ಕೃಷಿಕನ ಆದಾಯ ದ್ವಿಗುಣವಾಗಬೇಕು. ಅದರ ಜೊತೆಗೆ ಕೃಷಿ ಬೆಳವಣಿಗೆಯೂ ಅಗತ್ಯವಾಗಿದೆ. ಹೀಗಾಗಿ ಕೃಷಿಯಲ್ಲಿ ವೃತ್ತಿಪರತೆ ಅಗತ್ಯವಿದೆ, ಪರಂಪರಾಗತವಾದ ಕೃಷಿಯಲ್ಲಿ ತಾಂತ್ರಿಕತೆಯ ಸ್ಪರ್ಶವೂ ಅಗತ್ಯವಿದೆ ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಎಸ್ ಆರ್ ಸತೀಶ್ಚಂದ್ರ ಹೇಳಿದರು.
ಅವರು ಸೋಮವಾರ ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಸಿಪಿಸಿಆರ್‌ಐ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಆಯೋಜನೆಗೊಂಡ ಅಡಿಕೆ ಕೌಶಲ್ಯ ಪಡೆಯ ಫೈಬರ್‌ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ವೃತ್ತಿಗೆ ವೃತ್ತಿ ಕೌಶಲ್ಯ, ಪ್ರೊಫೆಶನಲ್ ಟಚ್ ಅಗತ್ಯವಿದೆ. ಪರಂಪರಾಗತವಾಗಿ ಬಂದಿರುವ ಕೃಷಿ ರಂಗದಲ್ಲಿ ಕೂಡಾ ಎಲ್ಲಾ ಕೆಲಸಕ್ಕೂ ಪ್ರೊಫೆಶನಲ್ ಟಚ್ ಅಗತ್ಯವಿದೆ. ಇದಕ್ಕಾಗಿ ಸಂಸ್ಥೆಗಳು ಮುಂದೆ ಬಂದು ತರಬೇತಿ ನೀಡುವ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಕೃಷಿಕರು ಹಾಗೂ ಕೃಷಿಪರ ಸಂಸ್ಥೆಗಳು ಹಾಗೂ ಸಹಕಾರಿ ಸಂಘಗಳ ಸಹಕಾರ ಅಗತ್ಯವಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಮಾತನಾಡಿ, ಕೃಷಿ ಬೆಳವಣಿಗೆಗೆ ತರಬೇತಿ ಅಗತ್ಯ. ಕ್ಯಾಂಪ್ಕೋ ಈ ಕೆಲಸ ಮಾಡುತ್ತಿದೆ. ಕೆಲಸ ಮಾಡುವವರಿಗೆ ಕೌಶಲ್ಯ ಅಗತ್ಯ. ತರಬೇತಿಯೂ ಅಗತ್ಯ ಇದೆ. ಕ್ಯಾಂಪ್ಕೋ ನಡೆಸಿದ ಈ ಚಿಂತನೆಯನ್ನು ಎಲ್ಲಾ ಸಹಕಾರಿ ಸಂಘಗಳು ನಡೆಸಬೇಕು, ಕೃಷಿಕರಿಗೆ ಅನುಕೂಲವಾಗಬೇಕು ಎಂದರು. ಸರ್ಕಾರಗಳು ಕೂಡಾ ಅಡಿಕೆ ಬೆಳೆಗಾರರ ಕಡೆಗೆ ಗಮನಹರಿಸಬೇಕು. ಅಡಿಕೆ ಬೆಳೆಯಿಂದ ಸುಮಾರು
700 ಕೋಟಿ ತೆರಿಗೆಯು ಅಡಿಕೆ ಬೆಳೆಗಾರರಿಂದ ಸಂದಾಯವಾಗುತ್ತದೆ. ಹೀಗಾಗಿ ಸರ್ಕಾರವು ಕನಿಷ್ಟ ಶೇ.2 ರಷ್ಟು ಅಡಿಕೆ ಸಂಶೋಧನೆಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ ಸ್ಥಿರತೆಯ ಕಡೆಗೆ ಸದಾ ಹೆಜ್ಜೆ ಇಡುತ್ತದೆ ಎಂದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್ ಎಚ್ ಎಂ ಮಾತನಾಡಿ, ಅಡಿಕೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಅಡಿಕೆ ಕೊಯ್ಲು ಹಾಗೂ ಸಂಸ್ಕರಣೆ ಕೂಡಾ ಪ್ರಮುಖವಾದ ಭಾಗ. ಹೀಗಾಗಿ ಈ ಹಿನ್ನೆಲೆಯಲ್ಲಿ ಇಲ್ಲಾಗುವ ತರಬೇತಿ ಮಹತ್ವ ಪಡೆದಿದೆ ಎಂದರು.
ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ.ಸಿ.ಪಿ ಜೋಸ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಮಾತನಾಡಿದರು. ವೇದಿಕೆಯಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮುರೂರು ಕಲ್ಲಬ್ಬೆಯ ರಾಜೇಶ್‌ಭಟ್, ಆರ್‌ಜಿ , ರಾಜು ಶೆಟ್ಟಿ, ರಮೇಶ್ ಭಟ್ ಉಪಸ್ತಿತರಿದ್ದರು. ಕ್ಯಾಂಪ್ಕೋ ನಿರ್ದೇಶಕರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ರಾಘವೇಂದ್ರ ಭಟ್ ಕೆದಿಲ, ಮಹೇಶ್ ಚೌಟ, ಬಾಲಕೃಷ್ಣ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಶಯ ಹಾಗೂ ಪ್ರಸ್ತಾವನೆಗೈದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಮಾತನಾಡಿ ಮುಂದಿನ ದಿನಗಳಲ್ಲಿ ಕೃಷಿಕರಿಗೆ ದೋಟಿ ಸಿಂಪಡಣೆ ಅನಿವಾರ್ಯವಾಗಲಿದೆ. ಉಳಿದೆಲ್ಲಾ ಬೆಳೆ ರಕ್ಷಣೆ ಹಾಗೂ ಪ್ರಯತ್ನ ಮಾಡಬಹುದಾದರೆ ಅಡಿಕೆಗೆ ಏಕೆ ಸಾಧ್ಯವಿಲ್ಲ. ತೆಂಗು ಹಾಗೂ ಇತರ ಬೆಳೆಗೆ ಸಾಧ್ಯ ಇದ್ದರೆ ಏಕೆ ಆಗದು ಎಂಬುದನ್ನು ಯೋಚಿಸಬೇಕಿದೆ. ದೋಟಿ ಮೂಲಕ ಜಾಬ್ ವರ್ಕ್ ಏಕೆ ಸಾಧ್ಯವಿಲ್ಲ ಎಂದರು.
ಕ್ಯಾಂಪ್ಕೋ ಉಪಾಧ್ಯಕ್ಷ, ಶಿಬಿರ ನಿರ್ದೇಶಕ ಶಂ ನಾ ಖಂಡಿಗೆ ವಂದಿಸಿದರು. ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.