ಇದೊಂದು ವಿಚಿತ್ರ ತರ್ಕ. ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ ಸಂಘ ಸಂಸ್ಥೆ ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು.
ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ ಸಹಕಾರ ಮತ್ತು ಹೊಂದಾಣಿಕೆಯ ಕೊರತೆ ಇರುತ್ತದೆ. ಕುಟುಂಬದಿಂದ ದೇಶದವರೆಗೆ ಎಲ್ಲಾ ವಿಷಯಗಳಲ್ಲೂ ಒಂದಷ್ಟು ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈ ಮನೋಭಾವದ ವ್ಯಕ್ತಿಗಳನ್ನು ಸೇರಿಸಿ ಸಂಸ್ಥೆ, ಸಂಘಟನೆ, ಚಳವಳಿ, ಹೋರಾಟ ರೂಪಿಸುವುದು ತುಂಬಾ ಕಷ್ಟ. ಅದು ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಇವರು ಬಹುತೇಕ ಸದಾ ಅತೃಪ್ತ ಆತ್ಮಗಳು.
ಇದಕ್ಕೆ ವಿರುದ್ಧವಾಗಿ,
ಸ್ವಂತಿಕೆ, ತನ್ನತನ,ಕ್ರಿಯಾಶೀಲತೆ ಹೆಚ್ಚು ಇಲ್ಲದ ಜನರು ಒಳ್ಳೆಯ ಸಹಕಾರ ಮತ್ತು ಹೊಂದಾಣಿಕೆಯ ಮನೋಭಾವದವರಾಗಿರುತ್ತಾರೆ. ಹೆಚ್ಚು ಚರ್ಚೆ ವಿರೋಧಗಳಿಲ್ಲದೆ ಎಲ್ಲವನ್ನು ಒಪ್ಪುತ್ತಾರೆ. ಇವರು ಹೆಚ್ಚು ಧಾರ್ಮಿಕ, ಸಿದ್ದಾಂತದ, ಸಂಪ್ರದಾಯವಾದಿಗಳಾಗಿರುತ್ತಾರೆ. ಇವರ ಸಂಘಟನಾತ್ಮಕ ಚಟುವಟಿಕೆಗಳು ಹೆಚ್ಚು ಬಲಿಷ್ಠ ಮತ್ತು ಯಶಸ್ಸನ್ನು ಗಳಿಸುತ್ತವೆ.
ಕೌಟುಂಬಿಕ ಕಲಹಗಳ ಮೂಲ ಕಾರಣವೇ ತನ್ನ ತನದ ಹುಡುಕಾಟ ಮತ್ತು ಅಹಂ. ಇಲ್ಲಿಯೂ ಸ್ವಂತಿಕೆ ಇಲ್ಲದ ಕುಟುಂಬಗಳು ಹೆಚ್ಚು ಆತ್ಮೀಯವಾಗಿಯೂ, ಸ್ವತಂತ್ರ ಮನೋಭಾವದ ಕುಟುಂಬಗಳು ಸದಾ ಕಿರಿಕಿರಿಯನ್ನು ಅನುಭವಿಸುತ್ತವೆ. ಅದರ ಪರಿಣಾಮವೇ ಹೆಚ್ಚು ಹೆಚ್ಚು ವಿಘಟನೆಗಳು. ಹೊಂದಾಣಿಕೆ ತೀರಾ ಅಪರೂಪವಾಗುತ್ತಿದೆ.
ಸಾಮಾಜಿಕವಾಗಿಯೂ ಇದನ್ನು ಗುರುತಿಸಬಹುದು. ಸಂಘ ಪರಿವಾರ, ಕಮ್ಯೂನಿಸಂ ಸಿದ್ದಾಂತಗಳು , ಧಾರ್ಮಿಕ ಸಂಸ್ಥೆಗಳು, ಧರ್ಮಗಳು ಮುಂತಾದವುಗಳಲ್ಲಿ ಸ್ವತಂತ್ರ ಚಿಂತನೆಗೆ ಹೆಚ್ಚಿನ ಅವಕಾಶಗಳು ಇರುವುದಿಲ್ಲ. ಅವು ಸ್ಥಾಪಿತ ವಿಚಾರಗಳ ಮತ್ತು ಮೇಲಿನ ಆದೇಶದ ಪಾಲನೆಯನ್ನು ಮಾತ್ರ ಮಾಡುತ್ತವೆ ಅಥವಾ ಅದನ್ನು ಹೇರಲ್ಪಟ್ಟಿರುತ್ತದೆ. ಪ್ರಶ್ನಿಸುವ ಮನೋಭಾವ ಇಲ್ಲಿ ಬಹಳ ಕಡಿಮೆ. ಬಹುತೇಕ ಸೈನಿಕರಂತೆ ಮೇಲಿನ ಆದೇಶ ಪಾಲಿಸುತ್ತಾರೆ.
ಆದರೆ, ಅಂಬೇಡ್ಕರ್ ವಾದಿಗಳು, ಬಸವ ಚಿಂತಕರು, ಪರಿಸರ ಪ್ರೇಮಿಗಳು, ಬುದ್ದಿ ಜೀವಿಗಳು ಎಂದು ಕರೆಯಲ್ಪಡುವವರಲ್ಲಿ ಈ ರೀತಿಯ ಆದೇಶ ಪಾಲನೆ ತುಂಬಾ ಕಷ್ಟ. ಇಲ್ಲಿ ಎಲ್ಲರೂ ಯೋಚಿಸಲು ಪ್ರಾರಂಭಿಸುತ್ತಾರೆ. ವಿಷಯಗಳಲ್ಲಿ ವಿಭಿನ್ನ ಆಯಾಮಗಳನ್ನು ಗುರುತಿಸಿ ಹೊಸ ಹೊಸ ರೂಪ ನೀಡುತ್ತಾರೆ. ಆಜ್ಞಾಪಾಲನೆಯನ್ನು ದಿಕ್ಕರಿಸುವುದೇ ನಮ್ಮ ಸ್ವಂತಿಕೆ ಎಂದು ಭಾವಿಸುತ್ತಾರೆ. ಸಮೂಹ ಪ್ರಜ್ಞೆಗಿಂತ ವಿಚಾರ ಮತ್ತು ತನ್ನ ವೈಯಕ್ತಿಕ ಅಸ್ತಿತ್ವದ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಅದರಿಂದಾಗಿಯೇ ಈ ಹೋರಾಟಗಳು ಹೆಚ್ಚು ಯಶಸ್ವಿಯಾಗಿಲ್ಲ. ಕೇವಲ ಅಕ್ಷರಗಳಲ್ಲಿ, ಭಾಷಣಗಳಲ್ಲಿ, ಕಲೆಗಳಲ್ಲಿ ಮಾತ್ರ ತೀಕ್ಷ್ಣವಾಗಿ ಕಂಡುಬರುತ್ತದೆ.
ಈ ವೈರುಧ್ಯದ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ಸಮನ್ವಯ ಸಾಧ್ಯವಾಗುತ್ತಿಲ್ಲ. ಇಬ್ಬರ ನಡುವಿನ ಅಂತರ ಸಹಜ ಭಿನ್ನಾಭಿಪ್ರಾಯ ಮೀರಿ ದ್ವೇಷದ ಕಡೆಗೆ ಸಾಗುತ್ತಿದೆ.
ಎಲ್ಲಾ ಅಪಸ್ವರಗಳ ನಡುವೆ ವಾಸ್ತವಿಕ ನೆಲೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಸ್ವಂತಿಕೆಯನ್ನು ಉಳಿಸಿಕೊಂಡು, ಕ್ರಿಯಾಶೀಲತೆ ಬೆಳೆಸಿಕೊಂಡು, ಸ್ವತಂತ್ರ ಅನುಭವಿಸಿಕೊಂಡು ಸಹ ಸಹಕಾರ ಸಮನ್ವಯ ಸಾಧಿಸುವ ಗುಣಗಳನ್ನು ಕಲಿಯಬೇಕಿದೆ. ಇದು ತುಂಬಾ ತುಂಬಾ ಕಷ್ಟ. ಆದರೆ ಕುಟುಂಬ, ಸಂಘಟನೆ, ಸಮಾಜ, ದೇಶದ ಹಿತದೃಷ್ಟಿಯಿಂದ ಇದು ಅತ್ಯಗತ್ಯ. ಆ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ…….
ಹಾಗೆಯೇ ವೈವಿಧ್ಯಮಯ ಈ ಭಾರತದಲ್ಲಿ ಹಿಂಬಾಲಕರು ಎಂಬ ಒಂದು ವರ್ಗ ಅಸ್ತಿತ್ವದಲ್ಲಿದೆ. ಚಿತ್ರ ವಿಚಿತ್ರ ವರ್ತನೆಯ ಈ ಜನರ ನಡವಳಿಕೆಗಳು ನಮ್ಮ ಸಮಾಜದ ಬೌದ್ಧಿಕ ನೈತಿಕ ಮಾನಸಿಕ ಮತ್ತು ಪ್ರಬುದ್ದತೆಯ ಮಟ್ಟವನ್ನು ಅಳೆಯಲು ಒಂದು ಮಾನದಂಡವಾಗಬಹುದು.
ರಾಜಕೀಯದಲ್ಲಿ ಒಬ್ಬ ನಾಯಕನನ್ನು ಮತ್ತು ಪಕ್ಷವನ್ನು ಹಿಂಬಾಲಿಸುವ ಜನರಿರುತ್ತಾರೆ. ಇವರನ್ನು ಸಾಮಾನ್ಯವಾಗಿ ಪುಡಾರಿಗಳು ಎನ್ನಲಾಗುತ್ತದೆ. ಬಹುತೇಕ ಬಿಳಿಬಣ್ಣದ ಖಾದಿ ತರದ ಬಟ್ಟೆಗಳನ್ನು ತೊಟ್ಟಿರುತ್ತಾರೆ.( ಇತ್ತೀಚೆಗೆ ಇದು ಸ್ವಲ್ಪ ಬದಲಾಗಿದೆ.) ತಮ್ಮ ನಾಯಕನ ಹಿಂದೆ ಮುಂದೆ ಸುತ್ತುತ್ತಾ ಆತನಿಗೆ ಜೈಕಾರ ಹಾಕುತ್ತಾ, ಯಾವುದಾದರೂ ಕೆಲಸಗಳಲ್ಲಿ ಕಮೀಷನ್ ಪಡೆದು ಬ್ರೋಕರ್ ಗಿರಿ ಮಾಡುತ್ತಾ ಜೀವನ ನಡೆಸುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಆಗಾಗ ನಾಯಕ ನಿಷ್ಠೆಯನ್ನು ಬದಲಿಸುತ್ತಿರುತ್ತಾರೆ. ಈಗ ಈ ಪುಡಾರಿತನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ. ಕೆಲವು ನಾಯಕರು ಮತ್ತು ಪಕ್ಷಗಳು ಸಂಬಳ ನೀಡಿ ಇಂತಹವರನ್ನು ನೇಮಿಸಿಕೊಳ್ಳುವ ಹಂತಕ್ಕೆ ಬಂದಿವೆ.
ಸಿನಿಮಾದಲ್ಲಿ ನಾಯಕರ ಹಿಂಬಾಲಕರನ್ನು ಅಭಿಮಾನಿಗಳು, ಆರಾಧಕರು ಎಂದು ಕರೆಯಲಾಗುತ್ತದೆ. ಇವರು ಒಬ್ಬ ನಾಯಕನಿಗೆ ನಿಷ್ಠರಾಗಿ, ಆತನ ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡು ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುತ್ತಾ, ಜೈಕಾರ ಹಾಕುತ್ತಾ, ಹುಚ್ಚುತನ ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಆ ನಟನ ಜನಪ್ರಿಯತೆ ಇರುವವರೆಗೂ ಹೆಚ್ಚು ಚಟುವಟಿಕೆಯಿಂದ ಇದ್ದು, ಸಿನಿಮಾಗಳಿಗೆ ಉಚಿತ ಪ್ರವೇಶ ಗಿಟ್ಟಿಸಿ ಅದನ್ನೇ ಸಾಧನೆ ಎಂಬಂತೆ ಹೇಗೋ ಜೀವನ ಸಾಗಿಸುತ್ತಾರೆ. ಇವರಲ್ಲಿ ಬಡವರು ಮತ್ತು ಯುವಕರೇ ಹೆಚ್ಚಾಗಿರುತ್ತಾರೆ.
ಧಾರ್ಮಿಕ ಸಂಸ್ಥೆಗಳ ಹಿಂಬಾಲಕರನ್ನು ಶಿಷ್ಯರು ಅಥವಾ ಭಕ್ತರು ಎಂದು ಕರೆಯಲಾಗುತ್ತದೆ. ಇವರು ಧರ್ಮಾಧಿಕಾರಿಯ ಸುತ್ತಲೇ ಸುತ್ತುತ್ತಾ, ಆ ಧರ್ಮಾಧಿಕಾರಿಯೇ ದೇವರ ಪ್ರತಿನಿಧಿ ಎಂದು ಅಮಾಯಕರನ್ನು ನಂಬಿಸುತ್ತಾ, ಅವರ ಸೇವೆಯ ನೆಪದಲ್ಲಿ ಸ್ವಾಮಿ ಕಾರ್ಯ – ಸ್ವ ಕಾರ್ಯ ಮಾಡಿಕೊಳ್ಳುತ್ತಾ ಬದುಕು ನಡೆಸುತ್ತಾರೆ. ಖಾವಿ ಬಟ್ಟೆ ಅಥವಾ ಆಯಾ ಧರ್ಮದ ಧಾರ್ಮಿಕತೆ ಸಾರುವ ಟೋಪಿ ಮುಂತಾದ ಉಡುಪುಗಳು ಇವರ ವೇಷ ಭೂಷಣಗಳಾಗಿರುತ್ತವೆ. ಧಾರ್ಮಿಕ ಮೌಲ್ಯಗಳಿಗಿಂತ ನಂಬಿಕೆ ಮತ್ತು ಆಚರಣೆಗಳನ್ನೇ ಹೆಚ್ಚು ಪ್ರೋತ್ಸಾಹಿಸಿ ಜನರಲ್ಲಿ ಮೌಡ್ಯತೆಯನ್ನು ಬೆಳೆಸುತ್ತಾರೆ.
ಈ ಹಿಂಬಾಲಕರು ಎಷ್ಟು ಮುಗ್ದರು, ಮೂರ್ಖರು, ವಿವೇಚನಾರಹಿತರು, ಸ್ವಾರ್ಥಿಗಳು, ವಂಚಕರು ಆಗಿರುತ್ತಾರೆಂದರೆ ತಮ್ಮ ನಾಯಕನ, ಪಕ್ಷದ, ಧರ್ಮದ, ಸಿನಿಮಾದ ಅತ್ಯಂತ ಕೆಟ್ಟ ನಡವಳಿಕೆಗಳನ್ನೂ ಸಮರ್ಥಿಸುತ್ತಾರೆ ಮತ್ತು ಅದನ್ನು ಅನಿವಾರ್ಯವಾಗಿಸಿಕೊಂಡಿರುತ್ತಾರೆ. ಆತನಿಲ್ಲದೆ ಇವರಿಗೆ ಜೀವನವೇ ಇಲ್ಲ ಎಂಬಷ್ಟು ಅವಲಂಬಿತರಾಗಿರುತ್ತಾರೆ.
ಉದಾಹರಣೆಗೆ, ಅವರು ಹಿಂಬಾಲಕರಾಗಿರುವ ಧರ್ಮಾಧಿಕಾರಿಯೊಬ್ಬ ಅತ್ಯಾಚಾರದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡರೂ ಅವರು ಅವನನ್ನು ದೇವ ಮಾನವ ಎಂದೇ ನಂಬುತ್ತಾರೆ ಅಥವಾ ವಾದಿಸುತ್ತಾರೆ. ಅವರ ರಾಜಕೀಯ ನಾಯಕ ಜೈಲಿಗೆ ಹೋಗಿ ಬಂದರೂ ಅವನಿಗೆ ಹಾರ ಹಾಕಿ ಸ್ವಾಗತಿಸುತ್ತಾರೆ. ಅವರ ಸಿನಿಮಾ ನಾಯಕ ಕೊಲೆಗಡುಕನಾದರೂ ಆತ ನಿರಪರಾಧಿ ಎಂದೇ ಭಾವಿಸುತ್ತಾರೆ.
ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರೀತಿಯಿಂದ, ನಿಸ್ವಾರ್ಥದಿಂದ ಒಂದು ಕ್ಷೇತ್ರದ ಸಾಧಕನನ್ನು ಅಭಿಮಾನಿಸುವುದು, ಪ್ರೀತಿಸುವುದು, ಗೌರವಿಸುವುದು ಮತ್ತು ಆತ ತಪ್ಪು ಮಾಡಿದಾಗ ಟೀಕಿಸುವುದು ಸಹಜ ಗುಣ.
ಆದರೆ, ನಾನು ಹೇಳುತ್ತಿರುವ ಹಿಂಬಾಲಕರು ಸ್ವತಂತ್ರ ಚಿಂತನೆ ಇಲ್ಲದ, ಹುಚ್ಚತನವನ್ನೇ ಸಹಜತೆ ಎಂದು ಭಾವಿಸಿದ, ಬದುಕಲು ಈ ಹುಚ್ಚತನವನ್ನೇ ಉದ್ಯೋಗ ಮಾಡಿಕೊಂಡಿರುವ ಜನರು ಸಮಾಜದ ಹಿತಾಸಕ್ತಿಗೆ ಅಪಾಯಕಾರಿಗಳಾಗಿರುತ್ತಾರೆ. ನಮ್ಮ ನಿಮ್ಮ ನಡುವೆಯೇ ಇರುವ ಇವರು ಕೆಲವೊಮ್ಮೆ ನಮಗೆ ಒಳ್ಳೆಯದನ್ನೇ ಮಾಡಿದರು ಅದು ಖಂಡಿತ ಪ್ರೋತ್ಸಾಹಿಸಲು ಯೋಗ್ಯವಾದ ಉದ್ಯೋಗವಲ್ಲ.
ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಹಿಂಬಾಲಕ ವೃತ್ತಿಯನ್ನು ಆದಷ್ಟು ಬೇಗ ನಿರ್ಮೂಲನೆ ಮಾಡಿ, ಸ್ವತಂತ್ರ ಚಿಂತನೆಯ ಸ್ವಾಭಿಮಾನದ ಆರೋಗ್ಯಕರ ವ್ಯಕ್ತಿತ್ವವನ್ನು ನಮ್ಮ ಸುತ್ತ ಬೆಳೆಸಬೇಕಾಗಿದೆ. ಹಿಂಬಾಲಕರು ಎಂಬ ಗುಲಾಮಿತನದ ಮನೋಭಾವ ಹೋಗಲಾಡಿಸಬೇಕಿದೆ.
ಅದನ್ನು ನಮ್ಮ ನಮ್ಮ ಮಿತಿಯಲ್ಲಿ ಸಾಧ್ಯವಾದಷ್ಟೂ ಮಾಡೋಣ ಎಂಬ ಆಶಯದೊಂದಿಗೆ,……,,
# ವಿವೇಕಾನಂದ ಎಚ್ ಕೆ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…