ರೈತರ ಪಾಡು ಒಂದಾ ಎರಡಾ..? ವರ್ಷವಿಡೀ ಒಂದಲ್ಲ ಒಂದು ತಾಪತ್ರಯ. ಅವನು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಪ್ರಾಣ ಕೈಗೆ ಬಂದಿರುತ್ತೆ. ಸಾಕಪ್ಪ ಸಾಕು ಈ ಕೃಷಿ #Agriculture ಅನ್ನಿಸಿ ಬಿಟ್ಟಿರುತ್ತೆ. ಆದರೂ ರೈತ #Farmer ತಾನು ನಂಬಿದ ಭೂಮಿ ತಾಯನ್ನು ಎಂದೂ ಮರೆಯಲಾರ. ತನ್ನ ಕಾಯಕ ತಾನು ಮಾಡಿಯೇ ತೀರುತ್ತಾನೆ. ಬೆಳೆ ತೆಗೆದೇ ತೆಗೆಯುತ್ತಾನೆ.
ಇಲ್ಲೊಬ್ಬ ರೈತ ತನ್ನ ಜಮೀನಿನಲ್ಲಿ ಬೆಳೆದ ಬೆಳೆಗೆ ಪ್ರತೀ ದಿನ ಮಂಗಗಳ ಕಾಟ. ಒಂದಲ್ಲ ಎರಡಲ್ಲ ಬರೋಬ್ಬರಿ 40 ರಿಂದ 45 ಮಂಗಗಳು ಈತನ ಜಮೀನಿಗೆ ಬಂದು ಬೆಳೆಯನ್ನು ಹಾನಿಗೊಳಿಸುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಹಲಬು ಬಾರಿ ಮನವಿ ಮಾಡಿದರೂ ಯಾರೂ ಗಮನಹರಿಸಿಲ್ಲ ಎಂದು ರೈತ ಗಜೇಂದ್ರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಈ ರೈತ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಯಾರನ್ನು ನಂಬಿ ಪ್ರಯೋಜನ ಇಲ್ಲ ಅಂತ ತಿಳಿದು ತಾನೇ ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ. ಇವರ ಪ್ಲಾನ್ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತ ಗಜೇಂದ್ರ ಸಿಂಗ್ ಹೊಲದಲ್ಲಿ ಕರಡಿ ವೇಷ ತೊಟ್ಟು ಕೂತಿದ್ದಾರೆ. ಈ ಮೂಲಕ ಈ ರೈತ ಪ್ರತೀ ದಿನ ತಮ್ಮ ಜಮೀನಿಗೆ ದಾಳಿ ಇಡುವ ಸುಮಾರು 40-45 ಕಪಿ ಸೈನ್ಯದಿಂದ ಬೆಳೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ.
ಮಂಗಗಳು ಬೆಳೆಗಳಿಗೆ ಹಾನಿ ಮಾಡುವುದನ್ನು ತಡೆಯಲು 4,000 ರೂ.ಗಳಿಗೆ ಈ ವೇಷಭೂಷಣವನ್ನು ಖರೀದಿಸಿದ್ದಾರಂತೆ. ಇದೀಗಾ ರೈತ ಹೊಲದಲ್ಲಿ ಕರಡಿ ವೇಷ ತೊಟ್ಟು ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಡಿ ಎಫ್ಒ ಸಂಜಯ್ ಬಿಸ್ವಾಲ್ ಮಂಗಗಳು ಬೆಳೆ ಹಾನಿ ಮಾಡದಂತೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.