ಕನ್ನಡ ಉಳಿಸೋಣ.. ಅಂದರೆ ಕನ್ನಡ ಶಾಲೆಗಳನ್ನೂ ಉಳಿಸುವುದರ ಜೊತೆಗೆ ಮಕ್ಕಳಿಗೆ ಸರಿಯಾದ ಶಿಕ್ಷಣದ ವ್ಯವಸ್ಥೆಯೂ ಆಗಬೇಕು. ಅಂತಹದ್ದೊಂದು ಮಾದರಿ ಕಾರ್ಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಮಾಡಿದೆ. ಅದೂ ಕನ್ನಡ ರಾಜ್ಯೋತ್ಸವದಂದು ಚಾಲನೆಯಾಗಿದೆ. ಗ್ರಾಮೀಣ ಭಾಗದ ಅಭಿವೃದ್ದಿಯ ಹೆಜ್ಜೆ, ಕನ್ನಡ ಉಳಿಸುವ ಕಾರ್ಯ, ಸರ್ಕಾರಿ ಶಾಲೆಯನ್ನು ಬೆಳೆಸುವ ಮನಸ್ಸು.. ಇದೆಲ್ಲಾ ಇಲ್ಲಿ ಆಗಿದೆ…
ಮಡಿಕೇರಿ ತಾಲೂಕಿನ ಕರಿಕೆಯ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ವಿಜ್ಞಾನ ಶಿಕ್ಷಕಿಯ ವರ್ಗಾವಣೆ ಆಗಿತ್ತು. ಆ ಸ್ಥಾನಕ್ಕೆ ಬೇರೆ ಶಿಕ್ಷಕರು ಬಾರದೇ ಇದ್ದಾಗ ವಿಜ್ಞಾನ ಶಿಕ್ಷಕರ ಹುದ್ದೆ ಖಾಲಿ ಉಳಿಯಿತು. ಮಕ್ಕಳಿಗೆ ಪಾಠದ ಕೊರತೆ ಉಂಟಾಯಿತು. ಇಲಾಖೆಗಳೂ ಬೇರೆ ಶಿಕ್ಷಕರು ಬಾರದೇ ಇದ್ದ ಶಿಕ್ಷಕರನ್ನೂ ವರ್ಗಾವಣೆ ಮಾಡಿ ಆಗಿತ್ತು. ಕರಿಕೆಯಂತಹ, ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಕರು ಬರುವುದು ದೂರ ಮಾತೇ ಆಗಿದೆ. ಅದೂ ವಿಜ್ಞಾನ ಶಿಕ್ಷಕರು ಬರುವುದು ತೀರಾ ಕಷ್ಟ. ಹೀಗಾಗಿ ಮಡಿಕೇರಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವಿಧ ಪ್ರಯತ್ನ ಮಾಡಿದ್ದರು. ಒಂದು ವಾರ ವಿವೇಕಾನಂದ ಯುವ ಕೇಂದ್ರದವರು ತರಗತಿಗಳನ್ನು ನಡೆಸಿದರು. ಅದಾದ ನಂತರ ಮುಂದೇನು? ಮಕ್ಕಳಿಗೆ ವಿಜ್ಞಾನ ಪಾಠದ ಅಗತ್ಯವೂ ಇತ್ತು.
ಈ ಸಂದರ್ಭದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಚಂದ್ರಶೇಖರ ದಾಮ್ಲೆ ಅವರನ್ನು ಇಲಾಖೆಯು ಸಂಪರ್ಕ ಮಾಡಿತು. ಕರಿಕೆ ಶಾಲೆಯ ಮುಖ್ಯಸ್ಥರು, ಸ್ಥಳೀಯರೂ ಮಾತುಕತೆ ನಡೆಸಿದರು. ಕರಿಕೆಗೆ ಹೋಗಿ ಪಾಠ ಮಾಡುವ ಅವಕಾಶ ಇಂದಿನ ಸಂದರ್ಭ ತೀರಾ ಕಷ್ಟ ಎಂಬ ಹಿನ್ನೆಲೆಯಲ್ಲಿ ಸ್ನೇಹ ಶಾಲೆಯ ಮುಖ್ಯಸ್ಥರಾದ ಡಾ.ಚಂದ್ರಶೇಖರ ದಾಮ್ಲೆ ಅವರು ಪರ್ಯಾಯ ಮಾರ್ಗವನ್ನು ಹುಡುಕಿದರು.ಆಗ ಹೊಳೆದ ಪರ್ಯಾಯ ವ್ಯವಸ್ಥೆಯೇ virtual class.
ಸ್ನೇಹ ಶಾಲೆಯಲ್ಲಿ ಕಲಿಸುವ ಶಿಕ್ಷಕಿಯರು ಕನ್ನಡ ಮಾಧ್ಯಮದಲ್ಲಿ ಕರಿಕೆಯ ಮಕ್ಕಳಿಗೆ ಡಿಜಿಟಲ್ ಬೋರ್ಡ್ ಮೂಲಕ virtual class ನಲ್ಲಿ ಪಾಠ ಮಾಡಲು ಸಜ್ಜಾದರು. ವ್ಯವಸ್ಥೆ ಸಿದ್ಧಗೊಂಡಿತು. ಇದಕ್ಕಾಗಿ ತಾಂತ್ರಿಕ ವ್ಯವಸ್ಥೆ ಸಿದ್ಧವಾಯಿತು.
ಈಗ ಸ್ನೇಹ ಶಾಲೆಯಲ್ಲಿ ಇರುವ ಡಿಜಿಟಲ್ ಬೋರ್ಡ್ ನ್ನು ಬಳಸಿಕೊಂಡು ವಿಜ್ಞಾನ ಶಿಕ್ಷಕಿಯರು ಪಾಠ ಮಾಡುತ್ತಾರೆ. ಕರಿಕೆಯ ಶಾಲೆಯ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಪಾಠ ಕಾಣುತ್ತದೆ ಮತ್ತು ಕೇಳಿಸುತ್ತದೆ. ಆ ವಿದ್ಯಾರ್ಥಿಗಳು ಶಿಕ್ಷಕಿಗೆ ಕಾಣುತ್ತಾರೆ. ಅವರು ಪ್ರಶ್ನೆಗಳಿದ್ದರೆ ಅಲ್ಲಿಂದಲೇ ಕೇಳಬಹುದು. ಇವರು ಉತ್ತರಿಸಿ ಸಂಶಯ ನಿವಾರಣೆ ಮಾಡಲು ಸುಲಭ ಸಾಧ್ಯವಾಗಿದೆ. ಕಳೆದ ವಾರವಿಡೀ ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಪ್ರಯತ್ನ ನಡೆಯಿತು.ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಬೆಂಗಳೂರಿನ Right to Live NGO ದವರು ಮುಂದೆ ಬಂದಿದ್ದಾರೆ. ಈ ಸಂಸ್ಥೆ ಕೂಡಾ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಹಾಗೂ ಮೂಲಭೂತ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಕರಿಕೆಯ ಪದವಿಧರ ಯುವಕ ಹರೀಶ್ ಎಂಬವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಹೀಗೇ ಎಲ್ಲರೂ ಜೊತೆಯಾಗಿ ಒಂದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಒಂದು ಹೆಜ್ಜೆ ಇರಿಸಿದ್ದಾರೆ.
ಶಿಕ್ಷಕರಿಲ್ಲದಿದ್ದಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಷ್ಟವಾಗದಂತೆ ಮಾಡಲು ಸಾಧ್ಯ ಎಂಬ ಪರಿಹಾರದ ಬೆಳಕನ್ನು ಈ ಪ್ರಯೋಗ ತೋರಿಸಿದೆ. ಸರ್ಕಾರ ಇಂತಹ ವ್ಯವಸ್ಥೆಯ ಕಡೆಗೆ ಗಮನಹರಿಸಬಹುದು. ಸುಳ್ಯದಂತಹ ಪ್ರದೇಶದಲ್ಲಿ ಕನ್ನಡ ಮಾಧ್ಯಮ , ಸರ್ಕಾರಿ ಶಾಲೆಯ ಉಳಿಸುವ ಬಗ್ಗೆ ಹೆಜ್ಜೆ ಇರಿಸಿರುವ ಸ್ನೇಹದಂತಹ ಶಿಕ್ಷಣ ಸಂಸ್ಥೆಯ ಹೆಜ್ಜೆಯೂ ಗಮನಾರ್ಹವಾಗಿದೆ.