೆ ಹೆಚ್ಚಿನ ಬೆಲೆ ಸಿಗಬೇಕಾದರೆ? : ಗೋಡಂಬಿ ಬೆಳೆಗಾರನಿಗೆ ಸಾಮಾನ್ಯವಾಗಿ ಕಚ್ಚಾ ಗೋಡಂಬಿಯ ಬೆಲೆ ಸಿಗುತ್ತದೆ. ಆದರೆ ಅದೇ ಉತ್ಪನ್ನವು ಗ್ರೇಡಿಂಗ್ , ಸಂಸ್ಕರಣೆ , ಪ್ಯಾಕೇಜಿಂಗ್ , ಬ್ರ್ಯಾಂಡಿಂಗ್ ಹಾಗೂ ರಫ್ತು ಮೂಲಕ ಮಾರಾಟವಾದರೆ ಅದರ ಮೌಲ್ಯ ಹೆಚ್ಚಾಗುತ್ತದೆ. ಈಚೆಗೆ ಹಲಸು ಮಾರುಕಟ್ಟೆ ಕೂಡಾ ಇದೇ ಮಾದರಿಯಲ್ಲಿ ಸಾಗುತ್ತಿದೆ. ಗೇರು ಬೆಳೆಯೂ ಈ ಹಂತಗಳನ್ನು ದಾಟಿದಾಗ ಅದರ ಮೌಲ್ಯ ಹಲವು ಪಟ್ಟು ಹೆಚ್ಚಾಗುತ್ತದೆ. ಈ ಹೆಚ್ಚುವರಿ ಮೌಲ್ಯದಲ್ಲಿ ರೈತನ ಪಾಲು ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಕರಣಾ ಘಟಕಗಳು ಮತ್ತು ಸ್ಥಳೀಯ ಮೌಲ್ಯವರ್ಧನಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸಬಹುದು.
Vietnam has become the world’s dominant hub for cashew processing and shelled-kernel exports, even though it imports a large share of the raw cashew nuts needed by its processing industry. The country’s strength lies in large-scale processing infrastructure, technology, skilled labour, quality standards, logistics and a strong export network. In 2024, Vietnam accounted for roughly 83% of global shelled-cashew exports, highlighting its extraordinary dominance in value-added processing. However, the model also carries a major vulnerability: Vietnam depends heavily on imported raw cashews, with imports exceeding 3.12 million tonnes in 2025 and costing more than $4.6 billion. For India, the key lesson is that producing raw cashews is only one part of the opportunity; processing, grading, branding and export-oriented value addition can capture far greater economic value.


