ಅಂದು ಮೊಮ್ಮಗಳು ತುಂಬಾ ಹಠ ಮಾಡುತ್ತಿದ್ದಳು. ಯಾವ ಪ್ರಯತ್ನಕ್ಕೂ ಬಗ್ಗಲಿಲ್ಲ. ತೊಟ್ಟಿಲಾಯಿತು, ಹಾಡಾಯಿತು, ಕಥೆಯಾಯಿತು, ಅಪ್ಪ , ಅಮ್ಮನ ವಿಡಿಯೋ ಕಾಲ ಆಯಿತು. ನಾನು ಮಲಗುದಿಲ್ಲ ಎಂದು ಅಡ್ಡಡ್ಡ ತಲೆಯಾಡಿಸುತ್ತಲೇ ಕುಳಿತಿದ್ದಳು ಮುದ್ದಿನ ಪುಳ್ಳಿ ಶಮಂತಿಕಾ. ಇರಲಿ ಇದೊಂದು ಉಪಾಯ ಫಲಿಸುತ್ತದೋ ನೋಡೋಣವೆಂದು ರಮೆ ಹೇಳಿಯೇಬಿಟ್ಟಳು. ನೀನು ಇವತ್ತು ಬೇಗನೆ ಮಲಗಿದರೆ ಬೆಳಗ್ಗೆ ಏಳುತ್ತಲೇ ಒಂದು ಸರ್ ಪ್ರೈಸ್ ತೋರಿಸುವೆ…. ಸರ್ ಪ್ರೈಸ್! ಶಬ್ದ ಕೇಳುತ್ತಲೇ ಕಿವಿ ನಿಮಿರಿಸಿ ಕುಳಿತ ಶಮಂತಿಕಾ ನನ್ನದೂ ಒಂದು ಕಂಡೀಷನ್ ಇದೆ. ನೀನು ರಾಮ ಚಾಮಿ ಕಥೆ ಹೇಳ ಬೇಕು. ಆವಾಗ ನಾನು ಮಲಗುವೆ. ಓಹ್ ರಾಮ ಚಾಮಿ ಕಥೆಯಾ? ನೀನು ಕೇಳುವುದು ಹೆಚ್ಚಾ, ನಾನು ಹೇಳುವುದು ಹೆಚ್ಚಾ? ಅಜ್ಜಿಯ ಕಥೆ ಕೇಳುತ್ತಾ ಮೊಮ್ಮಗಳು ಮಲಗಿದಳು.
ಬೆಳಗಾಗುತ್ತಿದ್ದಂತೆ ಅಜ್ಜಿ ಪಕ್ಕದಲ್ಲಿ ಕುಳಿತು ಮೊಮ್ಮಗಳನ್ನು ಕರಾಗ್ರೇ ವಸತೇ ಲಕ್ಷ್ಮೀ ಎನ್ನುತ್ತಾ ಎಬ್ಬಿಸಿದಳು. ಆದರೆ ಕಣ್ಣು ತೆಗೆಯಲು ಬಿಡಲಿಲ್ಲ. ಹಾಗೇ ಎತ್ತಿಕೊಂಡು ಬಂದು ಚಾವಡಿಯಲ್ಲಿ ಕುಳಿತು ಮೆಲ್ಲನೆ ಕಣ್ಣಿನಿಂದ ಕೈ ತೆಗೆಯುತ್ತಾ ನೋಡು ಸರ್ ಪ್ರೈಸ್ ಎಂದಳು. ಎದುರಿಗೆ ಶಮಂತಿಕಾ ನೋಡುತ್ತಾಳೆ ಮನೆ ತೋಟದಲ್ಲಿ ಬೆಳೆದ ಹಣ್ಣು ಹಂಪಲು, ತರಕಾರಿ, ತೆಂಗು ಅಡಿಕೆ, ವೀಳ್ಯದೆಲೆ, ಅಕ್ಕಿ, ಹೂ , ಒಡವೆ, ಬಟ್ಟೆ, ಹಣ ಎಲ್ಲಾ ನೋಡಿದಳು. ಆಕೆಯ ಪುಟ್ಟ ಕೈಗಳಿಂದ ಅಲ್ಲಿಟ್ಟ ವಿಷುಕಣಿ ಸಾಮಗ್ರಿಗಳನ್ನು ಮುಟ್ಟಿ ಕಣ್ಣಿಗೆ ಒತ್ತಿದಳು. ಭಗವಂತ ನಿನ್ನ ಆಶೀರ್ವಾದ ಯಾವತ್ತೂ ನಮಗಿರಲಿ ಎಂದು ಕೇಳಿ ಕೊಳ್ಳೋಣ ಪುಟ್ಟ ಎಂದ ಮಾತಿಗೆ ಶಮಂತಿಕಾ ತಲೆಯಾಡಿಸಿದಳು. ಹಾಗೂ ಹಿರಿಯರೆಲ್ಲರ ಕಾಲು ಮುಟ್ಟಿ ಆಶೀರ್ವಾದ ಪಡೆದಳು.
ನಮ್ಮ ಕರಾವಳಿ ಕೃಷಿ ಪ್ರಧಾನ ಪ್ರದೇಶ. ಹಾಗಾಗಿ ನಮ್ಮ ಇಲ್ಲಿನ ಆಚರಣೆಗಳು ಪರಿಸರಕ್ಕೆ ಹತ್ತಿರವಾದುದು. ನಮ್ಮ ಆರಾಧನೆಯು ಪ್ರಕೃತಿ ಕೇಂದ್ರೀಕೃತವಾದುದು. ಬಳಸುವ ವಸ್ತುಗಳೂ ಅಷ್ಟೇ ನಮ್ಮ ಆಚರಣೆಗಳು ಮಳೆ , ಗಾಳಿ , ಬಿಸಿಲು , ಚಳಿಗೆ ಸಂಬಂಧ ಪಟ್ಟವುಗಳು. ಆಯಾ ಕಾಲಕ್ಕೆ ಬದಲಾಗುವ ವಾತಾವರಣ, ಕೃಷಿ ಸಂಬಂದಿ ಚಟುವಟಿಕೆಗಳಿಗೂ ನಮ್ಮ ತುಳು ನಾಡಿನ ಆಚರಣೆಗಳಿಗೂ ಹತ್ತಿರದ ನಂಟು. ಅದರಲ್ಲೂ ಬಿಸುವೆಂದರೆ ನಮಗೆ ಹೊಸವರ್ಷದ ಸಂಭ್ರಮ. ಸೂರ್ಯನ ಚಲನೆಯನ್ನು ಆಧರಿಸಿ ಆಚರಿಸುವ ಹಬ್ಬವೇ ಸೌರಮಾನ ಯುಗಾದಿ, ತುಳುವರ ಬಿಸು ಪರ್ಬ, ಕೇರಳದ ವಿಷು, ತಮಿಳುನಾಡಿನ ಪುತ್ತಾಂಡ್, ಅಸ್ಸಾಂ ನ ಬಿಶು, ಪಂಜಾಬ್ ನ ಬೈಸಾಕಿ . ಹೀಗೆ ದೇಶದ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ. ಬಿಸು ಯುಗಾದಿ ಕಳೆದು ಹದಿನೈದು ದಿನಕ್ಕೆ ಬರುತ್ತದೆ. ಎಪ್ರಿಲ್ ತಿಂಗಳ ಎರಡನೇ ವಾರದಲ್ಲಿ ( ಎಪ್ರಿಲ್ 15) ರಂದು ಬಿಸು ಬರುತ್ತದೆ. ಈ ಹಬ್ಬ. ರೈತಾಪಿ ಜನರಿಗೆ ಸಂಕಲ್ಪ ಸಮೃದ್ಧಿಯ ದಿನ. ಐಶ್ವರ್ಯ ದ ದಿನ. ಯಾವುದೇ ಕಾರ್ಯ ಆರಂಭಕ್ಕೆ ಈ ದಿನವನ್ನು ಶುಭ ದಿನವೆಂದೇ ಪರಿಗಣಿಸಲಾಗುತ್ತದೆ. ಹೆಣ್ಣು ಮಕ್ಕಳಿಗೆ ಕಿವಿ, ಮೂಗು ಚುಚ್ಚಲು ಹಿರಿಯರು ಬಿಸುವಿನ ದಿನವನ್ನೇ ಆಯ್ಕೆ ಮಾಡುತ್ತಾರೆ. ಕೃಷಿ ಕೈಂಕರ್ಯಗಳ ಆರಂಭಕ್ಕೂ ಈ ದಿನವೇ ಸೂಕ್ತ ವೆನ್ನುವುದು ಹಿರಿಯರ ಬಲವಾದ ನಂಬಿಕೆ. ಬಿತ್ತನೆ ಆರಂಭಕ್ಕೂ ಇದೇ ದಿನವನ್ನು ಆಯ್ಕೆ ಮಾಡಲಾಗುತ್ತದೆ.
ಈ ಪಗ್ಗು ತಿಂಗಳಲ್ಲಿ ಫಲಾಫಲಗಳು ಯಥೇಚ್ಛವಾಗಿರುತ್ತವೆ. ಈ ಹಣ್ಣು, ತರಕಾರಿಗಳನ್ನು ಬಿಸುಕಣಿಗೆ ಇಡಲಾಗುತ್ತದೆ. ಮನೆಯಲ್ಲೇ ಬೆಳೆಯುವಂತಹ ಬಾಳೆ ,ಗೇರು, ಸೌತೆ ತೊಂಡೆ, ಬದನೆ ಮೊದಲಾದ ತರಕಾರಿಗಳು, ತೆಂಗಿ ನಕಾಯಿ, ಅಡಿಕೆ , ಮಾವು, ಹಲಸು, ವೀಳ್ಯದೆಲೆ, ಚಿನ್ನ, ಬೆಳ್ಳಿ, ನಾಣ್ಯ, ಅಕ್ಕಿ ಹೂವು, ಕನ್ನಡಿ ಮೊಲಾದವುಗಳನ್ನು ವಿಶುಕಣಿಗೆ ಇಡಲಾಗುತ್ತದೆ. ವಿಶುಕಣಿಯನ್ನು ದೇವರ ಕೋಣೆಯಲ್ಲಿ ಅಥವಾ ಚಾವಡಿಯಲ್ಲಿ ರಾತ್ರೆಯೇ ಸಿದ್ಧಪಡಿಸಲಾಗುತ್ತದೆ. ಮರುದಿನ ಬೆಳಗ್ಗೆ ಎದ್ದು ಮೊದಲಿಗೆ ಬಿಸುಕಣಿಯನ್ನು ಕಣ್ತುಂಬ ನೋಡಿ ಎಲ್ಲವೂ ಸಮೃದ್ಧವಾಗುವಂತೆ ದೇವರ ಆಶೀರ್ವಾದವನ್ನು ಮನೆಯ ಹಿರಿಯರ ಆಶೀರ್ವಾದ ಪಡೆಯುವುದು ನಡೆದುಕೊಂಡು ಬಂದ ವಾಡಿಕೆ. ಮನೆಯಲ್ಲಾದ ಹೊಸ ತರಕಾರಿ , ಹಣ್ಣುಗಳನ್ನು ವಿಶುಕಣಿಗೆ ಸಮರ್ಪಿಸದೆ ಉಪಯೋಗಿಸುವ ಕ್ರಮವಿಲ್ಲ. ಗೇರುಬೀಜದ ಪಾಯಸ, ಹಾಗೂ ವಿವಿಧ ತರಕಾರಿ ಮಿಶ್ರಣಗಳ ಪದಾರ್ಥ ವಿಶೇಷ. ಪಂಚಾಂಗಶ್ರವಣ, ತರವಾಡು ಮನೆಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ, ಸೇವೆಗಳು ನಡೆಯುತ್ತವೆ. ಬಿಸು ಪ್ರಯುಕ್ತ ವಿವಿಧ ಆಟ, ವಿನೋದಾವಳಿಗಳು ಪ್ರತಿವರ್ಷ ನಡೆಯುತ್ತವೆ.
# ಹೊಸವರ್ಷದ ಶುಭಾಶಯಗಳು.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಸುಮಾರು 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಹಾಗೂ 12 ಟ್ರಕ್‌ಗಳನ್ನು ಮಹಾರಾಷ್ಟ್ರದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಯನ್ನ ಗೌರವಿಸಿ ಪಾಲಿಸಬೇಕಾದುದ್ದೂ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪಮುಖ್ಯಮಂತ್ರಿ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆಗಳು ಗೋಚರಿಸುತ್ತಿವೆ. ಒಳನಾಡಿನಲ್ಲಿ…
ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ…
ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ.…