ದೇಶಾದ್ಯಂತ ಮೇ 29 ರಿಂದ 15 ದಿನಗಳಕಾಲ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಸಂಪೂರ್ಣವಾಗಿ ಯಶಸ್ವಿಯಾಗಿರುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ 2 ಸಾವಿರದ 170 ತಂಡಗಳನ್ನು ರಚಿಸಲಾಗಿತ್ತು. ಇದರಲ್ಲಿ 8 ಸಾವಿರಕ್ಕೂ ಅಧಿಕ ಕೃಷಿ ವಿಜ್ಞಾನಿಗಳು ಭಾಗಿಯಾಗಿದ್ದರು. 60 ಸಾವಿರಕ್ಕೂ ಅಧಿಕ ಗ್ರಾಮಗಳಿಗೆ ಈ ತಂಡಗಳು ಭೇಟಿ ನೀಡಿದ್ದು, ಒಟ್ಟಾರೆ 1 ಕೋಟಿ 34 ಲಕ್ಷಕ್ಕೂ ಅಧಿಕ ರೈತರೊಂದಿಗೆ ನೇರ ಸಂವಾದ ನಡೆಸಿವೆ ಎಂದು ಮಾಹಿತಿ ನೀಡಿದರು.
ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಬಲವರ್ಧನೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಭವಿಷ್ಯದ ಆಹಾರ ಸುರಕ್ಷತೆಗೆ ಮತ್ತಷ್ಟು ಕ್ರಮಗಳು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು. ಆಹಾರ ಉತ್ಪಾದನೆಯಲ್ಲಿ ಗರಿಷ್ಟ ಸಾಧನೆ ಮಾಡಲು ರೈತರು ಮತ್ತು ವಿಜ್ಞಾನಿಗಳ ಒಗ್ಗೂಡುವಿಕೆ ಅಗತ್ಯ. ದೇಶದ ವೈಜ್ಞಾನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳು ಹಾಗೂ ಕೃಷಿಕರು ಒಟ್ಟಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ರೂಪಿಸಿಲಾಗಿತ್ತು . ಇದರಲ್ಲಿ ಪಾಲ್ಗೊಂಡ ವೈಜ್ಞಾನಿಕ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.