ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ ಮೂಲ ಸೇತುವೆ ಮುರಿದುಹೋಗಿದ್ದ ಕಾರಣ ಗ್ರಾಮಸ್ಥರಿಗೆ ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗಿತ್ತು. ಈ ಬಗ್ಗೆ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಸೇತುವೆ ಕುಸಿತವಾದ ಕಾರಣದಿಂದ ಸ್ಥಳೀಯ ಯುವಕರು ಜೀವದ ಹಂಗುತೊರೆದು ನೀರಿನಲ್ಲಿ ಬೈಕ್ ಮೂಲಕ ಸಂಚರಿಸುತ್ತಿದ್ದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು , ಸ್ಥಳೀಯರ ಸಹಕಾರದಿಂದ ತಾತ್ಕಾಲಿಕ ಕಾಲು ಸಂಕವನ್ನು ನಿರ್ಮಿಸಲು ಕ್ರಮ ಕೈಗೊಂಡರು. ಈ ಕಾರ್ಯಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶಾಸಕ ಆರ್.ವಿ. ದೇಶಪಾಂಡೆ ಅವರು ಕೂಡಾ ಈ ವಿಷಯದಲ್ಲಿ ಚುರುಕಾಗಿ ಸ್ಪಂದನೆ ನೀಡಿದ್ದು, ತಾತ್ಕಾಲಿಕ ಕಾಲು ಸಂಕ ತಕ್ಷಣ ನಿರ್ಮಿಸಲು ಸೂಚನೆ ನೀಡಿದ್ದರು. ಜೊತೆಗೆ, ಮಳೆಗಾಲ ಮುಗಿಯುತ್ತಿದ್ದಂತೆ ಮೂಲ ಸೇತುವೆಯ ಪುನರ್ ನಿರ್ಮಾಣದ ಕೆಲಸ ಆರಂಭಿಸಲು ಜಿ.ಪಂ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
(ಮೂಲ ಮಾಹಿತಿ : ದೀಪಕ್ ಜೋಯಿಡಾ)